ಜಗ್ಗದ ಜಾರಕಿಹೊಳಿ ಪಟ್ಟಿಗೆ ಮಣಿದ ಬಿಎಸ್'ವೈ: ಕಡೆಗೂ ಜಲಸಂಪನ್ಮೂಲ ಖಾತೆ ಪಡೆದ ಸಾಹುಕಾರ

ಗೋಕಾಕ್ ವಿಧಾನಸಭಾ ಕ್ಷೇತ್ರದ ಸಾಹುಕಾರ ಎಂದೇ ಕರೆಸಿಕೊಳ್ಳುವ ರಮೇಶ್ ಜಾರಕಿಹೊಳಿಯವರು ಕಳೆದೊಂದು ವರ್ಷದಿಂದ ಸಾರಿದ್ದ ಯುದ್ಧವನ್ನು ಹೆಚ್ಚೂ ಕಡಿಮೆ ಪೂರ್ಣ ಪ್ರಮಾಣದಲ್ಲಿ ಗೆದ್ದಂತಾಗಿದೆ. 
ರಮೇಶ್ ಜಾರಕಿಹೊಳಿ
ರಮೇಶ್ ಜಾರಕಿಹೊಳಿ

ಬೆಂಗಳೂರು: ಗೋಕಾಕ್ ವಿಧಾನಸಭಾ ಕ್ಷೇತ್ರದ ಸಾಹುಕಾರ ಎಂದೇ ಕರೆಸಿಕೊಳ್ಳುವ ರಮೇಶ್ ಜಾರಕಿಹೊಳಿಯವರು ಕಳೆದೊಂದು ವರ್ಷದಿಂದ ಸಾರಿದ್ದ ಯುದ್ಧವನ್ನು ಹೆಚ್ಚೂ ಕಡಿಮೆ ಪೂರ್ಣ ಪ್ರಮಾಣದಲ್ಲಿ ಗೆದ್ದಂತಾಗಿದೆ. 

ಹಿಂದಿನ ಜೆಡಿಎಸ್ ಹಾಗೂ ಕಾಂಗ್ರೆಸ್ ನೇತೃತ್ವದ ಮೈತ್ರಿ ಸರ್ಕಾರದಲ್ಲಿ ಜಲಸಂಪನ್ಮೂಲ ಖಾತೆ ಸಚಿವರಾಗಿದ್ದ ಡಿಕೆ.ಶಿವಕುಮಾರ್ ಅವರೊಂದಿಗೆ ಉದ್ಭವಿಸಿದ್ದ ಜಾರಕಿಹೊಳಿ ಭಿನ್ನಮತ ಅಂತಿಮವಾಗಿ ಆ ಸರ್ಕಾರವನ್ನೇ ಬಲಿ ತೆಗೆದುಕೊಂಡಿದ್ದು ಈಗ ಇತಿಹಾಸ. ಆದರೆ, ಆ ವೇಳೆಯೇ ತಾವು ಜಲಸಂಪನ್ಮೂಲ ಖಾತೆಯನ್ನೇ ಪಡೆಯಬೇಕು ಎೆಂಬ ಸಂಕಲ್ಪ ತೊಟ್ಟಿದ್ದ ರಮೇಶ್ ಅವರು, ಈ ಖಾತೆಯನ್ನು ಪಡೆಯುವುದಕ್ಕೂ ಬಿಜೆಪಿ ಸರ್ಕಾರದಲ್ಲಿ ಒಂದು ಸುತ್ತಿನ ಹೋರಾಟವನ್ನೇ ನಡೆಸಬೇಕಾಯಿತು. 

ಪ್ರಮುಖ ಖಾತೆಗಳಲ್ಲಿ ಒಂದಾಗಿರುವ ಜಲಸಂಪನ್ಮೂಲ ಖಾತೆಯನ್ನು ಜಾರಕಿಹೊಳಿಯವರಿಗೆ ನೀಡುವುದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಆಡಳಿತಾರೂಢ ಬಿಜೆಪಿಯ ಹಲವು ನಾಯಕರಿಗೆ ಇಷ್ಟವಿರಲಿಲ್ಲ ಹಿಂದೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವವೇಳೆ ಜಾರಕಿಹೊಳಿಯವರಿಗೆ ಬಿಜೆಪಿ ನಾಯಕರು ಜಲಸಂಪನ್ಮೂಲ ಇಲಾಖೆಯನ್ನೇ ನೀಡುವುದಾಗಿ ಭರವಸೆ ಕೊಟ್ಟಿದ್ದರೂ ಅದನ್ನು ಬಿಟ್ಟು ಬೇರೊಂದು ಖಾತೆ ಪಡೆಯುವಂತೆ ಒತ್ತಡ ಹೇರಿದರು. ಆದರೆ, ಅದಾವುದಕ್ಕೂ ಜಗ್ಗದ ರಮೇಶ್ ಅವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ವೇಳೆ ಯಾವುದೇ ಕಾರಣಕ್ಕೂ ತಮ್ಮ ನಿಲುವಿನಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. 

