ಕಾಂಗ್ರೆಸ್‌ನಲ್ಲೀಗ ಐಕ್ಯತೆಯ ಮಂತ್ರ: ತಾರ್ಕಿಕ ಅಂತ್ಯಕ್ಕೆ ಬಾರದ ಮುಖಂಡರ ಸಭೆ, ಹೈಕಮಾಂಡ್‌ಗೆ ವರದಿ

ಮೂಲ ವಲಸಿಗ ಗುಂಪುಗಾರಿಕೆಯ ಸ್ವಪತ್ರಿಷ್ಠೆಯ ರಾಜಕಾರಣದಿಂದ ಕೃಶವಾಗಿದ್ದ ಕಾಂಗ್ರೆಸ್ ಪಕ್ಷವನ್ನು ಬಲಗೊಳಿಸಲು ಪಕ್ಷದ ನಾಯಕರೆಲ್ಲ ಈಗ ಐಕ್ಯತೆಯ ಮಂತ್ರ ಜಪಿಸಲು ಮುಂದಾಗಿದ್ದು,
ಕಾಂಗ್ರೆಸ್ ನಾಯಕರು(ಸಂಗ್ರಹ ಚಿತ್ರ)
ಕಾಂಗ್ರೆಸ್ ನಾಯಕರು(ಸಂಗ್ರಹ ಚಿತ್ರ)

ಬೆಂಗಳೂರು: ಮೂಲ ವಲಸಿಗ ಗುಂಪುಗಾರಿಕೆಯ ಸ್ವಪತ್ರಿಷ್ಠೆಯ ರಾಜಕಾರಣದಿಂದ ಕೃಶವಾಗಿದ್ದ ಕಾಂಗ್ರೆಸ್ ಪಕ್ಷವನ್ನು ಬಲಗೊಳಿಸಲು ಪಕ್ಷದ ನಾಯಕರೆಲ್ಲ ಈಗ ಐಕ್ಯತೆಯ ಮಂತ್ರ ಜಪಿಸಲು ಮುಂದಾಗಿದ್ದು, ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ನಿವಾಸದಲ್ಲಿ ಪಕ್ಷದ ನಾಯಕರೆಲ್ಲ ಸಭೆ ಸೇರಿ ಸಮಗ್ರ ಚರ್ಚೆ‌ ನಡೆಸಿದರು.

ಪಕ್ಷದೊಳಗಿನ ಒಡಕು ಬಿಜೆಪಿಗೆ ಲಾಭವಾಗಿ ಪರಿಣಮಿಸಿದ್ದು, ಇದೇ ಸ್ಥಿತಿ ಮುಂದುವರೆದಲ್ಲಿ ಕಾಂಗ್ರೆಸ್ ಈಗ ಉಳಿದಿರುವ ವರ್ಚಸ್ಸನ್ನು ಕಳೆದುಕೊಳ್ಳಬಹುದು. ಉಪಚುನಾವಣೆಗೆ ಮುನ್ನ ಪಕ್ಷದಲ್ಲಿ ಮೂಡಿದ್ದ ವಲಸಿಗ ಹಾಗೂ ಮೂಲ ಕಾಂಗ್ರೆಸ್ ನಾಯಕರ ನಡುವಿನ ತಿಕ್ಕಾಟ ಪಕ್ಷದ ಸೋಲಿಗೆ ಕಾರಣವೂ ಆಗಿತ್ತು. ಅಧಿಕಾರಕ್ಕಾಗಿ ನಾಯಕರ ನಡುವೆ ಏರ್ಪಟ್ಟಿದ್ದ ಸಂಘರ್ಷ ಉಪಚುನಾವಣೆಯಲ್ಲಿ ಮೂಡಿಸಿದ್ದ ಗಗೆಲುವಿನ ನಿರೀಕ್ಷೆಯನ್ನೂ ಬಲಿತೆಗೆದುಕೊಂಡಿತ್ತು. ಹೀಗಾಗಿ ಒಗ್ಗಟ್ಟಾಗಿ ಪರಸ್ಪರ ಹೋಗುವುದು ಬಿಟ್ಟರೆ ಅನ್ಯ ಮಾರ್ಗವಿಲ್ಲ ಎಂಬುದು ಕಾಂಗ್ರೆಸ್‌ ಮುಖಂಡರಿಗೆ ಅರಿವಾದಂತಾಗಿದೆ.

ಇದೇ ರೀತಿ ಪಕ್ಷದಲ್ಲಿ ಭಿನ್ನಾಭಿಪ್ರಾಯ ಮುಂದುವರೆದರೆ ಬಿಜೆಪಿ ಇದರ ಲಾಭ ಪಡೆಯುವುದು ಖಚಿತ. ಈ ಹಿನ್ನೆಲೆಯಲ್ಲಿ ಮುನಿಸು ಮರೆತು ಪಕ್ಷದ ಬಲವರ್ಧನೆಗೆ ಮುಂದಾಗಬೇಕು. ಇದಕ್ಕೆ ಏನು ಮಾಡಬೇಕು. ಮುಂದಿನ ನಡೆ ಹೇಗೆ? ಎಂಬ ಕುರಿತು ಚರ್ಚಿಸಲು ಕಾಂಗ್ರೆಸ್ ನಾಯಕರು ಪರಮೇಶ್ವರ್ ನಿವಾಸದಲ್ಲಿ ಚಹ ಕೂಟದ‌ ನೆಪದಲ್ಲಿ ಒಗ್ಗೂಡಿದ್ದರು.

