ಮಾಸ್ ಲೀಡರ್ ಬಿಎಸ್ ವೈ ಅವಧಿ ಪೂರ್ಣಗೊಳಿಸಲಿದ್ದಾರೆ: ಅರುಣ್ ಸಿಂಗ್ ಹೇಳಿಕೆಯಿಂದ 'ರಾಜಾಹುಲಿ'ಗೆ ಭೀಮಬಲ!

ಯಡಿಯೂರಪ್ಪ ನಾಯಕತ್ವ ಬದಲಾವಣೆ ಬಗ್ಗೆ ಕಳೆದ ಹಲವು ದಿನಗಳಿಂದ ಹರಿದಾಡುತ್ತಿದ್ದ ಸುದ್ದಿಗಳಿಗೆ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ತೆರೆ ಎಳೆದಿದ್ದಾರೆ.
ಯಡಿಯೂರಪ್ಪ
ಯಡಿಯೂರಪ್ಪ

ಬೆಂಗಳೂರು: ಯಡಿಯೂರಪ್ಪ ನಾಯಕತ್ವ ಬದಲಾವಣೆ ಬಗ್ಗೆ ಕಳೆದ ಹಲವು ದಿನಗಳಿಂದ ಹರಿದಾಡುತ್ತಿದ್ದ ಸುದ್ದಿಗಳಿಗೆ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ತೆರೆ ಎಳೆದಿದ್ದಾರೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿರುವ ಅರುಣ್ ಸಿಂಗ್, ಯಾವುದೇ ಕಾರಣಕ್ಕೂ ರಾಜ್ಯ ಬಿಜೆಪಿ ನಾಯಕತ್ವದಲ್ಲಿ ಬದಲಾವಣೆಯಿಲ್ಲ,ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ, ಹೀಗಾಗಿ ಅವರನ್ನು ಬದಲಾವಣೆ ಮಾಡುವ ಪ್ರಮೇಯವೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನಾಯಕತ್ವ ಬದಲಾವಣೆ ಸಂಬಂಧ ಗಿರಕಿ ಹೊಡೆಯುತ್ತಿದ್ದ ಸುದ್ದಿಗಳಿಗೆ ಇದೇ ಮೊದಲ ಬಾರಿಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸ್ಷಷ್ಟ ಸಂದೇಶ ರವಾನಿಸಿದ್ದಾರೆ.

ಇದಕ್ಕೂ ಮೊದಲು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಹಲವು ರಾಜ್ಯ ಬಿಜೆಪಿ ನಾಯಕರು ಈ ನಾಯಕತ್ವ ಬದಲಾವಣೆ ಸುದ್ದಿಗೆ ಸ್ಪಷ್ಟನೆ ನೀಡಿದ್ದರು, ಯಡಿಯೂರಪ್ಪ ತಮ್ಮ ಅವಧಿ ಪೂರ್ಣಗೊಳಿಸಲಿದ್ದಾರೆ ಎಂದು ಹೇಳಿಕೆ ನೀಡಿದ್ದರು.

ಯಡಿಯೂರಪ್ಪ ಅವರು ದೊಡ್ಡ ನಾಯಕರು, ಮಾಸ್ ಲೀಡರ್,ಸಮಾಜದ ಎಲ್ಲಾ ವರ್ಗಗಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದು ಅರುಣ್ ಸಿಂಗ್ ಹಾಡಿ ಹೊಗಳಿದ್ದಾರೆ

ಬೆಳಗಾವಿಯಲ್ಲಿ ನಡೆದ ರಾಜ್ಯ ಬಿಜೆಪಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಭಾಗವಹಿಸಲು ಅರುಣ್ ಸಿಂಗ್ ಆಗಮಿಸಿದ್ದಾರೆ. ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆ ಮತ್ತು ಉಪ ಚುನಾವಣೆ ಸಂಬಂಧ ಸಿಎಂ ಯಡಿಯೂರಪ್ಪ ಮತ್ತು ಹಲವು ಹಿರಿಯ ಬಿಜೆಪಿ ನಾಯಕರು ಸಭೆಗೆ ಹಾಜರಾಗಿ ಚರ್ಚೆ ನಡೆಸಲಿದ್ದಾರೆ.

ಇನ್ನೂ ಸಚಿವ ಸ್ಥಾನಕ್ಕಾಗಿ ಹಲವು ರೀತಿಯ ಹೇಳಿಕೆ ನೀಡಿ ಒತ್ತಡ ಸೃಷ್ಟಿಸುತ್ತಿರುವ ಸಚಿವಾಕಾಂಕ್ಷಿಗಳಿಗೆ ಪ್ರಬಲ ಸಂದೇಶ ರವಾನಿಸಿರುವ ಅರುಣ್ ಸಿಂಗ್ ಇದು ನಮ್ಮ ಸಂಸ್ಕೃತಿಯಲ್ಲ ಎಂದು ಹೇಳಿದ್ದಾರೆ.

ಇಂತಹ ವಿಷಯಗಳನ್ನು ಪಕ್ಷದ ವೇದಿಕೆಯೊಳಗೆ ಚರ್ಚಿಸಬೇಕೆ ಹೊರತು ಬಹಿರಂಗವಾಗಿ ಹೇಳಿಕೆ ನೀಡಬಾರದು ಎಂದು ಸೂಚಿಸಿದ್ದಾರೆ. ಸಂಪುಟ ವಿಸ್ತರಣೆಗೆ ಕೇಂದ್ರ ನಾಯಕರ ಅನುಮೋದನೆಗಾಗಿ ಸಿಎಂ ಯಡಿಯೂರಪ್ಪ ಕಾಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com