ಬಾಗಲಕೋಟೆ: ಬಿಡಿಸಿಸಿ ಬ್ಯಾಂಕ್‌ಗೆ ಎಂಟ್ರಿ ಕೊಡ್ತಾರಾ ಸಂಸದ ಗದ್ದಿಗೌಡರ್? 

ಅಖಂಡ ವಿಜಯಪುರ ಜಿಲ್ಲೆಯಿಂದ ಪ್ರತ್ಯೇಕಗೊಂಡ ಬಳಿಕ ಅಸ್ತಿತ್ವಕ್ಕೆ ಬಂದ ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗೆ ನಿರ್ದೇಶಕರಾಗಿ ಆಯ್ಕೆಗೊಂಡವರಲ್ಲಿ ಬಹುತೇಕರು ಮಾಜಿ ಸಚಿವರು, ಶಾಸಕರು, ಬಿಟ್ಟರೆ ಪ್ರಭಾವಿ ಮುಖಂಡರಾಗಿದ್ದಾರೆ. 
ಪಿಸಿ ಗದ್ದಿಗೌಡರ್
ಪಿಸಿ ಗದ್ದಿಗೌಡರ್

ಬಾಗಲಕೋಟೆ: ಅಖಂಡ ವಿಜಯಪುರ ಜಿಲ್ಲೆಯಿಂದ ಪ್ರತ್ಯೇಕಗೊಂಡ ಬಳಿಕ ಅಸ್ತಿತ್ವಕ್ಕೆ ಬಂದ ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗೆ ನಿರ್ದೇಶಕರಾಗಿ ಆಯ್ಕೆಗೊಂಡವರಲ್ಲಿ ಬಹುತೇಕರು ಮಾಜಿ ಸಚಿವರು, ಶಾಸಕರು, ಬಿಟ್ಟರೆ ಪ್ರಭಾವಿ ಮುಖಂಡರಾಗಿದ್ದಾರೆ. 

ಇಂತಹ ಪ್ರತಿಷ್ಠಿತ ಬಿಡಿಸಿಸಿ ಬ್ಯಾಂಕ್‌ನ ಪ್ರವೇಶಕ್ಕೆ ನಾಲ್ಕನೇ ಬಾರಿಗೆ ಸಂಸದರಾಗಿರುವ ಪಿ.ಸಿ. ಗದ್ದಿಗೌಡರ ಕೂಡ ಸಜ್ಜಾಗಿದ್ದಾರೆ ಎನ್ನುವುದು ಅವರ ನಡೆಯಿಂದ ಸ್ಪಷ್ಟವಾಗಿ ಗೋಚರವಾಗುತ್ತಿದೆ.

ಸಹಕಾರಿ ಸಂಘಗಳ ನಿರ್ದೇಶಕರು ಹಾಗೂ ಅಧ್ಯಕ್ಷರುಗಳ ಆಯ್ಕೆ ಪ್ರಕ್ರಿಯೆ ಜೋರಾಗಿದೆ. ಇದೇ ಮೊದಲ ಬಾರಿಗೆ ಸಂಸದ ಪಿ.ಸಿ.ಗದ್ದಿಗೌಡರ ಸ್ವಗ್ರಾಮ ಬಾದಾಮಿ ತಾಲೂಕು ಹೆಬ್ಬಳ್ಳಿಯ ಪ್ರಾಥಮಿಕ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾಗಿ ಆಯ್ಕೆಗೊಂಡು, ಅವಿರೋಧವಾಗಿ ಅಧ್ಯಕ್ಷರೂ ಆಗಿದ್ದಾರೆ. 

ಇದು ಬಿಡಿಸಿಸಿ ಬ್ಯಾಂಕ್ ಪ್ರವೇಶಕ್ಕೆ ಹರದಾರಿ ಎಂದೇ ಸಹಕಾರಿ ಕ್ಷೇತ್ರದಲ್ಲಿ ಬಣ್ಣಿಸಲಾಗುತ್ತಿದೆ.

ಇದುವರೆಗೂ ಬಾಗಲಕೋಟೆ ಡಿಸಿಸಿ ಬ್ಯಾಂಕ್‌ನ ಅಧ್ಯಕ್ಷರಾದವರು ಮೇಲ್ಮನೆ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ, ಮಾಜಿ ಸಚಿವ ಅಜಯ ಕುಮಾರ ಸರನಾಯಕರನ್ನ ರೈತರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ರಾಮಣ್ಣ ತಳೇವಾಡ ಮತ್ತು  ಜಿಪಂ. ಮಾಜಿ ಅಧ್ಯಕ್ಷರಾಗಿದ್ದ ಮಹಾದೇವಪ್ಪ ಮಾತ್ರ.  

