ಯೇಸು ಪ್ರತಿಮೆ: ಭಕ್ತನಿಗೂ ಭಗವಂತನಿಗೂ ಬಿಟ್ಟ ವಿಚಾರ - ಡಿ.ಕೆ. ಶಿವಕುಮಾರ್

ಯೇಸು ಪ್ರತಿಮೆ ನಿರ್ಮಾಣಕ್ಕೆ ಕೈಲಾದಷ್ಟು ಸಹಾಯ ಮಾಡಿದ್ದೇನೆ. ದೇವರ ಪ್ರತಿಮೆ ನಿರ್ಮಾಣ ಎನ್ನುವುದು ಭಕ್ತನಿಗೂ ದೇವರಿಗೂ ಬಿಟ್ಟ ವಿಚಾರ ಎಂದು ಮಾಜಿ ಸಚಿವ...
ಡಿ ಕೆ ಶಿವಕುಮಾರ್
ಡಿ ಕೆ ಶಿವಕುಮಾರ್

ಬೆಂಗಳೂರು: ಯೇಸು ಪ್ರತಿಮೆ ನಿರ್ಮಾಣಕ್ಕೆ ಕೈಲಾದಷ್ಟು ಸಹಾಯ ಮಾಡಿದ್ದೇನೆ. ದೇವರ ಪ್ರತಿಮೆ ನಿರ್ಮಾಣ ಎನ್ನುವುದು ಭಕ್ತನಿಗೂ ದೇವರಿಗೂ ಬಿಟ್ಟ ವಿಚಾರ ಎಂದು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಮಾರ್ಮಿಕವಾಗಿ ಹೇಳಿದ್ದಾರೆ.

ಗುರುವಾರ ತಮ್ಮ ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಯೇಸು ಪ್ರತಿಮೆಯನ್ನು ಎರಡು  ವರ್ಷಗಳ ಹಿಂದೆಯೇ ಕಟ್ಟಲು ಹೋದಾಗ ಕಮಿಟಿಯವರನ್ನು ತಡೆದು ಕಾನೂನುಬದ್ಧವಾಗಿ ಮಾಡುವಂತೆ ಮಾರ್ಗದರ್ಶನ ನೀಡಿ ತಮ್ಮ ಕೈಲಾದ ಸಹಾಯ ಮಾಡಿದ್ದೇನೆ. ಉಳಿದದ್ದು ಭಕ್ತನಿಗೂ ಹಾಗೂ ಭಗವಂತನಿಗೆ ಬಿಟ್ಟ ವಿಚಾರ. ಬಿಜೆಪಿಯವರು ಏನು ಬೇಕೋ ಅದನ್ನು ಮಾಡಿಕೊಳ್ಳಲಿ ಎಂದರು.

ರಾಜ್ಯದಲ್ಲಿನ ಘಟನೆಗಳು ರಾಜಕೀಯ ನಡವಳಿಕೆಗಳ ಬಗ್ಗೆ ರಾಜ್ಯದ ಜನರಷ್ಟೇ ಅಲ್ಲದೇ ಅಂತಾರಾಷ್ಟ್ರೀಯ  ಮಟ್ಟದಲ್ಲಿಯೂ ಜನರು ಗಮನಹರಿಸುತ್ತಿದ್ದಾರೆ. ವಿಶ್ವಕ್ಕೆ ಬಸವ ತತ್ವವನ್ನು ಸಾರಬೇಕು  ಎಂದು ಹೇಳಿರುವ ನಾವುಗಳೇ ಅದನ್ನು ಪಾಲಿಸದಿದ್ದರೆ ಹೇಗೆ? ಎಂದು ಬಿಜೆಪಿ ನಾಯಕರಿಗೆ  ತಿರುಗೇಟು ನೀಡಿದರು.

