ಬಿಜೆಪಿ ಸರ್ಕಾರ ಆಪರೇಷನ್ ಕಮಲದ ಅನೈತಿಕ ಕೂಸು: ಸಿದ್ದರಾಮಯ್ಯ

ರಾಜ್ಯ ಬಿಜೆಪಿ ಸರ್ಕಾರ ಜನಾದೇಶದ ಮೂಲಕ ಅಧಿಕಾರ ಬಂದಿರುವ ಸರ್ಕಾರವಲ್ಲ. ಬಿಜೆಪಿ ಸರ್ಕಾರ ಆಪರೇಷನ್ ಕಮಲದ ಮೂಲಕ ಅನೈತಿಕವಾಗಿ ಹುಟ್ಟಿರುವ ಕೂಸು ಎಂದು ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರ ಜನಾದೇಶದ ಮೂಲಕ ಅಧಿಕಾರ ಬಂದಿರುವ ಸರ್ಕಾರವಲ್ಲ. ಬಿಜೆಪಿ ಸರ್ಕಾರ ಆಪರೇಷನ್ ಕಮಲದ ಮೂಲಕ ಅನೈತಿಕವಾಗಿ ಹುಟ್ಟಿರುವ ಕೂಸು ಎಂದು ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ರಾಜ್ಯಪಾಲರ ಭಾಷಣದ ಮೇಲೆ ನಿರ್ದಿಷ್ಟ ವಿಷಯವನ್ನೇ ಮಾತನಾಡಬೇಕು ಎಂಬ ನಿಯಮವಿಲ್ಲ, ಇಡೀ ರಾಜ್ಯಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ಮಾತನಾಡಬಹುದು, ನೀತಿ, ಕಾಯರ್ಕ್ರಮ, ರಾಜಕೀಯ, ಸರ್ಕಾರದ ದೂರದೃಷ್ಟಿ ಸೇರಿದಂತೆ ಎಲ್ಲಾ ವಿಷಯಗಳ ಮೇಲೆ ಭಾಷಣ ಮಾಡಬಹುದು ಎಂದು ಹೇಳಿದರು.

ಇತ್ತೀಚೆಗೆ ರಾಜ್ಯಪಾಲರ ಭಾಷಣ ಸಂಪ್ರದಾಯದಂತೆ ಆಗುತ್ತಿದೆ. ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
 
ಕರ್ನಾಟಕದಲ್ಲಿರುವ ಬಿಜೆಪಿ ಸರ್ಕಾರ ಫೆ.17ರಂದು ರಾಜ್ಯಪಾಲರ ಮೂಲಕ ತಮ್ಮ ಸರ್ಕಾರದ ಮುನ್ನೋಟ ಏನು ಎಂಬುದನ್ನು ಇಲ್ಲಿ ಪ್ರಸ್ತುತ ಪಡಿಸಿದೆ. ಆದರೆ ಈ ಭಾಷಣದಲ್ಲಿ ಯಾವ ಮುನ್ನೋಟವೂ ಇಲ್ಲ. ಬಿಜೆಪಿ ಸರ್ಕಾರ ಆಪರೇಷನ್ ಕಮಲದ ಮೂಲಕ ಅನೈತಿಕವಾಗಿ ಹುಟ್ಟಿರುವ ಕೂಸು. 

ಏಕೆಂದರೆ ವಿಧಾನಸಭಾ ಚುನಾವಣೆ ನಡೆದಾಗ ಯಾವ ಪಕ್ಷಕ್ಕೂ ರಾಜ್ಯದ ಜನ ಬಹುಮತ ಕೊಟ್ಟಿಲ್ಲ. ಬಿಜೆಪಿಗೆ 104, ಕಾಂಗ್ರೆಸ್‌ಗೆ 80, ಜೆಡಿಎಸ್‌ಗೆ 37 ಸ್ಥಾನ ಹಾಗೂ ಮೂವರು ಪಕ್ಷೇತರರು ಆಯ್ಕೆಯಾಗಿದ್ದರು. ಹಾಗಾಗಿ ಸಮ್ಮಿಶ್ರ ಸರ್ಕಾರ ರಚನೆಯಾಯಿತು. 

ಮೊದಲು ಹೆಚ್ಚಿನ ಸ್ಥಾನ ಗಳಿಸಿದ್ದ ಬಿಜೆಪಿಗೆ ಸರ್ಕಾರ ರಚಿಸಲು ಅವಕಾಶ ಮಾಡಿಕೊಡಲಾಯಿತು. ಆಗ ಯಡಿಯೂರಪ್ಪ ಅವರು ನಾಲ್ಕು ದಿನ ಮುಖ್ಯಮಂತ್ರಿಯಾಗಿದ್ದರು. ಇದರಿಂದ ಅವರ ಮುಖ್ಯಮಂತ್ರಿ ಸ್ಥಾನ ಹೊಂದಿದ ಲೆಕ್ಕ ಜಾಸ್ತಿಯಾಯಿತು. ಮತ್ತೆ ಅವರು ಕಸರತ್ತು ಮಾಡಿ ಸರ್ಕಾರ ರಚಿಸಿದರು. ಹಾಗಾಗಿ ಇದು ಅನೈತಿಕ ಕೂಸು ಎಂದು ಹೇಳಿದರು.

ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿರುವುದು ಜನಾದೇಶದ ಮೂಲಕ ಅಲ್ಲ. 17 ಮಂದಿ ರಾಜೀನಾಮೆಯಿಂದ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಬಿಜೆಪಿಯವರು ನಾವು ಜನಾಶೀವಾರ್ದದಿಂದ ಬಂದಿದ್ದೇವೆ ಎಂಬುದು ಹೇಳುತ್ತಿರುವುದು ಸತ್ಯಕ್ಕೆ ದೂರವಾದ ಮಾತು. ಆಪರೇಷನ್ ಕಮಲದ ಮೂಲಕ ಬಂದಿದ್ದೇವೆ ಎಂದು ಅವರು ಹೇಳಬೇಕು ಎಂದರು.

ರಾಜ್ಯಪಾಲರ ಭಾಷಣದಲ್ಲಿ ಏನೂ ಇಲ್ಲ. ಸರ್ಕಾರದ ಮುನ್ನೋಟವಾಗಲೀ, ನೀತಿಯಾಗಲೀ, ದೂರದೃಷ್ಟಿಯಾಗಲೀ ಇಲ್ಲ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯನ್ನು ಹೊರತುಪಡಿಸಿ ಯಾವುದೇ ಒಂದು ಯೋಜನೆಯೂ ಇಲ್ಲ. ಸರ್ಕಾರ ರಚನೆಯಾಗಿ ನಾಳೆಗೆ ಏಳು ತಿಂಗಳು ತುಂಬುತ್ತಿದ್ದು, ಈ ಅವಧಿಯಲ್ಲಿ, ಈ ಆರ್ಥಿಕ ವರ್ಷದಲ್ಲಿ ಬಿಜೆಪಿ ಸರ್ಕಾರದ ಒಂದೇ ಒಂದು ಯೋಜನೆಯೂ ಇಲ್ಲ. 

ಭಾಷಣದಲ್ಲಿ ಹೇಳಿದ ಉಳಿದೆಲ್ಲಾ ಕಾರ್ಯಕ್ರಮಗಳು ಕಾಂಗ್ರೆಸ್ ಮತ್ತು ಸಮ್ಮಿಶ್ರ ಸರ್ಕಾರದ ಯೋಜನೆಗಳಾಗಿವೆ. ಅರಣ್ಯ, ಹಾಲು ಉತ್ಪಾದನೆ ಸೇರಿದಂತೆ ಭಾಷಣದಲ್ಲಿ ಹೇಳಿರುವ ಸಾಧನೆಗಳೆಲ್ಲವೂ ಹಿಂದೆ ನಾವು ಮಾಡಿದ ಸಾಧನೆಯಾಗಿದೆ ಎಂದು ಹೇಳಿದರು.

ಅರಣ್ಯದಲ್ಲಿ ಕರ್ನಾಟಕ ನಂಬರ್ ಒನ್‌ ಆಗಿದ್ದಕ್ಕೆ ನಮ್ಮ ಸರ್ಕಾರ ಕಾರಣ. ಹಾಲು ಉತ್ಪಾದನೆ, ಹೈನುಗಾರಿಕೆಯಲ್ಲಿ ಪ್ರಗತಿ ಸಾಧಿಸಿರುವುದು ಕೂಡ ನಮ್ಮ ಆಡಳಿತದಲ್ಲಾಗಿದೆ. ಈಗ ಒಂದು ದಿನಕ್ಕೆ 80 ಲಕ್ಷಕ್ಕೂ ಲೀಟರ್‌ಗೂ ಹೆಚ್ಚು ಹಾಲು ಉತ್ಪಾದನೆಯಾಗುತ್ತದೆ.

ನಾವು ಒಂದು ಲೀಟರ್ ಹಾಲಿಗೆ 5 ರೂ.ಸಹಾಯಧನ ನೀಡುತ್ತಿದ್ದುದು ಇದಕ್ಕೆ ಕಾರಣ. ಒಂದು ದಿನಕ್ಕೆ 4 ಕೋಟಿ ರೂ.ಸಹಾಯಧನ ನೀಡಲಾಗುತ್ತಿದೆ. ಒಂದು ಲೀಟರ್ ಹಾಲಿಗೆ ಐದು ರೂ.ಸಹಾಯಧನ ನೀಡುವ ಮೊದಲು ರಾಜ್ಯದಲ್ಲಿ ಪ್ರತಿದಿನ 55 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿತ್ತು. ಈಗ 80 ಲಕ್ಷಕ್ಕೂ ಹೆಚ್ಚು ಲೀಟರ್ ಉತ್ಪಾದನೆಯಾಗುತ್ತಿದೆ. ಇದಕ್ಕೆ ಯಾರು ಕಾರಣ ? ಯಾವ ಸರ್ಕಾರ ಕಾರಣ ಎಂದು ಪ್ರಶ್ನಿಸಿದರು.

ಯಡಿಯೂರಪ್ಪ ಅವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಹಾಲಿಗೆ 2 ರೂ. ಸಹಾಯಧನ, ಬಳಿಕ ನಾವು 3 ರೂ. ಸೇರಿಸಿ 5 ರೂ. ನೀಡಿದೆವು. ಕುಮಾರಸ್ವಾಮಿಯವರು 1 ರೂ.ಸಹಾಯಧನ ಘೋಷಿಸಿದ್ದರೂ ಅದು ಜಾರಿಗೆ ಬರಲಿಲ್ಲ ಎಂದು ವಿವರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com