ಸಚಿವ ಸ್ಥಾನಕ್ಕೆ ಚುನಾವಣೆಯಲ್ಲಿ ಗೆಲ್ಲಲೇಬೇಕು ಎಂದು ಕೋರ್ಟ್ ತೀರ್ಪಿನಲ್ಲಿ ಉಲ್ಲೇಖ ಇಲ್ಲ: ಎಚ್.ವಿಶ್ವನಾಥ್

ಉಪ ಚುನಾವಣೆಯಲ್ಲಿ ಸೋತವರಿಗೆ ಸಚಿವ ಸ್ಥಾನ ಇಲ್ಲ ಎಂದು ಹೇಳುತ್ತಿರುವವರು ಯಾರೂ ಕೋರ್ಟ್ ತೀರ್ಪು ಓದಿಲ್ಲ. ಸುಪ್ರೀಂ ಕೋರ್ಟ್ ತೀರ್ಪು ಓದಿರುತ್ತಿದ್ದರೆ ಅವರಿಗೆ ಗೊತ್ತಾಗಿರುತ್ತಿತ್ತು ಎಂದು ಮಾಜಿ ಸಚಿವ ಎಚ್. ವಿಶ್ವನಾಥ್ ತಿರುಗೇಟು ನೀಡಿದ್ದಾರೆ.
ಎಚ್ ವಿಶ್ವನಾಥ್ (ಸಂಗ್ರಹ ಚಿತ್ರ)
ಎಚ್ ವಿಶ್ವನಾಥ್ (ಸಂಗ್ರಹ ಚಿತ್ರ)

ಬೆಂಗಳೂರು: ಉಪ ಚುನಾವಣೆಯಲ್ಲಿ ಸೋತವರಿಗೆ ಸಚಿವ ಸ್ಥಾನ ಇಲ್ಲ ಎಂದು ಹೇಳುತ್ತಿರುವವರು ಯಾರೂ ಕೋರ್ಟ್ ತೀರ್ಪು ಓದಿಲ್ಲ. ಸುಪ್ರೀಂ ಕೋರ್ಟ್ ತೀರ್ಪು ಓದಿರುತ್ತಿದ್ದರೆ ಅವರಿಗೆ ಗೊತ್ತಾಗಿರುತ್ತಿತ್ತು ಎಂದು ಮಾಜಿ ಸಚಿವ ಎಚ್. ವಿಶ್ವನಾಥ್ ತಿರುಗೇಟು ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕತ್ವ ಅನರ್ಹತೆ ಕುರಿತ ತೀರ್ಪಿನಲ್ಲಿ ಅಪವಿತ್ರರಾಗಿರುವವರು ಚುನಾವಣೆಗೆ ನಿಂತು ಪವಿತ್ರರಾಗಿ ಎಂದು ಹೇಳಲಾಗಿದೆ. ತೀರ್ಪಿನಲ್ಲಿ ಎಲ್ಲೂ ಸೋಲು- ಗೆಲುವಿನ ಬಗ್ಗೆ ಹೇಳಿಲ್ಲ, ಹಾಗಾಗಿ ಚುನಾವಣೆಗೆ ನಿಂತಾಗಿದೆ, 12 ಜನ ಗೆದ್ದು ಇಬ್ಬರು ಸೋತಿದ್ದೇವೆ, ಸಚಿವ ಸ್ಥಾನಕ್ಕೆ ಚುನಾವಣೆಯಲ್ಲಿ ಗೆಲ್ಲಲೇಬೇಕು ಎಂಬ ತೀರ್ಪಿನಲ್ಲಿ ಎಲ್ಲಿಯೂ ಉಲ್ಲೇಖ ಇಲ್ಲ, ಶ್ರೀನಿವಾಸ ಪ್ರಸಾದ್ ಅವರ ಜೊತೆ ನಾನು ಮಾತಾಡಿದ್ದೇನೆ, ಅವರಿಗೆ ಕೋರ್ಟ್ ತೀರ್ಪು ಪ್ರತಿ ಕಳುಹಿಸಿಕೊಟ್ಟಿದ್ದೇನೆ ಎಂದು ಎಚ್.ವಿಶ್ವನಾಥ್ ಹೇಳಿದರು.

