ಇಂದಿನದು ಗಾಂಧಿ, ನೆಹರು ಕಾಂಗ್ರೆಸ್ ಅಲ್ಲ, ತಿನ್ನುವ ಕಾಂಗ್ರೆಸ್..: ರಮೇಶ್ ಕುಮಾರ್, ವಿಡಿಯೋ ವೈರಲ್!

ಕಾಂಗ್ರೆಸ್‌ನ ಹಿರಿಯ ಮುಖಂಡ ಹಾಗೂ ಮಾಜಿ ಸ್ಪೀಕರ ರಮೇಶ್‌ ಕುಮಾರ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕ್ಷೇತ್ರ ಬಾದಾಮಿಯಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ನೀಡಿರುವ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ.
ರಮೇಶ್ ಕುಮಾರ್
ರಮೇಶ್ ಕುಮಾರ್

ಬಾಗಲಕೋಟೆ: ಕಾಂಗ್ರೆಸ್‌ನ ಹಿರಿಯ ಮುಖಂಡ ಹಾಗೂ ಮಾಜಿ ಸ್ಪೀಕರ ರಮೇಶ್‌ ಕುಮಾರ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕ್ಷೇತ್ರ ಬಾದಾಮಿಯಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ನೀಡಿರುವ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ.

ಕೆಪಿಸಿಸಿ ಅಧ್ಯಕ್ಷ ಹಾಗೂ ಪ್ರತಿಪಕ್ಷ ನಾಯಕನ ಆಯ್ಕೆ ಹಿನ್ನೆಲೆಯಲ್ಲಿ ಹುಟ್ಟಿಕೊಂಡಿರುವ ಮೂಲ ಹಾಗೂ ವಲಸೆ ಕಾಂಗ್ರೆಸ್ಸಿಗ ಎನ್ನುವ ಅಪಸ್ವರದ ಕಿಚ್ಚು ಇನ್ನೂ ಆರದೇ ಪದಾಧಿಕಾರಿಗಳ ನೇಮಕ ವಿಳಂಬವಾಗುತ್ತಿರುವುವಾಗಲೇ ಪಕ್ಷದ ಹಿರಿಯ ಮುಖಂಡರಾಗಿರುವ ರಮೇಶ್ ಕುಮಾರ ಅವರು “ಗಾಂಧೀ, ನೆಹರು ಕಾಂಗ್ರೆಸ್ಸೇ ಬೇರೆ, ಇಂದಿನ ಕಾಂಗ್ರೆಸ್ಸೇ ಬೇರೆ, ಇಂದಿನ ಕಾಂಗ್ರೆಸ್ ತಿನ್ನುವ ಕಾಂಗ್ರೆಸ್ ಎನ್ನುವುದನ್ನು ಸಜ್ಞೆಯ”  ಮೂಲಕ ಹೇಳಿರುವುದು ಕಾಂಗ್ರೆಸ್ ಪಾಳೆಯದಲ್ಲಿ ತೀವ್ರ ಸಂಚಲನವನ್ನುಂಟು ಮಾಡಿದೆ.

ರಮೇಶ್ ಕುಮಾರ್ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗತೊಡಗಿದೆ. ನಾಲ್ಕೈದು ಬಾರಿ ಶಾಸಕರಾಗಿ, ಜವಾಬ್ದಾರಿ ಸ್ಥಾನಗಳಲ್ಲಿ ಕೆಲಸ ಮಾಡಿ, ಸದ್ಯ ಇಂದಿನ ಕಾಂಗ್ರೆಸ್ ತಿನ್ನುವ ಕಾಂಗ್ರೆಸ್ ಎಂದು ಹೇಳುವ ಪಕ್ಷದ ಸದಸ್ಯರಾಗಿ, ಶಾಸಕರಾಗಿ ಇಂತಹ ಹೇಳಿಕೆ ನೀಡಿರುವುದು ಅಕ್ಷಮ್ಯ, ಇದು ಪಕ್ಷದ ಬಗ್ಗೆ ನಾಡಿನಾದ್ಯಂತ ಕೆಟ್ಟ ಸಂದೇಶವನ್ನು ನೀಡುವ ಹೇಳಿಕೆ ಆಗಿದೆ.

ಕಾಂಗ್ರೆಸ್ ಶಾಸಕರಾಗಿದ್ದುಕೊಂಡು ಇಂತಹ ಹೇಳಿಕೆ ನೀಡುವ ಬದಲಿಗೆ ಇಂತಹ ಪಕ್ಷದಲ್ಲಿ ಏಕೆ ಇದ್ದೀರಿ ಈ ಪಕ್ಷವನ್ನು ಬಿಟ್ಟು ಹೋಗಿ. ಇಲ್ಲವೆ ಕೆಟ್ಟು ಹೋಗಿರುವ ಪಕ್ಷವನ್ನು ಶುದ್ಧೀಕರಿಸುವ ಕೆಲಸ ಮಾಡಿ. ಅದು ಬಿಟ್ಟು ಪಕ್ಷಕ್ಕೆ ಮಾರಕವಾಗುವ ಹೇಳಿಕೆ ನೀಡುವುದು ಸರಿಯಲ್ಲ ಎನ್ನವ ಅಭಿಪ್ರಾಯಗಳು ಪಕ್ಷದಲ್ಲಿ ವ್ಯಾಪಕವಾಗಿ ಕೇಳಿ ಬರಲಾರಂಭಿಸಿವೆ.

ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎಸ್.ಜಿ. ನಂಜಯ್ಯನಮಠ ಅವರು ರಮೇಶ್ ಕುಮಾರ್ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು ತಿನ್ನುವ ಕಾಂಗ್ರೆಸ್‌ನ ಶಾಸಕರಾಗಿ ಏಕೆ ಇದ್ದೀರಿ, ಪಕ್ಷಕ್ಕೆ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋಗಿರಿ ಎಂದು ಖಾರವಾಗಿ ಪ್ರತಿಕ್ರಿಯಿಸಿ, ಇಂದಿಗೂ ಕಾಂಗ್ರೆಸ್ ಪಕ್ಷ ಗಾಂಧಿ, ನೆಹರು ಅವರು ಹಾಕಿಕೊಟ್ಟ ಮಾರ್ಗದಲ್ಲೇ ಮುನ್ನಡೆಯುತ್ತಿದೆ ಎಂದರು.

ಪಕ್ಷದ ಹಿರಿಯ ಶಾಸಕರಾಗಿ, ಉನ್ನತವಾದ ಸ್ಪೀಕರ್ ಹುದ್ದೆಯಲ್ಲಿ ಕೆಲಸ ಮಾಡಿರುವ ರಮೇಶ್ ಕುಮಾರ್ ಅವರಂತಹ ಬಾಯಲ್ಲಿ ಇಂತಹ ಹೇಳಿಕೆ ಬಂದಿರುವುದು ದುರದೃಷ್ಟಕರ. ಇದನ್ನು ಪಕ್ಷದ ಹಿರಿಯರ ಗಮನಕ್ಕೆ ತರುವುದಾಗಿ ಅವರು ತಿಳಿಸಿದ್ದಾರೆ.

ಮಾಜಿ ಸ್ಪೀಕರ್ ಹೇಳಿಕೆ ಪಕ್ಷಕ್ಕೆ ಸಾಕಷ್ಟು ಪೆಟ್ಟು ಕೊಡಲಿದೆ. ರಾಜ್ಯಕ್ಕೆ ಕೆಟ್ಟ ಸಂದೇಶ ಹೋಗಲಿದೆ ಎಂದು ಅಭಿಪ್ರಾಯ ಪಟ್ಟಿರುವ ನಂಜಯ್ಯನಮಠ ಇಷ್ಟವಿಲ್ಲದ ಪಕ್ಷದಲ್ಲಿ ರಮೇಶ್ ಕುಮಾರ್ ಇರುವುದು ಬೇಡ ಎಂದು ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

ಪಕ್ಷದಲ್ಲಿನ ಸದ್ಯದ ಸ್ಥಿತಿಗತಿಗಳನ್ನು ಕಂಡು ಬೇಸರವಾಗಿ ಇಂತಹ ಮಾತುಗಳನ್ನಾಡಿದ್ದಾರೆ. ಅದರ ಹಿಂದೆ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುವ ಉದ್ದೇಶವಿಲ್ಲ ಎನ್ನುವ ಅಭಿಪ್ರಾಯವನ್ನು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅನೀಲ್ ಅಭಿಪ್ರಾಯ ಪಟ್ಟಿದ್ದಾರೆ.

ಈಗಾಗಲೇ ಕಾಂಗ್ರೆಸ್‌ನಲ್ಲಿ ಕೆಪಿಸಿಸಿ ಅಧ್ಯಕ್ಷರ ನೇಮಕದ ವಿಷಯದಲ್ಲಿ ಅಸಮಾಧಾನ ಹೊತ್ತಿ ಉರಿಯುತ್ತಿದೆ. ಹೈಕಮಾಂಡ್‌ಗೆ ಕೂಡ ಕರ್ನಾಟಕ ಕಾಂಗ್ರೆಸ್‌ನಲ್ಲಿ ಅಸಮಾಧಾನ ಶಮನ ಮಾಡಲು ಸಾಧ್ಯವಾಗುತ್ತಿಲ್ಲ. ಪರಿಣಾಮವಾಗಿ ಕೆಪಿಸಿಸಿ ಅಧ್ಯಕ್ಷರ ನೇಮಕ ಪ್ರಕ್ರಿಯೆ ಮೇಲಿಂದ ಮೇಲೆ ಮುಂದಕ್ಕೆ ಹೋಗುತ್ತಿದೆ. ಇಂತಹ ಸನ್ನಿವೇಶದಲ್ಲಿ ರಮೇಶ ಕುಮಾರ ನೀಡಿರುವ ತಿನ್ನುವ ಕಾಂಗ್ರೆಸ್ ಹೇಳಿಕೆ ಯಾವ ಸ್ವರೂಪ ಪಡೆದುಕೊಳ್ಳಲಿದೆ ಎನ್ನುವುದು ಕಾಯ್ದು ನೋಡಬೇಕಷ್ಟೆ !.
-ವಿಠ್ಠಲ ಆರ್. ಬಲಕುಂದಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com