ವಿಧಾನ ಪರಿಷತ್ ಗದ್ದಲ: ಮಧ್ಯಪ್ರವೇಶಿಸುವಂತೆ ರಾಜ್ಯಪಾಲರಿಗೆ ಬಿಜೆಪಿ ಮನವಿ

ಅವಿಶ್ವಾಸ ನಿರ್ಣಯ ಕುರಿತು ಚರ್ಚೆಗೆ ಅವಕಾಶ ನೀಡದೆ ಕಾಂಗ್ರೆಸಿಗರು ವಿಧಾನಪರಿಷತ್ ನಲ್ಲಿ ಗದ್ದಲ ಎಬ್ಬಿಸಿರುವ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಮತ್ತೊಮ್ಮೆ ಸದನ ಕರೆದು ಅವಿಶ್ವಾಸ ನಿರ್ಣಯ ಕುರಿತು ತೀರ್ಮಾನ ಕೈಗೊಳ್ಳುವಂತೆ ಸೂಚನೆ ನೀಡಬೇಕೆಂದು ಬಿಜೆಪಿ ರಾಜ್ಯಪಾಲರಿಗೆ ಮನವಿ ಮಾಡಿಕೊಂಡಿದೆ. 
ರಾಜ್ಯಪಾಲ ವಜುಭಾಯಿ ವಾಲಾ
ರಾಜ್ಯಪಾಲ ವಜುಭಾಯಿ ವಾಲಾ

ಬೆಂಗಳೂರು: ಅವಿಶ್ವಾಸ ನಿರ್ಣಯ ಕುರಿತು ಚರ್ಚೆಗೆ ಅವಕಾಶ ನೀಡದೆ ಕಾಂಗ್ರೆಸಿಗರು ವಿಧಾನಪರಿಷತ್ ನಲ್ಲಿ ಗದ್ದಲ ಎಬ್ಬಿಸಿರುವ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಮತ್ತೊಮ್ಮೆ ಸದನ ಕರೆದು ಅವಿಶ್ವಾಸ ನಿರ್ಣಯ ಕುರಿತು ತೀರ್ಮಾನ ಕೈಗೊಳ್ಳುವಂತೆ ಸೂಚನೆ ನೀಡಬೇಕೆಂದು ಬಿಜೆಪಿ ರಾಜ್ಯಪಾಲರಿಗೆ ಮನವಿ ಮಾಡಿಕೊಂಡಿದೆ. 

ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಾಜ್ಯಪಾಲರು ಈ ಬಗ್ಗೆ ಕಾನೂನಾತ್ಮಕ ಚರ್ಚೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಆಶ್ವಾಸನೆ ನೀಡಿದ್ದಾರೆಂದು ವರದಿಗಳು ತಿಳಿಸಿವೆ. 

ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ನೇತೃತ್ವದಲ್ಲಿ ಸೋಮವಾರ ರಾಜಭವನಕ್ಕೆ ತೆರಳಿ ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ವಿಧಾನಪರಿಷತ್ತಿನಲ್ಲಿ ನಡೆದ ಬೆಳವಣಿಗೆಗಳ ಬಗ್ಗೆ ದೂರು ನೀಡಿದರು. 

