ಈ ಬಾರಿಯೂ ಡಿಕೆಶಿ ಕೈತಪ್ಪುತ್ತಾ? ಅಖಂಡ ವಿಜಯಪುರ ಸುತ್ತ ಗಿರಕಿ ಹೊಡೆಯುತ್ತಿದೆ ಕೆಪಿಸಿಸಿ ಅಧ್ಯಕ್ಷ ಗಾದಿ!

ಸತತ ಸೋಲುಗಳಿಂದ ಕಂಗೆಟ್ಟು ಹೋಗಿರುವ ಕಾಂಗ್ರೆಸ್ ಪಕ್ಷಕ್ಕೆ ಮತ್ತೇ ಶಕ್ತಿ ತುಂಬಲು ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಈ ಬಾರಿ ಉತ್ತರ ಕರ್ನಾಟಕ ಭಾಗಕ್ಕೆ ನೀಡಬೇಕು. ಅದರಲ್ಲೂ ಲಿಂಗಾಯತ ಸಮುದಾಯಕ್ಕೆ   ಆದ್ಯತೆ ಇರಲಿ ಎನ್ನುವ ವಾದ ದಿನದಿಂದ ದಿನಕ್ಕೆ ಗಟ್ಟಿಯಾಗುತ್ತಿದೆ.
ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್

ಬಾಗಲಕೋಟೆ: ಸತತ ಸೋಲುಗಳಿಂದ ಕಂಗೆಟ್ಟು ಹೋಗಿರುವ ಕಾಂಗ್ರೆಸ್ ಪಕ್ಷಕ್ಕೆ ಮತ್ತೇ ಶಕ್ತಿ ತುಂಬಲು ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಈ ಬಾರಿ ಉತ್ತರ ಕರ್ನಾಟಕ ಭಾಗಕ್ಕೆ ನೀಡಬೇಕು. ಅದರಲ್ಲೂ ಲಿಂಗಾಯತ ಸಮುದಾಯಕ್ಕೆ ಆದ್ಯತೆ ಇರಲಿ ಎನ್ನುವ ವಾದ ದಿನದಿಂದ ದಿನಕ್ಕೆ ಗಟ್ಟಿಯಾಗುತ್ತಿದೆ.

ಉತ್ತರ ಕರ್ನಾಟಕದಲ್ಲಿ ಅತೀ ಹೆಚ್ಚು ಸ್ಥಾನಗಳನ್ನು ಗೆಲ್ಲದ ಹೊರತು ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ ಎನ್ನುವುದನ್ನು ಮನಗಂಡಿರುವ ಕಾಂಗ್ರೆಸ್ ಮುಖಂಡರು ರಾಜ್ಯಾಧ್ಯಕ್ಷ ಗಾದಿಗೆ ಉತ್ತರ ಕರ್ನಾಟಕದವರೆ ಆಗಬೇಕು ಎಂದು ವಾದಿಸುತ್ತಿದ್ದಾರೆ.

ರಾಜ್ಯ ಕಾಂಗ್ರೆಸ್ ಪಾಳೆಯದಲ್ಲಿ ಉತ್ತರ ಕರ್ನಾಟಕಕ್ಕೆ ಅಧ್ಯಕ್ಷ ಸ್ಥಾನ ನೀಡಬೇಕು ಎನ್ನುವ ವಾದ ಗಟ್ಟಿಗೊಳ್ಳುತ್ತಲೇ ಅಖಂಡ ವಿಜಯಪುರ ಜಿಲ್ಲೆಯ ಕಾಂಗ್ರೆಸ್ ಮುಖಂಡರಲ್ಲಿ ಅಧ್ಯಕ್ಷ ಸ್ಥಾನದ ಆಶಯ ಚಿಗುರೊಡೆದಿದೆ. ಲಿಂಗಾಯತ ಸಮುದಾಯಕ್ಕೆ ಪ್ರಾಧಾನ್ಯತೆ ಎನ್ನುವುದಾದಲ್ಲಿ ತಮಗೆ ಅಧ್ಯಕ್ಷ ಸ್ಥಾನ ನೀಡಲಿ ಎಂದು ಮಾಜಿ ಗೃಹ ಸಚಿವ ಎಂ.ಬಿ. ಪಾಟೀಲ ಹೇಳಿದ್ದಾರೆ. ಇವರ ಹೇಳಿಕೆ ಬೆನ್ನಲ್ಲೇ ಮೇಲ್ಮನೆ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ ಕೂಡ ರಾಜಕಾರಣದಲ್ಲಿ ಯಾರೂ ಸನ್ಯಾಸಿಗಳಲ್ಲ ಎಂದು ಹೇಳುವ ಮೂಲಕ ತಾವೂ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿ ಎಂದು ಪರೋಕ್ಷವಾಗಿ ಹೇಳಿಕೊಳ್ಳುವ ಜತೆಗೆ ತಮಗೆ ಅವಕಾಶ ನೀಡಿದಲ್ಲಿ ನಿಭಾಯಿಸುವುದಾಗಿಯೂ ಹೇಳಿದ್ದಾರೆ.

