ಡಿಕೆಶಿ- ಎಚ್ ಡಿಕೆಗೆ ಪರ್ಯಾಯ ಒಕ್ಕಲಿಗ ನಾಯಕ ಸಿಪಿವೈ: ಹಳೇ ಮೈಸೂರು ಪ್ರಾಬಲ್ಯಕ್ಕೆ ಸೈನಿಕನಿಗೆ ಮಣೆ? 

ಈ ಹಿಂದೆ ವಿಧಾನ ಸಭೆ ಚುನವಾಣೆಯಲ್ಲಿ ಸೋತಿದ್ದರೂ ಲಕ್ಷ್ಮಣ ಸವದಿ ಅವರನ್ನು ಡಿಸಿಎಂ ಮಾಡಿದ್ದಕ್ಕಾಗಿ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದಿತ್ತು. ಈಗ ಮತ್ತದೇ ಸ್ಥಿತಿ ನಿರ್ಮಾಣ ವಾಗುವ ಸಾಧ್ಯತೆಯಿದೆ.
ಡಿಕೆಶಿ, ಯೋಗೇಶ್ವರ್ ಮತ್ತು ಎಚ್ ಡಿಕೆ
ಡಿಕೆಶಿ, ಯೋಗೇಶ್ವರ್ ಮತ್ತು ಎಚ್ ಡಿಕೆ

ಬೆಂಗಳೂರು: ಈ ಹಿಂದೆ ವಿಧಾನ ಸಭೆ ಚುನವಾಣೆಯಲ್ಲಿ ಸೋತಿದ್ದರೂ ಲಕ್ಷ್ಮಣ ಸವದಿ ಅವರನ್ನು ಡಿಸಿಎಂ ಮಾಡಿದ್ದಕ್ಕಾಗಿ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದಿತ್ತು. ಈಗ ಮತ್ತದೇ ಸ್ಥಿತಿ ನಿರ್ಮಾಣ ವಾಗುವ ಸಾಧ್ಯತೆಯಿದೆ.

ಮಾಜಿ ಶಾಸಕ ಸಿಪಿ ಯೋಗೇಶ್ವರ್ ಅವರನ್ನು ಸಚಿವರನ್ನಾಗಿ ಮಾಡಲು ಹೊರಟಿರುವುದು ಮೂಲ ಬಿಜೆಪಿಗರ ಕಣ್ಣು ಕೆರಳಿಸಿದೆ.  ಒಕ್ಕಲಿಗರ ಪ್ರಭಾವಿ ನಾಯಕನಾಗಿರುವ ಸಿಪಿ ಯೋಗೇಶ್ವರ್ ಕಾಂಗ್ರೆಸ್ -ಜೆಡಿಎಸ್ ಸಮ್ಮಿಶ್ರ ಸರ್ಕಾರ ಕೆಡವಲು ಪ್ರಮುಖ ಪಾತ್ರ ವಹಿಸಿದ್ದರು, ಹೀಗಾಗಿ ಅವರಿಗೆ ಸಚಿವ ಸ್ಥಾನ ನೀಡಲು ಬಿಜೆಪಿ ನಿರ್ಧರಿಸಿದೆ.

ಜೊತೆಗೆ ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ನ ಡಿಕೆ ಶಿವಕುಮಾರ್ ಮತ್ತು ಜೆಡಿಎಸ್ ನ ಎಚ್.ಡಿ ಕುಮಾರಸ್ವಾಮಿ ಪ್ರಭಾವಿ ಒಕ್ಕಲಿಗ ನಾಯಕರಾಗಿದ್ದಾರೆ. ಹೀಗಾಗಿ ಬಿಜೆಪಿ  ಅವರಿಬ್ಬರಿಗೆ ಪರ್ಯಾಯವಾಗಿ ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ನೀಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. 

2018ರ ವಿಧಾನ ಸಭೆ ಚುನಾವಣೆಯಲ್ಲಿ   ಚನ್ನಪಟ್ಟಣ ಕ್ಷೇತ್ರದಿಂದ ಯೋಗೇಶ್ವರ್ ಸ್ಪರ್ಧಿಸಿ ಸೋತಿದ್ದರು, ಯೋಗೇಶ್ವರ್ ಗೆ ಸಚಿವ ಸ್ಥಾನ ನೀಡುತ್ತಿರುವುದು ಬಿಜೆಪಿ ಶಾಸಕರಿಗೆ ಅಪಥ್ಯವಾಗಿದೆ.

