ಕುಮಾರಸ್ವಾಮಿಗೆ ಪ್ರಶಾಂತ್ ಕಿಶೋರ್ ಹಾಕಿರುವ ಷರತ್ತು ಏನು ಗೊತ್ತಾ?

ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿಯ ಅರವಿಂದ್ ಕೇಜ್ರಿವಾಲ್ ಗೆಲುವು, ಆಂಧ್ರ ಪ್ರದೇಶದಲ್ಲಿ ಜಗನ್‌ಮೋಹನ್ ರೆಡ್ಡಿ ಜಯಭೇರಿಯಿಂದ ಪ್ರೇರಣೆ ಪಡೆದಿರುವ ಜೆಡಿಎಸ್ ಶಾಸಕಾಂಗ ನಾಯಕ ಹೆಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ಪಕ್ಷವನ್ನು ಸಹ ಇದೇ ಹಾದಿಯಲ್ಲಿ ಕೊಂಡೊಯ್ಯಲು ರಾಜಕೀಯ ಚಾಣಾಕ್ಷ ಪ್ರಶಾಂತ್ ಕಿಶೋರ್ ಮೊರೆ ಹೋಗಿದ್ದಾರೆ. 
ಪ್ರಶಾಂತ್ ಕಿಶೋರ್ ಕುಮಾರಸ್ವಾಮಿ
ಪ್ರಶಾಂತ್ ಕಿಶೋರ್ ಕುಮಾರಸ್ವಾಮಿ

ಬೆಂಗಳೂರು: ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿಯ ಅರವಿಂದ್ ಕೇಜ್ರಿವಾಲ್ ಗೆಲುವು, ಆಂಧ್ರ ಪ್ರದೇಶದಲ್ಲಿ ಜಗನ್‌ಮೋಹನ್ ರೆಡ್ಡಿ ಜಯಭೇರಿಯಿಂದ ಪ್ರೇರಣೆ ಪಡೆದಿರುವ ಜೆಡಿಎಸ್ ಶಾಸಕಾಂಗ ನಾಯಕ ಹೆಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ಪಕ್ಷವನ್ನು ಸಹ ಇದೇ ಹಾದಿಯಲ್ಲಿ ಕೊಂಡೊಯ್ಯಲು ರಾಜಕೀಯ ಚಾಣಾಕ್ಷ ಪ್ರಶಾಂತ್ ಕಿಶೋರ್ ಮೊರೆ ಹೋಗಿದ್ದಾರೆ. 

ಆದರೆ ಪ್ರಶಾಂತ್ ಕಿಶೋರ್ ತಮ್ಮ ಸೇವೆ ಪಡೆಯಲು ಹಲವಾರು ಷರತ್ತುಗಳನ್ನು ಹಾಕಿದ್ದಾರೆ.

ಕೇಜ್ರಿವಾಲ್, ಜಗನ್ ಗೆ ರಾಜಕೀಯ ತಂತ್ರಗಾರಿಕೆ ರೂಪಿಸಿರುವ ಪ್ರಶಾಂತ್ ಕಿಶೋರ್ ಷರತ್ತುಗಳನ್ನು ಈಡೇರಿಸಲು ಕುಮಾರ ಸ್ವಾಮಿ ಅವರಿಗೆ ಸಾಧ್ಯವೇ ಎನ್ನುವ ಪ್ರಶ್ನೆ ರಾಜಕೀಯ ವಲಯವನ್ನು ಕಾಡುತ್ತಿದೆ.

ಅರವಿಂದ್ ಕೇಜ್ರಿವಾಲ್‌ ಅವರಂತೆ ಪಕ್ಷವನ್ನು ಗಟ್ಟಿಗೊಳಿಸಬೇಕೆಂದು ದೇವೇಗೌಡ ಜೋಷಾಗಿ ಹೇಳಿ ಅವರ ಸಲಹೆಯಂತೆ ಕುಮಾರಸ್ವಾಮಿ ದೆಹಲಿಯಲ್ಲಿ ಪ್ರಶಾಂತ್ ಕಿಶೋರ್ ನಡೆಸುತ್ತಿರುವ ಐ ಪ್ಯಾಕ್ (ಇಂಡಿಯನ್ ಪೊಲಿಟಿಕಲ್ ಆ್ಯಕ್ಷನ್ ಕಮಿಟಿ)ಗೆ ಭೇಟಿ ನೀಡಿದ್ದರು. 