ಸಚಿವ ಅಶೋಕ ಚಕ್ರವರ್ತಿಗೆ ಈಗ ಅಧಿಕಾರ ಇದೆ. ಅಧಿಕಾರ ಇದ್ದಾಗ ಒಳ್ಳೆಯ ಕೆಲಸಗಳನ್ನು ಮಾಡಬೇಕು. ಆದರೆ ಯೇಸು ಪ್ರತಿಮೆ ವಿಚಾರದಲ್ಲಿ ನಮ್ಮ ಅಶೋಕ  ಚಕ್ರವರ್ತಿ ಸಾಹೇಬರು ಸಚಿವರಾದ ಅಶ್ವಥ್ ನಾರಾಯಣ್, ಈಶ್ವರಪ್ಪ, ರೇಣುಕಾಚಾರ್ಯ ತಮ್ಮ  ಮನಸಿಗೆ ಬಂದಂತೆ  ಹೇಳಿಕೆ ನೀಡುತ್ತಿದ್ದಾರೆ. ಅವರು ಏನುಬೇಕಾದ್ರೂ ಹೇಳಿಕೊಳ್ಳಲಿ. ಮಾತನಾಡುವವರಿಗೆ ಬೇಡಾ ಎನ್ನಲು ಸಾಧ್ಯವೇ? ಎಂದು ಹೇಳಿದ ಶಿವಕುಮಾರ್, ಬಿಜೆಪಿಗೆ ಅಧಿಕಾರ ಇದೆ. ಅದನ್ನು ಅವರು ಒಳ್ಳೆಯದಕ್ಕಾದರೂ ಬಳಸಬಹುದು, ಕೆಟ್ಟದಕ್ಕಾದರೂ ಬಳಸಬಹುದು. ಅದರ ಬಗ್ಗೆ ತಾವು ತಲೆಕೆಡಿಸಿಕೊಳ್ಳುವುದಿಲ್ಲ ಎಂದರು.

ಯೇಸು ಪ್ರತಿಮೆ ನಿರ್ಮಿಸಲು  ಉದ್ದೇಶಿಸಿದ್ದ ಜಾಗಕ್ಕೆ ಅನೇಕ ವರ್ಷಗಳ ಚರಿತ್ರೆ ಇದೆ. ಅಲ್ಲಿ ಯೇಸುವಿನ ವಿಗ್ರಹ,  ಶಿಲುಬೆ ಎಲ್ಲವೂ ಬಹಳ ಹಿಂದಿನಿಂದಲೂ ಇವೆ. ಅಲ್ಲಿನ ಜನ ಪೂಜೆ ಮಾಡಿಕೊಂಡು ಬರುತ್ತಿದ್ದಾರೆ. ಪ್ರತಿಮೆ ನಿರ್ಮಾಣ ವಿಚಾರ ಒಳ್ಳೆಯ ಕೆಲಸ. ಹೀಗಾಗಿ ಅವರಿಗೆ  ಮಾರ್ಗದರ್ಶನ ನೀಡಿ ಏನು ಮಾಡಬೇಕೋ ಮಾಡಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಕಂದಾಯ ಸಚಿವ ಅಶೋಕಣ್ಣಾ ಅವರು ಪ್ರತಿಮೆ ನಿರ್ಮಾಣ ವಿಚಾರದಲ್ಲಿ ತನಿಖೆ ಮಾಡಿ ವರದಿ ಬಂದ ನಂತರ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ. ಕನಕಪುರದ ತಹಶೀಲ್ದಾರರನ್ನು ವರ್ಗಾವಣೆ  ಮಾಡಿದ್ದಾರೆ. ಅವರು ಯಾರನ್ನು ಬೇಕಾದರೂ ಅಲ್ಲಿಗೆ ತಂದು ಕೂರಿಸಬಹುದು. ಜನರ ಬಗ್ಗೆ ನಾನು ಮಾತ್ರ ಯೋಚಿಸುತ್ತೇನೆ. ಜ.13ರಂದು ಪ್ರತಿಭಟನೆ ಮಾಡುತ್ತಾರಂತೆ, ಮಾಡಲಿ  ಎಂದರು.

ಬಿಜೆಪಿ, ಆರೆಸ್ಸೆಸ್ ಎಂಬುದು ಬೇಡ. ರಾಜ್ಯದಲ್ಲಿ ಒಂದು ಸರ್ಕಾರ ಇದೆ. ಈ  ರಾಜ್ಯದಲ್ಲಿ ಎಷ್ಟು ಮಠಗಳು, ಮಸೀದಿಗಳು, ಚರ್ಚ್ ಗಳು, ಗುರುದ್ವಾರ, ಬೌದ್ಧ ಹಾಗೂ ಜೈನ ಧರ್ಮದ ಸಂಘಗಳಿಗೆ ಯಾರು, ಯಾವ ಬೆಟ್ಟದಲ್ಲಿ ಯಾರಿಗೆ ಎಷ್ಟು ಜಾಗ ನೀಡಿದ್ದಾರೆ ಎಂಬ  ಪಟ್ಟಿ ತರಿಸಿಕೊಳ್ಳಲಿ. ನಂತರ ತಪ್ಪು ಮಾಡಿದವರಿಗೆ ಶಿಕ್ಷೆ ನೀಡಲಿ. ಈ ಶಿವಕುಮಾರ್ ತಪ್ಪು ಮಾಡಿದ್ದರೆ ಶಿಕ್ಷೆ ನೀಡಲಿ, ಬೇರೆ ಯಾರಾದರೂ ತಪ್ಪು ಮಾಡಿದ್ದರೆ ಅವರಿಗೂ ಶಿಕ್ಷೆ ನೀಡಲಿ. ಅವರಿಗಿರುವ ಪರಮಾಧಿಕಾರವನ್ನು ಯಾರಾದರೂ ಕಿತ್ತುಕೊಳ್ಳಲು ಆಗುತ್ತಾ. ನಾನು ಕಿತ್ತುಕೊಳ್ಳುವ ಪ್ರಯತ್ನವನ್ನೂ ಮಾಡುವುದಿಲ್ಲ, ಆ ಬಗ್ಗೆ ಪ್ರತಿಕ್ರಿಯೆಯನ್ನು ನೀಡುವುದಿಲ್ಲ ಎಂದು ಶಿವಕುಮಾರ್ ಸ್ಪಷ್ಟಪಡಿಸಿದರು.

