ಸಿಎಎ, ಎನ್ಆರ್‌ಸಿ ಚಳುವಳಿಯ ಅಲೆ: ರಾಜಕೀಯ ಬೇಳೆ ಬೇಯಿಸಿಕೊಳ್ಳಲು ದೇವೇಗೌಡರ ಪ್ರಯತ್ನ

ಕರ್ನಾಟಕವೂ ಸೇರಿದಂತೆ ದೇಶಾದ್ಯಂತ ಎನ್‌ಆರ್‌ಸಿ ಮತ್ತು ಸಿಎಎ ಹೋರಾಟದ ಅಲೆ ಪ್ರಬಲವಾಗುತ್ತಿದೆ. ವಿಶೇಷವಾಗಿ ಕ್ರಿಶ್ಚಿಯನ್ ಸಂಘಟನೆಗಳು, ಮುಸ್ಲಿಂ ಸಂಘಟನೆಗಳು, ಪ್ರಗತಿಪರರು ವಿದ್ಯಾರ್ಥಿಗಳು, ಖಾಸಗಿ ಸರ್ಕಾರಿ ವಿಶ್ವವಿದ್ಯಾಲಯಗಳು‌, ಕಾಲೇಜುಗಳು ಹೋರಾಟದ ಮುಂಚೂಣಿಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ.
ಎಚ್.ಡಿ ದೇವೇಗೌಡ
ಎಚ್.ಡಿ ದೇವೇಗೌಡ

ಬೆಂಗಳೂರು: ಕರ್ನಾಟಕವೂ ಸೇರಿದಂತೆ ದೇಶಾದ್ಯಂತ ಎನ್‌ಆರ್‌ಸಿ ಮತ್ತು ಸಿಎಎ ಹೋರಾಟದ ಅಲೆ ಪ್ರಬಲವಾಗುತ್ತಿದೆ. ವಿಶೇಷವಾಗಿ ಕ್ರಿಶ್ಚಿಯನ್ ಸಂಘಟನೆಗಳು, ಮುಸ್ಲಿಂ ಸಂಘಟನೆಗಳು, ಪ್ರಗತಿಪರರು ವಿದ್ಯಾರ್ಥಿಗಳು, ಖಾಸಗಿ ಸರ್ಕಾರಿ ವಿಶ್ವವಿದ್ಯಾಲಯಗಳು‌, ಕಾಲೇಜುಗಳು ಹೋರಾಟದ ಮುಂಚೂಣಿಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಈ ಹೋರಾಟವನ್ನು ರಾಜಕೀಯವಾಗಿ ಹೇಗೆ ಬಳಸಿಕೊಳ್ಳಬಹುದೆಂಬ ಪ್ರಯತ್ನಗಳು ಕೂಡ ನಡೆಯುತ್ತಿವೆ. 

ರಾಜಕೀಯ ಪಕ್ಷಗಳು ಮುಖಂಡರು ಹೋರಾಟದಲ್ಲಿ ಗುರುತಿಸಿಕೊಳ್ಳಲು ಆರಂಭಿಸಿದ್ದಾರೆ. ಇದೇ ಸಂದರ್ಭದಲ್ಲಿ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಕೂಡ ಜಾತ್ಯತೀತ ಶಕ್ತಿಗಳು ಒಗ್ಗೂಡಬೇಕು. ಹಿಂದೆ ಒಗ್ಗೂಡಿಸುವ ಪ್ರಯತ್ನ ಯಾರೊಬ್ಬರಿಂದ ಆಗಲಿಲ್ಲ. ಈಗ ಜಾರ್ಖಂಡ್ ನಲ್ಲಿ ಈ ಕೆಲಸವಾಗಿದೆ. ಜೀವನದ ಸಂಧ್ಯಾಕಾಲದಲ್ಲಿರುವ ನಾನು ನನ್ನ ಕೊನೆಯ ಪ್ರಯತ್ನವಾಗಿ ಪ್ರಾದೇಶಿಕ ಪಕ್ಷಗಳ ಒಗ್ಗೂಡಿಸುವಿಕೆಗೆ ಕೈ ಹಾಕುತ್ತೇನೆ ಎಂದಿದ್ದಾರೆ.