ಡಿಕೆ.ಶಿವಕುಮಾರ್ ಅವರ ವಿರುದ್ಧ ಧ್ವನಿ ಎತ್ತಿ ಅಂತಿವಾಗಿ ಸಮ್ಮಿಶ್ರ ಸರ್ಕಾರ ಪತನಗೊಳಿಸಿರುವುದರ ಪ್ರತಿಷ್ಠೆಯಾಗಿ ಜಲಸಂಪನ್ಮೂಲ  ಖಾತೆಯೇ ತಮಗೆ ಬೇಕು. ಅದಿಲ್ಲದಿದ್ದರೆ ತಾವು ಸಚಿವರಾಗಿಯೇ ಮುಂದುವರೆಯುವುದರಲ್ಲಿ ಅರ್ಥವಿಲ್ಲ. ಮುಂದಿನದ್ದು ನಿಮಗೆ ಬಿಟ್ಟಿದ್ದು ಎಂದು ಜಾರಿಕಿಹೊಳಿ ನೇರವಾಗಿಯೇ ಯಡಿಯೂರಪ್ಪ ಅವರಿಗೆ ಹೇಳಿದ್ದರು ಎಂದು ಇದೀಗ ತಿಳಿದುಬಂದಿದೆ. 

ಜಾರಕಿಹೊಳಿ ಅವರ ಪಟ್ಟಿನ ತೀವ್ರತೆಯನ್ನು ಅರಿತ ನಂತರ ಯಡಿಯೂರಪ್ಪ ಅವರು ಜಲಸಂಪನ್ಮೂಲ ಖಾತೆಯನ್ನೇ ನೀಡಲು ನಿರ್ಧರಿಸಿದರು ಎಂದು ಮೂಲಗಳು ತಿಳಿಸಿವೆ.

ಈ ಹಿಂದೆ ಬೆಳಗಾವಿ ಆಂತರಿಕ ವಿಚಾರದಲ್ಲಿ ಡಿಕೆ.ಶಿವಕುಮಾರ್ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಮೂಗು ತೂರಿಸುತ್ತಿರುವುದಕ್ಕೆ ಜಾರಕಿಹೊಳಿಯವರು ತೀವ್ರ ಕಿಡಿಕಾರಿದ್ದರು. ಇದೀಗ ಸಚಿವ ಸ್ಥಾನಕ್ಕೆ ಜಾರಕಿಹೊಳಿ ಬಂದಿರುವ ಹಿನ್ನೆಲೆಯಲ್ಲಿ ಈ ಇಬ್ಬರೂ ನಾಯಕರ ವಿರುದ್ಧ ಹಗೆ ತೀರಿಸಿಕೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. 

ಬಿಜೆಪಿ ಅಧಿಕಾರಕ್ಕೆ ಕೆಲವೇ ದಿನಗಳಲ್ಲಿ ಈ ಇಬ್ಬರೂ ನಾಯಕರನ್ನು ಗುರಿಯಾಗಿಸುವುದಾಗಿ ಜಾರಕಿಹೊಳಿ ಘೋಷಿಸಿದ್ದರು. ಇದೀಗ ಜಾರಕಿಹೊಳಿ ತಮ್ಮ ಹಗೆ ತೀರಿಸಿಕೊಳ್ಳುವುದು ನಿಶ್ಚಿತ ಎಂದು ತಿಳಿದುಬಂದಿದೆ. 

ಇದಲ್ಲದೆ, ಮುಂದಿನ ವಿಧಾನಸಭಾ ಚುನಾವಣೆ ವೇಳೆ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಹೆಬ್ಬಾಳ್ಕರ್ ವಿರುದ್ಧ ಸ್ಪರ್ಧಿಸಲಿರುವ ಪಕ್ಷದ ಅಭ್ಯರ್ಥಿಗೆ ರೂ 5 ಕೋಟಿ ನೀಡುವುದಾಗಿ ಘೋಷಣೆ ಮಾಡಿದ್ದು, ಈಗಾಗಲೇ ಈ ಬಗ್ಗೆ ಬಿಜೆಪಿ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ಕ್ಷೇತ್ರದಲ್ಲಿ ಅರ್ಹ ನಾಯಕರೊಬ್ಬರನ್ನು ಆರಿಸಿ ಮುಂದಿನ ಚುನಾವಣೆಗೆ ಸಿದ್ಧಪಡಿಸುವಂತೆ ತಿಳಿಸಿದ್ದಾರೆಂದು ತಿಳಿದುಬಂದಿದೆ. 

ಹೆಬ್ಬಾಳ್ಕರ್ ಅವರು ತಮ್ಮ ಕ್ಷೇತ್ರದ ಅಭಿವೃದ್ಧಿಗೆ ದೊಡ್ಡ ಮೊತ್ತವನ್ನೇ ಸರ್ಕಾರದಿಂದ ಪಡೆದುಕೊಂಡಿದ್ದಾರೆಂದು ಮೂಲಗಳು ತಿಳಿಸವೆ. ಇದೀಗ ಜಾರಕಿಹೊಳಿಯವರು ಅಧಿಕಾರಕ್ಕೆ ಬಂದಿರುವುದರಿಂದ ಆ ಅನುದಾನಕ್ಕೆ ಕತ್ತರಿಬೀಳುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com