ಮೋದಿ ಪಾಕಿಸ್ತಾನದ ಪ್ರಧಾನಿಯೋ? ಭಾರತಕ್ಕೆ ಪ್ರಧಾನಿಯೋ: ಎಚ್.ಡಿ.ಕುಮಾರಸ್ವಾಮಿ

ಸಿಎಎ ವಿಷಯದಲ್ಲಿ ಪದೇ ಪದೇ ಪಾಕಿಸ್ತಾನದ ಜಪ ಮಾಡುವ ಪ್ರಧಾನಿ ನರೇಂದ್ರ ಮೋದಿ ಭಾರತದ ಪ್ರಧಾನಿಯೋ ಅಥವಾ ಪಾಕಿಸ್ತಾನದ ಪ್ರಧಾನಿಯೋ?ಎಂದು ಜೆಡಿಎಸ್ ಮುಖಂಡ, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಮೋದಿ ಪಾಕಿಸ್ತಾನದ ಪ್ರಧಾನಿಯೋ? ಭಾರತಕ್ಕೆ ಪ್ರಧಾನಿಯೋ: ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ಸಿಎಎ ವಿಷಯದಲ್ಲಿ ಪದೇ ಪದೇ ಪಾಕಿಸ್ತಾನದ ಜಪ ಮಾಡುವ ಪ್ರಧಾನಿ ನರೇಂದ್ರ ಮೋದಿ ಭಾರತದ ಪ್ರಧಾನಿಯೋ ಅಥವಾ ಪಾಕಿಸ್ತಾನದ ಪ್ರಧಾನಿಯೋ?ಎಂದು ಜೆಡಿಎಸ್ ಮುಖಂಡ, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಟ್ವೀಟ್ ಮೂಲಕ ಮೋದಿ ವಿರುದ್ಧ ಕಿಡಿಕಾರಿದ ಅವರು, ಪಾಕಿಸ್ತಾನದ ವಲಸಿಗರು, ನಿರಾಶ್ರಿತರು ಮತ ನೀಡಿದ್ದಾರೆಯೋ? ಭಾರತದ ಪ್ರಜೆಗಳು ಮತ ಹಾಕಿದ್ದಾರೆಯೇ? ಭಾರತೀಯ ಸಂವಿಧಾನದಿಂದ ಪ್ರಧಾನಿ ಹುದ್ದೆ ಸಿಕ್ಕಿತೋ, ಪಾಕಿಸ್ತಾನದ ಸಂವಿಧಾನದಿಂದ ಪ್ರಧಾನಿ ಹುದ್ದೆ ಸಿಕ್ಕಿತೋ? ಎಂದು ಕೇಳಿದ್ದಾರೆ.

ಭಾರತೀಯರ ಮತ ಪಡೆದು ಸಂವಿಧಾನದ ಪ್ರಕಾರ ಪ್ರಧಾನಿಯಾದ ಮೋದಿಗೆ ಇಲ್ಲಿನ ರಾಜ್ಯಗಳ ಅಭಿವೃದ್ಧಿ ಆದ್ಯತೆಯೋ ಪಾಕಿಸ್ತಾನದವರಿಗೆ ಪೌರತ್ವ ನೀಡುವುದು ಆದ್ಯತೆಯೋ? ಒಕ್ಕೂಟ ವ್ಯವಸ್ಥೆಯ ಭಾಗವಾಗಿರುವ ಕರ್ನಾಟಕಕ್ಕೆ ಕೊಡಬೇಕಾದ ಅನುದಾನ ಕೊಡಲಾಗದಿದ್ದರೂ ಪಾಕಿಸ್ತಾನದ ಮೇಲೆ ಅವರಿಗೆ ಪ್ರೀತಿ ಉಕ್ಕುತ್ತಿರುವುದೇಕೆ? ಅಲ್ಲಿನವರ ಮೇಲೆ ಯಾಕಿಷ್ಟು ಮಮಕಾರ? ಎಂದು ಸವಾಲು ಹಾಕಿದ್ದಾರೆ.

25 ಸಂಸದರನ್ನು ಕೊಟ್ಟ ಕರ್ನಾಟಕದಲ್ಲಿ ಉಂಟಾದ ನೆರೆಯಿಂದ 35 ಸಾವಿರ ಕೋಟಿ ನಷ್ಟವಾದರೂ ಕೊಟ್ಟಿದ್ದು ಚಿಕ್ಕಾಸು, ನರೇಗಾ ಬಾಕಿ ಕೊಟ್ಟಿಲ್ಲ, ತೆರಿಗೆಯಲ್ಲಿ ರಾಜ್ಯದ ಪಾಲು ಕೊಟ್ಟಿಲ್ಲ, ಬರ ಪರಿಹಾರವಿಲ್ಲ. ಇವುಗಳ ಬಗ್ಗೆ ಮಾತನಾಡಲಾಗದ ನೀವು ಮಾತಾಡುವುದು ಪಾಕಿಸ್ತಾನದ ಬಗ್ಗೆ. ಮೊದಲು ಪಾಕಿಸ್ತಾನದ ಜಪ ನಿಲ್ಲಿಸಿ ಕರ್ನಾಟಕಕ್ಕೆ ಬರಬೇಕಾದ ಹಣ ನೀಡಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಕೇಂದ್ರ ಕಟ್ಟಿಸಿಕೊಂಡ ತೆರಿಗೆಯ ಕರ್ನಾಟಕದ ಪಾಲನ್ನು ಹಾಗೂ ನೆರೆ ಪರಿಹಾರದ ಹಣವನ್ನು ಯಡಿಯೂರಪ್ಪ ಪಾಕಿಸ್ತಾನವನ್ನು ಕೇಳಬೇಕೋ ಅಥವಾ ಭಾರತೀಯ ಮತದಾರರಿಂದ ಆಯ್ಕೆಯಾದ ನಿಮ್ಮನ್ನು ಕೇಳಬೇಕೋ ? ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳ ಗದ್ದುಗೆಗೆ ನಮಿಸಿ, ವಿದ್ಯಾರ್ಥಿಗಳ ಎದುರು ಭಾಷಣ ಮಾಡಿದ ಮೋದಿ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಸಲಹೆ ನೀಡುವುದನ್ನು ಬಿಟ್ಟು ಪಾಕಿಸ್ತಾನದ ಜಪ ಮಾಡಿ ರಾಜಕೀಯ, ಅಧಿಕಾರದ ಆಸೆಯನ್ನು ಸಾಬೀತು ಮಾಡುತ್ತದೆ ಎಂದು ಕುಮಾರಸ್ವಾಮಿ ಕುಟುಕಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com