ಸಂಪುಟ ಸೇರ್ಪಡೆ ಕಸರತ್ತು; ಆಯಕಟ್ಟಿನ ಸ್ಥಾನಗಳ ಮೇಲೆ ಮಾಜಿ ಶಾಸಕರ ಕಣ್ಣು 

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸಂಪುಟ ಸೇರ್ಪಡೆಗೆ ಒಂದೆಡೆ ಶಾಸಕರು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದರೆ, ಇನ್ನೊಂದು ಕಡೆ ನಿಗಮ, ಮಂಡಳಿಗಳ ಮೇಲೆ ಮಾಜಿ ಶಾಸಕರು, ಪಕ್ಷದ ಹಿರಿಯ ಮುಖಂಡರು ಕಣ್ಣಿಟ್ಟಿದ್ದಾರೆ.  
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬಾಗಲಕೋಟೆ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸಂಪುಟ ಸೇರ್ಪಡೆಗೆ ಒಂದೆಡೆ ಶಾಸಕರು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದರೆ, ಇನ್ನೊಂದು ಕಡೆ ನಿಗಮ, ಮಂಡಳಿಗಳ ಮೇಲೆ ಮಾಜಿ ಶಾಸಕರು, ಪಕ್ಷದ ಹಿರಿಯ ಮುಖಂಡರು ಕಣ್ಣಿಟ್ಟಿದ್ದಾರೆ.  

ಮುಖ್ಯಮಂತ್ರಿ ಯಡಿಯೂರಪ್ಪ ಈಗಾಗಲೇ ಆಯಕಟ್ಟಿನ ಸ್ಥಾನಗಳಿಗೆ ನಿಷ್ಠಾವಂತರ ನೇಮಕ ಪ್ರಕ್ರಿಯೆ ಆರಂಭಿಸಿದ್ದು, ಜಿಲ್ಲೆಯಲ್ಲಿ ಮಾಜಿ ಶಾಸಕರು, ಪಕ್ಷದ ಹಿರಿಯ ಮುಖಂಡರು ನಿಗಮ ಮಂಡಳಿ ಅಧ್ಯಕ್ಷ ಸ್ಥಾನಗಳಿಗಾಗಿ ಪೈಪೋಟಿ ನಡೆಸಿದ್ದಾರೆ. ಜಿಲ್ಲೆಯಲ್ಲೂ ಮಾಜಿ ಶಾಸಕರ ಸಂಖ್ಯೆ ಬಹುದೊಡ್ಡದಾಗಿದೆ. ಮಾಜಿ ಶಾಸಕರಾದ ಪಿ.ಎಚ್. ಪೂಜಾರ, ಶ್ರೀಕಾಂತ ಕುಲಕರ್ಣಿ, ನಾರಾಯಣಸಾ ಭಾಂಡಗೆ ಮಲ್ಲಿಕಾರ್ಜುನ ಬನ್ನಿ, ರಾಜಶೇಖರ ಶೀಲವಂತ ಸೇರಿದಂತೆ ಪಕ್ಷದ ಹಿರಿಯ ಮುಖಂಡರಾದ ಪ್ರಕಾಶ ತಪಶೆಟ್ಟಿ, ಜಿ.ಎನ್.ಪಾಟೀಲ, ಬಸಲಿಂಗಪ್ಪ ನಾವಲಗಿ, ಈರಪ್ಪ ಐಕೂರ, ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಮಣ್ಣ ತಳೇವಾಡ, ಶಶಿಕಾಂತ ವಿಶ್ವಬ್ರಾಹ್ಮಣ, ವಿ.ಎಸ್. ಪಂಚಗಾವಿ, ಉಮೇಶ ಮಹಾಬಳಶೆಟ್ಟಿ, ಮನೋಹರ ಶಿರೋಳ ಸೇರಿದಂತೆ ಉದ್ದನೆಯ ಪಟ್ಟಿಯೇ ಇದೆ. ಇವರಲ್ಲಿ ಬಹುತೇಕ ಎಲ್ಲರೂ ನಿಗಮ, ಮಂಡಳಿಗಳ ನೇಮಕದಲ್ಲಿ ತಮಗೆ ಅವಕಾಶ ಸಿಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ.

