ಇನ್ನೆಂದು ಸಚಿವ ಸ್ಥಾನ‌ ಕೇಳಲು ಸಿಎಂ ಮನೆ ಬಾಗಿಲಿಗೆ ಹೋಗುವುದಿಲ್ಲ: ಎಚ್ ವಿಶ್ವನಾಥ್ ಗರಂ

ಇನ್ನು ಮುಂದೆ ಎಂದೂ ಸಚಿವ ಸ್ಥಾನ‌ ಕೇಳಲು ಮುಖ್ಯಮಂತ್ರಿ ಮನೆ ಬಾಗಿಲಿಗೆ ಹೋಗುವುದಿಲ್ಲ. ಆರ್. ಶಂಕರ್, ಎಂಟಿಬಿ ನಾಗರಾಜ್ ರೀತಿ ಪದೇ ಪದೇ ಮುಖ್ಯಮಂತ್ರಿ ಭೇಟಿ ಮಾಡುವುದಿಲ್ಲ. ಅವರ ಮನೆಗೆ ಭೇಟಿ ನೀಡುವ ಅನಿವಾರ್ಯತೆಯೂ ಇಲ್ಲ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೇಳಿದ್ದಾರೆ.
ಬಿಎಸ್ ಯಡಿಯೂರಪ್ಪ-ವಿಶ್ವನಾಥ್
ಬಿಎಸ್ ಯಡಿಯೂರಪ್ಪ-ವಿಶ್ವನಾಥ್

ಬೆಂಗಳೂರು: ಇನ್ನು ಮುಂದೆ ಎಂದೂ ಸಚಿವ ಸ್ಥಾನ‌ ಕೇಳಲು ಮುಖ್ಯಮಂತ್ರಿ ಮನೆ ಬಾಗಿಲಿಗೆ ಹೋಗುವುದಿಲ್ಲ. ಆರ್. ಶಂಕರ್, ಎಂಟಿಬಿ ನಾಗರಾಜ್ ರೀತಿ ಪದೇ ಪದೇ ಮುಖ್ಯಮಂತ್ರಿ ಭೇಟಿ ಮಾಡುವುದಿಲ್ಲ. ಅವರ ಮನೆಗೆ ಭೇಟಿ ನೀಡುವ ಅನಿವಾರ್ಯತೆಯೂ ಇಲ್ಲ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೇಳಿದ್ದಾರೆ.

ಮಂತ್ರಿ ಮಾಡಿ, ಮಂತ್ರಿ ಮಾಡಿ ಎಂದು ಎಷ್ಟು ಬಾರಿ ಕೇಳುವುದು? ಅದು ಅವರ ಜವಾಬ್ದಾರಿ ಅಲ್ಲವೇ? ಎಂದು ಖಾರವಾಗಿ ಪ್ರಶ್ನಿಸಿದ ವಿಶ್ವನಾಥ್, ಮಂತ್ರಿ ಸ್ಥಾನ ಬೇಕು ಎಂದು ಇನ್ನು ಮುಂದೆ ಎಂದೂ ಮುಖ್ಯಮಂತ್ರಿ ಮನೆಗೆ ಹೋಗುವುದಿಲ್ಲ. ರಾಜಕಾರಣದಲ್ಲಿ ಕೊಟ್ಟ ಮಾತುಗಳು ಬಹಳ ಮುಖ್ಯ. ತಾವು ಬಿಜೆಪಿಯಲ್ಲಿ ಯಾರಿಗೆ ಬೇಕೋ ಬೇಡವೋ ಗೊತ್ತಿಲ್ಲ. ಜನರಿಗೆ ಬೇಕಾದವನಾಗಿದ್ದೇನೆ ಎಂದು ಸಚಿವ ಸ್ಥಾನ ಸಿಗದ ಬಗ್ಗೆ ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದರು.

