ಉಪಚುನಾವಣೆ ಸೋಲು ಬಳಿಕ ಕಾರ್ಯಕರ್ತರಿಗಾಗಿ ತರಬೇತಿ ನೀಡಲು ಕಾಂಗ್ರೆಸ್ ಮುಂದು!

ಉಪಚುನಾವಣೆ ಸೋಲನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಕಾಂಗ್ರೆಸ್, ಮುಂಬರುವ ಚುನಾವಣೆಗಳನ್ನು ಸವಾಲಾಗಿ ಪರಿಗಣಿಸುತ್ತಿದ್ದು, ಇದಕ್ಕಾಗಿ ಭರ್ಜರಿ ಸಿದ್ಧತೆಗಳನ್ನು ನಡೆಸುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಉಪಚುನಾವಣೆ ಸೋಲನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಕಾಂಗ್ರೆಸ್, ಮುಂಬರುವ ಚುನಾವಣೆಗಳನ್ನು ಸವಾಲಾಗಿ ಪರಿಗಣಿಸುತ್ತಿದ್ದು, ಇದಕ್ಕಾಗಿ ಭರ್ಜರಿ ಸಿದ್ಧತೆಗಳನ್ನು ನಡೆಸುತ್ತಿದೆ. 

ಮುಂಬರುವ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ರಾಜ್ಯ ಕಾಂಗ್ರೆಸ್ ನಾಯಕರು ಇದೀಗ ಪ್ರತೀ ಹಂತದಲ್ಲೂ ಪಕ್ಷದ ಕಾರ್ಯಕರ್ತರಿಗೆ ತರಬೇತಿ ನೀಡಲು ಮುಂದಾಗಿದ್ದಾರೆ. 

ಇನ್ನು ಕೆಲವೇ ದಿನಗಳಲ್ಲಿ ಪಂಚಾಯತ್ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಬೂತ್ ಮಟ್ಟದಿಂದಲೇ ಪಕ್ಷವನ್ನು ಬಲಪಡಿಸಲು ಕಾಂಗ್ರೆಸ್ ಕಾರ್ಯತಂತ್ರಗಳನ್ನು ರೂಪಿಸುತ್ತಿದೆ. ಇದರಂತೆ ಕೆಪಿಸಿಸಿ ಸಭೆಯೊಂದನ್ನು ನಡೆಸಿದ್ದು, ಸಭೆಯಲ್ಲಿ ನಾಯಕರು ಸಾಕಷ್ಟು ಸಲಹೆಗಳನ್ನು ನೀಡಿದ್ದಾರೆಂದು ತಿಳಿದುಬಂದಿದೆ. 

ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಕಾರ್ಯಕಾರಿ ಅಧ್ಯಕ್ಷ ಈಶ್ವರ್ ಖಂಡ್ರೆಯವರು, ಮುಂದಿನ 3-4 ದಿನಗಳಲ್ಲಿ ತರಬೇತಿಗಳು ಆರಂಭಗೊಳ್ಳಲಿದೆ. ದೇಶದಲ್ಲಿ ಕಾಂಗ್ರೆಸ್ ತನ್ನದೇ ಆದ ಇತಿಹಾಸವನ್ನು ಹೊಂದಿದೆ. 70 ವರ್ಷಗಳಲ್ಲಿ ಪಕ್ಷ ನಡೆಸಿದ್ದ ಹೋರಾಟಗಳು ಮತ್ತು ಸಾಧನೆಗಳನ್ನು ಇಂದಿನ ಪೀಳಿಗೆಗೆ ಹೇಳಬೇಕಾಗಿದೆ. ಇಂದಿನ ಯುವ ಪೀಳಿಗೆಯನ್ನು ಬಿಜೆಪಿ ಹಾದಿ ತಪ್ಪಿಸುತ್ತಿದೆ. ಒಂದು ದಿನ, ಮೂರು ದಿನಗಳು, ಐದು ದಿನಗಳು ಮತ್ತು ಏಳು ದಿನಗಳವರೆಗೆ ಪಠ್ಯಕ್ರಮವನ್ನು ವಿನ್ಯಾಸಗೊಳಿಸಿದ್ದೇವೆ. ಪ್ರತಿಯೊಂದು ತರಬೇತಿಯಲ್ಲೂ ವಿಭಿನ್ನ ಮಾದರಿಗಳಿರುತ್ತವೆ ಇರುತ್ತದೆ ಎಂದು ಹೇಳಿದ್ದಾರೆ. 

ತರಬೇತಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಕಾರ್ಯಕರ್ತರಿಗೆ ಸಣ್ಣ ಪಠ್ಯಪುಸ್ತಕಗಳನ್ನು ಪಕ್ಷ ಮುದ್ರಿಸುತ್ತಿದೆ. ತರಬೇತಿ ಕಾರ್ಯಕ್ರಮ ನಡೆಸುವ 50 ಮಂದಿಗೆ ಈಗಾಗಲೇ ತರಬೇತಿ ನೀಡಲಾಗಿದೆ. ತರಬೇತಿ ಪಡೆದಿರುವ ಈ 50 ಮಂದಿ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ಪ್ರಯಾಣಿಸಿ ಕಾರ್ಯಕರ್ತರಿಗೆ ತರಬೇತಿ ನೀಡಲಿದ್ದಾರೆಂದು ತಿಳಿಸಿದ್ದಾರೆ. 

ಪಕ್ಷದ ಕಾರ್ಯಕಾರಿ ಅಧ್ಯಕ್ಷರೂ ಆಗಿರುವ ಸಲೀಮ್ ಅಹ್ಮದ್ ಅವರು ಪಕ್ಷದ ಸಿದ್ಧಾಂತದ ಬಗ್ಗೆ ಅಭ್ಯರ್ಥಿಗಳಿಗೆ ತರಬೇತಿ ನೀಡಲಿದ್ದಾರೆ, ಬಿಜೆಪಿಯನ್ನು ಹೇಗೆ ಎದುರಿಸಬೇಕು ಎಂಬೆಲ್ಲಾ ವಿಚಾರಗಳ ಬಗ್ಗೆ ತಿಳಿಸಿಕೊಡಲಿದ್ದಾರೆ. ಪ್ರಚಾರ ಹೇಗೆ ನಡೆಸಬೇಕು, ಬೂತ್ ಮಟ್ಟದಲ್ಲಿ ಹೇಗೆ ಕೆಲಸ ಮಾಡಬೇಕೆಂಬುದನ್ನು ತಿಳಿಸಲಿದ್ದಾರೆಂದು ಹೇಳಿದ್ದಾರೆ. 

ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡಿಕೊಳ್ಳುವುದರಲ್ಲಿ ಬಿಜೆಪಿ ನಿಪುಣವಾಗಿದೆ. ಇದರ ಬಳಕೆಯನ್ನು ಅನುಸರಿಸುವಲ್ಲಿ ನಾವು ತಡ ಮಾಡಿದ್ದೇವೆ. ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಹಾಕುವ ಬಹುತೇಕ ಪೋಸ್ಟ್'ಗಳು ನಕಲಿಯಾಗಿವೆ. ಆದರೂ ಜನರೂ ಅದನ್ನೇ ನಂಬುದ್ದಾರೆ. ಸಾಮಾಜಿಕ ಜಾಲತಾಣ ಕುರಿತಂತೆಯೂ ನಾವು ತರಬೇತಿ ನೀಡಲಿದ್ದಾವೆ. ಕಾಂಗ್ರೆಸ್ ಮುಕ್ತ ಭಾರತ ಮಾಡುವುದು ಸಾಧ್ಯವೇ ಇಲ್ಲ. ಪ್ರಸ್ತುತ ಸಮಯದಲ್ಲಿ ಎಲ್ಲೋ ಒಂದು ಕಡೆ ತರಬೇತಿ ನೀಡುವ ಅಗತ್ಯವಿದೆ ಎಂದೆನಿಸುತ್ತಿದೆ. ಹೀಗಾಗಿಯೇ ಈ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com