ಎಚ್‌ಡಿಕೆ ಈಗಲೂ ನನ್ನ ಸ್ನೇಹಿತರೇ, ನಾನು ದ್ವೇಷ ಮಾಡುವ ಕಾಲ ಹೋಯಿತು: ಡಿಕೆ ಶಿವಕುಮಾರ್

ಎಚ್ ಡಿ ಕುಮಾರಸ್ವಾಮಿ ಈ ಹಿಂದೆ ಮಾತ್ರ ತಮ್ಮ ಸ್ನೇಹಿತರಾಗಿರಲಿಲ್ಲ. ಈಗಲೂ ಅವರು ತಮ್ಮ ದೋಸ್ತಿಯೇ. ಮುಂದೆಯೂ ಇರುತ್ತಾರೆ.
ಡಿಕೆ ಶಿವಕುಮಾರ್-ಕುಮಾರಸ್ವಾಮಿ
ಡಿಕೆ ಶಿವಕುಮಾರ್-ಕುಮಾರಸ್ವಾಮಿ

ಬೆಂಗಳೂರು: ಎಚ್ ಡಿ ಕುಮಾರಸ್ವಾಮಿ ಈ ಹಿಂದೆ ಮಾತ್ರ ತಮ್ಮ ಸ್ನೇಹಿತರಾಗಿರಲಿಲ್ಲ. ಈಗಲೂ ಅವರು ತಮ್ಮ ದೋಸ್ತಿಯೇ. ಮುಂದೆಯೂ ಇರುತ್ತಾರೆ. ಮಾಧ್ಯಮದವರು ಯಾವ ಆಧಾರದ ಮೇಲೆ ಹಳೇ ದೋಸ್ತಿ ಎಂದು ಹೇಳುತ್ತೀರಿ? ನಮ್ಮಿಬ್ಬರ ಮಧ್ಯೆ ದ್ವೇಷ ಇದೆ ಎನ್ನುತ್ತೀರಿ. ಆದರೆ ನಾನು ದ್ವೇಷ ಮಾಡುವ ಕಾಲ ಹೋಯಿತು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾರ್ಮಿಕವಾಗಿ ಹೇಳಿದ್ದಾರೆ.

ಸಂಪದ್ಭರಿತ ಖಾತೆ ಕಾರಣಕ್ಕಾಗಿ ಮೈತ್ರಿ ಸರ್ಕಾರ ಇರಬೇಕು ಎಂದು ಡಿಕೆಶಿ ಬಯಸಿದ್ದರು ಎಂಬ ಹೆಚ್ ಡಿಕೆ ಹೇಳಿಕೆ ವಿಚಾರವಾಗಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಶಿವಕುಮಾರ್, “ಹೀ ಇಸ್ ಮೈ ಗುಡ್ ಫ್ರೆಂಡ್, ಟುಡೇ ಆಲ್ಸೋ, ಟುಮಾರೋ ಆಲ್ಸೋ”(ಅವರು ಇಂದಿಗೂ ನನ್ನ ಒಳ್ಳೆಯ ಸ್ನೇಹಿತರೇ ನಾಳೆಯೂ ಸಹ”) ಅವರನ್ನೇಕೆ ಹಳೇ ದೋಸ್ತಿ ಎನ್ನುವವರು ಎಂದು ಗೊತ್ತಿಲ್ಲ. ನಾನು ದ್ವೇಷ ಮಾಡುವುದನ್ನು ಬಿಟ್ಟುಬಿಟ್ಟಿದ್ದೇನೆ. ಕುಮಾರಸ್ವಾಮಿ ಅವರ ಹೇಳಿಕೆಗೆ ಸಮಯ ಬಂದಾಗ ಪ್ರತಿಕ್ರಿಯಿಸುವೆ. ನಾನು ಬಂಡೆಯೂ ಅಲ್ಲ, ಮರಳು ಅಲ್ಲ, ಜಲ್ಲಿಯೂ ಅಲ್ಲ. ನನ್ನನ್ನು ಉಪಯೋಗಿಸಿಕೊಂಡಿದ್ದಾರೆ ಬಿಡಿ. ನನಗ್ಯಾಕೆ ನೋವಾಗಬೇಕು..!? ಜೆಡಿಎಸ್ ಬಗ್ಗೆ ನಾನೇಕೆ ಮಾತಾಡಲಿ, ಅವರದ್ದು ಒಂದು ಪಕ್ಷ, ಅವರನ್ನು ಏಕೆ ಡಿಗ್ರೇಡ್ ಮಾಡುವುದು. ಸಿಎಂ ಮತ್ತು ಕುಮಾರಸ್ವಾಮಿ ಅವರ ಅಡ್ಜಸ್ಟ್ ಮೆಂಟ್ ಏನಿದೆಯೋ ಗೊತ್ತಿಲ್ಲ. ಜೆಡಿಎಸ್ ಕೂಡ ಒಂದು ಪಕ್ಷ. ಅದರದೇ ಆದ ಸಂವಿಧಾನ, ಸಿದ್ಧಾಂತ ಇದೆ. ಅವರು ಹಾಗೂ ಬಿಜೆಪಿ ಹೇಗೆ ಒಪ್ಪಂದ ಮಾಡಿಕೊಳ್ಳುತ್ತಾರೋ ಅದು ಅವರಿಗೆ ಬಿಟ್ಟದ್ದು. ಬಿಜೆಪಿಯವರು ಅವರನ್ನು ಯಾವ ರೀತಿ ನೋಡುತ್ತಾರೋ ಗೊತ್ತಿಲ್ಲ. ನಾವಂತೂ ಆ ಪಕ್ಷವನ್ನು ಗೌರವದಿಂದ ನೋಡುತ್ತೇವೆ. ನಾನು ಬೇರೆ ಪಕ್ಷಗಳ ಬಗ್ಗೆ ಮಾತನಾಡಲ್ಲ. ಅವರು ಅನೇಕ ಬಾರಿ ಸರ್ಕಾರ ಮಾಡಿದ್ದಾರೆ. ನಾವು ಅವರ ಜತೆ ಸರ್ಕಾರ ಮಾಡಿದ್ದೇವೆ. ಅವರ ಬಗ್ಗೆ ಕೀಳಾಗಿ ಮಾತನಾಡಲು ನಾನು ಇಚ್ಛಿಸುವುದಿಲ್ಲ ಎಂದರು. 

