ಮುಖ್ಯಮಂತ್ರಿಗೆ ಅನಾರೋಗ್ಯದಿಂದ ಶಾಸಕರ ಭೇಟಿಗೆ ನಿರಾಕರಣೆ: ಶಾಸಕಾಂಗ ಸಭೆ ಕರೆಯಲು ಯತ್ನಾಳ್ ಆಗ್ರಹ

ಬಿಜೆಪಿ ಶಾಸಕರ ಜೊತೆ ಚೆರ್ಚಿಸಲು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಜಿಲ್ಲಾವಾರು ಶಾಸಕರ ಸಭೆ ಕರೆದಿರುವುದಕ್ಕೆ ಪಕ್ಷದ ಹಿರಿಯ ಶಾಸಕರೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬಸನಗೌಡ ಪಾಟೀಲ್ ಯತ್ನಾಳ್
ಬಸನಗೌಡ ಪಾಟೀಲ್ ಯತ್ನಾಳ್

ಬೆಂಗಳೂರು: ಬಿಜೆಪಿ ಶಾಸಕರ ಜೊತೆ ಚೆರ್ಚಿಸಲು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಜಿಲ್ಲಾವಾರು ಶಾಸಕರ ಸಭೆ ಕರೆದಿರುವುದಕ್ಕೆ ಪಕ್ಷದ ಹಿರಿಯ ಶಾಸಕರೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬಜೆಟ್ ತಯಾರಿ ನೆಪವನ್ನು ಮುಂದಿಟ್ಟುಕೊಂಡು ಕೇಂದ್ರ ಸಚಿವ, ಬಿಜೆಪಿ ವರಿಷ್ಠ ಅಮಿತ್ ಷಾ ರಾಜ್ಯ ಪ್ರವಾಸಕ್ಕೂ ಮುನ್ನ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕಸರತ್ತು ನಡೆಸಿರುವ ಬೆನ್ನಲ್ಲೇ ಮುಖ್ಯಮಂತ್ರಿ ಕರೆದಿರುವ ಶಾಸಕರ ಸಭೆ ಬದಲಿಗೆ ಶಾಸಕಾಂಗ ಸಭೆ ನಡೆಸಿ ಶಾಸಕರ ಅಹವಾಲು, ಅನುದಾನ ಹಂಚಿಕೆ, ಅಭಿವೃದ್ದಿ ಬಗ್ಗೆ ಮುಕ್ತ ಚೆರ್ಚೆಗೆ ಅವಕಾಶ ಕಲ್ಪಿಸಬೇಕೆಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಮುಖ್ಯಮಂತ್ರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. 

ಜನವರಿ 4 ಮತ್ತು 5ರಂದು ಎರಡು ದಿನಗಳು ಖಾಸಗಿ ಹೋಟೆಲಿನಲ್ಲಿ ಸರಣಿ ಸಭೆಯನ್ನು ಮುಖ್ಯಮಂತ್ರಿ ನಡೆಸಲಿದ್ದಾರೆ. ಎರಡೂ ದಿನಗಳು ನಿರಂತರ ಶಾಸಕರ ಪ್ರತ್ಯೇಕ ಸಭೆ ಬದಲಾಗಿ ಶಾಸಕಾಂಗ ಸಭೆಯಲ್ಲಿಯೇ ಮುಕ್ತವಾಗಿ ಚೆರ್ಚಿಸಲು ಅವಕಾಶ ನೀಡಬೇಕು.ಈ ಹಿಂದೆ ವಿಭಾಗವಾರು ಶಾಸಕರ ಸಭೆ ಕರೆದಾಗ ಕ್ಷೇತ್ರದ ಅಭಿವೃದ್ದಿಗೆ ಅರ್ಜಿ ಸಲ್ಲಿಸಿದರು. ಮುಖ್ಯಮಂತ್ರಿಗಳು ತಕ್ಷಣ ಹಣ ಬಿಡುಗಡೆ ಮಾಡಿ ಎಂದು ಷರಾ ಬರೆದರೂ ಇದೂವರೆಗೆ ಅನುದಾನಗಳು ಬಿಡುಗಡೆಯಾಗಿಲ್ಲ.ಇದರಿಂದಾಗಿ ಶಾಸಕರ ಮನಸ್ಸಿಗೆ ನೋವಾಗಿದೆ  ಎಂದಿದ್ದಾರೆ.

