ವಿಧಾನ ಪರಿಷತ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನಾಳೆ ಮರು ಕಲಾಪ: ಸರ್ಕಾರದಿಂದ ರಾಜ್ಯಪಾಲರಿಗೆ ಮನವಿ 

ಅನಿರ್ದಿಷ್ಟಾವಧಿಗೆ ಕಲಾಪವನ್ನು ಮುಂದೂಡಿದ ನಂತರ ಇದೇ ಮೊದಲ ಬಾರಿಗೆ ಕಲಾಪವನ್ನು ಮತ್ತೆ ನಡೆಸುವ ಮೂಲಕ ರಾಜ್ಯ ವಿಧಾನ ಪರಿಷತ್ ಇತಿಹಾಸ ಸೃಷ್ಟಿಸಿದೆ. 
ವಿಧಾನ ಪರಿಷತ್
ವಿಧಾನ ಪರಿಷತ್

ಬೆಂಗಳೂರು: ಅನಿರ್ದಿಷ್ಟಾವಧಿಗೆ ಕಲಾಪವನ್ನು ಮುಂದೂಡಿದ ನಂತರ ಇದೇ ಮೊದಲ ಬಾರಿಗೆ ಕಲಾಪವನ್ನು ಮತ್ತೆ ನಡೆಸುವ ಮೂಲಕ ರಾಜ್ಯ ವಿಧಾನ ಪರಿಷತ್ ಇತಿಹಾಸ ಸೃಷ್ಟಿಸಿದೆ. 

ಕಳೆದ ಗುರುವಾರ ವಿಧಾನ ಪರಿಷತ್ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ್ದರು. ಇದೀಗ ಬಿಜೆಪಿ ನಾಯಕರು ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ಮನವಿ ಸಲ್ಲಿಸಿ ನಾಳೆ ಮತ್ತೆ ವಿಧಾನ ಪರಿಷತ್ ಕಲಾಪ ನಡೆಸಬೇಕೆಂದು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಬಗ್ಗೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆಸಿ ಮಾಧು ಸ್ವಾಮಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ನೀಡಿ, ಕಳೆದ ಶುಕ್ರವಾರ ರಾಜ್ಯಪಾಲರಿಗೆ ಪತ್ರ ಬರೆದು ಸಂವಿಧಾನ ವಿಧಿ 170ರಡಿ ಮತ್ತೊಮ್ಮೆ ವಿಧಾನ ಪರಿಷತ್ ಕಲಾಪ ನಡೆಸಲು ಅವಕಾಶ ನೀಡಬೇಕೆಂದು ಕೇಳಿಕೊಂಡೆ. ಅದಕ್ಕೆ ಹಿಂದಿನ ದಿನ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು. ಆದರೆ ಅದು ಸರ್ಕಾರದ ನಿರ್ಧಾರವಾಗಿರಲಿಲ್ಲ. ವ್ಯವಹಾರ ಸಲಹಾ ಸಮಿತಿಯಲ್ಲಿ ಕೂಡ ನಾವು ಒಪ್ಪಿರಲಿಲ್ಲ. ಸಭೆಯ ವೇಳೆ ಪರಿಷತ್ತಿನ ಸಭಾಪತಿಗಳು ಮತ್ತು ಇತರರು, ವಿಧಾನಸಭೆ ಕಲಾಪವನ್ನು ಮುಂದೂಡಿ ಅವರು ಗ್ರಾಮ ಪಂಚಾಯತ್ ಎಲೆಕ್ಷನ್ ಇದೆ ಎಂದು ಊರಿಗೆ ಹೋಗುವುದಾದರೆ ಪರಿಷತ್ತಿನ ಸದಸ್ಯರಿಗೂ ಅವಕಾಶ ನೀಡಬೇಕೆಂದು ಹೇಳಿದರು ಎಂದು ತಿಳಿಸಿದರು.

ಕಲಾಪ ವ್ಯವಹಾರಗಳ ಸಲಹಾ ಸಮಿತಿಯಲ್ಲಿ ಬಿಜೆಪಿ ಸದಸ್ಯರು ಹೆಚ್ಚಾಗಿರುವುದರಿಂದ ಬಹುಮತದ ತೀರ್ಮಾನ ಪ್ರಕಾರ ಹೋಗುತ್ತೇವೆ ಎಂದಿದ್ದೆವು. ಸಭಾಪತಿಗಳು ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು. ಆದರೆ ಸರ್ಕಾರಕ್ಕೆ ಅಧಿವೇಶನ ಕರೆಯುವ ಅಧಿಕಾರ ಇರುವುದರಿಂದ ಸಭಾಪತಿಗಳು ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ನಾವು ಹೇಳಿದೆವು ಎಂದು ಸಚಿವ ಮಾಧುಸ್ವಾಮಿ ಹೇಳಿದರು. 

ಗುರುವಾರ ಸಂಜೆ 7 ಗಂಟೆಯವರೆಗೆ ನಾವು ಕಾಯುತ್ತಿದ್ದೆವು, ಏಕೆಂದರೆ ಅವರ ವಿರುದ್ಧ ನಮ್ಮ ಸದಸ್ಯರು ಮಂಡಿಸಿದ ‘ಅವಿಶ್ವಾಸ’ ನಿರ್ಣಯದ ಕುರಿತು ಅವರು ನಿರ್ಧಾರವನ್ನು ಪ್ರಕಟಿಸಬೇಕಾಗಿತ್ತು. ಆದರೆ ಅವರು ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು. ಮೇಲ್ಮನೆಯಲ್ಲಿ ಗೋಹತ್ಯೆ ವಿರೋಧಿ ಮಸೂದೆಯನ್ನು ಮಂಡಿಸಲು ಸಾಧ್ಯವಾಗದ ಕಾರಣ ಸರ್ಕಾರದ ಆಡಳಿತಾರೂಢ ಸದಸ್ಯರಿಗೆ ಸಿಟ್ಟು ತರಿಸಿತು. ಸಚಿವರು, ಈ ಬಾರಿ, ಅಧಿವೇಶನದ ಅವಧಿಯನ್ನು ನಾವು ಅಂಗೀಕರಿಸಬೇಕಾದ ಮಸೂದೆಗಳ ಸಂಖ್ಯೆಯನ್ನು ಆಧರಿಸಿ ನಿರ್ಧರಿಸಿದ್ದೇವೆ ಎಂದರು.

ನಾಳೆ ವಿಧಾನಪರಿಷತ್ ಕಲಾಪದಲ್ಲಿ ಸಭಾಪತಿಗಳ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಸರ್ಕಾರ ನಿರ್ಧರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com