ಉಭಯ ಮುಖಂಡರೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲಿಗರು ಎನ್ನುವುದು ನಿರ್ವಿವಾದ. ಎಂ.ಬಿ.ಪಾಟೀಲರಂತೂ ಸಿದ್ದರಾಮಯ್ಯ ಸಹಕಾರವಿಲ್ಲದೆ ಪಕ್ಷ ಕಟ್ಟವುದು ಸಾಧ್ಯವೇ ಇಲ್ಲವೆಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ. ಹಾಗೆ ಎಸ್ ಆರ್ ಪಾಟೀಲ ಕೂಡಲ ಸಿದ್ದರಾಮಯ್ಯ ಅವರೊಂದಿಗೆ ಅಂತರ ಕಾಯ್ದು ಕೊಂಡಿಲ್ಲ. ಕಾರ್ಯ ಬಾಹುಳ್ಯದ ಹಿನ್ನೆಲೆಯಲ್ಲಿ ಅವರೊಂದಿಗೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿಲ್ಲ ಎಂದು ಹೇಳಿಕೊಂಡಿದ್ದಾರೆ.

ಯಾರೇ ಕೆಪಿಸಿಸಿ ಅಧ್ಯಕ್ಷರಾಗಬೇಕಾದರೂ ಸಿದ್ದರಾಮಯ್ಯ ಬೆಂಬಲ ಅನಿವಾರ್ಯ ಎನ್ನುವ ಸ್ಥಿತಿ ಕಾಂಗ್ರೆಸ್‌ನಲ್ಲಿ ನಿರ್ಮಾಣವಾಗಿದೆ ಎನ್ನುವುದು ಉಭಯ ಮುಖಂಡರ ಮಾತಿನಿಂದ ಸ್ಪಷ್ಟವಾಗುತ್ತಿದೆ. ಈ ಹಿಂದೆ ಗುಂಡೂರಾವ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಗೊಂಡ ಸಮಯದಲ್ಲಿಯೇ ಎಂ.ಬಿ. ಪಾಟೀಲ ಮತ್ತು ಎಸ್.ಆರ್. ಪಾಟೀಲರ ಹೆಸರುಗಳು ಮುಂಚೂಣಿಯಲ್ಲಿ ಓಡಾಡಿದ್ದವು. ಕೊನೆ ಗಳಿಗೆಯಲ್ಲಿ ಅಧ್ಯಕ್ಷ ಸ್ಥಾನ ಗುಂಡೂರಾವ್ ಅವರ ಪಾಲಾಗಿತ್ತು.

ಇದೀಗ ಅಧ್ಯಕ್ಷ ಸ್ಥಾನಕ್ಕಾಗಿ ಹಲವರ ಮಧ್ಯೆ ಪೈಪೋಟಿ ನಡೆದಿದ್ದು ಅಖಂಡ ಜಿಲ್ಲೆಯ ಇಬ್ಬರು ಮುಖಂಡರು ತೀವ್ರ ಪ್ರಯತ್ನ ನಡೆಸಿದ್ದು, ಈಗಾಗಲೇ ದೆಹಲಿಯಲ್ಲಿನ ಹೈ ಕಮಾಂಡ್ ಬಾಗಿಲು ತಟ್ಟಿ ಬಂದದ್ದೂ ಆಗಿದೆ. ಈಗ ಏನಿದ್ದರೂ ಸಿದ್ದರಾಮಯ್ಯ ಅಸ್ತು ಎನ್ನಬೇಕಿದೆ. ಪಕ್ಷವನ್ನು ಮುಂದಿನ ದಿನಗಳಲ್ಲಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪಕ್ಷದಲ್ಲಿ ಅಧ್ಯಕ್ಷ ಸ್ಥಾನಕ್ಕಾಗಿ ಜಾತಿ ಸಮೀಕರಣ ಜೋರಾಗಿದೆ. ಉತ್ತರ ಕರ್ನಾಟಕಕ್ಕೆ ಅದರಲ್ಲೂ ಲಿಂಗಾಯತ ಸಮುದಾಯಕ್ಕೆ ಸೇರಿದವರನ್ನೇ ಅಧ್ಯಕ್ಷ ಗಾದಿಗೆ ಕೂಡ್ರಿಸುವುದು ಸೂಕ್ತ ಎನ್ನುವ ವಾದಕ್ಕೆ ಹೆಚ್ಚಿನ ಪುಷ್ಠಿ ಸಿಕ್ಕಿದೆ.

