ಗೌಡರ ಕುಟುಂಬಕ್ಕೆ ಸಾವಿರಾರು ಕೋಟಿ ರೂ. ಹೇಗೆ ಬಂತು; ರಮೇಶ್ ಕುಮಾರ್ ಸತ್ಯಹರಿಶ್ಚಂದ್ರನ 19ನೇ ಸಂತತಿ: ಯತ್ನಾಳ್
ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಸ್ವಾತಂತ್ರ್ಯ ಹೋರಾಟ ಮಾಡುತ್ತಿದ್ದ ಸಮಯದಲ್ಲಿ ಯತ್ನಾಳ್ ಹುಟ್ಟಿದ್ದರೋ ಇಲ್ಲವೋ ಎಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.
Published: 29th February 2020 08:57 AM | Last Updated: 29th February 2020 01:58 PM | A+A A-

ದೇವೇಗೌಡ ಮತ್ತು ರಮೇಶ್ ಕುಮಾರ್
ಚಿತ್ರದುರ್ಗ: ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಸ್ವಾತಂತ್ರ್ಯ ಹೋರಾಟ ಮಾಡುತ್ತಿದ್ದ ಸಮಯದಲ್ಲಿ ಯತ್ನಾಳ್ ಹುಟ್ಟಿದ್ದರೋ ಇಲ್ಲವೋ ಎಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ದೊರೆಸ್ವಾಮಿ ಹೋರಾಟದ ಸಮಯದಲ್ಲಿ ಕುಮಾರಸ್ವಾಮಿ ಎಲ್ಲಿ ಹುಟ್ಟಿದ್ದರು? ಯಾರು ಕೂಳಿಗೆ ಗತಿ ಇಲ್ಲವೋ ಅವರು ಸೇನೆಗೆ ಸೇರುತ್ತಾರೆ ಎಂದು ಕುಮಾರ ಸ್ವಾಮಿ ಸೈನಿಕರಿಗೆ ಅಪಮಾನ ಮಾಡಿದ್ದರು. ಇಂತಹವರು ನನಗೆ ರಾಷ್ಟ್ರಪ್ರೇಮದ ಬಗ್ಗೆ ಪಾಠ ಮಾಡುತ್ತಾರೆ. ಇವರಿಗೆ ನಾಚಿಕೆ ಆಗಬೇಕು ಎಂದರು.
ನೀವು ಯಾಕೆ ರಾಜಕಾರಣಕ್ಕೆ ಬಂದಿದ್ದು ಯಾವ ಉದ್ದೇಶದಿಂದ, ರಾಜಕಾರಣಕ್ಕೆ ಬರಲು ನಿಮ್ಮ ಮೂಲ ಯಾವುದು?. ನಿಮ್ಮ ತಂದೆ ದೇವೇಗೌಡರು ವರ್ಕ್ ಇನ್ಸ್ ಪೆಕ್ಟರ್ ಆಗಿದ್ದವರು, ಹೀಗಿರುವಾಗ ನಿಮಗೆ ಸಾವಿರಾರು ಕೋಟಿ ಹೇಗೆ ಬಂತು? ನನ್ನ ಬಗ್ಗೆ ಮಾತನಾಡಲು ನಿಮಗೆ ನೈತಿಕತೆ ಎಲ್ಲಿದೆ?. ಎಂದು ಪ್ರಶ್ನಿಸಿದರು.
'ನಾಥೂರಾಮ್ ಗೋಡ್ಸೆ ಸಂತತಿಯ ಯತ್ನಾಳ್ ಸದನದಲ್ಲಿರಲು ನಾಲಾಯಕ್' ಎಂದು ಟೀಕಿಸಿದ್ದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ. ರಮೇಶ್ ಕುಮಾರ್ ಸತ್ಯಹರಿಶ್ಚಂದ್ರನ 19ನೇ ಸಂತತಿ. ಅವರ ಇತಿಹಾಸ, ಹಗರಣ ನಮಗೂ ಗೊತ್ತಿದೆ ಎಂದು ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.