'ಪರಿಷತ್ ಮೇಲೆ ಹಲವರ ಕಣ್ಣು; ಬಿಜೆಪಿಗೆ ಬಂಪರ್, ಕೈಗೆ ಖೋತಾ, ಜೆಡಿಎಸ್‍ ಗೆ ನೋ ಲಾಸ್'

ಜೂನ್‍ನಲ್ಲಿ ಖಾಲಿಯಾಗುವ ವಿಧಾನ ಪರಿಷತ್ ಸ್ಥಾನದ ಮೇಲೆ ಮೂರು ಪಕ್ಷಗಳ ಆಕಾಂಕ್ಷಿಗಳು ಈಗಿನಿಂದಲೇ ತೆರೆ ಮರೆಯಲ್ಲಿ ಕಸರತ್ತು ಆರಂಭಿಸಿದ್ದು, ಕಾಂಗ್ರೆಸ್ ಹತ್ತು ಸ್ಥಾನಗಳನ್ನು ಕಳೆದುಕೊಳ್ಳಲಿದ್ದು, ಆಡಳಿತ ಪಕ್ಷ ಬಿಜೆಪಿಗೆ 9 ಸ್ಥಾನಗಳು ಅನಾಯಾಸವಾಗಿ  ಬರುವುದರಿಂದ ಜೂನ್ ನಂತರ ಮೇಲ್ಮನೆ ಲೆಕ್ಕಾಚಾರವೂ ಬದಲಾಗುವ ಸಾಧ್ಯತೆ ಇದೆ.
ಬಿಜೆಪಿ, ಕಾಂಗ್ರೆಸ್ ಜೆಡಿಎಸ್ ಲೋಗೆೋ
ಬಿಜೆಪಿ, ಕಾಂಗ್ರೆಸ್ ಜೆಡಿಎಸ್ ಲೋಗೆೋ

ಬೆಂಗಳೂರು:  ಜೂನ್‍ನಲ್ಲಿ ಖಾಲಿಯಾಗುವ ವಿಧಾನ ಪರಿಷತ್ ಸ್ಥಾನದ ಮೇಲೆ ಮೂರು ಪಕ್ಷಗಳ ಆಕಾಂಕ್ಷಿಗಳು  ಈಗಿನಿಂದಲೇ ತೆರೆ ಮರೆಯಲ್ಲಿ ಕಸರತ್ತು ಆರಂಭಿಸಿದ್ದು, ಕಾಂಗ್ರೆಸ್ ಹತ್ತು ಸ್ಥಾನಗಳನ್ನು ಕಳೆದುಕೊಳ್ಳಲಿದ್ದು, ಆಡಳಿತ ಪಕ್ಷ ಬಿಜೆಪಿಗೆ 9 ಸ್ಥಾನಗಳು ಅನಾಯಾಸವಾಗಿ  ಬರುವುದರಿಂದ ಜೂನ್ ನಂತರ ಮೇಲ್ಮನೆ ಲೆಕ್ಕಾಚಾರವೂ ಬದಲಾಗುವ ಸಾಧ್ಯತೆ ಇದೆ.

ಈ ವರ್ಷದ  ಜೂನ್ ಮಾಸಾಂತ್ಯಕ್ಕೆ ವಿಧಾನ ಪರಿಷತ್‍ನಲ್ಲಿ 16 ಸ್ಥಾನಗಳು ಖಾಲಿಯಾಗಲಿದ್ದು, ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್‍ಗೆ ನಡೆಯುವ ಚುನಾವಣೆಗೆ 7 ಸ್ಥಾನಗಳು, ರಾಜ್ಯಪಾಲರಿಂದ  ನಾಮನಿರ್ದೇಶನಗೊಳ್ಳುವ 5 ಸ್ಥಾನಗಳು, ಎರಡು ಪದವೀಧರ ಕ್ಷೇತ್ರ ಹಾಗೂ ಎರಡು ಶಿಕ್ಷಕರ  ಕ್ಷೇತ್ರಗಳು ಖಾಲಿಯಾಗಲಿದ್ದು, ಈ ಕ್ಷೇತ್ರಗಳಿಗೆ ಜೂನ್‍ನಲ್ಲಿ ಚುನಾವಣೆ ನಡೆಯಲಿವೆ.

