ಪಕ್ಷ ನೀಡಿದ ದೊಡ್ಡ ಮೊತ್ತ ತಲುಪಿಲ್ಲ: ಎಚ್. ವಿಶ್ವನಾಥ್ ಬಿಜೆಪಿ ಬಗ್ಗೆ ಹೇಳಿದ ಸತ್ಯಕ್ಕೆ ಬದ್ಧರಾಗಿರಬೇಕು - ಉಗ್ರಪ್ಪ

ಬಿಜೆಪಿ ಮೇಲ್ಮನೆ ಸದಸ್ಯ, ಹಳ್ಳಿಹಕ್ಕಿ ಎಚ್.ವಿಶ್ವನಾಥ್ ಅವರು ಸಿಪಿ ಯೋಗೇಶ್ವರ್ ಹಾಗೂ ಬಿಜೆಪಿ ಬಗ್ಗೆ ಕಟು ಸತ್ಯ ಹೇಳಿದ್ದು, ನಿಜ ಸಂಗತಿ ಬಹಿರಂಗಪಡಿಸಿದ್ದಕ್ಕಾಗಿ ಅವರನ್ನು ಅಭಿನಂದಿಸುವುದಾಗಿ ಮಾಜಿ ಸಂಸದ, ಕಾಂಗ್ರೆಸ್ ನಾಯಕ ವಿ.ಎಸ್.ಉಗ್ರಪ್ಪ ಹೇಳಿದ್ದಾರೆ.
ವಿ.ಎಸ್.ಉಗ್ರಪ್ಪ
ವಿ.ಎಸ್.ಉಗ್ರಪ್ಪ

ಬೆಂಗಳೂರು: ಬಿಜೆಪಿ ಮೇಲ್ಮನೆ ಸದಸ್ಯ, ಹಳ್ಳಿಹಕ್ಕಿ ಎಚ್.ವಿಶ್ವನಾಥ್ ಅವರು ಸಿಪಿ ಯೋಗೇಶ್ವರ್ ಹಾಗೂ ಬಿಜೆಪಿ ಬಗ್ಗೆ ಕಟು ಸತ್ಯ ಹೇಳಿದ್ದು, ನಿಜ ಸಂಗತಿ ಬಹಿರಂಗಪಡಿಸಿದ್ದಕ್ಕಾಗಿ ಅವರನ್ನು ಅಭಿನಂದಿಸುವುದಾಗಿ ಮಾಜಿ ಸಂಸದ, ಕಾಂಗ್ರೆಸ್ ನಾಯಕ ವಿ.ಎಸ್.ಉಗ್ರಪ್ಪ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಗ್ರಪ್ಪ, ಹಳ್ಳಿಹಕ್ಕಿ ವಿಶ್ವನಾಥ್ ನಮಗೂ ಸ್ನೇಹಿತರೇ. ಅವರು ಒಂದೊಂದು ಸಾರಿ ಕಟು ಸತ್ಯ ಹೇಳುತ್ತಾರೆ. ಈಗ ಬಿಜೆಪಿ ಬಗ್ಗೆ ಹೇಳಿರುವ ಸತ್ಯಕ್ಕೆ ಅವರು ಬದ್ಧರಾಗಿರುತ್ತಾರೆ ಎಂದು ಭಾವಿಸುವುದಾಗಿ ನುಡಿದರು.

