ರೈತರ ಸಾಲ ಮನ್ನಾ ಯೋಜನೆಗೆ ತಿಲಾಂಜಲಿ: ಕುಮಾರಸ್ವಾಮಿ ಆರೋಪಕ್ಕೆ ಯಡಿಯೂರಪ್ಪ ಸ್ಪಷ್ಟನೆ

ರೈತರ ಸಾಲ ಮನ್ನಾ' ಯೋಜನೆಗೆ ತಿಲಾಂಜಲಿ ಇಡಲು ಬಿಜೆಪಿ ಸರ್ಕಾರ ಅಡ್ಡ ದಾರಿ ತುಳಿಯುತ್ತಿರುವುದು ಖಂಡನೀಯ. ರೈತರ ಬಾಳಿಗೆ ರಾಜ್ಯ ಬಿಜೆಪಿ ಸರ್ಕಾರ ಕೊಳ್ಳಿ ಇಡಲು ಮುಂದಾಗಿದೆ. ದಾಖಲೆಗಳ ನೆಪವೊಡ್ಡಿ ಸಾಲ ಮನ್ನಾ ಯೋಜನೆಯಿಂದ ಒಂದು ಲಕ್ಷಕ್ಕೂ ಹೆಚ್ಚು ರೈತರನ್ನು ಕೈ ಬಿಡುವ ಮೂಲಕ ಬಿಜೆಪಿ ಸರ್ಕಾರ ರೈತರಿಗೆ ದೋಖಾ ಮಾಡುತ್ತಿದೆ.
ಯಡಿಯೂರಪ್ಪ ಮತ್ತು ಕುಮಾರಸ್ವಾಮಿ
ಯಡಿಯೂರಪ್ಪ ಮತ್ತು ಕುಮಾರಸ್ವಾಮಿ

ಬೆಂಗಳೂರು: ರೈತರ ಸಾಲ ಮನ್ನಾ' ಯೋಜನೆಗೆ ತಿಲಾಂಜಲಿ ಇಡಲು ಬಿಜೆಪಿ ಸರ್ಕಾರ ಅಡ್ಡ ದಾರಿ ತುಳಿಯುತ್ತಿರುವುದು ಖಂಡನೀಯ. ರೈತರ ಬಾಳಿಗೆ ರಾಜ್ಯ ಬಿಜೆಪಿ ಸರ್ಕಾರ ಕೊಳ್ಳಿ ಇಡಲು ಮುಂದಾಗಿದೆ. 

ದಾಖಲೆಗಳ ನೆಪವೊಡ್ಡಿ ಸಾಲ ಮನ್ನಾ ಯೋಜನೆಯಿಂದ ಒಂದು ಲಕ್ಷಕ್ಕೂ ಹೆಚ್ಚು ರೈತರನ್ನು ಕೈ ಬಿಡುವ ಮೂಲಕ ಬಿಜೆಪಿ ಸರ್ಕಾರ ರೈತರಿಗೆ ದೋಖಾ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

ಸಾಲ ಮನ್ನಾ ಬಗ್ಗೆ ಬೇಜವಾಬ್ದಾರಿತನದಿಂದ ವರ್ತಿಸುತ್ತಿರುವ ಬಿಜೆಪಿ ಸರ್ಕಾರದ ವಿರುದ್ಧ ಅಧಿವೇಶನದಲ್ಲಿ ಧ್ವನಿ ಎತ್ತುತ್ತೇನೆ. ರೈತರ ಪರವಾಗಿ ನಿಲ್ಲುತ್ತೇನೆ ಎಂದು ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ.

ಸಾಲ ಮನ್ನಾದ ಬಗ್ಗೆ ಬಿಜೆಪಿಯ ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ನಾನು ಮುಖ್ಯಮಂತ್ರಿ ಆಗಿದ್ದಾಗ ಮೀಸಲಿಟ್ಟಿದ್ದ ಇಪ್ಪತ್ತೈದು ಸಾವಿರ ಕೋಟಿ ರೂಪಾಯಿಗಳ ಹಣವನ್ನು ಬಿಜೆಪಿ ಸರ್ಕಾರ ಬೇರೆಡೆಗೆ ವರ್ಗಾಯಿಸಿದೆ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಿಂದಲೂ ರಾಜ್ಯದ ಒಂದು ಲಕ್ಷದ ಐವತ್ತ್ಮೂರು ಸಾವಿರ ರೈತರಿಗೆ ವಂಚಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ರೈತರ ಸಾಲ ಮನ್ನಾ ವಿಷಯವಾಗಿ ಕೆಲವು ಊಹಾಪೋಹಗಳು ಹರಿದಾಡುತ್ತಿದ್ದು, ರೈತರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗಬಾರದು ಎಂದು ಮುಖ್ಯಮಂತ್ರಿ  ಯಡಿಯೂರಪ್ಪ ಮನವಿ ಮಾಡಿದ್ದಾರೆ.

ರೈತರಿಗೆ ಅನ್ಯಾಯವಾಗಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಸೂಕ್ತ ದಾಖಲೆ ಸಲ್ಲಿಸುವ ಎಲ್ಲ ರೈತರ ಸಾಲ ಮನ್ನಾ ಆಗಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಟ್ವೀಟ್  ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com