ಸಚಿವ ಸಂಪುಟ ವಿಸ್ತರಣೆ: ನೂತನ ಶಾಸಕರಿಗೆ ಮಣೆ, ಪಕ್ಷದ ನಿಷ್ಠಾವಂತ ನಾಯಕರು ಹಿನ್ನೆಲೆಗೆ? 

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬರಲು ಕಾರಣಕರ್ತರಾದ ನೂತನ ಶಾಸಕರಿಗೆ ಸಂಪುಟದಲ್ಲಿ ಸಚಿವ ಖಾತೆ ನೀಡುವುದು ಅನಿವಾರ್ಯವಾಗಿರುವುದರಿಂದ ಬಿಜೆಪಿಯ ಹಲವು ಹಿರಿಯರು ಅನಿವಾರ್ಯವಾಗಿ ಹಿನ್ನೆಲೆಗೆ ಸರಿಯಬೇಕಾದ  ಪರಿಸ್ಥಿತಿ ಬಂದಿದೆ.
ಇಂದು ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿರುವ ರಾಜಭವನದ ಹೊರಗಿನ ದೃಶ್ಯ
ಇಂದು ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿರುವ ರಾಜಭವನದ ಹೊರಗಿನ ದೃಶ್ಯ

ಬೆಳಗಾವಿ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬರಲು ಕಾರಣಕರ್ತರಾದ ನೂತನ ಶಾಸಕರಿಗೆ ಸಂಪುಟದಲ್ಲಿ ಸಚಿವ ಖಾತೆ ನೀಡುವುದು ಅನಿವಾರ್ಯವಾಗಿರುವುದರಿಂದ ಬಿಜೆಪಿಯ ಹಲವು ಹಿರಿಯರು ಅನಿವಾರ್ಯವಾಗಿ ಹಿನ್ನೆಲೆಗೆ ಸರಿಯಬೇಕಾದ ಪರಿಸ್ಥಿತಿ ಬಂದಿದೆ.

ಅವರು ಎಷ್ಟೇ ಲಾಬಿ, ಒತ್ತಾಯ ಮಾಡಿದರೂ ಮುಖ್ಯಮಂತ್ರಿಗಳಿಗೆ ಸಚಿವ ಸ್ಥಾನ ನೀಡಲು ಮತ್ತು ಕೆಲವರಿಗೆ ಈಗಾಗಲೇ ಇರುವ ಸಚಿವ ಹುದ್ದೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಿಂದ ಇಂದು ಸಚಿವ ಸಂಪುಟ ವಿಸ್ತರಣೆ ನಂತರ ಬಿಜೆಪಿಯಲ್ಲಿ ಬಿಕ್ಕಟ್ಟು ಸೃಷ್ಟಿಯಾಗಬಹುದು ಎಂದು ಹೇಳಲಾಗುತ್ತಿದೆ.


ಉಮೇಶ್ ಕತ್ತಿ ಸೇರಿದಂತೆ ಬಿಜೆಪಿಯ ಮೂವರು ನಿಷ್ಠಾವಂತ ಹಿರಿಯ ನಾಯಕರನ್ನು ಸಿಎಂ ಯಡಿಯೂರಪ್ಪ ತಮ್ಮ ಸಂಪುಟಕ್ಕೆ ಸೇರಿಸಿಕೊಳ್ಳುತ್ತಿಲ್ಲ ಎಂಬ ಊಹಾಪೋಹ ನಿನ್ನೆ ತೀವ್ರವಾಗಿ ಹರಿದಾಡಿತ್ತು. ಎಂಟು ಬಾರಿ ಶಾಸಕರಾಗಿರುವ ಉಮೇಶ್ ಕತ್ತಿ ತಮಗೆ ಸಚಿವ ಸ್ಥಾನ ಸಿಗುತ್ತದೆ ಎಂಬ ವಿಶ್ವಾಸದಲ್ಲಿಯೇ ಇಷ್ಟು ದಿನಗಳ ಕಾಲ ಇದ್ದರು.