ತೆನೆಹೊತ್ತ ಮಹಿಳೆಗೆ ಬಲತುಂಬಬೇಕು. 2023ರಲ್ಲಿ ಯಾರ ಬಲವೂ ಇಲ್ಲದೇ ಪಕ್ಷ ಅಧಿಕಾರಕ್ಕೆ ಬರವಂತೆ ಮಾಡಿ ಎಂದು ಕೋರಿದ್ದಾರೆ ಎನ್ನಲಾಗಿದೆ.

ಆದರೆ ಜೆಡಿಎಸ್‌ನ ಪೂರ್ವಾಪರ ಅರಿತಿರುವ ಪ್ರಶಾಂತ್ ಕಿಶೋರ್ ಪಕ್ಷದ ಸ್ಥಿತಿಗತಿ ಹಾಗೂ ಕುಟುಂಬದ ರಾಜಕೀಯ ಸ್ಥಿತಿಯನ್ನೂ ಲೆಕ್ಕಾ‌ಹಾಕಿದ್ದಾರೆ. ಚರ್ಚೆ ವೇಳೆ ಕುಮಾರಸ್ವಾಮಿಗೆ ಹಳೆಯ ಹಣೆಪಟ್ಟಿಯೇ ಅಡ್ಡಬಂದಿದೆ.

ದೆಹಲಿಯಲ್ಲಿ ಐದು ವರ್ಷ ಮಾಡಿದ ಕೆಲಸವನ್ನು ಹೇಗೆ ಜನರ ಮುಂದೆ ಪ್ರದರ್ಶಿಸಬೇಕು. ಬೂತ್ ಹಂತದ ವಿಷಯಗಳೇನು?. ಬೂತ್ ಅಂಕಿ ಅಂಶಗಳನ್ನು ನೋಡಿಕೊಂಡು, ಯಾವ ವಯೋಮಾನದವರು ಎಂಬುದನ್ನು ವೈಜ್ಞಾನಿಕವಾಗಿ ರಾಜಕೀಯವಾಗಿ ಅಧ್ಯಯನ ಮಾಡುವುದು ಹೇಗೆ ಎಂಬುದಕ್ಕೆ ಪ್ರಶಾಂತ್ ಕಿಶೋರ್ ಆಮ್ ಆದ್ಮಿಗೆ ರೂಪುರೇಷೆ ಹಾಕಿಕೊಟ್ಟಿದ್ದರು.

ಕಳೆದ 2014 ರಲ್ಲಿ ಗುಜರಾತ್ ಮಾದರಿಯನ್ನು ಪ್ರಶಾಂತ್ ಕಿಶೋರ್ ಅತ್ಯಂತ ವ್ಯವಸ್ಥಿತವಾಗಿ ಪ್ರತಿಬಿಂಬಿಸಿದ್ದರು. ಇನ್ನು ಬಿಹಾರದಲ್ಲಿ ಮಹಾಮೈತ್ರಿಯ ಕಾರ್ಯಸೂಚಿಯನ್ನು ಪ್ರಶಾಂತ್ ಕಿಶೋರ್ ಅತ್ಯಂತ ವ್ಯವಸ್ಥಿತವಾಗಿ ಪ್ರತಿಬಿಂಬಿಸಿದ್ದರು. ನಿತೀಶ್ ಕುಮಾರ್ ಗೆ ಒಂದು ಕಾಲದಲ್ಲಿ ಒಳ್ಳೆ ಕೆಲಸ ಮಾಡಿದ ವರ್ಚಸ್ಸಿತ್ತು. ಅದನ್ನು ಜನಕ್ಕೆ ತಲುಪಿಸುವ ಕೆಲಸವನ್ನು ಪ್ರಶಾಂತ್ ಕಿಶೋರ್ ಮಾಡಿದ್ದರು.

