ಕೇಂದ್ರ ಸರ್ಕಾರ ಅಂಬಾನಿ, ಅದಾನಿ, ಕಾರ್ಪೋರೇಟ್ ಕಂಪನಿಗಳ ಕೈಗೊಂಬೆ: ಸಿದ್ದರಾಮಯ್ಯ

ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಜಾರಿಗೆ ತರಲು ಹೊರಟಿರುವ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಕ್ಷದ ಮುಖಂಡರು, ಶಾಸಕರು ವಿಧಾನಸೌಧದ ಆವರಣದಲ್ಲಿರುವ...
ಕಾಂಗ್ರೆಸ್ ಪ್ರತಿಭಟನೆ
ಕಾಂಗ್ರೆಸ್ ಪ್ರತಿಭಟನೆ

ಬೆಂಗಳೂರು: ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಜಾರಿಗೆ ತರಲು ಹೊರಟಿರುವ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಕ್ಷದ ಮುಖಂಡರು, ಶಾಸಕರು ವಿಧಾನಸೌಧದ ಆವರಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಸಿದರು. 

ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಹಿರಿಯ ಮುಖಂಡರಾದ ಡಾ. ಜಿ. ಪರಮೇಶ್ವರ, ಎಸ್.ಆರ್. ಪಾಟೀಲ್, ಬಿ.ಕೆ. ಹರಿಪ್ರಸಾದ್, ಕೆ.ಜೆ. ಜಾರ್ಜ್, ರಾಮಲಿಂಗಾರೆಡ್ಡಿ ಮತ್ತಿತರರು ಭಾಗವಹಿಸಿದ್ದರು. 

ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿ ಕಾಂಗ್ರೆಸ್ ನಾಯಕರು ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತನಾಡಿ, ದೇಶದ ಬೆನ್ನೆಲುಬು ಆಗಿರುವ ರೈತರ ಹೋರಾಟಕ್ಕೆ ಸಂಪೂರ್ಣ ಬೆಂಬಲವಿದೆ. ರೈತರಿಗೆ ಪಕ್ಷ, ಜಾತಿ, ಧರ್ಮವಿಲ್ಲ. ಇದು ರೈತರ ಮರಣ ಶಾಸನ. ಕಾಯ್ದೆ ತರುವಾಗ ಯಾರನ್ನೂ ಒಂದು ಮಾತು ಕೇಳಿಲ್ಲ. ನಾವು ಯಾವುದಾದರೂ ಕಾನೂನು ತರುವಾಗ ಎಲ್ಲರೊಂದಿಗೂ ಸಮಾಲೋಚನೆ ಮಾಡುತ್ತಿದ್ದೆವು. ಆದರೆ ಬಿಜೆಪಿಯವರು ಸರ್ವಾಧಿಕಾರಿ ಧೋರಣೆ ತೋರಿ ಯಾರನ್ನೂ ಕೇಳಿಲ್ಲ ಎಂದರು.

ದೇಶದ ರೈತರ ಪರ ನಾವಿದ್ದೇವೆ. ಅವರ ಪ್ರತಿಭಟನೆಗೆ ಸಂಪೂರ್ಣ ಬೆಂಬಲ ಕೊಟ್ಟಿದ್ದೇವೆ. ಕೇಂದ್ರ ತಂದಿರುವ ಕಾಯ್ದೆ ರೈತ ವಿರೋಧಿಯಾದುದು. ರೈತರಿಗೆ ಹೆಚ್ಚಿನ ಅವಕಾಶ ಕಲ್ಪಿಸಿಕೊಡಬೇಕು. ದೇಶದ ಪ್ರತಿ ಕಾನೂನನ್ನು ಬದಲಾಯಿಸುತ್ತಿದೆ. ಇಲ್ಲಿ ವ್ಯಾಪಾರ ಮಾಡಿದರೆ ಸೆಸ್ ಇದೆಯಂತೆ. ಹೊರಗಡೆ ವ್ಯಾಪಾರಕ್ಕೆ ಸೆಸ್ ಇಲ್ಲವಂತೆ. ರೈತರನ್ನು ಗುಲಾಮರನ್ನಾಗಿ ಮಾಡಲು ಸರ್ಕಾರ ಹೊರಟಿದೆ. ರೈತ ಬೆಳೆದ ಬೆಳೆ ಮಾರಾಟಕ್ಕೆ ಸ್ವಾತಂತ್ರ್ಯವಿಲ್ಲ. ರೈತರ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಅನ್ನದಾತರ ಪರ ನಾವು ನಿಲ್ಲುತ್ತೇವೆ. ರಾಜ್ಯದ ಮುಖ್ಯಂಮತ್ರಿ ಹಸಿರು ಶಾಲು ಹಾಕಿ ಪ್ರಮಾಣ ವಚನ ಸ್ವೀಕರಿಸಿದ್ದರು. ಆದರೆ ರೈತನಿಗೆ ಮಾತ್ರ ಉಪಯೋಗಮಾಡಲ್ಲ. ರೈತರ ಸ್ವಾತಂತ್ರ್ಯವನ್ನೇ ಸರ್ಕಾರ ಹತ್ತಿಕ್ಕಿದೆ. ಕಾನೂನು ತರಲು ಯಾರ ಬಳಿ ಚರ್ಚೆ ಮಾಡಿದ್ದಾರೆ. ಲಾಠಿ ಚಾರ್ಜ್ ಮಾಡುವುದು, ಕೇಸ್ ಹಾಕುವುದು ಮಾತ್ರ ಮಾಡುತ್ತಿದ್ದಾರೆ. ಬ್ರಿಟಿಷರ ಕಾಲದ ಕಾನೂನು‌ ಈಗ ಮಾಡುತ್ತಿದ್ದಾರೆ ಎಂದರು.

