ಸಾಲ ಮನ್ನಾ ಮಾಡಿದಾಗ ಒಬ್ಬ ರೈತ ಮುಖಂಡರು ನನ್ನ ಬೆಂಬಲಕ್ಕೆ ಬರಲಿಲ್ಲ: ಕುಮಾರಸ್ವಾಮಿ

ಜೆಡಿಎಸ್ ಪಕ್ಷಕ್ಕೆ ರೈತ ದ್ರೋಹಿ ಪಟ್ಟ ಕಟ್ಟಲು ಹೊರಟಿರುವ ರೈತ ಮುಖಂಡರ ವರ್ತನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ನಾಯಕ ಎಚ್.ಡಿ. ಕುಮಾರಸ್ವಾಮಿ....
ಕುಮಾರಸ್ವಾಮಿ
ಕುಮಾರಸ್ವಾಮಿ

ಬೆಂಗಳೂರು/ಕೋಲಾರ: ಜೆಡಿಎಸ್ ಪಕ್ಷಕ್ಕೆ ರೈತ ದ್ರೋಹಿ ಪಟ್ಟ ಕಟ್ಟಲು ಹೊರಟಿರುವ ರೈತ ಮುಖಂಡರ ವರ್ತನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ನಾಯಕ ಎಚ್.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿಯಾಗಿದ್ದಾಗ ರೈತರ ಸಾಲ ಮನ್ನಾ ಮಾಡಿದ ಸಂದರ್ಭದಲ್ಲಿ ಒಬ್ಬ ರೈತ ಮುಖಂಡರು ಸಹ ನನ್ನ ಪರ ಮಾತನಾಡಲಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಕೋಲಾರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ರೈತ ಮುಖಂಡರ ಧೋರಣೆ ಖಂಡನೀಯ ಎಂದರು.

ರೈತ ಮುಖಂಡರಿಂದ ನಾನು ಏನನ್ನು ಹೇಳಿಸಿಕೊಳ್ಳಬೇಕಿಲ್ಲ. ಜೆಡಿಎಸ್ ರೈತರಿಗಾಗಿಯೇ ಮೀಸಲಾಗಿದೆ. ಮುಂದೆಯು ರೈತರ ಪರ ಇರುತ್ತದೆ. ಜೆಡಿಎಸ್ ರೈತಪರ ಪಕ್ಷ. ಈ ವಿಚಾರದಲ್ಲಿ ಎಲ್ಲಿಗೆ ಬೇಕಾದರೂ ಬಹಿರಂಗ ಚರ್ಚೆಗೆ ಬರಲು‌ ನಾನು ಸಿದ್ಧ ಎಂದು ಸವಾಲು ಹಾಕಿದರು.

ಭೂ ಸುದಾರಣೆ ಮಸೂದೆ ತಂದಾಗ ಮೊದಲಿಗೆ ತಾವು ದೇವೇಗೌಡರು ವಿರೋಧಿಸಿದ್ದು ನಿಜ. ಕಳೆದ ಅಧಿವೇಶನದಲ್ಲಿ ಕೆಲ ಬದಲಾವಣೆ ತರಲು ಸಲಹೆ ನೀಡಿದ್ದೇವು. ತಮ್ಮ ಸಲಹೆಯನ್ನು ಸರ್ಕಾರ ಪರಿಗಣಿಸಿ ಪರಿಷ್ಕರಣೆ ಮಾಡಿದೆ. ಹೀಗಾಗಿ ಮಸೂದೆ ಬೆಂಬಲಿಸಬೇಕಾಯಿತು ಎಂದು ಬಲವಾಗಿ ಸಮರ್ಥಿಸಿಕೊಂಡರು.

ಮಸೂದೆ ಕುರಿತು ಜೆಡಿಎಸ್ ಕಾರ್ಯಕರ್ತರು, ಮುಖಂಡರಿಗೆ ಮಾಹಿತಿ ಕೊರತೆ ಇತ್ತು. ಹೀಗಾಗಿ ಮಂಗಳವಾರ ಮಸೂದೆ ವಿರುದ್ಧವಾಗಿ ಮಾತನಾಡಿದ್ದಾರೆ. ಪಕ್ಷದ ನಿಲುವಿನಲ್ಲಿ ಗೊಂದಲವಿಲ್ಲ. ಈಗ ರೈತಮುಖಂಡರು ಕೆಲವರು ಬಾರುಕೋಲು ಚಳುವಳಿ ಮಾಡಲು ಹೊರಟ್ಟಿದ್ದಾರೆ. ಇಂದು ಬೆಂಗಳೂರಿನಲ್ಲಿ ಬಾರ್ ಕೋಲ್ ಚಳುವಳಿ ನಡೆಸಲಾಗುತ್ತಿದೆ. ಹೋರಾಟ ಮಾಡಲಿ, ನಮ್ಮ ಅಭ್ಯಂತರವಿಲ್ಲ ಎಂದರು,

ಕಳೆದ 1994 ರಲ್ಲಿ ರೈತ ಮುಖಂಡ ಪ್ರೊ.ನಂಜುಂಡಸ್ವಾಮಿ ಶಾಸಕರಾಗಿದ್ದರು. ಆಗ 1961 ರ ಕಂದಾಯ ಕಾನೂನಿಂದ 79(ಎ),79(ಬಿ) ತೆಗೆಯಬೇಕು ಎಂದು ವಿಧಾನಸೌಧದಲ್ಲಿ ಭಾಷಣ ಮಾಡಿದ್ದರು. ಇದು ಈ ದೇಶದ ನಾಗರಿಕರ ಮೂಲಭೂತ ಹಕ್ಕನ್ನು ಮೊಟಕುಗೊಳಿಸಿದಂತಾಗಿದೆ. ಈ ಕಾನೂನು ತೆಗೆದು ಹಾಕಿ ಎಂದು ಒತ್ತಾಯಿಸಿದ್ದರು ಎಂದು ಕುಮಾರಸ್ವಾಮಿ ಸ್ಮರಿಸಿಕೊಂಡರು.