ವಿಧಾನಸಭೆಯಿಂದ  ವಿಧಾನ ಪರಿಷತ್‍ಗೆ ಆಯ್ಕೆಯಾಗಿರುವ ಏಳು ಸ್ಥಾನಗಳಲ್ಲಿ ಕಾಂಗ್ರೆಸ್‍ನ ಜಯಮ್ಮ, ಎನ್.ಎಸ್.ಬೋಸರಾಜ್, ಎಚ್.ಎಂ. ರೇವಣ್ಣ, ನಜೀರ್ ಅಹಮದ್, ಎಂ.ಸಿ.ವೇಣುಗೋಪಾಲ್,   ಜೆಡಿಎಸ್‍ನ ಟಿ.ಎ. ಶರವಣ ಹಾಗೂ ಪಕ್ಷೇತರ ಶಾಸಕರಾಗಿರುವ ಡಿ.ಯು. ಮಲ್ಲಿಕಾರ್ಜುನ ನಿವೃತ್ತರಾಗಲಿದ್ದಾರೆ.

ಸದ್ಯದ ವಿಧಾನಸಭೆ ಪಕ್ಷಗಳ ಬಲಾ ಬಲದ ಆಧಾರದಲ್ಲಿ ಏಳು  ಸ್ಥಾನಗಳಲ್ಲಿ ಆಡಳಿತ ಪಕ್ಷ ಬಿಜೆಪಿಗೆ ನಾಲ್ಕು ಸ್ಥಾನಗಳು, ಕಾಂಗ್ರೆಸ್‍ಗೆ ಎರಡು ಹಾಗೂ  ಜೆಡಿಎಸ್‍ಗೆ ಒಂದು ಸ್ಥಾನ ಲಭಿಸಲಿದೆ.
ಇದರೊಂದಿಗೆ ನಾಮ  ನಿರ್ದೇಶನಗೊಂಡ ಕಾಂಗ್ರೆಸ್‍ನ ಕೆ. ಅಬ್ದುಲ್ ಜಬ್ಬಾರ್, ಐವಾನ್ ಡಿಸೋಜಾ, ಡಾ.ಜಯಮಾಲಾ,  ಇಕ್ಬಾಲ್ ಅಹಮದ್ ಸರಡಗಿ, ತಿಪ್ಪಣ್ಣ ಕಮಕನೂರ್ ನಿವೃತ್ತರಾಗಲಿದ್ದಾರೆ. ಖಾಲಿಯಾಗುವ  ನಾಮನಿರ್ದೇಶನದ ಐದೂ ಸ್ಥಾನಗಳು ಆಡಳಿತ ಪಕ್ಷ ಬಿಜೆಪಿಗೆ ಲಭಿಸುವುದರಿಂದ ಜೂನ್ ವೇಳೆಗೆ  ಬಿಜೆಪಿಯ ಒಂಭತ್ತು ಸದಸ್ಯರ ಸಂಖ್ಯೆ ಹೆಚ್ಚಾಗಲಿದೆ.

ಇನ್ನು ಜೂನ್ ತಿಂಗಳಲ್ಲಿ ಎರಡು  ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಈಶಾನ್ಯ ಶಿಕ್ಷಕರ  ಕ್ಷೇತ್ರದಲ್ಲಿ ಕಾಂಗ್ರೆಸ್‍ನ ಶರಣಪ್ಪ ಮಟ್ಟೂರು, ಪಶ್ಚಿಮ  ಪದವೀಧರ ಕ್ಷೇತ್ರದಲ್ಲಿ  ಬಿಜೆಪಿಯ ಎಸ್.ವಿ. ಸಂಕನೂರ, ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಜೆಡಿಎಸ್‍ನ ಆರ್.  ಚೌಡರೆಡ್ಡಿ ತೂಪಲ್ಲಿ ಹಾಗೂ ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್‍ನ ಪುಟ್ಟಣ್ಣ  ಹಾಲಿ ಸದಸ್ಯರಾಗಿದ್ದಾರೆ.

