ಮೇಲ್ಮನೆ ಚುನಾವಣೆ: ಬಿಜೆಪಿಯ ಬಾಗಲಕೋಟೆ ಮುಖಂಡರಿಗೂ ಸಿಗಲಿದೆಯಾ ಅವಕಾಶ?

ಬರೋಬ್ಬರಿ ಡಜನ್‌ಗೂ ಹೆಚ್ಚು ಮೇಲ್ಮನೆ ಸ್ಥಾನಗಳು ಮುಂಬರುವ ಜೂನ್‌ನಲ್ಲಿ ಖಾಲಿಯಾಗಲಿದ್ದು, ಹೀಗೆ ಖಾಲಿಯಾಗುವ ಸ್ಥಾನಗಳ ಪೈಕಿ ಜಿಲ್ಲೆಯ ಬಿಜೆಪಿ ಹಿರಿಯ ಮುಖಂಡರಿಗೆ ಏನಾದರೂ ಅವಕಾಶ ಸಿಕ್ಕಬಹುದಾ ಎನ್ನುವ ಕುತೂಹಲ ಈಗಲೇ ಆರಂಭಗೊಂಡಿದೆ.
ಪಿಎಚ್ ಪೂಜಾರ್-ಆರ್ ಎಸ್ ತಳೇವಾಡ್
ಪಿಎಚ್ ಪೂಜಾರ್-ಆರ್ ಎಸ್ ತಳೇವಾಡ್

ಬಾಗಲಕೋಟೆ: ಬರೋಬ್ಬರಿ ಡಜನ್‌ಗೂ ಹೆಚ್ಚು ಮೇಲ್ಮನೆ ಸ್ಥಾನಗಳು ಮುಂಬರುವ ಜೂನ್‌ನಲ್ಲಿ ಖಾಲಿಯಾಗಲಿದ್ದು, ಹೀಗೆ ಖಾಲಿಯಾಗುವ ಸ್ಥಾನಗಳ ಪೈಕಿ ಜಿಲ್ಲೆಯ ಬಿಜೆಪಿ ಹಿರಿಯ ಮುಖಂಡರಿಗೆ ಏನಾದರೂ ಅವಕಾಶ ಸಿಕ್ಕಬಹುದಾ ಎನ್ನುವ ಕುತೂಹಲ ಈಗಲೇ ಆರಂಭಗೊಂಡಿದೆ.

ಬಾಗಲಕೋಟೆ ಜಿಲ್ಲೆ ಬಿಜೆಪಿ ಪಾಲಿನ ಭದ್ರಕೋಟೆಯಾಗಿದ್ದು, ಅರವಿಂದ ಲಿಂಬಾವಳಿ ಬಳಿಕ ಜಿಲ್ಲೆಯಿಂದ ಮೇಲ್ಮನೆ ಸದಸ್ಯರಾಗಿ ನಾರಾಯಣಸಾ ಭಾಂಡಗೆ ನೇಮಕಗೊಂಡಿದ್ದರು. ಅದಾದ ಬಳಿಕ ಜಿಲ್ಲೆಯ ಯಾವ ಮುಖಂಡರೂ ಮೇಲ್ಮನೆಗೆ ಸದಸ್ಯರಾಗಿಲ್ಲ. ಸದ್ಯ ಎಚ್.ಆರ್. ನಿರಾಣಿ ಮೇಲ್ಮನೆ ಸದಸ್ಯರಾಗಿದ್ದರೂ ಅವರು ಪದವಿಧರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

