ಸಿಬಿಐನವರು ಬರಲಿ ಅಂತ ನಾನು ಮನೆ ಬಾಗಿಲು ತೆರೆದುಕೊಂಡು ಕಾಯ್ತಿದ್ದೇನೆ: ಡಿ.ಕೆ. ಶಿವಕುಮಾರ್

ತಮಗೆ ಜಾರಿ ನಿರ್ದೇಶನಾಲಯ ನೋಟೀಸ್ ನೀಡಿದ್ದ ವಿಚಾರವಾಗಿ ಮಾಧ್ಯಮಗಳು ಸುಳ್ಳು ವರದಿ ಪ್ರಕಟಿಸಿವೆ. ನಾನು ಕೆಲಸದ ನಿಮಿತ್ತ ಇಡಿ ಕಚೇರಿಗೆ ಹೋಗಿದ್ದೆ. ಈ ಸಂದರ್ಭದಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳೇ ಆಶ್ಚರ್ಯದಿಂದ ನಿಮಗೆ ಇಡಿಯಿಂದ ನೋಟೀಸ್ ಬಂದಿದೆಯಾ ಎಂದು ಪ್ರಶ್ನಿಸುತ್ತಾರೆ. ಮಾಧ್ಯಮಗಳಿಗೆ ಘನತೆ ಇದೆ. ಅದಕ್ಕೆ ತಕ್ಕ ರೀತಿಯಲ್ಲಿ ಕೆಲಸ ಮಾಡಬೇಕು. ನೋಟೀಸ್ ನೀಡಲಾಗಿ
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್

ಬೆಂಗಳೂರು:  ಕೆಪಿಸಿಸಿ ಅಧ್ಯಕ್ಷ ಸ್ಥಾನವಾಗಲಿ, ವಿರೋಧ ಪಕ್ಷದ ನಾಯಕನ ಹುದ್ದೆಯೇ ಆಗಲಿ ಅಂಗಡಿಯಲ್ಲಿ ಸಿಗುವ ವಸ್ತು ಅಲ್ಲ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಗುರುವಾರ ಸದಾಶಿವನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, 'ಕೆಪಿಸಿಸಿ ಅಧ್ಯಕ್ಷ ಸ್ಥಾನ ಅಂಗಡಿಯಲ್ಲಿ ಸಿಗುವ ವಸ್ತು ಅಲ್ಲ. ವಿರೋಧ ಪಕ್ಷದ ನಾಯಕ ಸ್ಥಾನ ಸೇರಿದಂತೆ ಇತರೆ ಹುದ್ದೆಗಳಿಗೆ ಅದರದೇ ಆದ ಕಿಮ್ಮತ್ತು ಇರುತ್ತವೆ. ಆ ಸ್ಥಾನದಲ್ಲಿ ಯಾರು ಕೂರಬೇಕು? ಎಂದು ಲೆಕ್ಕಾಚಾರ ಮಾಡಿ ಆಯ್ಕೆ ಮಾಡಲಾಗುತ್ತದೆ" ಎಂದರು. 

ತಮ್ಮ ರಾಜಕೀಯ ನಡೆ ಬಗ್ಗೆ ಮಾಧ್ಯಮಗಳಿಗೆ ಹೆಚ್ಷಿನ ಕಾಳಜಿ ಇದೆ. ಆದರ ನಾನು ಯಾರನ್ನು ಭೇಟಿ ಮಾಡುತ್ತೇನೆ ಎಂಬುದು ನನಗೆ ಬಿಟ್ಟದ್ದು. ಸಿದ್ದರಾಮಯ್ಯ ಮಾತ್ರ ಅಲ್ಲ, ಖರ್ಗೆ, ಪರಮೇಶ್ವರ್ ಅವರನ್ನು ಭೇಟಿಯಾಗುತ್ತೇನೆ. ಇಲ್ಲಿ ಬರುವ ನೂರಾರು ಜನರನ್ನು ಭೇಟಿ ಮಾಡುತ್ತೇನೆ. ನಿಮ್ಮನ್ನು ಭೇಟಿ ಮಾಡಿದ್ದೇನೆ. ನಮ್ಮಲ್ಲಿರುವ ಎಲ್ಲ ನಾಯಕರೂ ಪಕ್ಷಕ್ಕೆ ನಿಷ್ಠಾವಂತರೆ. ನಿಷ್ಠೆ ಇಲ್ಲದವರು ಯಾರು ಇಲ್ಲ ಎಂದರು. 