1999ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ  ಚನ್ನಪಟ್ಟಣದಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದರು, ಅದಾದ ನಂತರ ಅವರು ವಿವಿಧ ಪಕ್ಷಗಳಿಂದ ಸ್ಪರ್ಧಿಸಿ 5 ಬಾರಿ ಆಯ್ಕೆಯಾಗಿದ್ದರು,  2013 ರಲ್ಲಿ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿದ್ದರು. 2014 ರಲ್ಲಿ ಮತ್ತೆ ಕಾಂಗ್ರೆಸ್ ನಿಂದ ಕಣಕ್ಕಿಳಿದಿದ್ದರು. ಮತ್ತೆ  2017ರಲ್ಲಿ ಬಿಜೆಪಿಗೆ ವಾಪಸಾಗಿದ್ದರು.  56 ವರ್ಷದ ಯೋಗೇಶ್ವರ್ ಆರು ಬಾರಿ ಶಾಸಕರಾಗಿ ಗೆಲುವು ಕಂಡಿದ್ದಾರೆ.  ರಿಯಲ್ ಎಸ್ಚೇಟ್ ವಂಚನೆ ಪ್ರಕರಣದಲ್ಲಿ ಯೋಗೇಶ್ವರ್ ವಿರುದ್ಧ 13 ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು.

ಕಷ್ಟದ ಸಂದರ್ಭದಲ್ಲಿ ನೆರವಾಗಿದ್ದ ಯೋಗೇಶ್ವರ್ ಗೆ ಪ್ರತಿಫಲ ನೀಡಲು ಬಿಜೆಪಿ ಮುಂದಾಗಿದೆ,  ಒಂದು ಕಾಲದಲ್ಲಿ ಡಿಕೆ ಶಿವಕುಮಾರ್ ಆಪ್ತರಾಗಿದ್ದ ಯೋಗೇಶ್ವರ್ ಈಗ ಅವರ ಕಡು ವೈರಿಯಾಗಿದ್ದಾರೆ,  ಕೇವಲ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ರಾಜಿನಾಮೆ ಕೊಡಿಸಿದ್ದು ಮಾತ್ರವಲ್ಲ, ಬಂಡಾಯ ಶಾಸಕರನ್ನು ಎತ್ತಿ ಕಟ್ಟಿ ಸಮ್ಮಿಸ್ರ ಸರ್ಕಾರ ಕೆಡವಿದ ಕೀರ್ತಿಯೂ ಯೋಗೇಶ್ವರ್ ಅವರಿಗೆ ಸಲ್ಲುತ್ತದೆ.

ಪಕ್ಷಕ್ಕೆ ರಾಜಿನಾಮೆ ನೀಡುವಂತೆ ನನಗೆ ಯೋಗೇಶ್ವರ  ಒತ್ತಡ ಹೇರಿದ್ದರು ಎಂದು ಎಚ್.ಡಿ ಕೋಟೆಯ ಕಾಂಗ್ರೆಸ್ ಶಾಸಕ ಅನಿಲ್ ಚಿಕ್ಕಮಾಧು ಆರೋಪಿಸಿದ್ದರು.

ಹಳೇ ಮೈಸೂರು ಭಾಗದಲ್ಲಿ ಜಾತಿ ಹಾಗೂ ಮಾಸ್ ಲೀಡರ್ ಒಬ್ಬನಿಗಾಗಿ ಹುಡುಕಾಡುತ್ತಿದ್ದ ಬಿಜೆಪಿಗೆ ಯೋಗೇಶ್ವರ್ ಕಾಣಿಸಿದ್ದಾರೆ,  2018ರ ವಿಧಾನಸಭೆ ಚುನಾವಣೆಯಲ್ಲಿ ಯೋಗೇಶ್ವರ ವಿರುದ್ಧ ಎಚ್.ಡಿ ಕುಮಾರ ಸ್ವಾಮಿ ಚನ್ನಪಟ್ಟಣದಿಂದ ಸ್ಪರ್ಧಿಸಿದ್ದರು, ಈ ವೇಳೆ  ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ತಮ್ಮ ಬದ್ದ ರಾಜಕೀಯ ವೈರಿ ಯೋಗೇಶ್ವರ್ ಸೋಲಿಸಲು ಹಿಂಬಾಗಿಲ ಮೂಲಕ ಕುಮಾರಸ್ವಾಮಿಗೆ ಬೆಂಬಲ ನೀಡಿದ್ದು ಬಹಿರಂಗ ಸತ್ಯ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com