ಸಿದ್ದು ಮನದಲ್ಲಿ ಇನ್ನೂ ಆರದ ಚಾಮುಂಡೇಶ್ವರಿ ಕ್ಷೇತ್ರದಲ್ಲಿನ ಸೋಲಿನ ಕಿಚ್ಚು

ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಆಗಿರುವ ಸೋಲಿನ ಕಿಚ್ಚು  ಮಾಜಿ ಸಿಎಂ ಸಿದ್ದರಾಮಯ್ಯ ಮನದಲ್ಲಿ ಇನ್ನೂ ಆರಿದಂತೆ ಕಾಣಿಸುತ್ತಿಲ್ಲ.
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬಾಗಲಕೋಟೆ: ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಆಗಿರುವ ಸೋಲಿನ ಕಿಚ್ಚು  ಮಾಜಿ ಸಿಎಂ ಸಿದ್ದರಾಮಯ್ಯ ಮನದಲ್ಲಿ ಇನ್ನೂ ಆರಿದಂತೆ ಕಾಣಿಸುತ್ತಿಲ್ಲ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮುಂಡಿ ಕ್ಷೇತ್ರದಲ್ಲಿ ಆಗಿರುವ ಸೋಲಿನ ನೋವನ್ನು ಮರೆಯದೆ ಇನ್ನೂ ನೆನಪಿಸಿಕೊಳ್ಳುತ್ತಲೆ ಇದ್ದಾರೆ. ಚಾಮುಂಡೇಶ್ವರಿಯಲ್ಲಿ ಸೋತರೂ ಬನಶಂಕರಿದೇವಿ ಆಶೀರ್ವಾದದಿಂದ ಬಾದಾಮಿಯಲ್ಲಿ ಗೆದ್ದಿದ್ದಾರೆ. ಆದರೂ ಸೋಲಿನ ಅವಮಾನ ಅವರ ಮನದಲ್ಲಿ ಹಾಗೆ ಅಚ್ಚ ಹಸರಾಗಿ ಉಳಿದುಕೊಂಡಿದೆ.

ತಿಂಗಳು ಜಾತ್ರೆ ಎಂದೆ ಖ್ಯಾತರಾಗಿರುವ ಬಾದಾಮಿ ಬನಶಂಕರಿ ಜಾತ್ರೆಗೆ ಗುರುವಾರ ಆಗಮಿಸಿರುವ ಸಿದ್ದರಾಮಯ್ಯ ಸೋಲನ್ನು ಪುನಃ ಬೇಸರದಿಂದಲೇ ಸ್ಮರಿಸಿಕೊಂಡಿದ್ದಾರೆ. ಸೋಲಿನ ವಿಶ್ಲೇಷಣೆ ವೇಳೆ ಅವರು ಮತದಾರರ ನಡೆಯ ಕುರಿತು ನೇರವಾಗಿ ಮಾತನಾಡಿದ್ದಾರೆ. 

ಕೆಲಸ ಮಾಡಿದವರಿಗೆ ಮತದಾರರು ಮತ ಹಾಕಿ ಗೆಲ್ಲಿಸಿದ್ದಾರೆ. ಕೆಲಸ ಮಾಡಿದವರನ್ನು ಸೋಲಿಸಿದ್ದಾರೆ. ಚುನಾವಣೆ ವೇಳೆ ಮತದಾರರಿಗೆ ನೀಡಿದ್ದ ಎಲ್ಲ ಭರವಸೆಗಳನ್ನು ಈಡೇರಿಸಿದ್ದೆ. ಆದರೂ ನನ್ನನ್ನು ಎಲ್ಲರೂ ಸೇರಿ ನಾನು ಮತ್ತೆ ಮುಖ್ಯಮಂತ್ರಿ ಆಗಬಾರದು ಎನ್ನುವ ಕಾರಣಕ್ಕೆ ಚಾಮುಂಡೇಶ್ವರಿಯಲ್ಲಿ ಸೋಲಿಸಿದರು ಎಂದು ಅತೀವ ಬೇಸರ ವ್ಯಕ್ತಪಡಿಸಿದ್ದನ್ನು ಗಮನಿಸಿದಾಗ ಅವರು ಇನ್ನೂ ಸೋಲಿನ ನೋವಿನಿಂದ ಹೊರ ಬಂದಂತೆ ಕಾಣಿಸುತ್ತಿಲ್ಲ.