ಮುಂಬರುವ ಜೂನ್‌ನಲ್ಲಿ ಖಾಲಿಯಾಗುತ್ತಿರುವ ಡಜನ್‌ಗೂ ಹೆಚ್ಚು ಸ್ಥಾನಗಳಲ್ಲಿ ಜಿಲ್ಲೆಗೆ ಒಂದಾದರೂ ಅವಕಾಶ ಸಿಕ್ಕುವ ಸಾಧ್ಯತೆಗಳು ನಿಚ್ಚಳವಾಗಿರುವ ಹಿನ್ನೆಲೆಯಲ್ಲಿ ಈಗಲೇ ಪಕ್ಷದ ಹಿರಿಯ ಮುಖಂಡರು ಮೇಲ್ಮನೆಗೆ ನಾಮಕರಣಗೊಳ್ಳಲು ಪಕ್ಷದ ಹಿರಿಯ ನಾಯಕರ ದುಂಬಾಲು ಬಿದ್ದಿದ್ದಾರೆ. ಮೇಲ್ಮನೆ ಸ್ಥಾನಕ್ಕಾಗಿ ಜಿಲ್ಲಾ ಬಿಜೆಪಿಯಲ್ಲಿ ಸದ್ಯ ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ  ಆರ್.ಎಸ್. ತಳೇವಾಡ, ಮಾಜಿ ಶಾಸಕರಾದ ಪಿ.ಎಚ್. ಪೂಜಾರ್, ಎಂ.ಕೆ. ಪಟ್ಟಣಶೆಟ್ಟಿ ಹೆಸರುಗಳು ಪ್ರಮುಖವಾಗಿ ಕೇಳಿ ಬರುತ್ತಿವೆ.

ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಮುಧೋಳ ಮೀಸಲು ಕ್ಷೇತ್ರದಿಂದ ಐದನೇ ಬಾರಿಗೆ ಆಯ್ಕೆಗೊಂಡು ಸದ್ಯ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಂಪುಟದಲ್ಲಿ ಪ್ರಭಾವಿ ಉಪಮುಖ್ಯಮಂತ್ರಿಯಾಗಿ ಹೊರ ಹೊಮ್ಮಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಇಷ್ಟೊಂದು ಗಟ್ಟಿಯಾಗಿ ನೆಲೆಯೂರಲು ಮುಧೋಳ ಕ್ಷೇತ್ರದಲ್ಲಿ ಕಾರಣರಾದವರ ಪೈಕಿ ಆರ್.ಎಸ್. ತಳೇವಾಡ ಪ್ರಮುಖರು ಎನ್ನುವುದು ಸರ್ವವಿಧಿತವಾಗಿದೆ. ಮುಧೋಳ ಮೀಸಲು ಕ್ಷೇತ್ರವಾಗಿರುವುದರಿಂದ ಅವರು ವಿಧಾನಸಭೆಗೆ ಸ್ಪರ್ಧಿಸಲು ಸಾಧ್ಯವೇ ಇಲ್ಲ ಎನ್ನುವ ಸ್ಥಿತಿ ಇದ್ದು, ಇಷ್ಟು ಹೊತ್ತಿಗಾಗಲೇ ಅವರು ಮೇಲ್ಮನೆ ಸದಸ್ಯರಾಗಿರಬೇಕಿತ್ತು. ಮೇಲ್ಮನೆ ಪ್ರವೇಶಕ್ಕೆ ಕೆಲವು ಬಾರಿ ಪ್ರಯತ್ನಿಸಿದ್ದರೂ ಪ್ರಯೋಜನವಾಗಿಲ್ಲ.