ಮತಕ್ಷೇತ್ರ  ಕನಕಪುರದಲ್ಲಿ ಒಬ್ಬರು ದೇವಸ್ಥಾನ ಕಟ್ಟಬೇಕು ಎಂದರೆ ಮತ್ತೊಬ್ಬರು ಚರ್ಚ್ ಕಟ್ಟಬೇಕು ಎನ್ನುತ್ತಾರೆ. ಎಲ್ಲರಿಗೂ ತಮ್ಮ ಕೈಲಾದ ಮಟ್ಟಿಗೆ ಇಟ್ಟಿಗೆಯನ್ನೋ, ಕಿಟಕಿಯನ್ನೋ ಬಾಗಿಲನ್ನೋ ನೀಡುತ್ತೇನೆ. ಶಾಲೆ ಕಟ್ಟುತ್ತೇನೆ ಎಂದು ಬಂದರೆ ಅವರಿಗೆ ಕುರ್ಚಿ ಕೊಡಿಸುತ್ತೇನೆ... ಹೀಗೆ ನಮ್ಮ ಕೆಲಸ ನಾವು ಮಾಡಿಕೊಂಡು ಬರುತ್ತಿದ್ದೇನೆ ಎಂದರು.

ಪ್ರತಿಮೆ ನಿರ್ಮಾಣ ವಿಚಾರದಲ್ಲಿ ಕಾಂಗ್ರೆಸ್  ಪಕ್ಷದ ಯಾವ ನಾಯಕರೂ ಮಾತನಾಡುತ್ತಿಲ್ಲ ಎಂಬ  ಪ್ರಶ್ನೆ ಬರುವುದಿಲ್ಲ. ಅವರು ಮಾತನಾಡುವ ಅಗತ್ಯ ಏನಿದೆ. ಧ್ವನಿ ಇಲ್ಲ ಅಥವಾ ಯಾವುದಾದರೂ ನಾಯಕರ ಬೆಂಬಲವಾಗಿ ನಿಂತು ಮಾತನಾಡಲಿ ಎಂದು ತಾವು ಕೇಳಿಲ್ಲ. ಈ ವಿಚಾರದಲ್ಲಿ ಅನಗತ್ಯ ಗೊಂದಲ ಬೇಡ ಎಂದರು.

ಪಕ್ಷದ ಪ್ರಮುಖ ಹುದ್ದೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ತಮಗೆ ಯಾವುದೇ ಗಿಫ್ಟ್ ಬೇಡ. ಹುದ್ದೆಗೆ ಯಾವುದೇ ಆತುರ ಇಲ್ಲ. ಹೈಕಮಾಂಡ್ ಬಳಿ ಏನೂ ಕೇಳುವುದಕ್ಕೂ ಹೋಗಿಲ್ಲ. ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಬೆಳಗ್ಗೆಯಿಂದ ಸಾಯಂಕಾಲದವರೆಗೆ ಬರುವ ನೋಟೀಸ್ ಗಳಿಗೆ ಉತ್ತರ ಕೊಡುವುದೇ ಸಾಕಾಗಿ ಹೋಗಿದೆ  ಎಂದು ಬೇಸರ ವ್ಯಕ್ತಪಡಿಸಿದರು.

ಜಾರ್ಖಂಡ್ ನೂತನ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಗಮಿಸುವಂತೆ ತಮಗೆ ಆಹ್ವಾನ ಬಂದಿತ್ತು. ಹಾಗಾಗಿ ಕಾರ್ಯಕ್ರಮಕ್ಕೆ  ಹೋಗಿ ಅವರಿಗೆ ಶುಭಕೋರಿ ಮತ್ತೆ ವಾಪಸ್ ಬಂದಿದ್ದೇನೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com