ರಾಜಕೀಯ ಬೇರೆ, ಮನುಷ್ಯ ಸಂಬಂಧ ಬೇರೆ: ಯಡಿಯೂರಪ್ಪ ಅಭಿನಂದನಾ ಸಮಾರಂಭದಲ್ಲಿ ಸಿದ್ದರಾಮಯ್ಯ

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಹೋರಾಟಗಾರರಾಗಿದ್ದು, ಹೋರಾಟದ ಹಾದಿಯಿಂದ ಬಂದವರಿಗೆ ಮಾತ್ರ ಜನರ ಬದುಕು ಅರ್ಥವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬಣ್ಣಿಸಿದ್ದಾರೆ.
ಯಡಿಯೂರಪ್ಪ ಜನ್ಮ ದಿನದ ಅಭಿನಂದನಾ ಸಮಾರಂಭದಲ್ಲಿ ಸಿದ್ದರಾಮಯ್ಯ
ಯಡಿಯೂರಪ್ಪ ಜನ್ಮ ದಿನದ ಅಭಿನಂದನಾ ಸಮಾರಂಭದಲ್ಲಿ ಸಿದ್ದರಾಮಯ್ಯ

ಬೆಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಹೋರಾಟಗಾರರಾಗಿದ್ದು, ಹೋರಾಟದ ಹಾದಿಯಿಂದ ಬಂದವರಿಗೆ ಮಾತ್ರ ಜನರ ಬದುಕು ಅರ್ಥವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬಣ್ಣಿಸಿದ್ದಾರೆ.

ನಗರದ ಅರಮನೆ ಆವರಣದಲ್ಲಿ ನಡೆದ ಯಡಿಯೂರಪ್ಪ ಜನ್ಮ ದಿನದ ಅಭಿನಂದನಾ ಸಮಾರಂಭದಲ್ಲಿ ಯಡಿಯೂರಪ್ಪ ಕುರಿತ ಕಾಫಿಟೇಬಲ್ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ರಾಜಕೀಯ ಬೇರೆ ಹಾಗೂ ಮನುಷ್ಯ ಸಂಬಂಧಗಳು ಬೇರೆ. ನಾವು ಎಷ್ಟೇ ದೀರ್ಘಕಾಲ ರಾಜಕೀಯದಲ್ಲಿದ್ದರೂ, ಪರಸ್ಪರ ವಿರೋಧ ವ್ಯಕ್ತಮಾಡುತ್ತಿದ್ದರೂ ಮನುಷ್ಯ ಸಂಬಂಧಗಳಿಗೆ ಧಕ್ಕೆ ಬರಬಾರದು ಎಂದರು.

"ನನ್ನ ಸಿದ್ದಾಂತ ಬೇರೆ. ಯಡಿಯೂರಪ್ಪ ಸಿದ್ದಾಂತ ಬೇರೆಯಾಗಿದೆ. ಆದರೆ, ಅದು ಕೇವಲ ರಾಜಕಾರಣಕ್ಕೆ ಸೀಮಿತ ನಮ್ಮ ನಮ್ಮ ಸಿದ್ದಾಂತವನ್ನು ಜನರ ಮುಂದಿಡುತ್ತೇವೆ. ಜನರು ಅಂತಿಮ ತೀರ್ಮಾನ ಮಾಡುತ್ತಾರೆ. ಇದರಿಂದ ವೈಯಕ್ತಿಕ ಸಂಬಂಧಕ್ಕೆ ಯಾವುದೇ ಸಮಸ್ಯೆ ಆಗಬಾರದು" ಎಂದು ಸಿದ್ದರಾಮಯ್ಯ ಹೇಳಿದರು.

ರಾಜಕೀಯ ನಮ್ಮನ್ನು ಕೈಬೀಸಿ ಕರೆಯುವುದಿಲ್ಲ. ರಾಜಕೀಯದಲ್ಲಿ ಹೋರಾಟ ಇದ್ದೇ ಇರುತ್ತದೆ. ಹೋರಾಟದ ಬದುಕು ಬದಲಾವಣೆಗೆ ಪ್ರೇರಣೆಯಾಗುತ್ತದೆ ಎಂದರು.

ದೀರ್ಘಕಾಲದಿಂದ ಯಡಿಯೂರಪ್ಪ ರಾಜಕಾರಣದಲ್ಲಿದ್ದು, ಅವರಿಗೆ ಇಡೀ ರಾಜ್ಯದ ಚಿತ್ರಣ ಗೊತ್ತಿದೆ. ಇಂತಹ ಅರಿವು ಕೆಲವರಲ್ಲಿ ಮಾತ್ರ ಇರುತ್ತದೆ. ಅದರಲ್ಲಿ ಯಡಿಯೂರಪ್ಪ ಸಹ ಒಬ್ಬರು. ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಯಡಿಯೂರಪ್ಪ ಶ್ರಮ ಸಹ ಪ್ರಮುಖವಾದದ್ದು, ಇದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ ಎಂದರು.

ಯಡಿಯೂರಪ್ಪ ಅವರು 100 ವರ್ಷಕ್ಕಿಂತ ಹೆಚ್ಚು ದಿನ ಆರೋಗ್ಯವಾಗಿ ಬದುಕಲಿ. ಅವರು ಮುಖ್ಯಮಂತ್ರಿ ಹುದ್ದೆಯ ಒತ್ತಡ ನಿಭಾಯಿಸುವ ಶಕ್ತಿ ಪಡೆಯಲಿ ಎಂದು ಸಿದ್ದರಾಮಯ್ಯ ಹಾರೈಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com