ಶಾಸಕಾಂಗ ಸಭೆಯಲ್ಲಿ ಭಾವನೆ ಹಂಚಿಕೊಳ್ಳಲು ಅವಕಾಶ ನೀಡಬೇಕು, ಇಲ್ಲದಿದ್ದರೆ ಸಮಾನ ಮನಸ್ಕರ ಸಭೆ: ಯತ್ನಾಳ

ಶಾಸಕಾಂಗ ಸಭೆಯಲ್ಲಿ ಶಾಸಕರಿಗೆ ತಮ್ಮ ಭಾವನೆಗಳನ್ನು ಹೇಳಿಕೊಳ್ಳಲು ಅವಕಾಶ ನೀಡಬೇಕು. ಇಲ್ಲದಿದ್ದರೆ ಸಮಾನ ಮನಸ್ಕ ಶಾಸಕರು ಸಭೆ ಸೇರಿ ಚರ್ಚಿಸುತ್ತೇವೆ. ಎಷ್ಟು ಜನ ಶಾಸಕರು ಸೇರಿ ಚರ್ಚಿಸುತ್ತೇವೆ ಎಂದು ಈಗಲೇ ಹೇಳುವುದಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದ್ದಾರೆ.

Published: 14th February 2020 12:51 PM  |   Last Updated: 14th February 2020 12:51 PM   |  A+A-


Basanagouda Patil Yatnal

ಸಂಗ್ರಹ ಚಿತ್ರ

Posted By : Srinivasamurthy VN
Source : UNI

ವಿಜಯಪುರ: ಶಾಸಕಾಂಗ ಸಭೆಯಲ್ಲಿ ಶಾಸಕರಿಗೆ ತಮ್ಮ ಭಾವನೆಗಳನ್ನು ಹೇಳಿಕೊಳ್ಳಲು ಅವಕಾಶ ನೀಡಬೇಕು. ಇಲ್ಲದಿದ್ದರೆ ಸಮಾನ ಮನಸ್ಕ ಶಾಸಕರು ಸಭೆ ಸೇರಿ ಚರ್ಚಿಸುತ್ತೇವೆ. ಎಷ್ಟು ಜನ ಶಾಸಕರು ಸೇರಿ ಚರ್ಚಿಸುತ್ತೇವೆ ಎಂದು ಈಗಲೇ ಹೇಳುವುದಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದ್ದಾರೆ.

ವಿಜಯಪುರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಶಾಸಕರಿಗೆ ತಮ್ಮ ಭಾವನೆಗಳನ್ನು ಹೇಳಿಕೊಳ್ಳಲು ಅವಕಾಶ ನೀಡಬೇಕು. ಇಲ್ಲದಿದ್ದರೆ ಸಮಾನ ಮನಸ್ಕ ಶಾಸಕರು ಸಭೆ ಸೇರಿ ಚರ್ಚಿಸುತ್ತೇವೆ. ಎಷ್ಟು ಜನ ಶಾಸಕರು ಸೇರಿ ಚರ್ಚಿಸುತ್ತೇವೆ ಎಂದು ಈಗಲೇ ಹೇಳುವುದಿಲ್ಲ. ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಚರ್ಚಿಸಿ ಅನುದಾನ ನೀಡಲು ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸುತ್ತೇವೆ. ಉತ್ತರ ಕರ್ನಾಟಕವೆಂದರೆ ಕೇವಲ ಹುಬ್ಬಳ್ಳಿ - ಧಾರವಾಡ ಅಲ್ಲ ಎಂದು ಅವರು ಪರೋಕ್ಷವಾಗಿ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ವಿರುದ್ಧ ವಾಗ್ದಾಳಿ ನಡೆಸಿದರು.