ಸಭೆ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಪರಮೇಶ್ವರ್ ಅವರು, ಶೀಘ್ರವೇ ಕೆಪಿಸಿಸಿ ಅಧ್ಯಕ್ಷರು ಹಾಗೂ ವಿಪಕ್ಷ ನಾಯಕರ ಬಗ್ಗೆ ಇರುವ ಗೊಂದಲ ಬಗೆಹರಿಸುವ ಸಂಬಂಧ ಹೈಕಮಾಂಡ್‌ ಗಮನಕ್ಕೆ ತಂದಿದ್ದು, ಅವರು ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು.

ಪ್ರಸ್ತುತ ರಾಜಕೀಯ ಪರಿಸ್ಥಿತಿ, ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಾಮಾನ, ಬಿಜೆಪಿ ಸರಕಾರದ ಆಡಳಿತದ ವೈಫಲ್ಯದ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚೆ ಮಾಡಿದ್ದೇವೆ. ಇದರ ಜೊತೆಗೆ ನಮ್ಮ ಪಕ್ಷದಲ್ಲಿ ಆದ ಬೆಳವಣಿ ಬಗ್ಗೆಯೂ ಚರ್ಚೆ ಮಾಡಿದ್ದೇವೆ.
ಆದಷ್ಟು ಶೀಘ್ರವಾಗಿ ಕೆಪಿಸಿಸಿ ಹಾಗೂ ವಿಪಕ್ಷ ನಾಯಕರ ಬಗ್ಗೆ ಇರುವ ಗೊಂದಲ ಬಗೆಹರಿಯಲಿದೆ ಎಂದರು.

ಸಿಎಲ್‌ಪಿ ನಾಯಕರ ರಾಜೀನಾಮೆ ಹಾಗೂ ಕೆಪಿಸಿಸಿ ಅಧ್ಯಕ್ಷರ ರಾಜೀನಾಮೆ ಬಗ್ಗೆಯೂ ಚರ್ಚಿಸಿದ್ದೇವೆ. ಈ ಬಗ್ಗೆ ಹೈಕಮಾಂಡ್ ಗೆ ಮನವಿ ಮಾಡಲು ನಿರ್ಧರಿಸಿದ್ದೇವೆ ಎಂದರು.

ಕೆಪಿಸಿಸಿ ಅಧ್ಯಕ್ಷರು ಹಾಗೂ ವಿರೋಧ ಪಕ್ಷದ ನಾಯಕರ ಆಯ್ಕೆ ಸಂಬಂಧ ಹಿರಿಯ ನಾಯಕರ ಅಭಿಪ್ರಾಯವನ್ನ ಸಂಗ್ರಹಿಸಿ ಹೈಕಮಾಂಡ್ ಗೆ ವರದಿ ನೀಡಲು ನಿರ್ಧರಿಸಿದ್ದೇವೆ. ಆ ಬಳಿಕವಷ್ಟೇ ಪಕ್ಷದ ಮುಂದಿನ ಚಟುವಟಿಕೆ ಬಗ್ಗೆ ತೀರ್ಮಾನಿಸಲು ಸಹಕಾರಿ ಆಗಲಿದೆ ಎಂದರು.

ನಾವೆಲ್ಲ ಒಗ್ಗಟ್ಟಾಗಿದ್ದೇವೆ. ನಮ್ಮಲ್ಲಿ ಗೊಂದಲಗಳಿರಬಾರದು ಎನ್ನುವ ಕಾರಣಕ್ಕೆ ಇಂದು ಸಭೆ ನಡೆಸಲಾಗಿದೆ. ಯಾರು ಅಧ್ಯಕ್ಷರಾಗಬೇಕು ಎಂಬುದರ ಬಗ್ಗೆ ವೈಯಕ್ತಿಕವಾಗಿ ಯಾವುದೇ ಚರ್ಚೆ ಆಗಿಲ್ಲ. ಆಕಾಂಕ್ಷಿಗಳ ಬಗ್ಗೆಯಾಗಲಿ, ಸಿಎಲ್.ಪಿ ಮತ್ತು ವಿಪಕ್ಷ ನಾಯಕರ ಸ್ಥಾನ ಪ್ರತ್ಯೇಕಿಸುವ ಬಗ್ಗೆಯೂ ಚರ್ಚೆ ನಡೆಸಿಲ್ಲ ಎಂದರು.

ನಮ್ಮಲ್ಲಿ‌ ಗೊಂದಲಗಳಿವೆ ಎಂಬ ರೀತಿ ಮಾಧ್ಯಮಗಳಲ್ಲಿ ಸುದ್ದಿಗಳು ಬಿತ್ತರವಾಗಿದ್ದವು. ಹೀಗಾಗಿ ಇಂದು ಸಭೆ ನಡೆಸಿ ನಮ್ಮಲ್ಲಿ ಗೊಂದಲಗಳಿಲ್ಲ ಎನ್ನುವುದನ್ನು ತೋರಿಸಿದ್ದೇವೆ ಎಂದು ಹೇಳಿದರು.

ಇನ್ನು ಡಿ.ಕೆ.ಶಿವಕುಮಾರ್ ಅವರು ದಿಢೀರನೆ ಸಭೆಯಿಂದ ತೆರಳಿದ್ದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾರ್ಯಕ್ರಮ ಇದ್ದ ಕಾರಣ ಅವರು ತೆರಳಿದ್ದಾರೆ. ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಣಯಕ್ಕೆ ಪುರ್ವಭಾವಿಯಾಗಿ ಸಹಮತವನ್ನು ಅವರು ವ್ಯಕ್ತಪಡಿಸಿದ್ದಾರೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com