ಶುಕ್ರವಾರ ಹೆಸರಘಟ್ಟ ಸಮೀಪದ‌ ಬಾಗಲಗುಂಟೆಯ ಎಂಇಎಸ್ ಮೈದಾನದಲ್ಲಿ ಆಯೋಜಿಸಿದ್ದ ಎನ್ಆರ್ ಸಿ‌ ಮತ್ತು ಸಿಎಎ ಶಾಂತಿಯುತ ತಿಳುವಳಿಕೆ ಕಾರ್ಯಕ್ರಮ-ಸಂವಿಧಾನ ಉಳಿಸಿ- ಭಾರತದ ಆಸ್ಮಿತೆಗೆ, ಸಂವಿಧಾನದ ಮೂಲ ಆಶಯಗಳಿಗೆ ಎನ್ಆರ್ ಸಿ ಮತ್ತು ಸಿಎಎ ಕಾಯ್ದೆಯಿಂದಾಗುವ ಅನಾನುಕೂಲತೆ ಕುರಿತ ಬಹಿರಂಗ ಚರ್ಚಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ದೇವೇಗೌಡರು ಇಂತಹದ್ದೊಂದು‌ ಹೇಳಿಕೆಯನ್ನು ನೀಡಿದ್ದಾರೆ.

ಪೌರತ್ವ ತಿದ್ದುಪಡಿ ಕಾಯಿದೆಯನ್ನು ತಂದು ಮೋದಿ ವಿಶ್ವಾಸ ಗಳಿಸಲು ಸಾಧ್ಯವಿಲ್ಲ. ಇಡೀ ಹಿಂದೂಸ್ತಾನದಲ್ಲಿ ಜಾತ್ಯತೀತ ಶಕ್ತಿ ಗಳು ಒಂದುಗೂಡಬೇಕು. ಲೋಕಸಭೆಯಲ್ಲಿ 300 ಸ್ಥಾನಗಳನ್ನು ಗಳಿಸಿದ ಬಿಜೆಪಿಗೆ ಧೈರ್ಯ ಬಂದಿದೆ. ಈ ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಕಾನೂನು ತಿದ್ದುಪಡಿ ಮಾಡಲು ರಾಜ್ಯಸಭೆ, ಲೋಕಸಭೆಯಲ್ಲಿ ಬಹುಮತ ಇರಬೇಕು. ಆದರೆ ರಾಜ್ಯಸಭೆಯಲ್ಲಿ ಇದಕ್ಕೆ ಬಹುಮತ ಇಲ್ಲ. ಕೆಲವರು ಒತ್ತಡ ಹೇರಿ ಬಿಜೆಪಿ ಪಕ್ಷ ಸೇರುವಂತೆ ಮಾಡಿದ್ದಾರೆ. ದೇಶದಲ್ಲಿರುವುದು ಅಘೋಷಿತ ತುರ್ತುಪರಿಸ್ಥಿತಿ. ಅಧಿಕಾರಕ್ಕೋಸ್ಕರ ನಾವು ಅನ್ಯ ದಾರಿಯನ್ನು ಹಿಡಿಯುತ್ತೇವೆ. ಈ ಬಗ್ಗೆ ನಮಗೆ ನಾವೇ ಪ್ರಶ್ನೆ ಮಾಡಿಕೊಳ್ಳಬೇಕು ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ಗೌಡರು ಮನೆಯಲ್ಲಿ ಸುಮ್ಮನೆ ಮಲಗುವುದಿಲ್ಲ. ಕಾಲ ಬರುತ್ತೆ. ಹೋರಾಟಕ್ಕೆ ನಿಲ್ಲುವೆ. ಇವತ್ತು ಸೋತು ಮನೆಯಲ್ಲಿದ್ದೇನೆ‌. ಇನ್ನೂ ಏಕೆ ಬದುಕಿದ್ದೇನೆ ಎನ್ನುವುದು ಗೊತ್ತಿದೆ. ರಾಜ್ಯಕ್ಕೆ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿಯನ್ನು ಕರೆಸುತ್ತೇನೆ. ಮೈತ್ರಿ ಸರ್ಕಾರ ರಚನೆ ಸಂದರ್ಭದಲ್ಲಿ ಡಾ‌.ಜಿ.ಪರಮೇಶ್ವರ್ ಹಾಗೂ ಹೆಚ್.ಡಿ. ಕುಮಾರಸ್ವಾಮಿ ಪ್ರಮಾಣವಚನ‌ ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿ ಸೇರಿದಂತೆ‌‌ ದೇಶದ ಹಲವು ಪ್ರಾದೇಶಿಕ ನಾಯಕರು‌ ಬಂದಿದ್ದರು. ಆಗಲೇ ಬಿಜೆಪಿ ವಿರುದ್ಧದ ಅಲೆಗೆ ವೇದಿಕೆ ಸೃಷ್ಟಿಯಾಗಿತ್ತು. ತೃತೀಯ ರಂಗ ರಚನೆಯ ಪ್ರಯತ್ನ‌ ಯಶಸ್ವಿಯಾಗಲಿಲ್ಲ. ಈಗ ಮತ್ತೊಮ್ಮೆ ಇಂತಹ ಪ್ರಯತ್ನಕ್ಕೆ ಕೈಹಾಕಬೇಕು‌, ಎಲ್ಲಾ ಮರೆತು ಮುಂದಿನ ಚುನಾವಣೆಯಲ್ಲಿ ಒಗ್ಗಟ್ಟಾಗಿ ಹೋಗಲು ಪ್ರಯತ್ನಿಸುವುದಾಗಿ ಹೇಳಿದ್ದಾರೆ.