ತಮ್ಮ ಸೋಲಿನ ಬೇಸರ ವ್ಯಕ್ತ ಪಡಿಸುತ್ತಲೇ ಕಳೆದ ಡಿಸೆಂಬರ್ ನಲ್ಲಿ ೧೫ ವಿಧಾನಸಭೆ ಕ್ಣೇತ್ರಗಳಿಗೆ ನಡೆದ ಉಪಚುನಾವಣೆ ಬಗೆಗೂ ಮಾತನಾಡಿ ನೆರೆಯಿಂದ ತತ್ತರಿಸಿ, ಬದುಕು ನೆರೆಯಲ್ಲಿ ಕೊಚ್ಚಿಕೊಂಡು ಹೋಗಿದ್ದರೂ ಮತದಾರರು ತಮ್ಮ ಸಂಕಷ್ಟಕ್ಕೆ ಆಗದ, ಸೂಕ್ತ ಪರಿಹಾರ ನೀಡದವರನ್ನೇ ಆಯ್ಕೆ ಮಾಡಿದ್ದೀರಿ ಎಂದು ದೂಷಿಸಿದರು. 

ಉಪ ಚುನಾವಣೆಯಲ್ಲಿ ಜನರ ಸಂಕಷ್ಟ್ಟಕ್ಕೆ ಸ್ಪಂದಿಸದ ಬಿಜೆಪಿಗೆ ಮತ್ತು ಆಪರೇಷನ್ ಕಮಲಕ್ಕೆ ಒಳಗಾಗಿ, ಶಾಸಕತ್ವದಿಂದ ಅನರ್ಹರಾದವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎನ್ನುವ ನಂಬಿಕೆಯಲ್ಲಿದ್ದೆ. ಆ ನಂಬಿಕೆಯನ್ಮೂ ಮತದಾರ ಹುಸಿಗೊಳಿಸಿದ್ದು ಅವರ ಮನಸ್ಸನ್ನು ಇನ್ನಷ್ಟು  ಘಾಸಿಗೊಳಿಸಿದೆ ಎನ್ನುವುದು ಅವರ ಮಾತಿನಲ್ಲೇ ವ್ಯಕ್ತಗೊಳ್ಳುತ್ತಿತ್ತು.

ಮತದಾರನ ವಿರುದ್ದ ಅಸಮಾಧಾನ ಮುಂದುವಿರಿಸಿದ ಅವರು ನಾನು ಸಿಎಂ ಆಗಬಾರದು ಎನ್ನುವ ಕಾರಣಕ್ಕೆ ಎಲ್ಲರೂ ಸೇರಿ ಸೋಲಿಸಿದರು ಎಂದು ತಮ್ಮೊಳಗೆ ಕುದಿಯುತ್ತಿರುವ ಸೋಲಿನ ಕಿಚ್ಚನ್ನು ಹೊರಹಾಕಿದರು.

ತಮ್ಮ ಹಾಗೂ ಕಾಂಗ್ರೆಸ್ ಪಕ್ಷದ ಸತತ ಸೋಲಿನ ಮಧ್ಯೆ ನೈತಿಕ ಹೊಣೆ ಹೊತ್ತು ಪಕ್ಷದ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ನೀಡಿ ತಿಂಗಳು ಕಳೆದರೂ ಅದು ಅಂಗೀಕಾರವಾಗಿಲ್ಲ. ಪಕ್ಷದ ಹೈಕಮಾಂಡ್ ರಾಜೀನಾಮೆ ಅಂಗೀಕಾರ ಮಾಡುತ್ತೋ ಇಲ್ಲವೆ ಇವರನ್ನೇ ಮುವರಿಸುತ್ತೋ ಎನ್ನುವುದು ಇನ್ನೂ ಸಷ್ಟವಾಗಿಲ್ಲ.