ತಮ್ಮ ವಿಧಾನಸಭಾ ಕ್ಷೇತ್ರಕ್ಕೆ ಬಿಡುಗಡೆಯಾಗದೆ ಬಾಕಿ ಉಳಿದಿರುವ ಕಾಮಗಾರಿಗಳು, ಬಿಡುಗಡೆಯಾಗಬೇಕಾದ ಅನುದಾನದ ಪಟ್ಟಿಯನ್ನು ಪತ್ರದೊಂದಿಗೆ ಲಗತ್ತಿಸಿರುವ ಯಾತ್ನಾಳ್,  ಮುಖ್ಯಮಂತ್ರಿಗಳ ಭೇಟಿಗೆ ಶಾಸಕರಿಗೆ ಅವಕಾಶ ಸಿಗುತ್ತಿಲ್ಲ. ಮುಖ್ಯಮಂತ್ರಿ ಅನಾರೋಗ್ಯದ ದೃಷ್ಠಿಯಿಂದ ಭೇಟಿಗೆ ಅವಕಾಶ ಸಿಗುತ್ತಿಲ್ಲವೆಂದು ಭಾವಿಸುತ್ತೇನೆ. ನಿಗಮ ಮಂಡಲಿ, ಸ್ಥಳೀಯ ಪ್ರಾಧಿಕಾರ ಅಧ್ಯಕ್ಷರು, ಪದಾಧಿಕಾರಿಗಳ ನೇಮಕ ಮತ್ತು ನಾಮ ನಿರ್ದೇಶನದಲ್ಲೂ ಶಾಸಕರನ್ನು ಕಡೆಗಣಿಸಿರುವುದು ಕಾರ್ಯಕರ್ತರಿಗೆ ಅಸಮಾಧಾನವನ್ನುಂಟು ಮಾಡಿದೆ. ಹೀಗಾಗಿ ವಿಭಾಗವಾರು ಸಭೆ ಕರೆಯುವುದು ಸಮಂಜಸವಲ್ಲ . ಶಾಸಕಾಂಗ ಸಭೆ ಕರೆದು ಎಲ್ಲರ ಸಮಕ್ಷಮದಲ್ಲಿಯೇ ವಿಧಾನಸಭಾ ಕ್ಷೇತ್ರಗಳ ಅಭಿವೃದ್ದಿ, ಕೆಲಸ ಕಾರ್ಯಗಳು, ಅನುದಾನ ಹಂಚಿಕೆ ಬಗ್ಗೆ ಸಮಗ್ರ ಚೆರ್ಚೆ ನಡೆಸುವಂತೆ  ಆಗ್ರಹಿಸಿದ್ದಾರೆ. 

ಜನವರಿ 4& 5ರಂದು ವಿಭಾಗವಾರು ಸಭೆ: ಜನವರಿ 4 ರ ಮೊದಲ ದಿನ 64 ಜನ ಶಾಸಕರು ಎರಡನೆ ದಿನ 55 ಶಾಸಕರು ಸೇರಿ ಒಟ್ಟು 119 ಶಾಸಕರ ಜೊತೆ ಚೆರ್ಚೆ ನಡೆಸಲಿದ್ದಾರೆ.ಶಾಸಕರ ಕ್ಷೇತ್ರದಲ್ಲಿನ ಸಮಸ್ಯೆಗಳು, ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು,  ಬಜೆಟ್ ನಲ್ಲಿ ಕ್ಷೇತ್ರಕ್ಕೆ ನೀಡಬೇಕಿರುವ ಅನುದಾನ, ಯೋಜನೆಗಳು, ಬಾಕಿ ಉಳಿದಿರುವ ಕಾಮಗಾರಿಗಳು, ಪ್ರಗತಿಯಲ್ಲಿರುವ ಕಾಮಗಾರಿಗೆ ಅಗತ್ಯ ಹಣಕಾ ಸಿನ ಸೌಲಭ್ಯಗಳು ಸೇರಿದಂತೆ ಶಾಸಕ ರ ಅಹವಾಲನ್ನು ಸ್ವೀಕರಿಸಲಿದ್ದಾರೆ.ಒಂದು ಜಿಲ್ಲೆಯ ಶಾಸಕರಿಗೆ ಅರ್ಧ ಗಂಟೆ ಸಮಯಾವಕಾಶ ನೀಡಿದ್ದಾರೆ. ಆದರೆ ಅರ್ಧ ಗಂಟೆಯಲ್ಲಿ ಜಿಲ್ಲೆಯ 5 ಅಥವಾ 6ಶಾಸಕರ ಮನವಿಗಳು,ದೂರುಗಳು,ಸಮಸ್ಯೆಗಳನ್ನುಸೀಮಿತ ಅವಧಿಯಲ್ಲಿ ಆಲಿಸಲು ಸಾಧ್ಯವೇ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಪಕ್ಷದ ಶಾಸಕರ ಜೊತೆ ಶಾಸಕಾಂಗ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿ ಬಳಿಕ ಅಗತ್ಯ ಬಿದ್ದರೆ ಪ್ರತ್ಯೇಕ ಶಾಸಕರ ಅರ್ಜಿಗಳು,ಅಹವಾಲನ್ನು ಪಡೆಯಬಹುದಿತ್ತು.ಆದರೆ ನಾಯಕತ್ವ,ಸಚಿವ ಸಂಪುಟ ಪುನಾರಚನೆಯ ಬಿರುಗಾಳಿ ಎದ್ದಿರುವ ನಡುವೆ ಶಾಸಕರ ಜೊತೆ ಸಮಾಲೋಚನೆ ನಡೆಸಲು ಮುಂದಾಗಿರುವುದು ಆಶ್ಚರ್ಯವನ್ನುಂಟು ಮಾಡಿದೆ.

