ಯೋಗೇಶ್ವರ್ ಗೆ ಸಚಿವ ಸ್ಥಾನ ಹೇಳಿಕೆ: ಬಿಜೆಪಿಯಲ್ಲಿ ತಳಮಳ; ಕಟೀಲ್ ಮನೆ ಕದ ತಟ್ಟಿದ ರೇಣುಕಾಚಾರ್ಯ, ಸುನೀಲ್ ಪತ್ರ

ಎಂಎಲ್ ಸಿ ಸಿ.ಪಿ ಯೋಗೇಶ್ವರ್ ಅವರನ್ನು ಸಚಿವರನ್ನಾಗಿ ಮಾಡುವುದು ನೂರಕ್ಕೆ ನೂರರಷ್ಟು ಖಚಿತ ಎಂದು ಸಿಎಂ ಯಡಿಯೂರಪ್ಪ ಅವರು ನೀಡಿರುವ ಹೇಳಿಕೆ ರಾಜ್ಯ ಬಿಜೆಪಿಯಲ್ಲಿ ತೀವ್ರ ಬಿರುಗಾಳಿ ಸೃಷ್ಟಿಸಿದೆ. ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ  ತೀವ್ರ ಅಸಮಾಧಾನ ಮೂಡಿದೆ.
ಸುನೀಲ್ ಕುಮಾರ್
ಸುನೀಲ್ ಕುಮಾರ್

ಬೆಂಗಳೂರು: ಎಂಎಲ್ ಸಿ ಸಿ.ಪಿ ಯೋಗೇಶ್ವರ್ ಅವರನ್ನು ಸಚಿವರನ್ನಾಗಿ ಮಾಡುವುದು ನೂರಕ್ಕೆ ನೂರರಷ್ಟು ಖಚಿತ ಎಂದು ಸಿಎಂ ಯಡಿಯೂರಪ್ಪ ಅವರು ನೀಡಿರುವ ಹೇಳಿಕೆ ರಾಜ್ಯ ಬಿಜೆಪಿಯಲ್ಲಿ ತೀವ್ರ ಬಿರುಗಾಳಿ ಸೃಷ್ಟಿಸಿದೆ. ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ  ತೀವ್ರ ಅಸಮಾಧಾನ ಮೂಡಿದೆ.

ಯೋಗೇಶ್ವರ್ ಅವರನ್ನು ಸಚಿವರನ್ನಾಗಿ ಮಾಡುವ ಸಂಬಂಧ ಶಾಸಕ ಎಂಪಿ ರೇಣುಕಾಚಾರ್ಯ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಜೊತೆ ಚರ್ಚಿಸಿದ್ದಾರೆ. ಯಡಿಯೂರಪ್ಪ ಯೋಗೇಶ್ವರ ಅವರಿಗೆ ಸಚಿವ ಸ್ಥಾನ ಘೋಷಿಸಿದ ಕೆಲವೇ ಗಂಟೆಗಳಲ್ಲಿ ಕಾರ್ಕಳ ಶಾಸಕ ವಿ ಸುನೀಲ್ ಕುಮಾರ ನಳಿನ್ ಕುಮಾರ್ ಕಟೀಲ್ ಅವರಿಗೆ ಪತ್ರ ಬರೆದು ಅಸಮಾಧಾನ ಹೊರಹಾಕಿದ್ದಾರೆ.

ತಕ್ಷಣವೇ  ಶಾಸಕಾಂಗ ಪಕ್ಷದ ಸಭೆ ಕರೆಯಬೇಕೆಂದು ಆಗ್ರಹಿಸಿದ್ದಾರೆ. ರಾಜ್ಯ ಬಿಜೆಪಿಯಲ್ಲಿ ಆಗುತ್ತಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಶಾಸಕ ಸುನಿಲ್ ಕುಮಾರ್ ಅವರು ಕಟೀಲ್ ಅವರಿಗೆ ಬರೆದಿರುವ ಪತ್ರ ಮಹತ್ವ ಪಡೆದುಕೊಂಡಿದೆ. ಪತ್ರದಲ್ಲಿ ತಕ್ಷಣ  ಶಾಸಕರ ಸಭೆ ಕರೆಯುವಂತೆ ಸುನಿಲ್ ಕುಮಾರ್ ಆಗ್ರಹಿಸಿದ್ದಾರೆ. ಇದು ಮುಂದಿನ ಬೆಳವಣಿಗೆಗಳ ದಿಕ್ಸೂಚಿ ಎಂದೇ ಹೇಳಲಾಗುತ್ತಿದೆ.

