ಡಿಸಿಎಂ ಕಾರಜೋಳರ ಖಾತೆಯ ಮೇಲೆ ನೂತನ ಸಚಿವರ ಕಣ್ಣು 

ಕಳೆದ ಡಿಸೆಂಬರ್‌ನಲ್ಲಿ ನಡೆದ ೧೫ ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆದ ಬಳಿಕ ಡೋಲಾಯಮಾನವಾಗಿದ್ದ ಉಪಮುಖ್ಯಮಂತ್ರಿ ಸ್ಥಾನ ಈಗ ಭದ್ರವಾಗಿದ್ದು, ಸಚಿವ ಗೋವಿಂದ ಕಾರಜೋಳರ ಬಳಿಯ ಖಾತೆಗಳ ಮೇಲೆ ಇದೀಗ ಬಹುತೇಕ ಸಚಿವರ ಕಣ್ಣು ಬಿದ್ದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬಾಗಲಕೋಟೆ: ಕಳೆದ ಡಿಸೆಂಬರ್‌ನಲ್ಲಿ ನಡೆದ ೧೫ ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆದ ಬಳಿಕ ಡೋಲಾಯಮಾನವಾಗಿದ್ದ ಉಪಮುಖ್ಯಮಂತ್ರಿ ಸ್ಥಾನ ಈಗ ಭದ್ರವಾಗಿದ್ದು, ಸಚಿವ ಗೋವಿಂದ ಕಾರಜೋಳರ ಬಳಿಯ ಖಾತೆಗಳ ಮೇಲೆ ಇದೀಗ ಬಹುತೇಕ ಸಚಿವರ ಕಣ್ಣು ಬಿದ್ದಿದೆ.

ಉಪಮುಖ್ಯಮಂತ್ರಿ ಗೋವಿಂದ ಕಾರಜೋಳರ ಬಳಿ ಪ್ರಭಾವಿ ಖಾತೆಗಳಾಗಿರುವ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಖಾತೆಗಳಿದ್ದು, ಈ ಖಾತೆಗಳಿಗಾಗಿ ಇತರರು ಪೈಪೋಟಿಗೆ ಇಳಿದಿದ್ದಾರೆ. ಪೈಪೋಟಿಯ ಮಧ್ಯೆಯೂ ಕಾರಜೋಳರು ಎರಡೂ ಖಾತೆಗಳನ್ನು ಉಳಿಸಿಕೊಳ್ಳುತ್ತಾರೋ ಇಲ್ಲವೆ ಇರುವ ಎರಡರಲ್ಲಿ ಯಾವುದನ್ನು ಉಳಿಸಿಕೊಳ್ಳಲಿದ್ದಾರೆ ಎನ್ನುವುದು ಕುತೂಹಲದ ಸಂಗತಿ ಆಗಿದೆ. ಏತನ್ಮಧ್ಯೆ ಅಖಂಡ ವಿಜಯಪುರ ಜಿಲ್ಲೆಗೆ ಸದ್ಯ ಸಂಪುಟದಲ್ಲಿ ಒಂದೇ ಸ್ಥಾನ ಲಭ್ಯವಾಗಿದೆ. ಗೋವಿಂದ ಕಾರಜೋಳರೊಬ್ಬರೇ ಸಚಿವರಾಗಿದ್ದಾರೆ. 

ಸದ್ಯ ಅವರು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರೂ ಹೌದು. ವಿಜಯಪುರ-ಬಾಗಲಕೋಟೆ ಅಖಂಡ ಜಿಲ್ಲೆಯ ಬಿಜೆಪಿ ಪಾಳೆಯದಲ್ಲಿ ಪ್ರಭುತ್ವ ಸಾಧಿಸಿರುವ ಕಾರಜೋಳರು ಎರಡರಲ್ಲಿ ಯಾವ ಜಿಲ್ಲೆಯ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ ಎನ್ನುವುದು ಅಖಂಡ ಜಿಲ್ಲೆಯ ಬಿಜೆಪಿ ಪಾಳೆಯದಲ್ಲಿ ಸಾಕಷ್ಟು ಕಾತರವನ್ನುಂಟು ಮಾಡಿದೆ. ಮೂಲತಃ ವಿಜಯಪುರ ಜಿಲ್ಲೆಗೆ ಸೇರಿರುವ ಡಿಸಿಎಂ ಕಾರಜೋಳರ ಅವರು ಬಾಗಲಕೋಟೆ ಜಿಲ್ಲೆಯ ಮುಧೋಳ ಮೀಸಲು ವಿಧಾನಸಭೆ ಕ್ಷೇತ್ರವನ್ನು ಐದನೇ ಬಾರಿಗೆ ಪ್ರತಿನಿಧಿಸುತ್ತಿದ್ದಾರೆ. ಹಾಗಾಗಿ ವಿಜಯಪುರ ಜಿಲ್ಲೆಯ ಉಸ್ತುವಾರಿಯೂ ಇವರ ಹೆಗಲಿಗೆ ಬೀಳುವ ಸಾಧ್ಯತೆಗಳು ನಿಚ್ಚಳವಾಗುತ್ತಿವೆ. 

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಹೇಳಿಕೆ ಪ್ರಕಾರ ಮಾರ್ಚ್ ೫ ರ ಒಳಗಾಗಿ ಇನ್ನೊಮ್ಮೆ ಸಂಪುಟ ವಿಸ್ತರಣೆ ಆಗಿ ವಿಜಯಪುರ ಜಿಲ್ಲೆಯವರು ಯಾರಾದರೂ ಸಂಪುಟ ಸೇರ್ಪಡೆಗೊಂಡಲ್ಲಿ ಉಸ್ತುವಾರಿ ಬದಲಾಗಬಹುದು. ಅಲ್ಲಿಯವರೆಗೆ ಬಾಗಲಕೋಟೆ ಜಿಲ್ಲೆಯ ಜತೆಗೆ ಕಾರಜೋಳರಿಗೆ ವಿಜಯಪುರ ಜಿಲ್ಲೆಯ ಉಸ್ತುವಾರಿಯ ಜವಾಬ್ದಾರಿ ಬೀಳಲಿದೆ ಎಂದು ಹೇಳಲಾಗುತ್ತಿದೆ. ಸದ್ಯದ ವಿದ್ಯಮಾನಗಳನ್ನು ಗಮನಿಸಿದಾಗ ಬೆಳಗಾವಿ ಜಿಲ್ಲೆಗೆ ಸೇರಿದ ಸಚಿವರೊಬ್ಬರು ಬಾಗಲಕೋಟೆ ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡಲ್ಲಿ ಅಚ್ಚರಿ ಪಡಬೇಕಿಲ್ಲ.

-ವಿಠ್ಠಲ ಆರ್. ಬಲಕುಂದಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com