ಎನ್ಆರ್‌ಸಿ ಮತ್ತು ಸಿಎಎ ಚಳುವಳಿ ದೇಶದಲ್ಲಿ ಆರಂಭವಾಗಿ ಸರಿಸುಮಾರು ಎರಡು ತಿಂಗಳಾಗುತ್ತಲೇ ಬಂದಿದ್ದರೂ ಇಲ್ಲಿಯವರೆಗೂ ದೇವೇಗೌಡರಾಗಲೀ ಜೆಡಿಎಸ್ ಪಕ್ಷವಾಗಲೀ ಎನ್‌ಆರ್‌ಸಿ, ಸಿಎಎ ಚಳುವಳಿಯನ್ನಾಗಲೀ ಸಂಘಟನೆಯನ್ನಾಗಲೀ ಮುನ್ನಡೆಸಿದ ಅಥವಾ ಸಂಘಟಿಸಿದ ಉದಾಹರಣೆ ಇಲ್ಲ. ಆದರೂ ಚಳವಳಿಯ ಅಲೆಯಲ್ಲಿ ತೂರಿಕೊಂಡು ಹೋಗುವ ಪ್ರಯತ್ನವನ್ನು ದೇವೇಗೌಡರೀಗ ಮಾಡುತ್ತಿದ್ದಾರೆ. ದೇಶಾದ್ಯಂತ‌‌ ಸೇರಿದಂತೆ‌ ಕರ್ನಾಟಕದಲ್ಲಿಯೂ ಪೌರತ್ವ ತಿದ್ದುಪಡಿ ಕಾಯಿದೆ ವಿರೋಧದ ಹೋರಾಟ ತೀವ್ರವಾಗಿದೆ. ಸಿಎಎ ಹೋರಾಟದ‌ ಮುಂಚೂಣಿಯಲ್ಲಿ ದೇವೇಗೌಡರು ಕಾಣಿಸಲಿಲ್ಲ. ಈ ಅಲೆಯಲ್ಲಿ ತೂರಿಕೊಂಡು ಹೋಗುವ ಇವರ ಪ್ರಯತ್ನ ಇದಾಗಿದೆ.

ಎನ್‌ಆರ್‌ಸಿ ಕುರಿತ ಚರ್ಚೆಯಲ್ಲಿ ದೇವೇಗೌಡರು ತೃತೀಯ ರಂಗ ರಚನೆ ಬಗ್ಗೆ ಪ್ರಾದೇಶಿಕ ನಾಯಕರನ್ನು ಕರೆಸುವ ಬಗ್ಗೆ ಮಾತನಾಡಿದ್ದಾರೆ. ಆದರೆ ಪ್ರಸಕ್ತ ರಾಷ್ಟ್ರರಾಜಕಾರಣದ ಸಂದರ್ಭದಲ್ಲಿ ಇಂತಹದ್ದೊಂದು ತೃತೀಯ ರಂಗ‌ ಪ್ರಾದೇಶಿಕ ವಿಷಯಗಳನ್ನೇ‌ ಇಟ್ಟುಕೊಂಡು ಹೋಗಲು ಸಾಧ್ಯವಿದೆಯೇ ? ಅಥವಾ ರಾಷ್ಟ್ರಮಟ್ಟದಲ್ಲಿ ಬಿಜೆಪಿಗೆ ಪರ್ಯಾಯವಾಗಿ ಒಂದು ಶಕ್ತಿ ಎನ್‌ಆರ್‌ಸಿ,‌ ಸಿಎಎ ಚಳ ವಳಿಗಳ ಮೂಲಕ ಹೊರಹೊಮ್ಮುವ ಸಾಧ್ಯತೆ ಇದೆಯೇ ? ದೇವೇಗೌಡರ ಹೇಳಿಕೆಗಳನ್ನು ನೈಜ ಹೋರಾಟಗಾರರು ಎಷ್ಟರಮಟ್ಟಿಗೆ ನಂಬಬಲ್ಲರು?

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com