ಅವಿಶ್ವಾಸ ನಿರ್ಣಯ ಮಂಡನೆಗೆ ಕಾಂಗ್ರೆಸ್ ಸದಸ್ಯರು ಅವಕಾಶ ನೀಡದೆ ಗದ್ದಲ ಎಬ್ಬಿಸಿದ್ದಾರೆ. ರಾಜ್ಯಪಾಲರು ಕೂಡಲೇ ಮಧ್ಯಪ್ರವೇಶಿಸಿ ಅವಿಶ್ವಾಸ ನಿರ್ಣಯ ಬಗ್ಗೆ ನಿರ್ಧರಿಸಲು ವಿಧಾನಪರಿಷತ್ ಅಧ್ಯಕ್ಷಕರಿಗೆ ಸೂಚನೆ ನೀಡಬೇಕು ಮತ್ತು ಸದನವನ್ನು ಕಟ್ಟುನಿಟ್ಟಾಗಿ ನಡೆಸಬೇಕು. ಅಲ್ಲದೇ, ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಿರುವುದರಿಂದ ಸಭಾಪತಿ ಬದಲು ಉಪಸಭಾಪತಿಯು ಸದನವನ್ನು ಮುನ್ನಡೆಸಬೇಕು ಎಂಬ ಸೂಚನೆ ನೀಡಬೇಕು ಎಂದು ಲಿಖಿತ ರೂಪದಲ್ಲಿ ಸಲ್ಲಿಸಿದರು. 

ಸಭಾಪತಿ ವಿರುದ್ಧ 14 ದಿನಗಳ ಮೊದಲೇ ಅವಿಶ್ವಾಸ ನಿರ್ಣಯ ಬಗ್ಗೆ ನೋಟಿಸ್ ನೀಡಲಾಗಿತ್ತು. ಅವಿಶ್ವಾಸ ನಿರ್ಣಯ ಮಂಡನೆಯಾಗಿರುವ ಹಿನ್ನೆಲೆಯಲ್ಲಿ ಸಭಾಪತಿಗಳು ಸದನವನ್ನು ಮುನ್ನಡೆಸುವಂತಿಲ್ಲ. ಹೀಗಾಗಿ ಉಪ ಸಭಾಪತಿಗಳು ಸದನವನ್ನು ನಡೆಸಲು ಮುಂದಾಗಿದ್ದರು. ಆದರೆ, ಕಾಂಗ್ರೆಸ್'ನ ಸದಸ್ಯರ ವರ್ತನೆ ಸದನಕ್ಕೆ ಚ್ಯುತಿ ಬರುವಂತೆ ನಡೆದುಕೊಂಡಿದ್ದಾರೆ. ಸಂವಿಧಾನದ ನಿಯಮಗಳಿಗೆ ತದ್ವಿರುದ್ಧವಾಗಿ  ನಡೆದುಕೊಂಡಿದ್ದಾರೆ. ಸಭಾಪತಿಗಳು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದು, ಸಂವಿಧಾನಬಾಹಿರವಾಗಿ ನಡೆದುಕೊಂಡಿದ್ದಾರೆಂದು ದೂರಲಾಗಿದೆ. 

ಈ ನಡುವೆ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿಯವರಿಗೆ ಈ ಹಿಂದೆ ನೀಡಿದ್ದ ಬೆಂಬಲವನ್ನು ಜೆಡಿಎಸ್ ಹಿಂಪಡೆದುಕೊಂಡಿದ್ದು, ಇದೀಗ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಸೂಚನೆ ನೀಡಿದೆ. 

ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ಜೆಡಿಎಸ್'ನ ಮೇಲ್ಮನೆ ಸದಸ್ಯರು ಪರಿಷತ್ ಕಾರ್ಯದರ್ಶಿಗಳ ಬಳಿ ತೆರಳಿ ಅವಿಶ್ವಾಸ ನಿರ್ಣಯದ ಪತ್ರ ಸಲ್ಲಿಸಿದರು. ಬಿಜೆಪಿ ಮಂಡಿಸಿದ ಅವಿಶ್ವಾಸ ನಿರ್ಣಯ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಜೆಡಿಎಸ್ ಹೊಸದಾಗಿ ಅವಿಶ್ವಾಸ ನಿರ್ಣಯ ಸೂಚನೆ ನೀಡಿದೆ. ಇದರ ಆಧಾರ ಮೇಲೆ ಮುಂದಿನ ದಿನದಲ್ಲಿ ಮತ್ತೊಮ್ಮೆ ಅಧಿವೇಶನ ಕರೆಯಲು ಅವಕಾಶವಿದೆ ಎಂದು ಹೇಳಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com