ಸಚಿವ ಸಂಪುಟ ವಿಸ್ತರಣೆ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ, ಮುಖ್ಯಮಂತ್ರಿಗಳಿಗೆ ಗೊತ್ತಿಲ್ಲದ ವಿಚಾರ ನನಗೆ ಏನು ಗೊತ್ತಿರುತ್ತದೆ?. ಸಚಿವ ಸ್ಥಾನಕ್ಕಾಗಿ ನಾನು ಈವರೆಗೆ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಅಧಿಕಾರಕ್ಕೋಸ್ಕರ ಒಂದು ಸರ್ಕಾರದ ಪತನದಲ್ಲಿ ನಾನು ಭಾಗಿಯಾಗಿಲ್ಲ. ಜನತಂತ್ರ ವ್ಯವಸ್ಥೆಯ ಉಳಿವಿಗಾಗಿ ಈ ಕಾರ್ಯತಂತ್ರ ಮಾಡಿದ್ದೆವು. ನಾವು ಯಡಿಯೂರಪ್ಪ ಅವರನ್ನು ನಂಬಿರುವವರು. ಕೊಟ್ಟ ಮಾತಿನಂತೆ ನಡೆದುಕೊಂಡಿರುವ ಜನನಾಯಕ ಯಾರಾದರೂ ಇದ್ದರೆ ಅದು ಯಡಿಯೂರಪ್ಪ ಮಾತ್ರ. ನಾವು ಯಡಿಯೂರಪ್ಪ ಅವರನ್ನು ನಂಬಿದ್ದೇವೆ, ಹಾಗಾಗಿ ವಿಸ್ತರಣೆ ಅವರಿಗೆ ಬಿಟ್ಟ ವಿಚಾರ. ನನಗೆ ಗೊತ್ತಿರುವುದು ಯಡಿಯೂರಪ್ಪ ಮಾತ್ರ. ಬಿಜೆಪಿ ಹೈಕಮಾಂಡ್ ನಲ್ಲಿ ಯಾರೂ ಗೊತ್ತಿಲ್ಲ ಎಂದು ವಿಶ್ವನಾಥ್ ಮಾರ್ಮಿಕವಾಗಿ ಹೇಳಿದರು.

ನಾವು 17 ಜನ ಕೂಡಾ ಮಂತ್ರಿಗಳಾಗಲು ಅರ್ಹರಿದ್ದೇವೆ. ಯಾರಿಗೆ ಮಂತ್ರಿ ಸ್ಥಾನ ಕೊಡುತ್ತಾರೆ, ಯಾರನ್ನು ಕೈಬಿಡುತ್ತಾರೆ ಎನ್ನುವುದು ಬಿಜೆಪಿ ಹೈಕಮಾಂಡ್ ಮತ್ತು ಯಡಿಯೂರಪ್ಪಗೆ ಬಿಟ್ಟ ವಿಚಾರ. ಸಚಿವರು ಆಗಲೇಬೇಕು ಎಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ. ಒಂದು ಸರ್ಕಾರವನ್ನು ಪತನ ಮಾಡಿ ಮತ್ತೊಂದು ಅಧಿಕಾರಕ್ಕೆ ನಾವು ಹೋದವರಲ್ಲ. ಮಾಜಿ ಸ್ಪೀಕರ್ ಸೇರಿದಂತೆ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಕಾಂಗ್ರೆಸ್ , ಜೆಡಿಎಸ್ ನಾಯಕರು ಹೇಳುತ್ತಿದ್ದರು, ಅದರಿಂದ ಬಿಡಿಸಿಕೊಂಡು ಬರಲು ಈ ಪತನ ನಡೆಯಿತು ಎಂದು ವ್ಯಾಖ್ಯಾನಿಸಿದರು.

ಬಿಜೆಪಿ ಶಾಸಕರು ಸಂಪರ್ಕದಲ್ಲಿದ್ದಾರೆ ಎಂಬ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆ ವಿಚಾರ ಸತ್ಯಕ್ಕೆ ದೂರ ಎಂದು ಸ್ಪಷ್ಟಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com