ಡೊನಾಲ್ಡ್ ಟ್ರಂಪ್ ಆಗಮನದಿಂದ ಯಾವುದೇ ಪ್ರಯೋಜನವಿಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ

ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಭಾರತಕ್ಕೆ ಆಗಮಿಸಿದ್ದರಿಂದ ಏನೂ ಪ್ರಯೋಜನವಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಮೋದಿ-ಟ್ರಂಪ್-ಸಿದ್ದರಾಮಯ್ಯ
ಮೋದಿ-ಟ್ರಂಪ್-ಸಿದ್ದರಾಮಯ್ಯ

ಕಲಬುರಗಿ: ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಭಾರತಕ್ಕೆ ಆಗಮಿಸಿದ್ದರಿಂದ ಏನೂ ಪ್ರಯೋಜನವಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಖಾಸಗಿ ಹೋಟೆಲ್ ನಲ್ಲಿ ಅಮೆರಿಕಾ ಅಧ್ಯಕ್ಷ ಇಂದು ಭಾರತಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತಕ್ಕೆ ಟ್ರಂಪ್ ಆಗಮನದಿಂದ ಏನು ಆಗುವುದಿಲ್ಲ. ಒಂದು ದೇಶದ ಅಧ್ಯಕ್ಷ ಆಗಮಿಸುತ್ತಿದ್ದಾರೆ ಅವರನ್ನು ಸ್ವಾಗತ ಮಾಡುತ್ತಿದ್ದಾರೆ ಎಂದರು.

ಅತಿಥಿಗೆ ಸ್ವಾಗತ ಮಾಡುವುದು ನಮ್ಮ ಕರ್ತವ್ಯ. ಆದರೆ, ಅದು ಅಗತ್ಯಕ್ಕಿಂತ ಹೆಚ್ಚಾಗಿದೆ ಎಂದು ಟೀಕಿಸಿದ ಅವರು, ಯಾವುದೇ ಆಮದು ಒಪ್ಪಂದಕ್ಕೆ ಮುಂದಾಗಬಾರದು ಎಂದರು. ಕೆಪಿಸಿಸಿಗೆ ನೂತನ ಅಧ್ಯಕ್ಷರ ನೇಮಕ ಶೀಘ್ರದಲ್ಲೆ ಆಗಲಿದ್ದು, ರಾಹುಲ್ ಗಾಂಧಿಯೇ ಮತ್ತೆ ಎಐಸಿಸಿ ಅಧ್ಯಕ್ಷ ರಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಅವರು ಹೊಸ ಪಕ್ಷ ಆರಂಭಿಸಲಿದ್ದಾರೆ ಎಂಬ ಕಟೀಲ್ ಹೇಳಿಕೆ ಕುರಿತು ಮಾತನಾಡಿದ ಅವರು, ಕಟೀಲ್ಗೆ ರಾಜಕೀಯ ಅನುಭವ ತೀರ ಕಡಿಮೆಯಾಗಿದ್ದು, ಅವರ ಮಾತಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

ಹದಿನೈದನೆಯ ಹಣಕಾಸಿನ ಆಯೋಗದಿಂದ ಕರ್ನಾಟಕಕ್ಕೆ ತುಂಬಾ ಅನ್ಯಾಯವಾಗಿದ್ದು, ಪ್ರಸ್ತುತ  ಒಂಭತ್ತು ಸಾವಿರ ಕೋಟಿ ರೂ ಕಡಿಮೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಮುಂದಿನ  ವರ್ಷ ಹನ್ನೊಂದು ಸಾವಿರದ ಇನ್ನೂರಾ ಐವತ್ತೆಂಟು ಕೋಟಿ ರೂ ಕಡಿಮೆಯಾಗಲಿದೆ.  ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಇಪ್ಪತ್ತೈದು ಜನ ಎಂಪಿಗಳು ಏನೂ ಮಾಡುತ್ತಿದ್ದಾರೆ?. ಇದರ ಬಗ್ಗೆ ಯಾರಾದರು ಧ್ವನಿ ಎತ್ತುತ್ತಿದ್ದಾರಾ? ಎಂದು ಅವರು ಕಿಡಿಕಾರಿದರು.

ರಾಜ್ಯದಲ್ಲಿ  ಪ್ರವಾಹ ಬಂದಾಗಲು ಹೆಚ್ಚಿನ ಪರಿಹಾರ ನೀಡಲಿಲ್ಲ.ಅಲ್ಲದೇ, ಯಡಿಯೂರಪ್ಪ ಅವರು   ನಿಯೋಗವನ್ನು ಕರೆದುಕೊಂಡು ಹೋಗಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಯಡಿಯೂರಪ್ಪ ಅವರು ಪ್ರಧಾ‌ನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರನ್ನು ಹೆದರುತ್ತಿದ್ದಾರೆ. ಯಡಿಯೂರಪ್ಪ ಅತ್ಯಂತ ದುರ್ಬಲ ಮುಖ್ಯಮಂತ್ರಿ ಎಂದು ಆರೋಪಿಸಿದರು.

ನಾನು ರಾಜಕೀಯ ಜೀವನದಲ್ಲಿ ಅಧಿಕಾರದ ಹಿಂದೆ ಹೋಗುವುದಿಲ್ಲ. ಬಿಜೆಪಿ ಅನೇಕರು ಅವರ ಪಕ್ಷ ತೊರೆಯಲು ಸಿದ್ಧ ರಾಗಿದ್ದಾರೆ. ಸದ್ಯ ಬಿಜೆಪಿ ಯಲ್ಲಿ ತಳಮಳ ಅಧಿಕಾರದ ಕಚ್ಚಾಟ ಪ್ರಾರಂಭವಾಗಿದೆ ಎಂದರು. ಬಿಜೆಪಿ ಕಚ್ಚಾಟದಿಂದ ಸರ್ಕಾರ ಬಿದ್ದರೆ, ಮತ್ತೆ ಅಧಿಕಾರ ಹಿಡಿಯುವ ಯಾವುದೇ ಯೋಚನೆ ತಮಗಿಲ್ಲ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com