ಇನ್ವೆಸ್ಟರ್ ಮೀಟ್ ಅನ್ನು ಹುಬ್ಬಳ್ಳಿ ಬದಲು ಉತ್ತರ ಕರ್ನಾಟಕದ ಬೇರೆ ಜಿಲ್ಲೆಯಲ್ಲಿ ಮಾಡಬಹುದಿತ್ತು. ಬರೀ ಹುಬ್ಬಳ್ಳಿ-ಧಾರವಾಡಕ್ಕೆ ಯೋಜನೆಗಳನ್ನು ತಂದರೆ ಹೇಗೆ?. ಕಲಬುರಗಿ, ವಿಜಯಪುರ, ಬಾಗಲಕೋಟೆಗೂ ಯೋಜನೆ ತರಬೇಕು. ಉತ್ತರ ಕರ್ನಾಟಕಕ್ಕೆ ಹಲವು ಕಚೇರಿಗಳ ಸ್ಥಳಾಂತರ ಬಗ್ಗೆ ವಿಧಾನ ಮಂಡಲ ಅಧಿವೇಶನದಲ್ಲಿ ಪ್ರಶ್ನಿಸಲಾಗುವುದು ಎಂದು ಯತ್ನಾಳ ಹೇಳಿದರು.

ಮರಿಯಮ್ಮನಹಳ್ಳಿ ಅಪಘಾತ ಪ್ರಕರಣದಲ್ಲಿ ಸಚಿವ ಆರ್. ಅಶೋಕ ಅವರ ಪುತ್ರನ ವಿರುದ್ಧದ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬೆಂಜ್ ಬದಲು ಆಡಿ ಕಾರು ಎಂದು ಎಫ್ ಐ ಆರ್ ನಲ್ಲಿ ನಮೂದು ಮಾಡಿರುವುದು ದೊಡ್ಡ ತಪ್ಪಲ್ಲ. ಪೊಲೀಸ್ ಸಿಬ್ಬಂದಿ ತಪ್ಪಾಗಿ ಬರೆದಿರಬಹುದು. ಒಂದು ತಪ್ಪು ಶಬ್ದವನ್ನು ಹಿಡಿದು ವಿವಾದ ಮಾಡುವುದು ಸರಿಯಲ್ಲ ಎಂದು ಹೇಳಿದರು.

ಪಂಚಮಸಾಲಿ ಸಮಾಜಕ್ಕೆ ಸಚಿವ ಮತ್ತು ಮುಖ್ಯಮಂತ್ರಿ ಸ್ಥಾನ ಬೇಡಿಕೆಯ ಇರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಒಂದೇ ಸಮಾಜದಿಂದ ಮತ ಕೇಳಿ ಆಯ್ಕೆಯಾಗಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ಕೂಡಲ ಸಂಗಮ ಸ್ವಾಮೀಜಿಯವರು ಸಮಾಜದ ಪರ ಮಾತಾಡಿರಬಹುದು ಎಂದು ಸ್ಪಷ್ಟನೆ ನೀಡಿದರು. ಆನಂದ ಸಿಂಗ್  ಅವರಿಗೆ ಅರಣ್ಯ ಖಾತೆ ನೀಡಿದ್ದಕ್ಕೆ ಅಪಸ್ವರ ಎದ್ದಿರುವ ಬಗ್ಗೆ ಕೇಳಿದಾಗ, ನಾನು ಯಾವುದರ ಬಗ್ಗೆಯೂ ಪ್ರತಿಕ್ರಿಯೆ ನೀಡುವುದಿಲ್ಲ. ನಾನು ಪಕ್ಷದ ಹಿರಿಯ‌ ನಾಯಕನಾದರೂ ಪ್ರತಿಕ್ರಿಯೆ ನೀಡುವುದಿಲ್ಲ. ಹಿರಿಯ ನಾಯಕ ಆದರೆ ಎಲ್ಲದರ ಬಗ್ಗೆ ಉತ್ತರ ನೀಡಲು ಆಗುವುದಿಲ್ಲ. ಹಿರಿಯ ನಾಯಕರ ಬಹಳ ಜನ ಮೂಲೆಗುಂಪಾಗಿದ್ದಾರೆ ಎಂದು  ವಿಜಯಪುರ ನಗರ ಬಿಜೆಪಿ‌ ಶಾಸಕ ಪ್ರತಿಕ್ರಿಯಿಸಿದರು.

Stay up to date on all the latest ರಾಜಕೀಯ news with The Kannadaprabha App. Download now
facebook twitter whatsapp