ಸರ್ಕಾರದಲ್ಲಿ ದೊಡ್ಡ ಅನುಭವವಿರುವ ಪಂಡಿತರಿದ್ದಾರೆ. ಅವರಿಗೆ ನಾನೇಕೆ ಸಲಹೆ ನೀಡಲಿ. ಅವರು ಏನು ಬೇಕಾದರೂ ತೀರ್ಮಾನ ಮಾಡಲಿ. ನಾವು ಯಾವುದೇ ಸಲಹೆ ಕೊಟ್ಟರೂ ಅದರ ವಿರುದ್ಧವಾಗಿ ಸರ್ಕಾರ ತೀರ್ಮಾನ ತೆಗೆದುಕೊಳ್ಳುತ್ತದೆ. ಈ ಹಿಂದೆ ಅದನ್ನು ನೋಡಿದ್ದೇವೆ. ಅವರು ಜನರಿಗೆ ಕೊಟ್ಟ ಮಾತು ಉಳಿಸಿಕೊಂಡಿಲ್ಲ. ಅವರಿಗೆ ಅವರದೇ ಆದ ವೈಯಕ್ತಿಕ ಅಜೆಂಡಾ ಇದೆ. ಏನೇ ಆದರೂ ಅದಕ್ಕೆ ಕಾಂಗ್ರೆಸ್ ಹಾಗೂ ಡಿ.ಕೆ ಶಿವಕುಮಾರ್ ಕಾರಣ ಎಂದು ಹೇಳುತ್ತಾರೆ. ರೈತರು ಹೋರಾಟ ಮಾಡಿದರೆ ಕಾಂಗ್ರೆಸ್ ನವರು ಎತ್ತಿಕಟ್ಟಿದ್ದಾರೆ ಎನ್ನುತ್ತಾರೆ. ಒಟ್ಟಿನಲ್ಲಿ ಅವರು ನಮ್ಮನ್ನು ನೆನೆಸಿಕೊಳ್ಳುತ್ತಿರಬೇಕು ನೆನೆಸಿಕೊಳ್ಳಲಿ ಬಿಡಿ ಎಂದು ಶಿವಕುಮಾರ್ ಹೇಳಿದರು.  