ಏತನ್ಮಧ್ಯೆ ಮಾಜಿ ಸಚಿವ ಡಿ.ಕೆ. ಶಿವಕುಮಾರ ಮತ್ತು ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಕೂಡ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸಿದ್ದಾರೆ. ಯಾರು ಎಷ್ಟೆ ಲೆಕ್ಕಾಚಾರ ನಡೆಸಿದ್ದರೂ ಪಕ್ಷವನ್ನು  ಅಧಿಕಾರಕ್ಕೆ ತರಲು ಲಿಂಗಾಯತ ಸಮುದಾಯಕ್ಕೆ ಮಣೆ ಹಾಕಬೇಕು ಎನ್ನುವುದು ಸಿದ್ದರಾಮಯ್ಯ ಅವರ ವಾದವಂತೆ. ಸಿದ್ದರಾಮಯ್ಯ ವಾದಕ್ಕೆ ಹೈಕಮಾಂಡ್ ಮಣೆ ಹಾಕಿದಲ್ಲಿ ಕೆಪಿಸಿಸಿ ಅಧ್ಯಕ್ಷ ಗಾದಿ ಅಖಂಡ ಜಿಲ್ಲೆಗೆ ಒಲಿಯಲಿದೆ. ತಪ್ಪಿದಲ್ಲಿ ಅದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರಿಗೆ ಅದೃಷ್ಟ ಒಲಿಯುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.
 
ಕಾಂಗ್ರೆಸ್ ಯಾವಾಗೆಲ್ಲ ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿದಿಯೋ ಆಗೆಲ್ಲ ಉತ್ತರ ಕರ್ನಾಟಕದಿಂದಲೇ ಹೆಚ್ಚಿನ ಸ್ಥಾನಗಳನ್ನು ಪಡೆದಿದೆ ಎನ್ನುವುದು ಗಮನಾರ್ಹವಾಗಿದೆ. ಹಾಗಾಗಿಯೇ ಸಿದ್ದರಾಮಯ್ಯ ಸೇರಿದಂತೆ ಬಹುತೇಕ ಮುಖಂಡರು ಉತ್ತರ ಕರ್ನಾಟಕಕ್ಕೆ ಸೇರಿದ ಲಿಂಗಾಯತ ಮುಖಂಡರಿಗೆ ಮಣೆ ಹಾಕಲು ಮನಸ್ಸು ಮಾಡಿರುವುದು ಸದ್ಯದ ಬೆಳವಣಿಗೆಗಳಿಂದ ಸ್ಪಷ್ಟವಾಗುತ್ತಿದೆ.

ಏನೆಲ್ಲ ಲೆಕ್ಕಾಚಾರಗಳ ನಡುವೆ ಕೆಪಿಸಿಸಿ ಅಧ್ಯಕ್ಷ ಇಲ್ಲವೆ ಕಾರ್ಯಾಧ್ಯಕ್ಷ ಸ್ಥಾನಕ್ಕೆ ದಲಿತ ಸಮುದಾಯಕ್ಕೆ ಬಿಟ್ಟುಕೊಡಬೇಕು ಎನ್ನುವ ವಾದ ಮುನ್ನಲೆಗೆ ಬಂದಲ್ಲಿ ಮಾಜಿ ಸಚಿವ ಹಾಗೂ ಮೇಲ್ಮನೆ ಸದಸ್ಯ ಆರ್.ಬಿ. ತಿಮ್ಮಾಪುರ ಹೆಸರನ್ನು ಸಿದ್ದರಾಮಯ್ಯ ಬಣ ತೇಲಿ ಬಿಡುವ ಲೆಕ್ಕಾಚಾರದಲ್ಲಿದೆ ಹಾಗಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ಅಖಂಡ ವಿಜಯಪುರ ಜಿಲ್ಲೆಯ ಸುತ್ತಲೇ ಸುತ್ತತೊಡಗಿದೆ ಎನ್ನುವುದು ಕಾಂಗ್ರೆಸ್ಸಿಗರ ಅಭಿಪ್ರಾಯ. ಅದೃಷ್ಟ ಯಾರ ಪಾಲಿಗೆ ಎನ್ನುವುದು ಸಿದ್ದರಾಮಯ್ಯ ಕೈಗೊಳ್ಳವ ನಿರ್ಧಾರವನ್ನು ಅವಲಂಬಿಸಿದೆ.

- ವಿಠ್ಠಲ ಆರ್. ಬಲಕುಂದಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com