ಸ್ಪೀಕರ್ ಕಾಗೇರಿ
ಸ್ಪೀಕರ್ ಕಾಗೇರಿ

ಕಲಾಪಕ್ಕೆ ಕಾಂಗ್ರೆಸ್-ಜೆಡಿಎಸ್ ಗೈರು ಸರಿಯಾದ ಕ್ರಮವಲ್ಲ – ಸಂಧಾನ ಯತ್ನ ವಿಫಲ: ಸ್ಪೀಕರ್ ಕಾಗೇರಿ

ಸದನದ ಕಲಾಪ ಬಹಿಷ್ಕರಿಸುವುದು ಸರಿಯಲ್ಲ. ಸೈದ್ಧಾಂತಿಕ‌ ವಿರೋಧ ಇದ್ದದ್ದೇ. ಅದನ್ನು ಜನರ ಮುಂದೆ ಕೊಂಡೊಯ್ಯುವ ಪ್ರಯತ್ನ ಮಾಡಲಿ.

ಬೆಂಗಳೂರು: ಸದನದ ಕಲಾಪ ಬಹಿಷ್ಕರಿಸುವುದು ಸರಿಯಲ್ಲ. ಸೈದ್ಧಾಂತಿಕ‌ ವಿರೋಧ ಇದ್ದದ್ದೇ. ಅದನ್ನು ಜನರ ಮುಂದೆ ಕೊಂಡೊಯ್ಯುವ ಪ್ರಯತ್ನ ಮಾಡಲಿ. ಪ್ರತಿಪಕ್ಷದ ಸದಸ್ಯರು ಕಲಾಪದಲ್ಲಿ ಪಾಲ್ಗೊಳ್ಳುವಂತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮನವಿ ಮಾಡಿದ್ದಾರೆ.

ಇಂದು ವಿಧಾನಸಭೆ ಕಲಾಪ ಆರಂಭವಾದರೂ ಕಾಂಗ್ರೆಸ್‌ ಸದಸ್ಯರು ಸದನಕ್ಕೆ ಹಾಜರಾಗಲಿಲ್ಲ. ಇದನ್ನು ಗಮನಿಸಿದ ಸ್ಪೀಕರ್, ಚರ್ಚೆ ನಡೆಸಲು ಎಲ್ಲರಿಗೂ ಅವಕಾಶ ಇದ್ದೇ ಇದೆ. ಆದರೆ ಪ್ರತಿಪಕ್ಷಗಳಿಲ್ಲದೆ ಸದನ ನಡೆಸುವುದು ಸರಿಯಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರಿಯಲ್ಲ. ಅವರು ಕಲಾಪದಲ್ಲಿ ಭಾಗವಹಿಸಬೇಕು. ಪ್ರತಿಪಕ್ಷ ನಾಯಕರಿಗೆ ನಾನು ಮನವಿ ಮಾಡ್ತೇನೆ ಎಂದು ಹೇಳಿದರು.

ಅವರನ್ನು ಮನವೊಲಿಸುವ ಪ್ರಯತ್ನ ನಾನು ಮಾಡುತ್ತೇನೆ ಎಂದು ಹೇಳಿದ ಸ್ಪೀಕರ್, ಹತ್ತು ನಿಮಿಷ ಸದನ ಮುಂದೂಡಿದರು. ಬಳಿಕ ಕಾಂಗ್ರೆಸ್‌ ಸದಸ್ಯರ ಮನವೊಲಿಸಲು ಸ್ಪೀಕರ್ ಕಚೇರಿಗೆ ಆಹ್ವಾನಿಸಿದರು. ಆದರೆ,ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸದಸ್ಯರು ಬರದ ಕಾರಣ ಮತ್ತೆ ಸದನ ಸಮಾವೇಶಗೊಂಡಿತು.