ಬೆಳಗಾವಿ, ಧಾರವಾಡ ಪಾಲಿಕೆ ಚುನಾವಣೆ ನಡೆಸಲು ನ್ಯಾಯಾಲಯ ಸಮಯ ನಿಗದಿ ಮಾಡಿದೆ. ಇನ್ನು ಮುಂದೆ ಯಾವುದೇ ಪಾಲಿಕೆ ಚುನಾವಣೆ ನಡೆದರೂ ನಮ್ಮ ಪಕ್ಷದ ಚಿಹ್ನೆ ಮೂಲಕ ಸ್ಪರ್ಧಿಸಿ, ಪಕ್ಷದಿಂದ ಅಭ್ಯರ್ಥಿ ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ. ಇಷ್ಟು ದಿನಗಳ ಕಾಲ ಬೆಳಗಾವಿ ಪಾಲಿಕೆಯಯಲ್ಲಿ ಕಾಂಗ್ರೆಸ್ ಸ್ಥಳೀಯ ಮಟ್ಟದಲ್ಲಿ ಹೊಂದಾಣಿಕೆ ಮಾಡಿಕೊಂಡು ತನ್ನ ಅಭ್ಯರ್ಥಿ ಹಾಕುತ್ತಿರಲಿಲ್ಲ. ಈ ಬಾರಿಯಿಂದ ಎಲ್ಲ ಪಾಲಿಕೆ ಚುನಾವಣೆಗಳಲ್ಲಿ ಪಕ್ಷದ ಚಿಹ್ನೆ ಮೂಲಕ ಸ್ಪರ್ಧಿಸಲಾಗುವುದು. ಎಲ್ಲ ವಾರ್ಡ್ ಮಟ್ಟದ ಸಮಿತಿ ಮಾಡಲು ಒಂದು ಸಮಿತಿ ರಚಿಸಲಾಗಿದೆ. ನಾವು ಚುನಾವಣೆಯಲ್ಲಿ ಗೆಲ್ಲುತ್ತೇವೋ, ಸೋಲುತ್ತೇವೋ ಅದು ನಂತರ. ನಮ್ಮ ಪಕ್ಷದ ಚಿಹ್ನೆಯಿಂದ ಸ್ಪರ್ಧಿಸುವುದು ಮುಖ್ಯ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸರ್ಕಾರ ಮಕ್ಕಳು ಮತ್ತು ಶಾಲೆ ವಿಚಾರದಲ್ಲಿ ಪ್ರತಿ ನಿಮಿಷವೂ ಗೊಂದಲದಲ್ಲಿದೆ. ನಮ್ಮ ಶಿಕ್ಷಣ ಸಚಿವರು ಸಿಎಂ, ಶಾಲೆ ಆಡಳಿತ ಮಂಡಳಿ, ಪೋಷಕರ ಜತೆ ಮಾತನಾಡುವುದಾಗಿ ಹೇಳುತ್ತಾರೆ. ಸರ್ಕಾರ ಮೊದಲು ಗೊಂದಲ ನಿವಾರಣೆ ಮಾಡಬೇಕು. ಇಷ್ಟು ದಿನ ಸಂಸ್ಥೆಗಳು ನಡೆಯುತ್ತಿರಲಿಲ್ಲ. ಶಿಕ್ಷಕರಿಗೂ ಸಂಬಳ ನೀಡಬೇಕು. ಇಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಶಾಲೆ ತೆರೆಯಬೇಕೋ ಬೇಡವೋ ಎಂಬುದರ ಬಗ್ಗೆ ತಜ್ಞರ ಜತೆ ಚರ್ಚೆ ಮಾಡಬೇಕು. ರಾಜಕಾರಣಿಗಳು ಏನೇ ಅಭಿಪ್ರಾಯ ಹೇಳಿದರೂ ಅಂತಿಮವಾಗಿ ವಿದ್ಯಾರ್ಥಿಗಳು, ಶಾಲೆಗಳು ಹಾಗೂ ಶಿಕ್ಷಕರ ಹಿತ ಹಾಗೂ ಭವಿಷ್ಯ ಕಾಯಬೇಕು. ನಾವು ರಾಜಕೀಯ ಪಕ್ಷವಾಗಿ ನಮ್ಮ ಅಭಿಪ್ರಾಯ ಹೇಳುವುದಕ್ಕಿಂತ ಸರ್ಕಾರ ಈ ಬಗ್ಗೆ ತೀರ್ಮಾನ ಕೈಗೊಳ್ಳಬೇಕು ಹಾಗೂ ಆ ತೀರ್ಮಾನದಲ್ಲಿ ಸ್ಪಷ್ಟತೆ ಇರಬೇಕು. ಪೋಷಕನಾಗಿ, ಶಿಕ್ಷಣ ಸಂಸ್ಥೆಯ ಭಾಗವಾಗಿ ನಮಗೂ ಆತಂಕಗಳಿವೆ. ಸರ್ಕಾರ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬ ಗೊಂದಲ ಇದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com