ಸಿಗದ ಸಚಿವ ಸ್ಥಾನ: ಸಿಎಂ ಮತ್ತು ವಿಜಯೇಂದ್ರ ವಿರುದ್ಧ ಅಸಮಾಧಾನ; ಸಂತೋಷ್ ಗೆ ಶಾಸಕರ ದೂರು

ಆಡಳಿತಾರೂಢ ಬಿಜೆಪಿಯಲ್ಲಿ ಶಾಸಕರ ಸರಣಿ ಸಭೆ, ಅನಾಮಧೇಯ ಪತ್ರದಂಥ ಬೆಳವಣಿಗೆಗಳ ಮಧ್ಯೆಯೇ ದೊಡ್ಡ ಸಂಖ್ಯೆಯ ಶಾಸಕರು ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿರುವುದು ಸಂಚಲನ ಮೂಡಿಸಿದೆ.
ಸಿಎಂ ಪುತ್ರನ ವಿರುದ್ಧ ಶಾಸಕರ ದೂರು
ಸಿಎಂ ಪುತ್ರನ ವಿರುದ್ಧ ಶಾಸಕರ ದೂರು

ಬೆಂಗಳೂರು: ಆಡಳಿತಾರೂಢ ಬಿಜೆಪಿಯಲ್ಲಿ ಶಾಸಕರ ಸರಣಿ ಸಭೆ, ಅನಾಮಧೇಯ ಪತ್ರದಂಥ ಬೆಳವಣಿಗೆಗಳ ಮಧ್ಯೆಯೇ ದೊಡ್ಡ ಸಂಖ್ಯೆಯ ಶಾಸಕರು ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿರುವುದು ಸಂಚಲನ ಮೂಡಿಸಿದೆ.

ಪಕ್ಷದ ಕಚೇರಿಯಲ್ಲಿ ತಮ್ಮನ್ನು ಭೇಟಿ ಮಾಡಿದ ಎಂಟಕ್ಕೂ ಹೆಚ್ಚಿನ ಶಾಸಕರ ಜತೆ ತಲಾ ಐದಾರು ನಿಮಿಷ ಮಾತನಾಡಿದ ಸಂತೋಷ್‌, ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣಕುಮಾರ ಅವರನ್ನು ಭೇಟಿಯಾಗಿ ಹೆಚ್ಚಿನ ವಿವರ ನೀಡಿ ಎಂದು ಸೂಚಿಸಿದರು’ ಎಂದು ಪಕ್ಷದ ಮೂಲಗಳು ಹೇಳಿವೆ.
ಒಬ್ಬೊಬ್ಬ ಶಾಸಕರು ತಲಾ ನಾಲ್ಕೈದು ನಿಮಿಷಗಳಂತೆ ಭೇಟಿ ಮಾಡಿ ಚರ್ಚೆ ನಡೆಸಿದ್ದು, ಈ ಭೇಟಿ ಕಾರ್ಯಕ್ರಮ ಮಧ್ಯರಾತ್ರಿ 1.30ರವರೆಗೂ ನಡೆದಿದೆ. 

ನಿರ್ದಿಷ್ಟವಾಗಿ ಸರ್ಕಾರದ ಆಡಳಿತ ವೈಖರಿ ಕುರಿತು ಅಸಮಾಧಾನವನ್ನು ಹೊರಹಾಕಿದ್ದಾರೆಯೇ ಅಥವಾ ಬೇರೆ ವಿಷಯದ ಬಗ್ಗೆ ಸಮಾಲೋಚನೆ ನಡೆಸಿದ್ದಾರೆಯೇ ಎಂಬುದು ಸ್ಪಷ್ಟವಾಗಿ ಗೊತ್ತಾಗಿಲ್ಲ. ಆದರೆ, ಪ್ರಸಕ್ತ ಬೆಳವಣಿಗೆಗಳ ಬಗ್ಗೆಯೇ ಮಾತುಕತೆ ನಡೆದಿದೆ ಎಂದು ತಿಳಿದು ಬಂದಿದೆ.

ಸೋಮವಾರವಷ್ಟೇ ಪಕ್ಷದ ಶಾಸಕರು ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ಅವರ ನಿವಾಸದಲ್ಲಿ ಹಲವು ಬಿಜೆಪಿ ಶಾಸಕರು ಸಭೆ ಸೇರಿದ್ದರು. 

‘ಸಂತೋಷ್ ಭೇಟಿಯಾಗಿದ್ದ ಶಾಸಕರು ಸಚಿವ ಸ್ಥಾನ ಕೈತಪ್ಪಿದ್ದರಿಂದ ಆಗಿರುವ ಅನ್ಯಾಯ, ವಿಜಯೇಂದ್ರ ಹಸ್ತಕ್ಷೇಪದ ಕುರಿತು ನಿರ್ದಿಷ್ಟವಾಗಿ ದೂರು ನೀಡಿದ್ದಾರೆ’ ಎಂದು ಮೂಲಗಳು ಹೇಳಿವೆ. 

‘ಸಚಿವ ಸ್ಥಾನ ಕೊನೆಗಳಿಗೆಯಲ್ಲಿ ಕೈತಪ್ಪಿದ ಕಾರಣಕ್ಕೆ ಅಸಹನೆಯಿಂದ ಕುದಿಯುತ್ತಿರುವ ಸಿ.ಪಿ. ಯೋಗೇಶ್ವರ್ ಅವರು ಈ ಶಾಸಕರನ್ನು ಕರೆದೊಯ್ದಿದ್ದರು. ಶಾಸಕರ ದೂರುಗಳನ್ನು ಸಹನೆಯಿಂದ ಸಂತೋಷ್ ಆಲಿಸಿದರು ಎನ್ನಲಾಗಿದೆ.

ಸರ್ಕಾರದ ಆಡಳಿತದಲ್ಲಿ ನಾನು ಹಸ್ತಕ್ಷೇಪ ಮಾಡುತ್ತಿದ್ದೇನೆ ಎಂಬ ಆರೋಪ ಆಧಾರ ರಹಿತ. ಮುಖ್ಯಮಂತ್ರಿ ಮಗ ಎಂಬ ಒಂದೇ ಕಾರಣಕ್ಕೆ ಸುಖಾಸುಮ್ಮನೇ ಟೀಕೆ ಮಾಡುತ್ತಿದ್ದಾರೆ’ ಎಂದು ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ. ವಿಜಯೇಂದ್ರ ಸ್ಪಷ್ಟನೆ ನೀಡಿದ್ದಾರೆ.

ಐದು ದಶಕಗಳಿಗೂ ಹೆಚ್ಚು ಕಾಲ ರಾಜಕೀಯ ಅನುಭವ ಇರುವ ಯಡಿಯೂರಪ್ಪನವರು ಸಮರ್ಥವಾಗಿ ಆಡಳಿತ ನಡೆಸುವ ಶಕ್ತಿ ಹೊಂದಿದ್ದಾರೆ. ಸರ್ಕಾರ ನಡೆಸಲು ಸಚಿವರು, ಅಧಿಕಾರಿಗಳು ಇದ್ದಾರೆ. ಅಂತಹ ಹೊತ್ತಿನಲ್ಲಿ ಮಕ್ಕಳ ಸಲಹೆ–ಸಹಕಾರ ಪಡೆದು ಅಧಿಕಾರ ನಡೆಸುವ ಅಗತ್ಯವೂ ನನ್ನ ತಂದೆಗಿಲ್ಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com