ಜೆಡಿಎಸ್ ಈಗ ಅಡ್ಜೆಸ್ಟ್ ಮೆಂಟ್ ಪಕ್ಷವಾಗಿ ಉಳಿದಿದೆ. ಜೆಡಿಎಸ್ ಜನರಲ್ಲಿ ಅಭಿವೃದ್ಧಿ ಕನಸುಗಳನ್ನು ಹುಟ್ಟುಹಾಕಿದ್ದ ಪಕ್ಷ. ತಾವು ಕೂಡ ಜೆಡಿಎಸ್ ರಾಜ್ಯಾಧ್ಯಕ್ಷನಾಗಿದ್ದೆ. ಪ್ರಾಂತೀಯ ಪಕ್ಷವನ್ನಾಗಿ ಗಟ್ಟಿ ನೆಲದಲ್ಲಿ ಕಟ್ಟಬೇಕೆಂಬ ಆಸೆ ಇತ್ತು. ಆದರೆ, ಅದಕ್ಕೆ ಬೆಂಬಲ ಸಿಗಲೇ ಇಲ್ಲ. ಅದು ಈಗ ಜಸ್ಟ್ ಅಡ್ಜೆಸ್ಟ್ ಮೆಂಟ್ ಪಾರ್ಟಿಯಾಗಿ ಉಳಿದು ಹೋಗಿದೆ ಎಂದು ವ್ಯಂಗ್ಯವಾಡಿದರು.

ಶಕ್ತಿ, ಸತ್ವದ ಮೇಲೆ ಪಕ್ಷವಾಗಿ ಉಳಿಯುವಂತ ಲಕ್ಷಣಗಳು ಕಾಣುತ್ತಿಲ್ಲ. ದೇವೇಗೌಡರು ಇರುವವರೆಗೆ ಮಾತ್ರ ಜೆಡಿಎಸ್ ಉಳಿವು ಎಂಬ ಸಂದೇಶ ಜನರಿಗೆ ರವಾನೆಯಾಗುತ್ತಿದೆ. ರಾಜಕಾರಣದಲ್ಲಿ ನಿರೀಕ್ಷೆಗೂ ಮೀರಿದ ‌ತೀರ್ಮಾನಗಳು ಅಗುತ್ತಿವೆ. ಜೆಡಿಎಸ್ ಪಕ್ಷದ ಕಥೆ ಹ್ಯಾಮ್ಲೆಟ್ ನಾಟಕದಂತಾಗಿದೆ. ಬಿಜೆಪಿಗೆ ಜೆಡಿಎಸ್‌ ಅನಿವಾರ್ಯ ಅಲ್ಲವೇ ಅಲ್ಲ. 2006ರಲ್ಲಿ ಕುಮಾರಸ್ವಾಮಿ ಬಿಜೆಪಿ ಜೊತೆ ಕೈಜೋಡಿಸಿದ್ದರು. ಅದು ಹುಡುಗ, ಹುಡುಗಿ ಓಡೋಗಿ ಮದುವೆ ಆಗ್ತಾರಲ್ಲಾ ಹಾಗೆ, ಬಿಜೆಪಿಗೆ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಅನಿವಾರ್ಯತೆ ಇಲ್ಲ ಎಂದರು.

ಒಳ ಒಪ್ಪಂದ ಮಾಡಿಕೊಂಡು ತನ್ನನ್ನ ಸೋಲಿಸಿದರು ಎಂಬ ವಿರೋಧ ಪಕ್ಷ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ವಿಶ್ವನಾಥ್, ಹೌದು ಸಿದ್ದರಾಮಯ್ಯರನ್ನು ಸೋಲಿಸಲು ಒಳ ಒಪ್ಪಂದ ಮಾಡಿಕೊಂಡಿದ್ದೆವು. ನಾನು ಆಗ ಜೆಡಿಎಸ್‌ ರಾಜ್ಯಾಧ್ಯಕ್ಷನಾಗಿದ್ದೆ. ಸಿದ್ದರಾಮಯ್ಯರನ್ನು ವಿರೋಧ ಮಾಡದೆ ಮುತ್ತು ಕೊಡಲು ಆಗುತ್ತಾ? ಕಾಂಗ್ರೆಸ್ ನಲ್ಲೇ ಸಿದ್ದರಾಮಯ್ಯ ಶಿಷ್ಯರು, ಅವರಿಂದ ಸಹಾಯ ಪಡೆದವರೇ ಒಳ ಒಪ್ಪಂದ ಮಾಡಿಕೊಂಡು ಸೋಲಿಸಿದರು, ಅವರ ದರ್ಪ, ದುರಹಂಕಾರದ ಕಾರಣ ಸೋತಿದ್ದಾರೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com