ಗ್ರಾಮ ಪಂಚಾಯತ್ ಚುನಾವಣೆ: ಗೆಲ್ಲಲು, ಪ್ರತಿಸ್ಪರ್ಧಿಗಳನ್ನು ಸೋಲಿಸಲು ಅಭ್ಯರ್ಥಿಗಳಿಂದ ಜ್ಯೋತಿಷ್ಯ, ಮಾಟ-ಮಂತ್ರದ ಮೊರೆ!
ನಿಂಬೆಹಣ್ಣು, ಕತ್ತರಿಸಿದ ಕುಂಬಳಕಾಯಿ ಅಥವಾ ಬೊಂಬೆಯ ಮೂಲಕ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಸೋಲಿಸಲು ಸಾಧ್ಯವೇ?
Published: 17th December 2020 02:52 PM | Last Updated: 17th December 2020 04:36 PM | A+A A-

ಸಾಂದರ್ಭಿಕ ಚಿತ್ರ
ಬೆಳಗಾವಿ: ನಿಂಬೆಹಣ್ಣು, ಕತ್ತರಿಸಿದ ಕುಂಬಳಕಾಯಿ ಅಥವಾ ಬೊಂಬೆಯ ಮೂಲಕ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಸೋಲಿಸಲು ಸಾಧ್ಯವೇ?
ರಾಜ್ಯದಲ್ಲಿ ಗ್ರಾಮ ಪಂಚಾಯತ್ ಚುನಾವಣಾ ಕಣ ರಂಗೇರುತ್ತಿದೆ. ಗ್ರಾಮೀಣ ಮಟ್ಟದಲ್ಲಿ ತೀವ್ರ ಜಿದ್ದಾಜಿದ್ದಿನ ಈ ಸ್ಪರ್ಧೆಯಲ್ಲಿ ಗೆಲ್ಲಲು ಹಲವು ಅಭ್ಯರ್ಥಿಗಳು ತಮ್ಮ ಪ್ರತಿಸ್ಪರ್ಧಿಗಳು, ವಿರೋಧಿಗಳನ್ನು ಮಣಿಸಲು ಮಾಟ, ಮಂತ್ರದ ಮೊರೆ ಹೋಗುತ್ತಿದ್ದಾರೆ.
ಗ್ರಾಮ ಪಂಚಾಯತ್ ಚುನಾವಣೆಯನ್ನು ರಾಜ್ಯದ ಆಡಳಿತಾರೂಢ ಬಿಜೆಪಿ ಸೇರಿದಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಗಂಭೀರವಾಗಿ ತೆಗೆದುಕೊಂಡಿವೆ. ಹಲವು ಉನ್ನತ ಮಟ್ಟದ ನಾಯಕರು ಪ್ರಚಾರದಲ್ಲಿ ನಿರತರಾಗಿದ್ದಾರೆ.ಚುನಾವಣೆಯಲ್ಲಿ ಪ್ರತಿಸ್ಪರ್ಧಿಯನ್ನು ಮಣಿಸಲು ಅವರ ಮನೆಯ ಪಕ್ಕದಲ್ಲಿ ಅಥವಾ ಜಂಕ್ಷನ್ ಗಳಲ್ಲಿ ನಿಂಬೆಹಣ್ಣು, ಕತ್ತರಿಸಿಟ್ಟ ಕುಂಬಳಕಾಯಿ, ಮೆಣಸು, ತೆಂಗಿನಕಾಯಿ, ಗುಲಾಬಿ ಬಣ್ಣದ ಕಲರ್ ಪೌಡರ್, ಗೊಂಬೆಗಳನ್ನು ಇಡುತ್ತಿದ್ದಾರೆ.