ನಿರ್ದೇಶಕರ ಸಾಲಿನಲ್ಲೂ ಅಷ್ಟೆ. ಇದುವರೆಗಿನ ನಿರ್ದೇಶಕರ ಪಟ್ಟಿಯಲ್ಲಿ ಕಾಣಿಸಿಕೊಂಡವರು ಮಾಜಿ ಸಚಿವ ಎಚ್.ವೈ. ಮೇಟಿ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ. ಮೇಲ್ಮನೆ ಸದಸ್ಯ ಎಚ್.ಆರ್. ನಿರಾಣಿ ಪ್ರಮುಖರು. ಪ್ರಮುಖ ರಾಜಕೀಯ ಪಕ್ಷಗಳಿಗೆ ಸೇರಿರುವ ಎರಡನೇ ಹಂತದ ನಾಯಕರು ಕಾಣಿಸಿಕೊಂಡಿದ್ದು ಕಡಿಮೆ.

ಈ ಬಾರಿಯಂತೂ ಇನ್ನಷ್ಟು ಜನ ಪ್ರಭಾವಿ ಜನಪ್ರತಿನಿಧಿಗಳು ಡಿಸಿಸಿ ಬ್ಯಾಂಕ್ ಪ್ರವೇಶಕ್ಕೆ ಮುಂದಾಗಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿನ ನಾನಾ ಸಹಕಾರ ಸಂಘಗಳಿಗೆ ಆಯ್ಕೆಗೊಳ್ಳುವ ಮೂಲಕ ಕೆಲವರು ಅರ್ಹತೆ ಪಡೆದುಕೊಂಡಿದ್ದಾರೆ. ಸಂಸದ ಪಿ.ಸಿ.ಗದ್ದಿಗೌಡರ, ಮೇಲ್ಮನೆ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ, ಅಜಯಕುಮಾರ ಸರನಾಯಕ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಪ್ರಮುಖರಾಗಿದ್ದಾರೆ.

ನಾಲ್ಕನೇ ಬಾರಿಗೆ ಸಂಸದರಾಗಿ ಆಯ್ಕೆಗೊಂಡಿರುವ ಗದ್ದಿಗೌಡರ ಪಿಕೆಪಿಎಸ್ ಅಧ್ಯಕ್ಷರಾಗಿ ಆಯ್ಕೆಗೊಂಡಿರುವುದು ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಮೂಲಗಳ ಪ್ರಕಾರ ಡಿಸಿಸಿ ಬ್ಯಾಂಕ್ ಪ್ರವೇಶಕ್ಕೆ ಅವರು ಸಹಕಾರಿ ಸಂಘದ ಅಧ್ಯಕ್ಷರಾಗಿಲ್ಲ.

ಬೇರೆಯದೇ ಆದ ಉದ್ದೇಶದಿಂದ ಆಯ್ಕೆಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಕಾರಣಗಳು ಏನೇ ಇದ್ದರೂ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದು ಮಾತ್ರ ಸಾಕಷ್ಟು ಸುದ್ದಿಯನ್ನಂತೂ ಮಾಡಿದೆ.

ಏತನ್ಮಧ್ಯೆ ಪ್ರಮುಖ ರಾಜಕೀಯ ಪಕ್ಷಗಳಿಗೆ ಸೇರಿದ ಸಚಿವರು, ಶಾಸಕರು, ಮಾಜಿ ಶಾಸಕರುಗಳೇ ಡಿಸಿಸಿ ಬ್ಯಾಂಕ್ ಸೇರಿದಂತೆ ಇತರ ಸಹಕಾರಿ ಬ್ಯಾಂಕ್‌ಗಳಲ್ಲಿ ಕಾಯಂ ಮಿಂಚುತ್ತಿದ್ದರೆ, ಅವರನ್ನೇ ನಂಬಿರುವ ಪ್ರಮುಖ ಪಕ್ಷಗಳ ಎರಡನೇ ಹಂತದ ನಾಯಕರು ಮುಖ್ಯವಾಹಿನಿಗೆ ಬರುವುದು ಹೇಗೆ ಎನ್ನುವ ಹೊಸ ಚರ್ಚೆಯೊಂದು ಆರಂಭಗೊಂಡಿದೆ.  ಈ ಚರ್ಚೆ ಎಷ್ಟರ ಮಟ್ಟಿಗೆ ತಾರ್ಕಿಕ ಅಂತ್ಯ ಕಾಣಲಿದೆ ಎನ್ನುವುದು ಕುತೂಹಲದ ಸಂಗತಿಯಾಗಿದೆ.

ವರದಿ: ವಿಠ್ಠಲ ಆರ್. ಬಲಕುಂದಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com