ಹಗಲು ವೇಳೆ ಕೊರೋನಾ ಸೋಂಕು ಹರಡುವುದಿಲ್ಲವೇ?: ಡಿ.ಕೆ. ಶಿವಕುಮಾರ್ ಪ್ರಶ್ನೆ
ರಾಜ್ಯ ಸರ್ಕಾರ ತನಗೆ ಇಚ್ಛೆ ಬಂದಂತೆ ನಿರ್ಧಾರ ತೆಗೆದುಕೊಳ್ಳುತ್ತಿದೆ. ಹಗಲು ವೇಳೆ ಕೊರೋನಾ ಸೋಂಕು ಹರಡುವುದಿಲ್ಲವೇ? ಹಗಲು ವೇಳೆ ಎಲ್ಲ ತೆರೆದು, ರಾತ್ರಿ ಕರ್ಫೂ ಜಾರಿ ಮಾಡಿರುವುದು ಯಾವ ರೀತಿಯ ಕ್ರಮ?
Published: 24th December 2020 02:51 PM | Last Updated: 24th December 2020 02:51 PM | A+A A-

ಡಿಕೆ.ಶಿವಕುಮಾರ್
ಬೆಂಗಳೂರು: ರಾಜ್ಯ ಸರ್ಕಾರ ತನಗೆ ಇಚ್ಛೆ ಬಂದಂತೆ ನಿರ್ಧಾರ ತೆಗೆದುಕೊಳ್ಳುತ್ತಿದೆ. ಹಗಲು ವೇಳೆ ಕೊರೋನಾ ಸೋಂಕು ಹರಡುವುದಿಲ್ಲವೇ? ಹಗಲು ವೇಳೆ ಎಲ್ಲ ತೆರೆದು, ರಾತ್ರಿ ಕರ್ಫೂ ಜಾರಿ ಮಾಡಿರುವುದು ಯಾವ ರೀತಿಯ ಕ್ರಮ?' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪ್ರಶ್ನಿಸಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಚಿವ 'ಸುಧಾಕರ್ ಆಗಲಿ, ಬೇರೆ ಯಾರೇ ಆಗಲಿ ಯಾರೊಬ್ಬರ ಹೇಳಿಕೆಗೂ ನಾನು ಉತ್ತರ ನೀಡಲ್ಲ. ಕೊರೋನಾ ಸಮಯದಲ್ಲಿ ನಾವು ಸಹಕಾರ ಕೊಟ್ಟಿಲ್ಲ ಅಂತಾ ಮುಖ್ಯಮಂತ್ರಿಗಳು ಹೇಳಲಿ ನೋಡೋಣ. ಅವರು ಮಾಡುವ ಭ್ರಷ್ಟಾಚಾರಗಳಿಗೆ ನಾವು ಸಹಕಾರ ಕೊಡಬೇಕಾ? ಅದರಲ್ಲಿ ಭಾಗಿಯಾಗಬೇಕಾ? ಇವರು ಪ್ರಚಾರಕ್ಕೋಸ್ಕರ ಏನು ಬೇಕೋ ಅದನ್ನು ಮಾ ಡುತ್ತಿದ್ದಾರೆ. ಏನೇನೋ ಹೇಳಿಕೆ ಕೊಡುತ್ತಿದ್ದಾರೆ. ಇವರಿಗೆ ಹೇಳೋರು, ಕೇಳೋರು ಯಾರೂ ಇಲ್ಲ ಎಂದು ಸಚಿವರ ವಿರುದ್ದ ಗುಡುಗಿದರು.
'ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಸರಕಾರದ ಪ್ರತಿನಿಧಿಗಳು ಜನರನ್ನು ಬೇರೆ ರೀತಿಯಲ್ಲಿ ದಿಕ್ಕು ತಪ್ಪಿಸುತ್ತಿದ್ದಾರೆ. ಹಗಲು ವೇಳೆ ಓಡಾಟ ಮಾಡಬಹುದು, ರಾತ್ರಿ ಹೊತ್ತು ಕರ್ಫ್ಯು ಮಾಡುವುದೇಕೆ? ಇದರಿಂದ ಸೋಂಕು ನಿಯಂತ್ರಣ ಸಾಧ್ಯವಾ? ಈ ಬಗ್ಗೆ ಯಾರ ಬಳಿ ಚರ್ಚೆ ಮಾಡಿದ್ದಾರೆ? ರಾತ್ರಿ ವೇಳೆ ಸೋಂಕು ಹರಡುತ್ತದೆ ಎನ್ನುವುದಕ್ಕೆ ಪುರಾವೆ, ದಾಖಲೆಗಳಿವೆಯೇ? ಹಗಲು ವೇಳೆ ಹರಡುವುದಿಲ್ಲವೇ? 'ಹಗಲಲ್ಲಿ ಸಾವಿರಾರು ಜನ ಸೇರುತ್ತಾರೆ, ಆಗ ಕೊರೋನಾ ಸೋಂಕು ತಗುಲುವುದಿಲ್ಲವೇ? ಯಾವುದೋ ಕೆಲವು ವರ್ಗಗಳಿಗೆ ತೊಂದರೆ ಕೊಡಲು ತೀರ್ಮಾನ ಕೈಗೊಳ್ಳಬಾರದು. ಹೊಸ ವರ್ಷ ಆಚರಣೆ ಬೇರೆ ವಿಚಾರ ಎಂದರು.
‘ನೀವು ಕೊರೋನಾ ನಿಯಂತ್ರಣ ಎಲ್ಲಿ ಮಾಡಿದ್ದೀರಿ? ಸುಮ್ಮನೆ ವಿರೋಧ ಪಕ್ಷಗಳ ಬಗ್ಗೆ ಮಾತನಾಡುವುದಲ್ಲ. ಅಧಿವೇಶನ ಕರೆಯಿರಿ. ಎಲ್ಲರೂ ಚರ್ಚೆ ಮಾಡೋಣ. ಅವರ ಇಷ್ಟಕ್ಕೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಅವರು ಸರ್ಕಾರವನ್ನು ತಮ್ಮ ಖಾಸಗಿ ಆಸ್ತಿ ಎಂದು ಭಾವಿಸಿದ್ದಾರೆ. ಈ ನಿರ್ಧಾರ ತೆಗೆದುಕೊಳ್ಳುವ ಮುನ್ನ ಈ ವಿಚಾರವಾಗಿ ಯಾರನ್ನಾದರೂ ಕರೆದು ಮಾತನಾಡಿದ್ದಾರಾ? ಯಾರದಾದರೂ ಸಲಹೆ ಪಡೆದಿದ್ದಾರಾ? ಎಂದು ವಾಗ್ದಾಳಿ ನಡಸಿದರು.