ಆದರೆ ಕರ್ನಾಟಕದ ಪ್ರಾದೇಶಿಕ ಪಕ್ಷ‌ ಜೆಡಿಎಸ್‌ಗೆ ನಿರ್ದಿಷ್ಟವಾದ ಯಾವ ಕಾರ್ಯಸೂಚಿ ಇಲ್ಲ. ಪ್ರಾದೇಶಿಕ ಪಕ್ಷ ಹಣೆಪಟ್ಟಿ ಇರುವುದು ಬಿಟ್ಟರೆ ವಾಸ್ತವವಾಗಿ ಪ್ರಬಲ ಪ್ರಾದೇಶಿಕ ಪಕ್ಷದ ನೆಲೆಯಾಗಿ ಜೆಡಿಎಸ್ ಗುರುತಿಸಿಕೊಂಡಿಲ್ಲ. ನಾಡಿನ ಸಮಸ್ಯೆಗಳಲ್ಲಿ ಮುಂಚೂಣಿಯಲ್ಲಿ ಗಟ್ಟಿಯಾಗಿ ಹೋರಾಟ ಮಾಡಿದ ಗಟ್ಟಿತನವೂ ಇಲ್ಲ. ಪ್ರಾದೇಶಿಕ ಅಸ್ಥಿತೆಯಡಿ, ಸೈದ್ಧಾಂತಿಕವಾಗಿ ಹೋರಾಟ ಮಾಡಿದ ಇತಿಹಾಸ ಹೊಂದಿಲ್ಲ.

ಜಗನ್‌ಮೋಹನ್ ರೆಡ್ಡಿ, ಕೇಜ್ರಿವಾಲ್‌ ಪಕ್ಷಕ್ಕೆ ರಾಜಕೀಯ ಇತಿಹಾಸ ಕಡಿಮೆ. ಆದರೆ ಇದು ಜೆಡಿಎಸ್‌ಗೆ ಇದೆ. ಜೆಡಿಎಸ್ ಈ ಹಿಂದೆ ಕಾಂಗ್ರೆಸ್‌ ಮತ್ತು ಬಿಜೆಪಿ ಜೊತೆ ಕೈಜೋಡಿಸಿತ್ತು. ಬಿಜೆಪಿಯ ಜೊತೆಯೂ ಕೈಜೋಡಿಸಿದ್ದರು. ಮತದಾರರಿಗೆ ಜೆಡಿಎಸ್‌ ಮೇಲೆ ಇನ್ನೂ ನಂಬಿಕೆಯಿಲ್ಲ.

ಪ್ರಾದೇಶಿಕ ಪಕ್ಷಕ್ಕೆ ಇರಬೇಕಾದ ಹೋರಾಟದ ಹಿನ್ನಲೆಯಾಗಲೀ ಗಟ್ಟಿ ನಿಲುವಾಗಲೀ ಜೆಡಿಎಸ್‌ ಗೆ ಇಲ್ಲವಾಗಿದೆ. ಸ್ಪಷ್ಟವಾದ ರಾಜಕೀಯ ಅಜೆಂಡಾವೇ ಜೆಡಿಎಸ್ ಗೆ ಇಲ್ಲವಾಗಿದೆ. ಜೆಡಿಎಸ್ ಇದೂವರೆಗೆ ಅನುಕೂಲ ಸಿಂಧು ರಾಜಕಾರಣ ಮಾಡಿದೆ ಎಂಬ ಭಾವನೆ ಮತದಾರರಲ್ಲಿದೆ.