ಬೈಲಹೊಂಗಲ ತಾಲ್ಲೂಕಿನ ಮರಕಟ್ಟಿಯಲ್ಲಿ ಇತ್ತೀಚೆಗೆ ಅಭ್ಯರ್ಥಿಯೊಬ್ಬರಿಗೆ ಅಚ್ಚರಿ ಕಾದಿತ್ತು. ಬೆಳಗೆದ್ದು ನೋಡುವಾಗ ಅವರ ಮನೆ ಮುಂದೆ ಯಾರೋ ಮಾಟ-ಮಂತ್ರ ಮಾಡಿಟ್ಟಿದ್ದರು. ಕಳೆದ ಸೋಮವಾರ ಮಧ್ಯರಾತ್ರಿ ಅವರ ಮನೆ ಮುಂದೆ ಮಾಟ-ಮಂತ್ರ ಮಾಡಿಟ್ಟ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಮಧ್ಯರಾತ್ರಿ ಚಂದ್ರನ ಬೆಳಕಿನಲ್ಲಿ ಮಾಟ ಮಂತ್ರ ಮಾಡಿದರೆ ಪ್ರತಿಸ್ಪರ್ಧಿಯನ್ನು ಮಟ್ಟಹಾಕಬಹುದು ಎಂಬ ನಂಬಿಕೆ. ಇದು ಕಂಡ ನಂತರ ಈ ಅಭ್ಯರ್ಥಿಗೆ, ಅವರ ಮನೆಯವರಿಗೆ ಮತ್ತು ಗ್ರಾಮಸ್ಥರಿಗೆ ಭಯ, ಆತಂಕ ಶುರುವಾಗಿದೆ.
ವಿಚಾರಿಸಿದಾಗ ತಮ್ಮ ಪ್ರತಿಸ್ಪರ್ಧಿ ಚುನಾವಣೆಯಲ್ಲಿ ಗೆಲ್ಲಲು ಹೀಗೆ ಮಾಟ-ಮಂತ್ರ ಮಾಡಿಸಿದ್ದಾರೆ ಎಂದು ಗೊತ್ತಾಯಿತು. ಈ ಮಾಟ ಮಂತ್ರ ಮಾಡಿಸುವವರು 25 ಸಾವಿರದಿಂದ 30 ಸಾವಿರದವರೆಗೆ ಮತದಾರರಿಗೆ ಹಂಚುತ್ತಿದ್ದಾರೆ. ಇದರಿಂದ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದು ಸ್ಥಳೀಯ ಅಧಿಕಾರಿಗಳು ಹೀಗೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ಆ ಅಭ್ಯರ್ಥಿ ಹೇಳುತ್ತಾರೆ.
ಗ್ರಾಮಗಳಲ್ಲಿ ಮಾಟ-ಮಂತ್ರ ಮಾಡುವವರು ಕಳೆದ ಕೆಲ ತಿಂಗಳಿನಿಂದ ತೀವ್ರ ಬೇಡಿಕೆಯಲ್ಲಿದ್ದಾರೆ. ಅಭ್ಯರ್ಥಿಗಳು ಹತಾಶೆಯಿಂದ ಅವರನ್ನು ಭೇಟಿ ಮಾಡುತ್ತಿದ್ದಾರೆ. ಇನ್ನು ಹಲವು ಅಭ್ಯರ್ಥಿಗಳು ಜ್ಯೋತಿಷಿಗಳನ್ನು ಭೇಟಿ ಮಾಡಿ ತಮ್ಮ ಭವಿಷ್ಯ ಕೇಳುತ್ತಿದ್ದಾರೆ. ಜ್ಯೋತಿಷಿಗಳು ಹೇಳಿದ ದಿನವೇ ಮುಹೂರ್ತ ನೋಡಿ ನಾಮಪತ್ರ ಸಲ್ಲಿಸುತ್ತಿದ್ದಾರೆ. ಜ್ಯೋತಿಷಿಗಳು ಹೇಳಿದ ದಿನವೇ ಸಮಯ, ದಿನ ನೋಡಿಕೊಂಡು ಪ್ರಚಾರ ಆರಂಭಿಸಿದ್ದಾರೆ.