ಕಳೆದ ಕೆಲವು ದಿನಗಳಿಂದ ಮಂತ್ರಿಗಳು, ಕೆಲವು ಶಾಸಕರು ಕೊಡುತ್ತಿರುವ ಹೇಳಿಕೆಗಳು ಪಕ್ಷದ ಕಾರ್ಯಕರ್ತರ ಮೇಲೆ ಪರಿಣಾಮ ಬೀರುತ್ತಿವೆ. ಒಂದು ಸಿದ್ದಾಂತದ ಅಡಿಯಲ್ಲಿ ಕೆಲಸ ಮಾಡುತ್ತಿರುವವರಿಗೆ ಅವರ ಹೇಳಿಕೆಗಳು ನೋವನ್ನುಂಟು ಮಾಡುತ್ತಿವೆ ಎಂದು ಕಟೀಲ್ ಅವರಿಗೆ ಬರೆದಿರುವ ಪತ್ರದಲ್ಲಿ ಸುನಿಲ್ ಕುಮಾರ್ ಉಲ್ಲೇಖಿಸಿದ್ದಾರೆ. ತಕ್ಷಣ ಶಾಸಕರ ಸಭೆ ಕರೆಯಿರಿ ನಿಗಮ ಮಂಡಳಿಗಳಿಗೆ ನೇಮಕಾತಿ, ಮಂತ್ರಿ ಮಂಡಳದ ರಚನೆ ಕುರಿತು ನಮ್ಮಂತಹ ಶಾಸಕರು ಪಕ್ಷದ ಚೌಕಟ್ಟಿನಲ್ಲಿ ನಮ್ಮ ಅಭಿಪ್ರಾಯ ಹಂಚಿಕೊಳ್ಳಬೇಕಾಗಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷರಾಗಿ ತಾವು ಆಲಿಸಬೇಕು ಎಂದು ಶಾಸಕ ಸುನಿಲ್ ಕುಮಾರ್ ಆಗ್ರಹಿಸಿದ್ದಾರೆ. 

ಸರ್ಕಾರದ ಮುಖ್ಯ ಸಚೇತಕ, ಶಾಸಕ ವಿ. ಸುನಿಲ್ ಕುಮಾರ್ ಅವರು ಪತ್ರ ಬರೆದಿರುವುದರಿಂದ ಶಾಸಕರ ಸಭೆ ಕರೆಯುವುದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಅನಿವಾರ್ಯವಾಗಿದೆ. ಪಕ್ಷದ ಶಾಸಕರಿಗೆ ವಿಪ್ ಕೊಡುವುದು ಸೇರಿದಂತೆ ಶಿಸ್ತು ಬದ್ಧವಾಗಿ ಶಾಸಕರು ಇರುವಂತೆ ಮಾಡುವುದು ಮುಖ್ಯ ಸಚೇತಕರ ಕೆಲಸ. ಹೀಗಾಗಿ ಬಹುತೇಕ ಸಭೆ ಕರೆಯುವುದು ಖಚಿತ. ಶಾಸಕರ ಸಭೆಯಲ್ಲಿ ಖಡಕ್ ಅಭಿಪ್ರಾಯಗಳು ವ್ಯಕ್ತವಾಗುವ ಸಾಧ್ಯತೆಗಳು ಇವೆ. 

ನಿಗಮ ಮಂಡಳಿಗಳ ನೇಮಕಾತಿಯಲ್ಲಿ ಸಿಎಂ ಯಡಿಯೂರಪ್ಪ ಅವರು ಏಕಾಏಕಿ ದಿಢೀರ್ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಜೊತೆಗೆ ಸಂಪುಟ ವಿಸ್ತರಣೆ ಕುರಿತು ಚರ್ಚೆ ಮಾಡಬೇಕು ಎಂಬ ಒತ್ತಡಗಳು ಕೇಳಿ ಬಂದಿವೆ. ಇದು ಯಡಿಯೂರಪ್ಪ ಅವರ ದಿಢೀರ್ ನಿರ್ಧಾರಗಳಿಗೆ ಕಡಿವಾಣ ಹಾಕಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ನಮ್ಮ ಬೇಡಿಕೆ ಒಂದೆ, ನಾವು ಚುನಾಯಿತ ಶಾಸಕರು, ಹೀಗಾಗಿ ಅವರನ್ನು ಸಚಿವರನ್ನಾಗಿ ಮಾಡಬೇಕೆ ಹೊರತು, ಪರಿಷತ್ ಸದಸ್ಯರನ್ನು ಸಚಿವರನ್ನಾಗಿ ಮಾಡಬಾರದು ಎಂದು ನಮ್ಮ ಬೇಡಿಕೆಯಾಗಿದೆ ಎಂದು ಸುನೀಲ್ ಕುಮಾರ್ ಹೇಳಿದ್ದಾರೆ. ನನ್ನಂತೆ ಹಲವು ಶಾಸಕರು ಸ್ವಯಂ ನಿರ್ಭಂದ ಹೇರಿಕೊಂಡು ಮಾತನಾಡದೇ ಶಿಸ್ತಿನಿಂದ ಸುಮ್ಮನಿದ್ದಾರೆ ಎಂದು ಸುನೀಲ್ ಕುಮಾರ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com