ಒಕ್ಕಲಿಗ, ಲಿಂಗಾಯತರನ್ನು ಸರಿದೂಗಿಸಿ ಕೆಪಿಸಿಸಿ ಸ್ಥಾನ ಹಂಚಿಕೆ

ಸೊರಗುತ್ತಿರುವ ಸಂಘಟನೆಯ ನಡುವೆ ಪ್ರಬಲ ನಾಯಕತ್ವದ ಕೊರತೆಯನ್ನು ಎದುರಿಸುತ್ತಿರುವ ಕಾಂಗ್ರೆಸ್ ಹೈಕಮಾಂಡ್‌ಗೆ ಎಐಸಿಸಿ ಮತ್ತು ಕೆಪಿಸಿಸಿ ಅಧ್ಯಕ್ಷರ  ಆಯ್ಕೆಯ ಕಗ್ಗಂಟನ್ನು ಬಿಡಿಸಲು ಸಾಧ್ಯವಾಗದೇ ಗೊಂದಲದ ಸ್ಥಿತಿ  ನಿರ್ಮಾಣವಾಗಿದೆ. 
ಎಂಬಿ ಪಾಟೀಲ್ ಮತ್ತು ಶಿವಕುಮಾರ್
ಎಂಬಿ ಪಾಟೀಲ್ ಮತ್ತು ಶಿವಕುಮಾರ್

ಬೆಂಗಳೂರು: ಸೊರಗುತ್ತಿರುವ ಸಂಘಟನೆಯ ನಡುವೆ ಪ್ರಬಲ ನಾಯಕತ್ವದ ಕೊರತೆಯನ್ನು ಎದುರಿಸುತ್ತಿರುವ ಕಾಂಗ್ರೆಸ್ ಹೈಕಮಾಂಡ್‌ಗೆ ಎಐಸಿಸಿ ಮತ್ತು ಕೆಪಿಸಿಸಿ ಅಧ್ಯಕ್ಷರ  ಆಯ್ಕೆಯ ಕಗ್ಗಂಟನ್ನು ಬಿಡಿಸಲು ಸಾಧ್ಯವಾಗದೇ ಗೊಂದಲದ ಸ್ಥಿತಿ  ನಿರ್ಮಾಣವಾಗಿದೆ. 

ಸಂದಿಗ್ಧತೆಯಿಂದಾಗಿ ಕೆಪಿಸಿಸಿಗೆ ಪದಾಧಿಕಾರಿಗಳನ್ನು ನೇಮಿಸದೇ  ಸದ್ಯಕ್ಕೆ ಯಥಾಸ್ಥಿತಿ ಕಾಯ್ದುಕೊಂಡು ಹೋಗುತ್ತಿದೆ.

ಇಂತಹದರಲ್ಲಿ ಅಳೆದು ತೂಗಿ ಕರ್ನಾಟಕದ ಪ್ರಬಲ ಜಾತಿಗಳ ಲೆಕ್ಕಾಚಾರದಡಿ ಒಂದು ಸೂತ್ರವನ್ನು ಹೈಕಮಾಂಡ್ ಸಿದ್ಧಪಡಿಸಿದೆ.

ಒಕ್ಕಲಿಗ  ಅಭ್ಯರ್ಥಿಯನ್ನು ಅಧ್ಯಕ್ಷರನ್ನಾಗಿಸಿದರೆ ಲಿಂಗಾಯತರನ್ನು ಕಾರ್ಯಾಧ್ಯಕ್ಷ  ಸ್ಥಾನಕ್ಕೇರಿಸುವ ಅಥವಾ ಲಿಂಗಾಯತರು ಅಧ್ಯಕ್ಷರಾದರೆ ಒಕ್ಕಲಿಗರನ್ನು ಕಾರ್ಯಾಧ್ಯಕ್ಷ  ಸ್ಥಾನಕ್ಕೆ ಏರಿಸುವ ಚಿಂತನೆ ಅಖಿಲ ಭಾರತ ಕಾಂಗ್ರೆಸ್‌ನಲ್ಲಿ ಸಿದ್ಧಗೊಂಡಿದೆ.

ದೆಹಲಿ  ಚುನಾವಣೆ ಬಳಿಕ ಕೆಪಿಸಿಸಿಗೆ ಸಾರಥಿಯ ನೇಮಕಕ್ಕೆ ಹೈಕಮಾಂಡ್ ಅಂಕಿತ ಹಾಕುತ್ತದೆ ಎಂಬ ಮಾತುಗಳು ಕೇಳಿಬಂದರೂ ಅದಕ್ಕಿನ್ನೂ ಮುಹೂರ್ತ ಕೂಡಿಬಾರದಿರುವುದು ರಾಜ್ಯದ  ಕಾಂಗ್ರೆಸ್‌ ನಾಯಕರಲ್ಲಿಯೇ ಬೇಸರ ಮೂಡಿಸಿದೆ. ಯಾವುದೇ ಸ್ಪಷ್ಟತೆ ಸಿಗದೇ ಆತುರಾತುರದ  ಕೈಗೆ ಬುದ್ಧಿ ಕೊಡಲು ಹೈಕಮಾಂಡ್ ಸಿದ್ಧವಿದ್ದಂತಿಲ್ಲ.