ಇಂದು ಬೆಳಗ್ಗೆ 10.30ಕ್ಕೆ ರಾಜಭವನದಲ್ಲಿ ನಡೆಯಲಿರುವ ಪ್ರಮಾಣವಚನ ಸಮಾರಂಭದಲ್ಲಿ ನೂತನ ಶಾಸಕರಿಗೆ ನಿನ್ನೆಯೇ ಅಧಿಕೃತ ಆಹ್ವಾನ ಹೋಗಿದೆ. ಆದರೆ ಸಂಪುಟಕ್ಕೆ ಸೇರ್ಪಡೆಯಾಗಬಹುದು ಎಂದು ಊಹಿಸಿಕೊಂಡಿದ್ದ ಬಿಜೆಪಿಯ ಹಿರಿಯ ಶಾಸಕರಿಗೆ ನಿನ್ನೆ ರಾತ್ರಿ 9 ಗಂಟೆಯವರೆಗೂ ಆಹ್ವಾನ ಹೋಗಿಲ್ಲ. ಉಮೇಶ್ ಕತ್ತಿಯವರು ತಮ್ಮನ್ನು ಸಂಪುಟಕ್ಕೆ ಸೇರ್ಪಡೆ ಮಾಡಿ ಎಂದು ಕೊನೆಯವರೆಗೂ ಮುಖ್ಯಮಂತ್ರಿಗಳಲ್ಲಿ ಬೇಡಿಕೊಂಡಿದ್ದಾರೆ. ಅವರನ್ನು ಸೇರಿಸಿಕೊಳ್ಳದಿದ್ದರೆ ಖಂಡಿತಾ ಏನಾದರೊಂದು ನಾಟಕೀಯ ಬೆಳವಣಿಗೆ ನಡೆಯುತ್ತದೆ ಎಂದು ಅವರ ನಿಕಟವರ್ತಿಗಳು ಹೇಳುತ್ತಾರೆ. ಉಮೇಶ್ ಕತ್ತಿಯವರಿಗೆ ಈ ಹಿಂದೆ ಹಲವು ಸಚಿವ ಹುದ್ದೆಗಳನ್ನು ನಿಭಾಯಿಸಿ ಅನುಭವವಿದೆ. ಅವರ ಅನುಭವಕ್ಕೆ ಉಪ ಮುಖ್ಯಮಂತ್ರಿಯಂತಹ ಹುದ್ದೆ ನೀಡಬೇಕು ಎಂದು ಅವರ ಬೆಂಬಲಿಗರು ಹೇಳುತ್ತಾರೆ.


ಸಚಿವ ಸ್ಥಾನ ವಂಚಿತರ ಅತೃಪ್ತಿಯನ್ನು ಶಮನಗೊಳಿಸುವುದು ಮುಖ್ಯಮಂತ್ರಿಗಳಿಗೆ ಇನ್ನು ಮುಂದಿನ ದಿನಗಳಲ್ಲಿ ಒಂದು ಸವಾಲಾದರೆ ಇನ್ನೊಂದು ಸವಾಲು ಸ್ಥಳೀಯ ಅಸಮಾನತೆಯನ್ನು ನಿಭಾಯಿಸುವುದು. ಹೈದರಾಬಾದ್ -ಕರ್ನಾಟಕ ಭಾಗದ ಅತೃಪ್ತ ಶಾಸಕರ ಗುಂಪು ಮುಂದಿನ ದಿನಗಳಲ್ಲಿ ಬಂಡಾಯ ಏಳಬಹುದು. ಶಾಸಕ ರಾಜು ಗೌಡ ನೇತೃತ್ವದಲ್ಲಿ ಈಗಾಗಲೇ ಇವರು ಸಭೆ ನಡೆಸಿ ಈ ಭಾಗದ ಶಾಸಕರಿಗೆ ಸಂಪುಟ ಸಚಿವ ಹುದ್ದೆ ನೀಡಬೇಕು ಎಂದು ಕೇಳಿಕೊಂಡಿದ್ದರು. ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಇತ್ತೀಚೆಗೆ ಎಲ್ಲಾ ಜಿಲ್ಲೆಗಳಿಗೂ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ಸಿಗಬೇಕು, ಹೀಗಾಗಿ ಕೆಲವು ಹಿರಿಯ ಸಚಿವರುಗಳು ತ್ಯಾಗ ಮಾಡಲೇಬೇಕಾಗುತ್ತದೆ ಎಂದಿದ್ದರು.


ಅತೃಪ್ತ ಶಾಸಕರು ಸಭೆ ನಡೆಸುವುದರಲ್ಲಿ ಯಾವ ತಪ್ಪು ಕೂಡ ಇಲ್ಲ. ತಮ್ಮ ಭಾಗದ ಜನರ ಭಾವನೆಗಳನ್ನು ತಿಳಿಸಲು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕುವುದರಲ್ಲಿ ಯಾವ ತಪ್ಪಿದೆ ಎನ್ನುತ್ತಾರೆ ಯತ್ನಾಳ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com