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸೇರಿದಂತೆ ನಾನಾ ಪ್ರಾಧಿಕಾರಿಗಳಿಗೆ ಪಕ್ಷದ ಮುಖಂಡರನ್ನು ನೇಮಕ ಮಾಡಲಾಗುತ್ತಿದ್ದು, ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಸೇರಿದಂತೆ ಜಿಲ್ಲೆಯ ನಗರ ಯೋಜನಾ ಪ್ರಾಧಿಕಾರಿಗಳಿಗೆ ನೇಮಕ ಪ್ರಕ್ರಿಯೆ ನಡೆಯಬೇಕಿದೆ. ಸದ್ಯ ಜಿಲ್ಲೆಯಲ್ಲಿ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಸಭಾಪತಿ ಸ್ಥಾನಕ್ಕೆ ಯಾರ ನೇಮಕ ಆಗಲಿದೆ ಎನ್ನುವುದು ಕುತೂಹಲದ ಸಂಗತಿ ಆಗಿದೆ.  ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಮುಳಗಡೆ ಬಾಧಿತ ಸಂತ್ರಸ್ತರಿಗೆ ಪರಿಹಾರ, ಸ್ಥಳಾಂತರ,ಪುನರ್ವಸತಿ, ಅಗತ್ಯ ಸೌಲಭ್ಯಗಳು ಸೇರಿದಂತೆ ಯುನಿಟ್-೩ ರ ಅಭಿವೃದ್ಧಿ ಮತ್ತು ಹಿನ್ನೀರಿನಿಂದ ಆವೃತಗೊಂಡು ನಡುಗಡ್ಡೆ ಪ್ರದೇಶವಾಗಲಿರುವ ಕಿಲ್ಲಾ ಪ್ರದೇಶ ಸ್ಥಳಾಂತರದ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಮಹತ್ತರ ಕೆಲಸ ಆಗಬೇಕಿದ್ದು, ಅದೆಲ್ಲ ಬಿಟಿಡಿಎ ಮೂಲಕವೇ ಆಗಬೇಕಿರುವುದರಿಂದ ಬಿಟಿಡಿಎ ಸಭಾಪತಿ ಸ್ಥಾನ ಇನ್ನಿಲ್ಲದ ಮಹತ್ವ ಪಡೆದುಕೊಂಡಿದೆ. 

ಸಭಾಪತಿ ಸ್ಥಾನದ ನೇಮಕ ವಿಷಯದಲ್ಲಿ ಬಾಗಲಕೋಟೆ ಶಾಸಕರ ಮಾತೇ ಅಂತಿಮವಾಗಿದ್ದರೂ ಪಕ್ಷದ ಹಿರಿಯರಿಗೆ ಸ್ಥಾನಮಾನ ಕಲ್ಪಿಸುವಲ್ಲಿ ಅವರು ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನುವುದು ಸಹಜವಾಗಿಯೇ ಪ್ರಾಮುಖ್ಯತೆ ಪಡೆದುಕೊಳ್ಳಲಿದೆ. ಸದ್ಯದ ವಿದ್ಯಮಾನಗಳ ಪ್ರಕಾರ ಶಾಸಕರೇ ಬಿಟಿಡಿಎ ಸಭಾಪತಿ ಆಗಬೇಕು ಎನ್ನುವ ಬಗ್ಗೆ ಸಾಕಷ್ಟು ಒಲವು  ಪಕ್ಷದ ಆಂತರಿಕ ವಲಯದಲ್ಲಿ ಕೇಳಿ ಬರುತ್ತಿದೆ. ಆದರೆ ರಾಜಕಾರಣದಲ್ಲಿ ಯಾವುದೇ ಸಮಯದಲ್ಲಿ ಏನೂ ಬೇಕಾದರೂ ನಡೆಯಬಹುದು. ಪಕ್ಷದ ರಾಜ್ಯ ನಾಯಕರು ಮಾಜಿ ಶಾಸಕರು ಇಲ್ಲವೆ ಪಕ್ಷದ ಹಿರಿಯರಿಗೆ ಮಣೆ ಹಾಕಲು ಮುಂದಾಗಬಹುದು ಎನ್ನುವುದನ್ನು ತಳ್ಳಿ ಹಾಕುವಂತಿಲ್ಲ. ನಿಗಮ,ಮಂಡಳಿಗಳ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟವರ ಪೈಕಿ ಯಾರಿಗಾದರೂ ಅವಕಾಶ ಕಲ್ಪಿಸುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. 