ಕಾಂಗ್ರೆಸ್‌ನಲ್ಲಿ ಈಗಾಗಲೇ ವಲಸಿಗರು,ಮೂಲ ಕಾಂಗ್ರೆಸ್ಸರು ಎನ್ನುವ ಮಾತು ಸಿದ್ದರಾಮಯ್ಯ ವಿಷಯದಲ್ಲಿ  ಧಗಧಗಿಸುತ್ತಿದೆ. ಮೂಲ ಕಾಂಗ್ರೆಸ್ಸಿಗರು ಶತಾಯಗತಾಯ ಬೇರೆಯವರಿಗೆ ಅವಕಾಶ ನೀಡುವಂತೆ ಹೈ ಕಮಾಂಡ್ ಮೇಲೆ ಇನ್ನಿಲ್ಲದ ಒತ್ತಡ ಹಾಕುತ್ತಿದ್ದಾರೆ.  

ಮೂಲ, ವಲಸಿಗ ಎನ್ನುವ ವಾದದಿಂದ ಕಂಗೆಟ್ಟಿರುವ ಸಿದ್ದರಾಮಯ್ಯ, ಇರುವ ಸ್ಥಾನ ಎಲ್ಲಿ ಕೈ ಬಿಟ್ಟು ಹೋಗುವುದೋ ಎನ್ನುವ ಆತಂಕದಲ್ಲಿ ಬೆಂಬಲಿಗರ ಮೂಲಕ ತಮ್ಮನ್ನೇ ಪ್ರತಿಪಕ್ಷ ಸ್ಥಾನದಲ್ಲಿ ಮುಂದುವರಿಸುವಂತೆ ಒತ್ತಡ ಹಾಕಿಸುತ್ತಿದ್ದಾರೆ.

ಏತನ್ಮಧ್ಯೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು  ಗುಂಡೂರಾವ್ ಮತ್ತು ಸಿದ್ದರಾಮಯ್ಯ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಗಳ ಭರ್ತಿ ಕುರಿತು ಚರ್ಚಿಸಲು ಕೇವಲ ಜಿ.ಪರಮೇಶ್ವರ ಅವರಿಗೆ ಮಾತ್ರ ಆಹ್ವಾನ ನೀಡಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. 

ಸಿದ್ದರಾಮಯ್ಯ ಸೇರಿದಂತೆ ಪಕ್ಷದ ಕೆಲ ಹಿರಿಯ ಮುಖಂಡರು ಸೋನಿಯಾರಿಂದ ತಮಗೆ ಬುಲಾವ್ ಬರಬಹುದು ಎನ್ನುವ ನಿರೀಕ್ಷೆಯಲ್ಲಿದ್ದರು. ಆ ನಿರೀಕ್ಷೆ ಹುಸಿಯಾಗಿದೆ. 

ಚಾಮುಂಡಿಯಲ್ಲಿನ ಸೋಲು, ಉಪಚುವಣೆಯಲ್ಲಿ ಪಕ್ಷದ ಸೋಲು ಸೇರಿದಂತೆ ಹತ್ತು ಹಲವು ರಾಜಕೀಯ ಕಾರಣಗಳಿಂದಾಗಿ ಸಿದ್ದರಾಮಯ್ಯ ಅವರಲ್ಲಿ ಅಡಗಿಕೊಂಡಿದ್ದ ಸೋಲಿನ ಕಿಚ್ಚು ಗುರುವಾರ ಮತ್ತೆ ಕಾಣಿಸಿಕೊಂಡಿರುವುದಕ್ಕೆ ಕಾರಣವಿರಬಹುದು ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

ವಿಠ್ಠಲ ಆರ್. ಬಲಕುಂದಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com