ಹೀಗಾಗಿ ಒಕ್ಕಲಿಗ ಮತ್ತು  ಲಿಂಗಾಯತ ಸಮುದಾಯಗಳನ್ನು ಸರಿದೂಗಿಸಿ ಅಧ್ಯಕ್ಷ, ಕಾರ್ಯಾಧ್ಯಕ್ಷ ನೇಮಕ ಮಾಡಲು ಎಐಸಿಸಿ  ನಾಯಕಿ ಸೋನಿಯಾಗಾಂಧಿ ಮುಂದಾಗಿದ್ದಾರೆ ಎನ್ನಲಾಗಿದೆ. 

ಈ ಎರಡು ಜಾತಿಯ ಲೆಕ್ಕಾಚಾರದಲ್ಲಿ  ಡಿ.ಕೆ‌.ಶಿವಕುಮಾರ್ ಹಾಗೂ ಎಂ.ಬಿ.ಪಾಟೀಲ್ ಮುನ್ನಲೆಗೆ ಬಂದಿದ್ದರಾದರೂ ಪರಸ್ಪರ  ವಿರೋಧಾಭಾಸಗಳಿಂದ ಒಮ್ಮತ ತೋರಿಸುತ್ತಿಲ್ಲ. 

ಸದ್ಯ ಕಾಂಗ್ರೆಸಿನಲ್ಲಿ ಲಿಂಗಾಯತರ  ಒಲವಿಗಿಂತ ಡಿ.ಕೆ.ಶಿವಕುಮಾರ್ ಮೇಲಿನ ಒಕ್ಕಲಿಗ ಅಭಿಮಾನವೇ ಹೆಚ್ಚಿದೆ. ಅಷ್ಟೇನೂ ಜಾತಿಯ  ಬಲವಿಲ್ಲದಿದ್ದರೂ ಸಿದ್ದರಾಮಯ್ಯ ಎಂಬ ಅಸ್ತ್ರದೊಂದಿಗೆ ಮುನ್ನುಗ್ಗುವ ಪ್ರಯತ್ನ  ಎಂ.ಬಿ.ಪಾಟೀಲರದ್ದು. 

ಅಧ್ಯಕ್ಷ ಸ್ಥಾನ ತನಗೇ ಬೇಕು ಎಂಬ ಹಠ ಇಬ್ಬರದ್ದಾಗಿದ್ದು  ಪರಸ್ಪರ  ಸಂಧಾನ ಮಾಡಿಕೊಂಡು ಒಮ್ಮತದ ನಿರ್ಧಾರಕ್ಕೆ ಬರುವಂತೆ ಇಬ್ಬರಿಗೆ ಸೂಚಿಸಲಾಗಿದೆ. ಹೀಗಾಗಿ  ಸೂತ್ರಕ್ಕೆ ಇಬ್ಬರೂ ಸಿದ್ಧರಾದ ಬಳಿಕವಷ್ಟೇ ಕೆಪಿಸಿಸಿಗೆ ಅಧ್ಯಕ್ಷರು ಕಾರ್ಯಾಧ್ಯಕ್ಷರು  ನೇಮಕವಾಗಲಿದ್ದಾರೆ. 

ಎರಡೂ ಪ್ರಬಲ ಸಮುದಾಯಗಳು ಕೈ ಹಿಡಿಯಲು ಈ ಇಬ್ಬರೂ ಪರಸ್ಪರ ಕೈ  ಹಿಡಿಯಲೇಬೇಕಿದೆ. ಹೀಗಾಗಿ ಕಾರ್ಯಾಧ್ಯಕ್ಷ ಒಕ್ಕಲಿಗರಿಗೋ ಅಧ್ಯಕ್ಷ ಸ್ಥಾನ ಲಿಂಗಾಯತರಿಗೋ  ಇಲ್ಲವೇ ಅಧ್ಯಕ್ಷಗಿರಿ ಒಕ್ಕಲಿಗರದ್ದಾದರೆ ಕಾರ್ಯಾಧ್ಯಕ್ಷ ಲಿಂಗಾಯತರಿಗೋ ಎಂಬುದನ್ನು  ನೀವೇ ನಿರ್ಧರಿಸಿ ಎಂದು ಹೈಕಮಾಂಡ್ ಸೂಚಿಸಿದೆ‌.

ವಿಶೇಷ ವರದಿ: ಸಂಧ್ಯಾ ಉರಣ್‌ ಕರ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com