ಕೇಂದ್ರದಿಂದ ಹಣ ಕಡಿತ: ಬಜೆಟ್ ಸಿದ್ಧಪಡಿಸಲು ತಿಣುಕಾಡುತ್ತಿರುವ ಯಡಿಯೂರಪ್ಪ 

ಸಚಿವ ಸಂಪುಟ ವಿಸ್ತರಣೆ ತಲೆಬೇನೆ ಕಡಿಮೆ ಮಾಡಿಕೊಂಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಇದೀಗ ರಾಜ್ಯ ಆಯವ್ಯಯ ಸಿದ್ಧಪಡಿಸುವುದು ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ
ಬಜೆಟ್ ಸಿದ್ಧತಾ ಸಭೆಯಲ್ಲಿ ಮುಖ್ಯಮಂತ್ರಿ
ಬಜೆಟ್ ಸಿದ್ಧತಾ ಸಭೆಯಲ್ಲಿ ಮುಖ್ಯಮಂತ್ರಿ

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ತಲೆಬೇನೆ ಕಡಿಮೆ ಮಾಡಿಕೊಂಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಇದೀಗ ರಾಜ್ಯ ಆಯವ್ಯಯ ಸಿದ್ಧಪಡಿಸುವುದು ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ

ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಿರುವ ಸರಿ ಸುಮಾರು 25 ಸಾವಿರ ಕೋಟಿ ರೂ ಬಾಕಿ ಇದ್ದು, ಇದು ಬಜೆಟ್ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಗಳು ದಟ್ಟವಾಗಿದೆ

 ಹಲವಾರು ಆಲೋಚನೆಗಳೊಂದಿಗೆ ಹೊಸ ಹೊಸ ಘೋಷಣೆಗಳನ್ನು ಮೊಳಗಿಸಲು ಸಜ್ಜಾಗಿದ್ದ ಯಡಿಯೂರಪ್ಪ ಅವರಿಗೆ ಹಣಕಾಸು ಮುಗ್ಗಟ್ಟು ಕೈ ಕಟ್ಟಿ ಹಾಕಿದೆ. ಮಾರ್ಚ್ 5 ರಂದು ಬಜೆಟ್ ಮಂಡಿಸುತ್ತಿದ್ದು, 2019 - 20ನೇ ಸಾಲಿನಲ್ಲಿ ಇಲಾಖಾವಾರು ನಿಗದಿಪಡಿಸಿದ ಹಣವನ್ನು ಬರುವ ಸಾಲಿನ ಬಜೆಟ್ ನಲ್ಲಿ ಹೆಚ್ಚಿಗೆ ಮಾಡಲು ಸಾಧ್ಯವಾಗದ ಪರಿಸ್ಥಿತಿ ಇದೆ.

ಮಠ ಮಂದಿರಗಳು, ಧಾರ್ಮಿಕ ಚಟುವಟಿಕೆ, ವಿವಿಧ ಸಮುದಾಯಗಳಿಗೆ ಉದಾರವಾಗಿ ಅನುದಾನ ನೀಡಿ ಕೊಡುಗೈ ಶೂರ ಎನಿಸಿಕೊಂಡಿದ್ದ ಯಡಿಯೂರಪ್ಪ, ಜಾಗತಿಕವಾಗಿ ಮಂಚೂಣಿ ನಗರವಾಗಿರುವ ಬೆಂಗಳೂರು, ಬಂಡವಾಳ ಹೂಡಿಕೆಗೆ ಪ್ರಶಸ್ತವಾದ ಕರ್ನಾಟಕದ ಅಭ್ಯುದಯಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಘೋಷಿಸಲು ಆರ್ಥಿಕ ಸಂಪನ್ಮೂಲ ಅಡ್ಡಿಯಾಗಿದೆ. ಈ ಹಿಂದೆ ಒಂದು ಲಕ್ಷ ಕೋಟಿ ಮೊತ್ತದ ಬಜೆಟ್ ಮಂಡಿಸಿ ಲಕ್ಷ ಕೋಟಿ ಬಜೆಟ್ ಸರದಾರ ಎಂದು ಕರೆಸಿಕೊಂಡಿದ್ದ ಯಡಿಯೂರಪ್ಪ ಈ ಬಾರಿ ಏನು ಮಾಡುವುದು ಎನ್ನುವ ಚಿಂತೆಯಲ್ಲಿ ಮುಳುಗಿದ್ದಾರೆ