ಶಿಕ್ಷಕರ ಹಾಗೂ ಪದವೀಧರ  ಕ್ಷೇತ್ರಗಳ ಚುನಾವಣೆಗೆ ಬಿಜೆಪಿಯಲ್ಲಿ ಇನ್ನೂ ಅಭ್ಯರ್ಥಿಗಳನ್ನು ಅಧಿಕೃತವಾಗಿ ಘೋಷಣೆ  ಮಾಡದಿರುವುದರಿಂದ ವಿಧಾನಸಭೆಯಿಂದ ವಿಧಾನ ಪರಿಷತ್‍ಗೆ ನಡೆಯುವ ಚುನಾವಣೆಯ ಬಗ್ಗೆ  ಬಿಜೆಪಿಯಲ್ಲಿ ಆಕಾಂಕ್ಷಿಗಳು ಬಹಿರಂಗವಾಗಿ ಕಸರತ್ತು ಆರಂಭಿಸಿಲ್ಲ ಎಂದು  ಹೇಳಲಾಗುತ್ತಿದೆ.

ಈಶಾನ್ಯ ಶಿಕ್ಷಕರ ಕ್ಷೇತ್ರಕ್ಕೆ ವಿಧಾನ ಪರಿಷತ್ ಮಾಜಿ ಸದಸ್ಯ  ಶಶೀಲ್ ನಮೋಸಿ, ಹಾಗೂ ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಹಾಲಿ ಸದಸ್ಯ ಎಸ್.ವಿ. ಸಂಕನೂರ  ಹೆಸರನ್ನು ರಾಜ್ಯ ಬಿಜೆಪಿಯಿಂದ ಆಯ್ಕೆ ಮಾಡಿ ಹೈಕಮಾಂಡ್‍ಗೆ ಕಳುಹಿಸಲಾಗಿದೆ ಎಂದು  ತಿಳಿದು ಬಂದಿದೆ.

ಇನ್ನು ಬೆಂಗಳೂರು ಶಿಕ್ಷಕರ ಕ್ಷೇತ್ರದ ಸದಸ್ಯ ಪುಟ್ಟಣ್ಣ ಈಗಾಗಲೇ  ಜೆಡಿಎಸ್‍ನಿಂದ ಉಚ್ಚಾಟನೆಗೊಂಡಿದ್ದು, ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸಲು  ನಿರ್ಧರಿಸಿದ್ದಾರೆ ಎನ್ನಲಾಗಿದೆ. ಆದರೆ ಅವರ ಹೆಸರು ಬಿಜೆಪಿಯಿಂದ ಅಧಿಕೃತ ಘೋಷಣೆಯಾಗದಿದ್ದರೂ, ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ಬಿಜೆಪಿ ಅಭ್ಯರ್ಥಿ ಎಂದು ಬಹಿರಂಗವಾಗಿಯೇ ಹೇಳಿದ್ದಾರೆ. ಅದರ ಹೊರತಾಗಿಯೂ ಕಳೆದ ಬಾರಿ ಅಭ್ಯರ್ಥಿಯಾಗಿದ್ದ ನೀಲಯ್ಯ ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನು  ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಬಿಜೆಪಿ ಮಾಧ್ಯಮ ಘಟಕದ ಸಂಚಾಲಕ ಆನಂದ್ ಹಾಗೂ ಶಿವಯೋಗಿ  ಸ್ವಾಮಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ವಿಧಾನ ಸಭೆಯಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಗೆ ಪ್ರಮುಖವಾಗಿ ವಲಸಿಗರಾದ ಎಚ್.ವಿಶ್ವನಾಥ್, ಎಂ.ಟಿ.ಬಿ. ನಾಗರಾಜ್ ಹಾಗೂ ಆರ್.ಶಂಕರ್ ಕಣ್ಣಿಟ್ಟಿದ್ದು, ಮೂಲ ಬಿಜೆಪಿಗರು  ಪಕ್ಷದ ಕಾರ್ಯಕರ್ತರಿಗೆ ನೀಡಬೇಕೆಂಬ ಒತ್ತಡ ಹೇರಲು ನಿರ್ಧರಿಸಿದ್ದಾರೆ ಎಂದು ತಿಳಿದು  ಬಂದಿದೆ.