ಶಾಸಕಾಂಗ ಪಕ್ಷದ ಸಭೆ ಇರುವುದರಿಂದ ಕಾಂಗ್ರೆಸ್‌ ಸದಸ್ಯರು ಬರದ ಕಾರಣ ಸದನವನ್ನು ಮುಂದುವರೆಸೋಣ. ಅವರು ಸದನಕ್ಕೆ ಬರುವ ಸಂಪೂರ್ಣ ವಿಶ್ವಾಸವಿದೆ ಎಂದು ಸ್ಪೀಕರ್ ಹೇಳಿದರು.

ಇದಕ್ಕೂ ಮುನ್ನ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.‌ಮಾಧುಸ್ವಾಮಿ ಮಾತನಾಡಿ, ವಿಧಾನಸಭೆಯಲ್ಲಿ ಅಂಗೀಕಾರಗೊಂಡ ಎಷ್ಟೋ ವಿಧೇಯಕಗಳು ಮೇಲ್ಮನೆಯಲ್ಲಿ ಅಂಗೀಕಾರವಾಗದೆ ಬಾಕಿ ಉಳಿಯುತ್ತಿವೆ. ರಾಜ್ಯಪಾಲರು ಇದನ್ನು ಗಮನಿಸಿ ಪ್ರಶ್ನಿಸಿದ್ದಾರೆ. ಅದೇಕೆ ಎರಡೂ ಸದನಗಳಲ್ಲಿ ಬಿಲ್ ಪಾಸಾಗದ ಸ್ಥಿತಿ ಎಂದು ಕೇಳಿದ್ದಾರೆ. ಬಿಎಸಿ ಸಭೆಯಲ್ಲೂ ಸಹ ಮಹತ್ವದ ಬಿಲ್ ಮಂಡಿಸುವುದಾಗಿ ಹೇಳಿದ್ದೆವು. ಈಗ ಕಾಂಗ್ರೆಸ್ ಸದಸ್ಯರು ಸದನಕ್ಕೆ ಬಾರದಿರುವುದು ಸರಿಯಲ್ಲ ಎಂದರು.

ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ, ಕಾಂಗ್ರೆಸ್ ನವರು ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ, ಗೋಹತ್ಯೆ ನಿಷೇಧ ಕಾಯ್ದೆಯನ್ನು ಅನುಮೋದನೆ ಮಾಡಿತ್ತು. ಅವರು ರಾಜ್ಯಪಾಲರ ಹತ್ತಿರ ಹೋಗಿ ಕಾಯ್ದೆಗೆ ತಡೆ ತಂದರು. ಗೋ ಹತ್ಯೆ ನಿಷೇಧ ಕಾಯಿದೆ ಬಗ್ಗೆ ಬಿಜೆಪಿ ಪ್ರಣಾಳಿಕೆಯಲ್ಲೇ ತಂದಿದ್ದೇವೆ. ಅದೇ ರೀತಿ ಮಾಡಿದ್ದೇವೆ ಎಂದು ಹೇಳಿದರು 
ಕಾಂಗ್ರೆಸ್ ನವರು ಪ್ರಜಾಪ್ರಭುತ್ವ ಬಗ್ಗೆ ದೊಡ್ಡ ದೊಡ್ಡದಾಗಿ ಮಾತನಾಡುತ್ತಾರೆ. ಗೋಹತ್ಯೆ ನಿಷೇಧ ಕಾಯ್ದೆಯನ್ನು ಹಿಂದೆ ಗವರ್ನರ್ ಬಳಿ ಹೋಗಿ ತಡೆ ಹಿಡಿದ್ದದ್ದು ಯಾಕೆ ಎಂದು ಪ್ರಶ್ನಿಸಿದ ಅವರು, ಕಲಾಪ ನಡೆಸಲು ಅನುವು ಮಾಡಿಕೊಡುವಂತೆ ಸ್ಪೀಕರ್ ಗೆ ಮನವಿ ಮಾಡಿದರು.

Related Stories

No stories found.

Advertisement

X
Kannada Prabha
www.kannadaprabha.com