ಅಮಿತ್ ಷಾ ರಾಜ್ಯ ಭೇಟಿ ಹಿನ್ನಲೆಯಲ್ಲಿ ಸಭೆ : ಜನವರಿ 16ರಂದು ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಮುಖ್ಯಮಂತ್ರಿ ವಿರುದ್ಧ ಶಾಸಕರು ಅಸಮಾಧಾನದಿಂದ ಬಂಡೇಳಬಹುದು.ತಮ್ಮ ವಿರುದ್ದ ದೂರು ಸಲ್ಲಿಸಬಹುದು. ಮುಖ್ಯ ಮಂತ್ರಿ ಹಾಗೂ ಸಚಿವರು ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲವೆಂಬ ಆರೋಪ ,ಅನುದಾನ ಹಂಚಿಕೆ ಲೋಪ, ಸಚಿವ ಸಂಪುಟದಲ್ಲಿ ಸ್ಥಾನ ಸಿಗಲಿಲ್ಲವೆಂಬ ಹಿರಿಯ ಶಾಸಕರ ಆಕ್ರೋಶವನ್ನು ತಣಿಸಲು ಹಾಗೂ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕಸರತ್ತು ಆರಂಭಿಸಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದೆ. 

ಅನುದಾನ ಹಂಚಿಕೆ, ಯೋಜನೆಗಳ ಮಂಜೂರು ಅಸಾಧ್ಯ: ಆರ್ಥಿಕ ಸಂಕಷ್ಟ, ಸಾಲದ ಹೊರೆ, ಕೇಂದ್ರದಿಂದ ಸಕಾಲಕ್ಕೆ ಅಗತ್ಯ ಅನುದಾನ ಹಂಚಿಕೆ ವಿಳಂಬ, ಜಿಎಸ್ ಎಸ್ಟಿ ಸೇರಿದಂತೆ ಕೇಂದ್ರ ಪ್ರಯೋಜಿತ ಯೋಜನೆಗಳ ಅನುದಾನ ಕಡಿತವೂ ಸೇರಿದಂತೆ ಸಂಕಷ್ಟದ ಸರಮಾಲೆ ಹೊದ್ದು ಕುಳಿತಿರುವ ರಾಜ್ಯ ಸರ್ಕಾರ ಶಾಸಕರಿಗೆ ಯೋಜನೆಗಳು, ಅನುದಾನದ ಭರವಸೆಯನ್ನು ನೀಡುವುದು ಸುಲಭದ ಮಾತಲ್ಲ. ಸಾಲ ಎತ್ತುವಳಿ ಮಾಡುವುದನ್ನು ಬಿಟ್ಟು ಸರ್ಕಾರಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪನಿಗೆ ಅನ್ಯ ಮಾರ್ಗವೇ ಇಲ್ಲ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com