ಸಾಲಮನ್ನಾ ಎನ್ನುವುದು ರಾಜಕೀಯವಾಗಲೀ ಪ್ರಾದೇಶಿಕ ವಿಷಯ ಅಲ್ಲ. ರೈತ ಪರವಾದ ಒಂದು ತೀರ್ಮಾನ. ಇದು ವಿಶಿಷ್ಟ ರಾಜಕೀಯ ಅಜೆಂಡಾ ಎನ್ನುವುದನ್ನು ಒತ್ತಿ ಹೇಳುವುದಕ್ಕೆ ಸಾಧ್ಯವಿಲ್ಲ. ಏಕೆಂದರೆ ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಕಾಲದಲ್ಲಿಯೂ ಸಾಲಮನ್ನಾ ಆಗಿತ್ತು.

ಬಹುತೇಕ ಎಲ್ಲಾ ಸರ್ಕಾರಗಳು ಒಂದಲ್ಲ ಒಂದು ರೈತಪರ ಯೋಜನೆ ರೂಪಿಸಿದ ಇತಿಹಾಸವೂ ಇದೆ. ಹೀಗಾಗಿ ಇದು ವಿಶೇಷವಲ್ಲ.
ಹೀಗಾಗಿ ಪ್ರಶಾಂತ್ ಕಿಶೋರ್ ಕುಮಾರಸ್ವಾಮಿಗೆ ತಮ್ಮದೇ ಆದ ರಾಜಕೀಯ‌ ನೀಲನಕ್ಷೆಯೊಂದನ್ನು ರೂಪಿಸುವಂತೆ ಸಲಹೆ ಮಾಡಿದ್ದಾರೆ.

ಜೆಡಿಎಸ್‌ದು ಕುಟುಂಬ ರಾಜಕಾರಣ ಬರಹಿಂಗ ಸತ್ಯ. ಜೆಡಿಎಸ್‌ಗೆ ಹೈಕಮಾಂಡ್ ದೇವೇಗೌಡರು, ಸೊಸೆ ಶಾಸಕಿ, ಇನ್ನೊಬ್ಬ ಪ್ರಭಾವಿ ನಾಯಕ ಹೆಚ್.ಡಿ.ರೇವಣ್ಣ ಮಗ, ಅಲ್ಲದೇ ಮೂರನೇ ತಲೆಮಾರಿನ ಮೊಮ್ಮಗ ಪ್ರಜ್ವಲ್ ಸಂಸದ. ಲೋಕಸಭಾ ಚುನಾವಣೆಯಲ್ಲಿ ಸ್ಥಾನ ಕಳೆದುಕೊಳ್ಳಲು ಈ ಕುಟುಂಬ ರಾಜಕಾರಣವೇ ಕಾರಣ ಎನ್ನುವುದು ಪ್ರಶಾಂತ್ ಕಿಶೋರ್ ಅಭಿಪ್ರಾಯವಾಗಿದೆ.

ಹೀಗಾಗಿ ಕುಟುಂಬ ರಾಜಕಾರಣ ವಿಷಯದಲ್ಲಿ ಜೆಡಿಎಸ್ ತನ್ನ ನಿಲುವು ಬದಲಾವಣೆ ಮಾಡಿಕೊಳ್ಳದ ಹೊರತು ಪಕ್ಷ ಸಂಘಟನೆ ಸಾಧ್ಯವಿಲ್ಲ. ಕುಟುಂಬ ರಾಜಕಾರಣ ಹೊರತುಪಡಿಸಿ ಜೆಡಿಎಸ್‌ಗೆ ಭವಿಷ್ಯ ಇಲ್ಲ ಎನ್ನುವುದು ಪ್ರಶಾಂತ್ ಕಿಶೋರ್ ಅಭಿಮತವಾಗಿದೆ.

ಆದರೆ ಮೂಲಗಳ ಪ್ರಕಾರ ಈ ಬಗ್ಗೆ ಮತ್ತೊಮ್ಮೆ‌ ಕುಮಾರ ಸ್ವಾಮಿ ಜತೆ ಚರ್ಚಿಸಲು ಏಪ್ರಿಲ್ ಬಳಿಕ‌ ಪ್ರಶಾಂತ್ ಕಿಶೋರ್ ಕರ್ನಾಟಕಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ.

ವಿಶೇಷ ವರದಿ:ಸಂಧ್ಯಾ ಉರಣ್‌ಕರ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com