ತಮಗೆ ಜಾರಿ ನಿರ್ದೇಶನಾಲಯ ನೋಟೀಸ್ ನೀಡಿದ್ದ ವಿಚಾರವಾಗಿ ಮಾಧ್ಯಮಗಳು ಸುಳ್ಳು ವರದಿ ಪ್ರಕಟಿಸಿವೆ. ನಾನು ಕೆಲಸದ ನಿಮಿತ್ತ ಇಡಿ ಕಚೇರಿಗೆ ಹೋಗಿದ್ದೆ. ಈ ಸಂದರ್ಭದಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳೇ ಆಶ್ಚರ್ಯದಿಂದ ನಿಮಗೆ ಇಡಿಯಿಂದ ನೋಟೀಸ್ ಬಂದಿದೆಯಾ ಎಂದು ಪ್ರಶ್ನಿಸುತ್ತಾರೆ. ಮಾಧ್ಯಮಗಳಿಗೆ ಘನತೆ ಇದೆ. ಅದಕ್ಕೆ ತಕ್ಕ ರೀತಿಯಲ್ಲಿ ಕೆಲಸ ಮಾಡಬೇಕು. ನೋಟೀಸ್ ನೀಡಲಾಗಿದೆ ಎಂದು ಸುದ್ದಿ ಹಾಕುವ ಜತೆಗೆ ನೋಟೀಸ್ ಪ್ರತಿಯನ್ನು ಪ್ರದರ್ಶಿಸಿ. ಮೂಲಗಳ ಮಾಹಿತಿ ಆದರೆ ಆ ಮೂಲದಿಂದಲೇ ನೋಟೀಸ್ ಪ್ರತಿ ಪಡೆದುಕೊಳ್ಳಿ ಎಂದು ಮಾಧ್ಯಮಗಳಿಗೆ ಕಿವಿ ಮಾತು ಹೇಳಿದರು. 

ಈಗಾಗಲೇ ಎಲ್ಲ ಸಂಕಟ ಅನುಭವಿಸಿ ಆಗಿದೆ. ಇನ್ನು ನೂರು ಸಂಕಟ ಬಂದರೂ ಎದುರಿಸಲು ಸಿದ್ಧನಾಗಿದ್ದೇನೆ. ಯಡಿಯೂರಪ್ಪ ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿದ್ದಾರೆ. ಇಲ್ಲಿ ಎಸಿಬಿ, ಲೋಕಾಯುಕ್ತ ಸಂಸ್ಥೆ ಇದ್ದರೂ ಸಿಬಿಐಗೆ ವಹಿಸಿದ್ದಾರೆ. ಅವರ ಕರ್ತವ್ಯ ಅವರು ಮಾಡಿದಿದ್ದಾರೆ. ಸಿಬಿಐ ನವರು ಬರಲಿ ಎಂದು ನಾನು ಮನೆ ಬಾಗಿಲು ತೆರೆದುಕೊಂಡು ಕಾಯುತ್ತಿದ್ದೇನೆ. ಸುಪ್ರೀಂ ಕೋರ್ಟ್ ನಲ್ಲಿ ಡಿನೋಟಿಫಿಕೇಷನ್ ಪ್ರಕರಣ ವಜಾ ಆಗಿದೆ. ಅದರಲ್ಲಿ ನನಗೆ ಯಾವ ಸಂಕಟ ಇದೆ ಎಂದು ಪ್ರಶ್ನಿಸಿದರು. 

ನಾನು ಯಾವುದೇ ಸರ್ಕಾರಿ ಜಮೀನು ತೆಗೆದುಕೊಂಡಿಲ್ಲ. ಸರ್ಕಾರ ತನ್ನ ಸ್ವಾಧೀನದಿಂದ ಕೈ ಬಿಟ್ಟ ಜಮೀನು ತೆಗೆದುಕೊಂಡಿದ್ದೇನೆ. ಬೇರೆಯವರ ಡಿನೋಟಿಫಿಕೇಷನ್ ಪ್ರಕರಣಗಳ ಬಗ್ಗೆ ಮಾಧ್ಯಮಗಳು ವರದಿ ಮಾಡುವುದಿಲ್ಲ. ಅಂತಹವರ ಪಟ್ಟಿ ತಮ್ಮ ಬಳಿ ಇದೆ.  ನಿಮಗೂ ಆ ಬಗ್ಗೆ ಗೊತ್ತಿದೆ. ನೀವೂ ಒಬ್ಬರ ಪರ ವರದಿ ಮಾಡುತ್ತೀರಿ. ಪಟ್ಟಿ ಹೊರಗೆ ತೆಗೆಯುವ ಸಮಯ ಬಂದಾಗ ಬಹಿರಂಗಮಾಡುತ್ತೇನೆ. ಅದು ಯಾರು ಎಂಬುದು ಈಗ ಬೇಡ. ನಿಮ್ಮ ಮುಂದೆ ಹೇಳಿದರೆ ಬೇಗ ಮರೆತು ಹೋಗುತ್ತದೆ. ಎಲ್ಲವನ್ನೂ ವಿಧಾನಸಭೆಯಲ್ಲಿ  ಮಾತಾಡುತ್ತೇನೆ. ಎಲ್ಲವೂ ದಾಖಲಾಗಬೇಕು ಎಂದರು. 

ನೀವು ರಾಜ್ಯ ರಾಜಕೀಯಕ್ಕೆ ಬರುತ್ತೀರೋ ಅಥವಾ ರಾಷ್ಟ್ರ ರಾಜಕಾರಣಕ್ಕೆ ಹೋಗುತ್ತೀರೋ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, 'ಸದ್ಯ ನಾನು ಕನಕಪುರದಲ್ಲಿ ಕಲ್ಲು ಹೊಡೆದುಕೊಂಡು, ರೇಷ್ಮೆ, ಕಡಲೆಕಾಯಿ ಬೆಳೆದುಕೊಂಡು ಇರುತ್ತೇನೆ' ಎಂದು ಚಟಾಕಿ ಹಾರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com