ಈಗಾಗಲೇ ಬಜೆಟ್  ಸಿದ್ಧತೆ ನಡೆಸುತ್ತಿರುವ ಯಡಿಯೂರಪ್ಪ, ವಿವಿಧ ಇಲಾಖೆಗಳೊಂದಿಗೆ ಪೂರ್ವಭಾವಿ ಸಭೆಗಳನ್ನು ನಡೆಸಿ ಬಜೆಟ್ ಪ್ರಸ್ತಾವನೆಗಳನ್ನು ಸ್ವೀಕರಿಸುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರದ ಆರ್ಥಿಕ ಕ್ರಮದಿಂದ ರಾಜ್ಯಕ್ಕೆ ಬರಬೇಕಿದ್ದ ಹೆಚ್ಚಿನ ಮೊತ್ತ ಕಡಿತವಾಗುವ ಸಾಧ್ಯತೆಗಳು ದಟ್ಟವಾಗಿವೆ. ಮುಂದಿನ ಬಜೆಟ್ ನಲ್ಲಿ ಅನ್ನಭಾಗ್ಯ ಸೇರಿದಂತೆ ಹಲ ಜನಪ್ರಿಯ ಯೋಜನೆಗಳಿಗೆ ಕತ್ತರಿ ಹಾಕಲು ಯಡಿಯೂರಪ್ಪ ನಿರ್ಧರಿಸಿದ್ದಾರೆ.

ಹದಿನೈದನೇ ಹಣಕಾಸು ಆಯೋಗ ಈ ಸಲ ರಾಜ್ಯಕ್ಕೆ ನಿಗದಿಪಡಿಸಬೇಕಿರುವ ಅನುದಾನದಲ್ಲಿ 9 ಸಾವಿರ ಕೋಟಿ ರೂ ಕಡಿತಗೊಳಿಸಿದೆ. ಜಿ.ಎಸ್.ಟಿ ಮತ್ತಿತರ ತೆರಿಗೆ, ಅನುದಾನಗಳ ಬಾಬ್ತಿನಲ್ಲಿ ರಾಜ್ಯಕ್ಕೆ15 ಸಾವಿರ ಕೋಟಿ ರೂಗೂ ಹೆಚ್ಚು ಹಣ ರಾಜ್ಯಕ್ಕೆ ಬರಬೇಕಿದ್ದು, ಇನ್ನೂ ಹಣ ಬಂದಿಲ್ಲ. ಹೀಗಾಗಿ ರಾಜ್ಯದ ಆರ್ಥಿಕ ಪರಿಸ್ಥಿತಿ ತೀವ್ರ ಸಂಕಷ್ಟಕ್ಕೆ ಸಿಲುಕಿದೆ.

ಹಣದ ಕೊರತೆ ನೀಗಿಸಲು ಜನರ ಮೇಲೆ ಹೆಚ್ಚು ತೆರಿಗೆ ಹೇರುವ ಅನಿವಾರ್ತೆಗೆ ಯಡಿಯೂರಪ್ಪ ಸಿಲುಕಿದ್ದಾರೆ. ಒಂದೆಡೆ ತೀವ್ರ ಪ್ರವಾಹ ಮತ್ತೊಂದೆಡೆ ಬರ ಪರಿಸ್ಥಿತಿ. ಇಂತಹ ಪ್ರತಿಕೂಲ ಸ್ಥಿತಿಯಲ್ಲಿ ಬಕಾಸುರನ ಹೊಟ್ಟೆಗೆ ಆರೆ ಕಾಸಿನ ಮಜ್ಜಿಗೆ ಎನ್ನುವಂತಾಗಿದೆ.
ಕೆಪಿಸಿಎಲ್  ಪ್ರಧಾನ ಕಚೇರಿ ಶಕ್ತಿಭವನದಲ್ಲಿ ಸೋಮವಾರ ಬೆಳಿಗ್ಗೆಯಿಂದಲೇ ಮುಖ್ಯಮಂತ್ರಿ ಅವರು, ವಿವಿಧ ಇಲಾಖೆಗಳ ಸಚಿವರು ಹಾಗೂ ಉನ್ನತಾಧಿಕಾರಿಗಳ ಜತೆ ಬಜೆಟ್ ಸಭೆ ನಡೆಸಿ ಪ್ರತಿ ಇಲಾಖೆಗಳ ಅನುದಾನ ಬೇಡಿಕೆಗಳ ಬಗ್ಗೆ ಮಾಹಿತಿ ಪಡೆದರು.

ಮುಖ್ಯಮಂತ್ರಿಯಡಿಯೂರಪ್ಪ ಬಜೆಟ್ ತಯಾರಿ ಸಭೆ ನಡೆಸಿರುವ ಬೆನ್ನಲ್ಲೆ ವಿವಿಧ ಸಚಿವರುಗಳು ಸಹ ತಮ್ಮಇಲಾಖೆಯ ಬಜೆಟ್ ಬೇಡಿಕೆ, ಬೇಕಾಗಿರುವಅನುದಾನ ಇವುಗಳ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪ್ರಸ್ತಾವನೆಗಳನ್ನು ಸಿದ್ಧಪಡಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com