ಈ ಬಾರಿ  ಕಾಂಗ್ರೆಸ್ ಪರಿಷತ್ತಿನಲ್ಲಿ ಗಳಿಸುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು,  ವಿಧಾನಸಭೆಯಿಂದ ಹಾಗೂ ನಾಮನಿರ್ದೇಶನಗೊಂಡವರಲ್ಲಿ ಕಾಂಗ್ರೆಸ್‍ನ ಹತ್ತು ಸದಸ್ಯರು  ನಿವೃತ್ತರಾಗಲಿದ್ದು, ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ಕಾಂಗ್ರೆಸ್‍ನಿಂದ ಇಬ್ಬರನ್ನು  ಮಾತ್ರ ಆಯ್ಕೆ ಮಾಡಲು ಸಾಧ್ಯವಾಗುತ್ತದೆ.

ಈ ಬಾರಿ ನಿವೃತ್ತರಾಗುತ್ತಿರುವವರಲ್ಲಿ  ಬಹುತೇಕರು ಅಲ್ಪಸಂಖ್ಯಾತ, ದಲಿತ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದವರಾಗಿದ್ದಾರೆ  ಎನ್ನಲಾಗಿದ್ದು, ಈ ಬಾರಿ ಮೇಲ್ವರ್ಗದ ಲಿಂಗಾಯತ ಅಥವಾ ಒಕ್ಕಲಿಗ ಸಮುದಾಯಗಳಿಗೆ ಆದ್ಯತೆ  ನೀಡಬೇಕೆಂಬ ಬೇಡಿಕೆ ಹೆಚ್ಚಿದೆ ಎನ್ನಲಾಗುತ್ತಿದೆ.

ಪ್ರಮುಖವಾಗಿ ಈ ಬಾರಿ  ನಿವೃತ್ತರಾಗುವ ಯಾರಿಗೂ ಮರು ಆಯ್ಕೆಗೆ ಅವಕಾಶ ಕಲ್ಪಿಸಬಾರದು ಎಂಬ ಒತ್ತಡ  ಹೆಚ್ಚಾಗಿದ್ದು, ಹೊಸಬರು ಹಾಗೂ ಪಕ್ಷಕ್ಕಾಗಿ ಸಕ್ರೀಯರಾಗಿ ಕಾರ್ಯ ನಿರ್ವಹಿಸುವ ಯುವ  ಸಮುದಾಯಕ್ಕೆ ಆದ್ಯತೆ ನೀಡಬೇಕೆಂಬ ಆಗ್ರಹ ಹೆಚ್ಚಿದೆ ಎಂದು ತಿಳಿದು ಬಂದಿದೆ.

ಈ ಎರಡು  ಸ್ಥಾನಗಳಿಗೆ ಮುರಳೀಧರ ಹಾಲಪ್ಪ, ಎಂ. ನಾರಾಯಣಸ್ವಾಮಿ, ನಟರಾಜ್‍ಗೌಡ, ಹಾಜಿ ಶಫಿ  ಅಹಮದ್, ನಾಗರಾಜ್ ಯಾದವ್, ಅನಿಲ್ ಕುಮಾರ್ ಪಾಟೀಲ್ ಕಸರತ್ತು ನಡೆಸಿದ್ದಾರೆ  ಎನ್ನಲಾಗಿದ್ದು, ಕೆಲವು ಹಿರಿಯ ನಾಯಕರೂ ತೆರೆ ಮರೆಯಲ್ಲಿ ಮತ್ತೆ ಪರಿಷತ್ ಪ್ರವೇಶ  ಪಡೆಯಲು ಒತ್ತಡ ಹೇರುತ್ತಿದ್ದಾರೆ ಎಂದು ತಿಳಿದು ಬಂದಿದೆ.

ವಿಧಾನ  ಸಭೆಯಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗಿರುವ ಜೆಡಿಎಸ್‍ನ ಟಿ.ಎ. ಶರವಣ  ನಿವೃತ್ತರಾಗಲಿದ್ದು, ಅವರೇ ಮರು ಆಯ್ಕೆಗೆ ದೇವೇಗೌಡರಿಗೆ ಮನವಿ ಮಾಡಿದ್ದಾರೆ  ಎನ್ನಲಾಗಿದ್ದು, ಅವರ ಹೊರತಾಗಿ ಮಾಜಿ ಶಾಸಕರಾದ ವೈಎಸ್.ವಿ ದತ್ತಾ ಹಾಗೂ ಎಚ್.ಎನ್.  ಕೋನರೆಡ್ಡಿ ಕೂಡ ಅವಕಾಶಕ್ಕಾಗಿ ಪ್ರಯತ್ನ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com