ಈ ಬಾರಿಯಾದರೂ ತಳೇವಾಡ ಅವರು ಕೆಳಮನೆಯಿಂದ ಮೇಲ್ಮನೆಗೆ ಆಯ್ಕೆಗೊಳ್ಳುತ್ತಾರೋ ಹೇಗೆ ಎನ್ನುವುದು ಕಾತರದ ಸಂಗತಿಯಾಗಿದೆ. ಡಿಸಿಎಂ ಗೋವಿಂದ ಕಾರಜೋಳ ಈ ನಿಟ್ಟಿನಲ್ಲಿ ಹೇಗೆ ಪ್ರಯತ್ನ ಮಾಡುತ್ತಾರೆ ಎನ್ನುವುದರ ಮೇಲೆ ಎಲ್ಲವೂ ಅವಲಂಭಿಸಿದೆ. ಕಾರಜೋಳರ ರಾಜಕೀಯ ಬೆಳವಣಿಗೆ ಹಿಂದೆ ತಳೇವಾಡದ ಪಾತ್ರವಿದೆ. ಹಾಗಾಗಿ ಕಾರಜೋಳರು ಅವರನ್ನು ಮೇಲ್ಮನೆಗೆ ಕಳುಹಿಸಲು ಪಕ್ಷದಲ್ಲಿ ಎಷ್ಟರ ಮಟ್ಟಿಗೆ ಪ್ರಯತ್ನಿಸುತ್ತಾರೆ ಎನ್ನುವುದು ಮುಖ್ಯವಾಗಿದ್ದು, ಬಿಜೆಪಿಯಿಂದ 9 ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಮೇಲ್ಮನೆಗೆ ಆಯ್ಕೆಗೊಳ್ಳಲು ಸಾಧ್ಯವಿದೆ. ಹಾಗಾಗಿ ತಳೇವಾಡರನ್ನು ಮೇಲ್ಮನೆಗೆ ಆಯ್ಕೆ ಮಾಡುವಲ್ಲಿ ಕಾರಜೋಳರು ಹೇಗೆ ಪ್ರಯತ್ನಿಸುತ್ತಾರೆ ಎನ್ನುವುದು ಕುತೂಹಲದ ಸಂಗತಿ ಆಗಿದೆ. ಈ ಬಾರಿಯಾದರೂ ತಳೇವಾಡರನ್ನು ಆಯ್ಕೆ ಮಾಡುವ ಮೂಲಕ ಕಾರಜೋಳರು ತಮ್ಮ ಮೇಲಿರುವ ರಾಜಕೀಯ ಋಣ ತೀರಿಸುವ ಕೆಲಸ ಮಾಡುತ್ತಾರೋ ಹೇಗೆ ಎನ್ನುವ ಮಾತು ಜಿಲ್ಲಾ ರಾಜಕಾರಣದಲ್ಲಿ ಓಡಾಡುತ್ತಿದೆ.

ಮೇಲ್ಮನೆ ಸ್ಥಾನಕ್ಕಾಗಿ ಜಿಲ್ಲೆಯಲ್ಲಿ ಮಂಚೂಣಿಯಲ್ಲಿರುವ ಮತ್ತೊಂದು ಹೆಸರು ಮಾಜಿ ಶಾಸಕ ಪಿ.ಎಚ್. ಪೂಜಾರ್, 2004ರ ವಿಧಾನಸಭೆ ಚುನಾವಣೆ ವೇಳೆ ನಡೆದ ರಾಜಕೀಯ ವಿದ್ಯಮಾನಗಳಲ್ಲಿ ಬಿಜೆಪಿ ತೊರದ ಇವರು ಈಗಲೂ ರಾಜಕೀಯ ಅಜ್ಞಾತ ಅನುಭವಿಸುತ್ತಿದ್ದಾರೆ. ರಾಜಕೀಯವಾಗಿ ಮೂಂಚೂಣಿಯಲ್ಲಿಲ್ಲದಿದ್ದರೂ ಇದುವರೆಗಿನ ಚುನಾವಣೆಗಳಲ್ಲಿ ಇತರರ ಗೆಲುವಿಗೆ ಪ್ರಮುಖ ಕಾರಣಿಕರ್ತರಾಗಿದ್ದಾರೆ. ಮತ್ತೊಬ್ಬರನ್ನು ಗೆಲ್ಲಿಸುವುದರಲ್ಲೆ ತೃಪ್ತಿ ಪಟ್ಟುಕೊಂಡಿರುವ ಇವರು 2004 ರಲ್ಲಿ ಬಿಜೆಪಿ ಬಿಟ್ಟ ಬಳಿಕ 2018ರ ಚುನಾವಣೆ ವೇಳೆ ಮರಳಿ ಗೂಡು ಸೇರಿದ್ದು, ರಾಜ್ಯ ಮಟ್ಟದ ಬಿಜೆಪಿ ನಾಯಕರೊಂದಿಗೆ ಇಂದಿಗೂ ಗಟ್ಟಿ ಸಂಬಂಧ ಇಟ್ಟುಕೊಂಡವರು. ಬಿಎಸ್‌ವೈ ಆಪ್ತರಲ್ಲೊಬ್ಬರು. ಪಕ್ಷವನ್ನು ಬೇರುಮಟ್ಟದಿಂದ ಕಟ್ಟಿದವರಲ್ಲಿ ಇವರೂ ಒಬ್ಬರಾಗಿದ್ದಾರೆ. ಇದೀಗ ಮೇಲ್ಮನೆ ಪ್ರವೇಶಕ್ಕೆ ಪ್ರಯತ್ನ ನಡೆಸಿದ್ದಾರೆ. ಜಿಲ್ಲೆಯಿಂದ ಒಬ್ಬರನ್ನು ಆಯ್ಕೆ ಮಾಡಬೇಕು ಎನ್ನುವುದಾದಲ್ಲಿ ತಳೇವಾರ ಮತ್ತು ಪೂಜಾರಿ ಅವರ ನಡುವೆ ಪೈಪೋಟಿ ತೀವ್ರಗೊಳ್ಳಲಿದೆ.

