ಗ್ರಾಮ ಪಂಚಾಯತ್ ಚುನಾವಣೆ ಫಲಿತಾಂಶ: ಗೆಲುವಿನತ್ತ ಬಿಜೆಪಿ, ಕುಗ್ಗಿದ ಕಾಂಗ್ರೆಸ್-ಜೆಡಿಎಸ್ ಪ್ರಭಾವ 

ರಾಜ್ಯದಲ್ಲಿ ಗ್ರಾಮ ಪಂಚಾಯತ್ ಚುನಾವಣೆ ಫಲಿತಾಂಶ ಸರಿಸುಮಾರು ಅಂದಾಜಾಗಿದ್ದು ಇಂದು ಗುರುವಾರ ಬೆಳಗ್ಗೆ ಸಂಪೂರ್ಣ ಫಲಿತಾಂಶ ಹೊರಬೀಳಲಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಗ್ರಾಮ ಪಂಚಾಯತ್ ಚುನಾವಣೆ ಫಲಿತಾಂಶ ಸರಿಸುಮಾರು ಅಂದಾಜಾಗಿದ್ದು ಇಂದು ಗುರುವಾರ ಬೆಳಗ್ಗೆ ಸಂಪೂರ್ಣ ಫಲಿತಾಂಶ ಹೊರಬೀಳಲಿದೆ.

ಆರಂಭಿಕ ಫಲಿತಾಂಶ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಉತ್ತಮ ಸಾಧನೆ ಮಾಡಿದ್ದು ಶೇಕಡಾ 48ರಷ್ಟು ವೋಟಿಂಗ್ ಬಂದಿದೆ ಎಂದು ಹೇಳಲಾಗುತ್ತಿದ್ದು, ಇಂದು ಸಂಪೂರ್ಣ ಫಲಿತಾಂಶ ಬರುವ ಹೊತ್ತಿಗೆ ಶೇಕಡಾ 52ರಷ್ಟು ಫಲಿತಾಂಶ ಬಿಜೆಪಿ ಪರ ಬರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ನಿನ್ನೆ ಅಧಿಕೃತ ಹೇಳಿಕೆ ಪ್ರಕಟಿಸಿದ ರಾಜ್ಯ ಚುನಾವಣಾ ಆಯೋಗ, 91,339 ಸೀಟುಗಳ ಪೈಕಿ 54,041 ಸ್ಥಾನಗಳ ಫಲಿತಾಂಶ ಪ್ರಕಟಗೊಂಡರೂ ಸಹ ಉಳಿದ 36,781 ಸ್ಥಾನಗಳ ಫಲಿತಾಂಶ ಗುರುವಾರ ಬೆಳಗ್ಗೆ ಹೊರಬೀಳುವ ನಿರೀಕ್ಷೆಯಿದೆ. ಪ್ರತಿ ಸುತ್ತಿಗೆ ಸುಮಾರು 2 ಗಂಟೆ ಮತ ಎಣಿಕೆಗೆ ಸಮಯ ಹಿಡಿಯುವುದರಿಂದ ಬ್ಯಾಲಟ್ ಗಳ ಎಣಿಕೆ ಪ್ರಕ್ರಿಯೆ ವಿಳಂಬವಾಗುತ್ತಿದೆ. ಪ್ರತಿ ಸುತ್ತಿನ ನಂತರ ಮತ ಎಣಿಕೆ ಮಾಡುವ ಏಜೆಂಟ್ ಗಳು ಬದಲಾಗುತ್ತಿದ್ದು, ಅಲ್ಲಿ ಏನಾದರೂ ಆಕ್ಷೇಪ ವ್ಯಕ್ತವಾದರೆ ಪ್ರಕ್ರಿಯೆ ವಿಳಂಬವಾಗುತ್ತದೆ ಎಂದು ಹೇಳಿದೆ.

ಗ್ರಾಮ ಪಂಚಾಯತ್ ಚುನಾವಣೆ ರಾಜಕೀಯ ರಹಿತ, ಅಲ್ಲಿ ಪಕ್ಷದ ಗುರುತು ಇರುವುದಿಲ್ಲ ಎಂದು ಹೇಳಿದರೂ ಬಹುತೇಕ ಅಭ್ಯರ್ಥಿಗಳು ಅನಧಿಕೃತವಾಗಿ ರಾಜಕೀಯ ಪಕ್ಷಗಳಿಂದ ಪ್ರೇರಿತಗೊಂಡವರೇ. ಈ ತಿಂಗಳು ಎರಡು ಹಂತಗಳಲ್ಲಿ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ 5,700ಕ್ಕೂ ಅಧಿಕ ಪಂಚಾಯತ್ ಗಳು ಚುನಾವಣೆಯನ್ನು ಎದುರಿಸಿವೆ. ತಳಮಟ್ಟದ ಫಲಿತಾಂಶ ಬಿಜೆಪಿಗೆ ಎಷ್ಟು ಖುಷಿ ನೀಡಿದೆಯೆಂದರೆ ಇಂದು ಸ್ವತಃ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರೇ ಮಾಧ್ಯಮವನ್ನುದ್ದೇಶಿಸಿ ಮಾತನಾಡುವ ನಿರೀಕ್ಷೆಯಿದೆ.

ಸಂಪ್ರದಾಯ ಮುರಿದ ಗ್ರಾಮ ಪಂಚಾಯತ್ ಫಲಿತಾಂಶ: ಕರ್ನಾಟಕದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ಬಂದಾಗಿನಿಂದ ಗ್ರಾಮ ಪಂಚಾಯತ್ ಚುನಾವಣೆಗಳಲ್ಲಿ ಫಲಿತಾಂಶ ಕಾಂಗ್ರೆಸ್ ಅಥವಾ ಜೆಡಿಎಸ್ ಪರವಾಗಿದ್ದವು. ಆದರೆ ಇತ್ತೀಚಿನ ವರ್ಷಗಳಲ್ಲಿ ಬಿಜೆಪಿಯ ಪ್ರಭಾವ ಗ್ರಾಮ ಪಂಚಾಯತ್ ಚುನಾವಣೆಯಿಂದ ಹಿಡಿದು ಲೋಕಸಭಾ ಚುನಾವಣೆಯವರೆಗೆ ಜೋರಾಗಿದೆ ಎಂಬುದು ಚುನಾವಣೆ ಫಲಿತಾಂಶದಿಂದ ತಿಳಿದುಬರುತ್ತದೆ.

ಕಾಂಗ್ರೆಸ್ ಮತ್ತು ಜೆಡಿಎಸ್ ನ ಭದ್ರಕೋಟೆ ಎನಿಸಿದ್ದ ಹಳೆ ಮೈಸೂರು ಭಾಗದ ಮತದಾರರು ಕೂಡ ಈ ಬಾರಿ ಬಿಜೆಪಿ ಕಡೆಗೆ ವಾಲಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ನ ಪ್ರಭಾವ ಹೆಚ್ಚಾಗಿರುವ ಭಾಗಗಳಲ್ಲಿ ಈ ಬಾರಿ ಕೂಡ ಅವುಗಳ ಪರ ಮತದಾರರು ಒಲಿದರೂ ಕೂಡ ಒಟ್ಟಾರೆ ಫಲಿತಾಂಶದಲ್ಲಿ ಇಳಿಮುಖವಾಗಿದೆ. ಕರ್ನಾಟಕದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್, ಅಸಂಪ್ರದಾಯಿಕ ಕ್ಷೇತ್ರಗಳಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಿದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com