ಮುಖ್ಯಮಂತ್ರಿ ರೈತರ ಪರವಾಗಿ ಇದ್ದಾರಾ? ಕೊರೋನಾ ಸಂದರ್ಭದಲ್ಲಿ ರೈತರಿಗೆ ಏನು ಘೋಷಿಸಿದ್ದಾರೆ. 2, 3 ರೂಗೆ ತರಕಾರಿ ಮಾರುತ್ತಿದ್ದರು. ಆಗ ಏನಾದರೂ ಸರ್ಕಾರ ನೆರವಿಗೆ ಬಂದಿದೆಯಾ? ಎಂದು ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು.

ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ಕೇಂದ್ರ ಸರ್ಕಾರ ರೈತ ವಿರೋಧಿ, ಕೃಷಿ ವಿರೋಧಿ ಕಾನೂನುಗಳನ್ನು ಜಾರಿಗೊಳಿಸಿದ್ದಾರೆ. ಎಪಿಎಂಸಿ, ಲೇಬರ್ ಆ್ಯಕ್ಟ್ ಗೆ ತಿದ್ದುಪಡಿ ತಂದಿದ್ದಾರೆ. ಕರ್ನಾಟಕದಲ್ಲೂ ಲೇಬರ್ ಆ್ಯಕ್ಟ್, ಭೂ ಸುಧಾರಣಾ ಕಾಯ್ದೆಗಳಿಗೆ ತಿದ್ದುಪಡಿ ತಂದಿದ್ದಾರೆ. ಕೇಂದ್ರ ಸರ್ಕಾರ ತಂದಿರುವ ಕಾನೂನುಗಳಿಗೆ ದೇಶದಾದ್ಯಂತ ವಿರೋಧ ವ್ಯಕ್ತವಾಗಿದೆ. ಸರ್ಕಾರ, ಅಂಬಾನಿ, ಅದಾನಿಯ ಕಾರ್ಪೋರೇಟ್ ಕಂಪನಿಗಳ ಕೈಗೊಂಬೆಯಾಗಿ ಕೆಲಸ ಮಾಡುತ್ತಿದೆ. ದೇಶದಲ್ಲಿ ಹಲವು ರಾಜಕೀಯ ಪಕ್ಷಗಳು ರೈತರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿವೆ. ಕೇಂದ್ರ ಸರ್ಕಾರ ನೆಪ ಮಾತ್ರಕ್ಕೆ, ಕಣ್ಣೊರೆಸಲು ರೈತರ ಜೊತೆ ಸಭೆ ನಡೆಸಿದೆ ಅಷ್ಟೇ ಎಂದರು.

ಭಾರತ್ ಬಂದ್‌ಗೆ ದೇಶದಾದ್ಯಂತ ಕಾಂಗ್ರೆಸ್ ಬೆಂಬಲ ಕೊಟ್ಟಿದೆ. ಇಂದು ರ್ಯಾಲಿಯಲ್ಲಿ ತಾವು ಭಾಗಿಯಾಗಬೇಕಿತ್ತು. ಆದರೆ ಅಧಿವೇಶನ ಇರುವುದರಿಂದ ಇಲ್ಲಿ ಸಾಂಕೇತಿಕವಾಗಿ ಪ್ರತಿಭಟನೆ ಮಾಡಿ ವಿರೋಧಿಸಿದ್ದೇವೆ. ಪ್ರತಿಭಟನೆ ಬೇಡ ಎಂದು ಅಡ್ಡಿಪಡಿಸಿದರೆ ನಾವು ಸೊಪ್ಪು ಹಾಕುವುದಿಲ್ಲ, ಹೆದರಲ್ಲ. ಸದನದಲ್ಲಿ ಪ್ರತಿಭಟನೆ ಮಾಡುವುದಿಲ್ಲ. ಕಪ್ಪುಪಟ್ಟಿ ಕಟ್ಟಿಕೊಂಡು ಭಾಗವಹಿಸುತ್ತೇವೆ. ಎಪಿಎಂಸಿಗಳನ್ನು ಮುಚ್ಚಲು ಇದು ಸಕಾಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಎಪಿಎಂಸಿ ಮುಚ್ಚಲ್ಲ ಎಂದು ಮೋದಿ ಹೇಳಿದ್ದಾರೆ. ಮೋದಿ ಡೋಂಗಿ. ಯಾವಾಗಲೂ ಸುಳ್ಳು ಹೇಳುತ್ತಾರೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com