ಏತನ್ಮಧ್ಯೆ ಪಕ್ಷ ಸಂಘಟನೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿರುವ ಮೇಲ್ಮನೆ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ ಇನ್ನೊಮ್ಮೆ ಮೇಲ್ಮನೆ ಪ್ರವೇಶಕ್ಕೆ ಪ್ರಯತ್ನ ಆರಂಭಿಸಿದ್ದಾರೆ. ಬಿಜೆಪಿ ಮತ್ತೊಂದು ಅವಕಾಶ ನೀಡುವುದೋ ಹೇಗೆ ಎನ್ನುವುದು ಸ್ಪಷ್ಟಗೊಳ್ಳಲು ಇನ್ನೂ ಸಾಕಷ್ಟು ಸಮಯ ಹಿಡಿಯಲಿದ್ದು, ಜೋರು ಪ್ರಯತ್ನ ನಡೆಸಿದ್ದಾರೆ. ಉಭಯತರ ಜತೆಗೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿ. ಶ್ರೀರಾಮುಲು ಅವರ ಸ್ಪರ್ಧೆಗೆ ಬಾದಾಮಿ ಕ್ಷೇತ್ರವನ್ನು ಬಿಟ್ಟುಕೊಟ್ಟಿರುವ ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಬಸಲಿಂಗಪ್ಪ ನಾವಲಗಿ, ಬಸವೇಶ್ವರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಹಾಗೂ ಬಿಟಿಡಿಎ ಮಾಜಿ ಸಭಾಪತಿ ಪ್ರಕಾಶ ತಪಶೆಟ್ಟಿ, ಜಿ.ಎನ್.ಪಾಟೀಲರ ಹೆಸರುಗಳು ಓಡಾಡುತ್ತಿವೆ.

ಬಿಜೆಪಿ ಪಾಳೆಯದಲ್ಲಿ ಈಗಲೇ ಅನೇಕ ಹೆಸರುಗಳು ಮುನ್ನೆಲೆಗೆ ಬಂದಿದ್ದು, ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ. ಬಿಜೆಪಿಯಿಂದ ಮೇಲ್ಮನೆ ಪ್ರವೇಶಕ್ಕೆ ಜಿಲ್ಲೆಯವರಿಗೆ ಅವಕಾಶ ಸಿಕ್ಕುವುದು ಪಕ್ಕಾ ಆದಲ್ಲಿ ತಳೇವಾಡ ಮತ್ತು ಪೂಜಾರ ಅವರಲ್ಲಿಬ್ಬರಲ್ಲಿ ಒಬ್ಬರ ಪ್ರವೇಶ ಖಚಿತ ಎಂದು ಬಿಜೆಪಿ ಕಾರ್ಯಕರ್ತರು ಅಭಿಪ್ರಾಯ ಪಡುತ್ತಿದ್ದಾರೆ.

ವರದಿ: ವಿಠ್ಠಲ ಆರ್. ಬಲಕುಂದಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com