ಮುಧೋಳ ಮೀಸಲು ಕ್ಷೇತ್ರದಿಂದ ಐದು ಬಾರಿ ಶಾಸಕರಾಗಿರುವ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳರು ಈ ಬಾರಿಯಾದರೂ ಮುಧೋಳ ಕ್ಷೇತ್ರದಲ್ಲಿ ತಮ್ಮ ಬೆಂಬಲಿಗರ ಪೈಕಿ ಎಷ್ಟು ಜನರಿಗೆ ನಿಗಮ,ಮಂಡಳಿಗಳಲ್ಲಿ ಅವಕಾಶ ಕಲ್ಪಿಸುತ್ತಾರೆ ಎನ್ನುವುದು ಕೂಡಾ ಅಷ್ಟೆ ಮಹತ್ವದ್ದಾಗಿದೆ. ಡಿಸಿಸಿ ಬ್ಯಾಂಕ್, ರನ್ನ ಸಹಕರಿ ಸಕ್ಕರೆ ಕಾರ್ಖಾನೆ, ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಸ್ಥಾನ ಬಿಟ್ಟು ಇದುವರೆಗೂ ಯಾವುದೇ ನಿಗಮ,ಮಂಡಳಿಗೆ ನೇಮಕಗೊಂಡಿಲ್ಲ. ಇವರಂತೆ ಅನೇಕ ಮುಖಂಡರು ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಕೆಲಸ ಮಾಡಿದ್ದಾರೆ. ಅವರೆಲ್ಲ ಈ ಬಾರಿಯಾದರೂ ಅವಕಾಶ ಸಿಗಬಹುದು ಎನ್ನುವ ನಿರೀಕ್ಷೆಯಲ್ಲಿ ಇದ್ದಾರೆ. ಇವರ ಜತೆಗೆ ಪಕ್ಷಕ್ಕಾಗಿ ದುಡಿದ ಸಾಕಷ್ಟು ಜನ ಹಿರಿಯ ಮುಖಂಡರು, ಸಂಘ ಪರಿವಾರದ ಹಿರಿಯರು ಇದ್ದಾರೆ. ಇವರ ಪೈಕಿ ಯಾರಿಗೆ ನಿಗವ,ಮಂಡಳಿಗಳಲ್ಲಿ ಅವಕಾಶ ಸಿಕ್ಕಲಿದೆ ಎನ್ನುವುದು ಆಯಾ ಕ್ಷೇತ್ರಗಳಲ್ಲಿನ ಶಾಸಕರ ಇಚ್ಛಾಶಕ್ತಿಯನ್ನು ಅವಲಂಭಿಸಿದೆ. ಅದೃಷ್ಟ ಯಾರ ಪಾಲಿಗೆ ಖುಲಾಯಿಸಲಿದೆ ಎನ್ನುವುದಕ್ಕೆ ಇನ್ನಷ್ಟು ಸಮಯ ಕಾಯಬೇಕಷ್ಟೆ!.

-ವಿಠ್ಠಲ ಆರ್. ಬಲಕುಂದಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com