ಕಾಂಗ್ರೆಸ್ ವಿರುದ್ದ ಕಿಡಿ ಕಾರಿದ ಕುಮಾರಸ್ವಾಮಿ, ಕಾಂಗ್ರೆಸ್ ನಂತೆ ನಾವು ದ್ವಿಮುಖ ಧೋರಣೆ ಹೊಂದಿಲ್ಲ. ಡಬಲ್ ಗೇಮ್ ರಾಜಕೀಯ ಮಾಡುವುದಿಲ್ಲ. ಈಗ ಕಾಂಗ್ರೆಸ್ ಶಾಲು ಹೊದ್ದುಕೊಂಡರೆ ಬೆಲೆಯಿಲ್ಲ. ನಮ್ಮಪ್ಪ ರೈತರ ಪರವಾಗಿದ್ದು, ಅವರ 60 ವರ್ಷದ ಬುದ್ದಿಯನ್ನು ನನಗೆ ಧಾರೆ ಎರೆದಿದ್ದಾರೆ. ನಾವು ರೈತರನ್ನು ಉಳಿಸಿಕೊಳ್ಳಲು ನಮ್ಮ ಪಕ್ಷದಿಂದ ಪ್ರಯತ್ನ ಮಾಡುವುದಿಲ್ಲ ಎಂದರು

ಮಸೂದೆ ಬೆಂಬಲಿಸಿದ ಮಾತ್ರಕ್ಕೆ ನಾನು ಬಿಜೆಪಿಗೆ ಹತ್ತಿರವಾಗಿಲ್ಲ, ಬಿಜೆಪಿ ಕುರಿತು ಲಘು ಧೋರಣೆಯನ್ನೂ ಸಹ ಹೊಂದಿಲ್ಲ ಎಂದು ಕುಮಾರಸ್ವಾಮಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

ನಾನು ಹಗಲು ಹೊತ್ತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದೆ. ಆದರೆ ಸಿದ್ದರಾಮಯ್ಯ ಮಧ್ಯರಾತ್ರಿ ಭೇಟಿಯಾಗಿದ್ದರು. ಸಿದ್ದರಾಮಯ್ಯ ಅವರ ಶಿಷ್ಯರನ್ನು ಬಿಜೆಪಿಗೆ ಕಳಿಸಿದ್ದು ಯಾಕೆ ಎಂಬುದು ಅವರಿಗಷ್ಟೇ ಗೊತ್ತಿರಬೇಕು. ಮುಖ್ಯಮಂತ್ರಿ ಬದಲಾವಣೆ ಆಗುತ್ತಾರೆ ಎಂದೂ ಸಹ ಹೇಳಿದ್ದಾರೆ. ಅವರು ಯಾವಾಗ ಭವಿಷ್ಯಕಾರರು ಆದರೊ ಗೊತ್ತಿಲ್ಲ ಎಂದು ಪ್ರಶ್ನೆಹೊಂದಕ್ಕೆ ಪ್ರತಿಕ್ರಿಯೆ ನೀಡಿದರು.

ಬಳಿಕ ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಕುಮಾರಸ್ವಾಮಿ, ಭೂ ಸುಧಾರಣಾ ತಿದ್ದುಪಡಿಗೆ ಕಾಯ್ದೆಗೆ ಬೆಂಬಲ ನೀಡಿರುವ ವಿಚಾರದಲ್ಲಿ ಪಕ್ಷದಲ್ಲಿ ದ್ವಂದ್ವ ಧೋರಣೆ ಇರುವುದನ್ನು ಒಪ್ಪಿಕೊಂಡರು.

ನಾನು ಮೇಲ್ಮನೆಯ ಸದಸ್ಯನಲ್ಲ. ಅಲ್ಲಿ ಏನಾಯಿತು ಎನ್ನುವುದು ನನ್ನ ಗಮನಕ್ಕೆ ಬರಲಿಲ್ಲ. ಮಸೂದೆಯನ್ನು ಬೆಂಬಲಿಸುವ ವಿಚಾರದಲ್ಲಿ ಪಕ್ಷದ ವೇದಿಕೆಯಲ್ಲಿ ಚರ್ಚೆಯಾಗಿಲ್ಲ. ನಮ್ಮ ಶಾಸಕರು ಆತ್ಮಸಾಕ್ಷಿಗೆ ಅನುಗುಣವಾಗಿ ಮತಹಾಕಿದ್ದಾರೆ.
ನಮ್ಮ ಶಾಸಕರು ಹಣಕ್ಕಾಗಿ ತಮ್ಮನ್ನು ಮಾರಿಕೊಳ್ಳುತ್ತಾರೆ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಆರೋಪವನ್ನು ನಾನು ಒಪ್ಪುವುದಿಲ್ಲ. ನಮ್ಮ ಶಾಸಕರು ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಂಡಿದ್ದಾರೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com