ವಿಧಾನಸಭೆ ಉಪ ಚುನಾವಣೆ ಸಮಯದಲ್ಲಿ ಪ್ರತಿ‌ಕ್ಷೇತ್ರದಲ್ಲಿ ಬಿಜೆಪಿ 50 ಕೋಟಿ ರೂ.ಖರ್ಚು ಮಾಡುತ್ತಿರುವುದಾಗಿ ಕಾಂಗ್ರೆಸ್ ಈ ಹಿಂದೆಯೇ ಹೇಳಿತ್ತು. ಆರ್ ಆರ್ ನಗರ ಹಾಗೂ ಶಿರಾ ಚುನಾವಣೆಯಲ್ಲೂ ಬಹುದೊಡ್ಡ ಮೊತ್ತವನ್ನು ಬಿಜೆಪಿಯವರು ವೆಚ್ಚ ಮಾಡಿದ್ದಾರೆ. ಆದರೆ ನಾವು ಈ ಕುರಿತು ಮಾಡಿರುವ ಆರೋಪಗಳನ್ನು ಬಿಜೆಪಿ ತಳ್ಳಿ ಹಾಕಿತ್ತು. ಆದರೆ ಈ ಬಗ್ಗೆ ಬಿಜೆಪಿ ನಾಯಕ ವಿಶ್ವನಾಥ್ ಅವರೇ ಈಗ ಸತ್ಯ ಹೇಳಿದ್ದಾರೆ. ತಮಗೆ ಪಕ್ಷ ನೀಡಿದ ದೊಡ್ಡ ಮೊತ್ತ ತಲುಪಿಲ್ಲ ಎಂದಿದ್ದಾರೆ. ಆದರೆ ಅದು ಎಷ್ಟು ಮೊತ್ತ ಎನ್ನುವುದನ್ನು ವಿಶ್ವನಾಥ್ ಹೇಳಬೇಕು. ಇಷ್ಟೊಂದು ದೊಡ್ಡ ಮೊತ್ತದ ಹಣ ಬಿಜೆಪಿ ಸರ್ಕಾರಕ್ಕೆ ಅಥವಾ ಬಿಜೆಪಿಗರಿಗೆ ಯಾವ ಮೂಲದಿಂದ ಬಂದಿತು. ಯಾವುದಾದರೂ ಬಿಡಿಎಯಿಂದ ಆರ್ ಟಿ ಜಿ ಎಸ್ ನಿಂದ ಬಂದಿತ್ತೇ? ಬಂದಿರುವುದು ಕಪ್ಪುಹಣವೇ ಅಥವಾ ಲೆಕ್ಕ ಇರುವ ಹಣವೇ? ಹಾಗಾದರೆ ಅದು ಯಾವುದು ಎಂದು ಉಗ್ರಪ್ಪ ಪ್ರಶ್ನಿಸಿದರು.

ವಿಧಾನಪರಿಷತ್ ಮಾಜಿ ಸಭಾಪತಿ, ಹಿರಿಯ ಮುಖಂಡ ಬಿ.ಎಲ್.ಶಂಕರ್ ಮಾತನಾಡಿ, ಮುಖ್ಯಮಂತ್ರಿ ಕಚೇರಿ ಸುತ್ತ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿವೆ. ಒಂದು ಕಡೆ ಮುಖ್ಯಮಂತ್ರಿ ಕಾರ್ಯದರ್ಶಿ, ಮಾಧ್ಯಮ ಸಲಹೆಗಾರರು ರಾಜೀನಾಮೆ ಕೊಡುತ್ತಾರೆ. ಅವರ ರಾಜಕೀಯ ಕಾರ್ಯದರ್ಶಿ ಆಸ್ಪತ್ರೆಗೆ ದಾಖಲಾಗುತ್ತಾರೆ. ಈ ನಡುವೆ ವಿಶ್ವನಾಥ್ ಬಹಿರಂಗವಾಗಿಯೇ ಸಿಎಂ ನನಗೆ ಕಳುಹಿಸಿದ್ದ ದೊಡ್ಡ ಮೊತ್ತದ ಹಣವನ್ನು ಸಿ.ಪಿ. ಯೋಗಿಶ್ವರ್ ಸೇರಿದಂತೆ ಅನೇಕರು ನೀಡಿಲ್ಲ ಎನ್ನುತ್ತಾರೆ. ಹಾಗಾದರೆ ಈ ಹಣ ಯಾವುದು ಎನ್ನುವುದು ಬಹಿರಂಗವಾಗಬೇಕು. ಹಣದ ಮೂಲ ಸಂಬಂಧಪಟ್ಟ ವಿಚಾರದ ಬಗ್ಗೆ ಚರ್ಚೆ ಆಗಬೇಕು ಎಂದು ಒತ್ತಾಯಿಸಿದರು.

ವಿಶ್ವನಾಥ್, ಹಿಂದೆಯೂ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಹೀಗಾಗಿ ಅವರು ತಮ್ಮ ಆದಾಯ ಮೂಲವನ್ನು ಹೇಳಬೇಕು. ಈ ಹಣ ಎಲ್ಲಿಂದ ಬಂತು ಎನ್ನುವುದನ್ನು ಹೇಳಬೇಕು. ಈ ಬಗ್ಗೆ ವಿಶ್ವನಾಥ್ ಪ್ರಮಾಣಪತ್ರ ಸಲ್ಲಿಸಬೇಕು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com