ದಾವೂಸ್ ಗೆ ತೆರಳುವ ಮುನ್ನವೇ ಸಂಪುಟ ವಿಸ್ತರಣೆ: ನಾಳೆಯೇ ದೆಹಲಿಗೆ; ಯಡಿಯೂರಪ್ಪ

ದೆಹಲಿ ಚುನಾವಣೆ ನಂತರ ಸಂಪುಟ ವಿಸ್ತರಣೆ ಎನ್ನುವುದೆಲ್ಲ ಸುಳ್ಳು. ಮಂತ್ರಿಮಂಡಲ ವಿಸ್ತರಣೆ ಸಂಬಂಧ ಸತ್ಯವಿಲ್ಲದ ಸುದ್ದಿಗಳು ಹರಿದಾಡುತ್ತಿವೆ. ಸಾಧ್ಯವಾದರೆ ನಾಳೆಯೇ ದೆಹಲಿಗೆ ತೆರಳುತ್ತಿದ್ದು ಈ ತಿಂಗಳಾಂತ್ಯದೊಳಗೆ ಸಚಿವ ಸಂಪುಟ ವಿಸ್ತರಣೆಯಾಗಲಿದೆ.
ಯಡಿಯೂರಪ್ಪ
ಯಡಿಯೂರಪ್ಪ

ಬೆಂಗಳೂರು: ದೆಹಲಿ ಚುನಾವಣೆ ನಂತರ ಸಂಪುಟ ವಿಸ್ತರಣೆ ಎನ್ನುವುದೆಲ್ಲ ಸುಳ್ಳು. ಮಂತ್ರಿಮಂಡಲ ವಿಸ್ತರಣೆ ಸಂಬಂಧ ಸತ್ಯವಿಲ್ಲದ ಸುದ್ದಿಗಳು ಹರಿದಾಡುತ್ತಿವೆ. ಸಾಧ್ಯವಾದರೆ ನಾಳೆಯೇ ದೆಹಲಿಗೆ ತೆರಳುತ್ತಿದ್ದು ಈ ತಿಂಗಳಾಂತ್ಯದೊಳಗೆ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ಧವಳಗಿರಿ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಕುರಿತು ಚರ್ಚೆ ಮಾಡಲು ದೆಹಲಿಗೆ ಹೋಗುತ್ತಿದ್ದು ಶಾಸಕರು ಆತಂಕ‌ ಪಡುವ ಅವಶ್ಯಕತೆಯೇ ಇಲ್ಲ. ತಾವು ದಾವೋಸ್ ಗೆ ಹೋಗುವುದಿಕ್ಕೂ ಸಂಪುಟ ವಿಸ್ತರಣೆಗೂ ಯಾವುದೇ ಸಂಬಂಧವಿಲ್ಲ ಎಂದರು.

ಇಂದು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭೇಟಿಗೆ ಅವಕಾಶ ಕೊಟ್ಟಿದ್ದರು. ರಾಯಚೂರಿನಲ್ಲಿ ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮಕ್ಕೆ ತಾವು ಹೋಗಲೇಬೇಕಿದ್ದು  ಅಮಿತ್ ಶಾ ಭೇಟಿಗೆ ಇವತ್ತು ದೆಹಲಿಗೆ ಹೋಗುತ್ತಿಲ್ಲ. ನಾಳೆ ತಮ್ಮೆಲ್ಲ ಕಾರ್ಯಕ್ರಮ ರದ್ದು ಮಾಡಿ ಸಾಧ್ಯವಾದರೆ ದೆಹಲಿಗೆ ಹೋಗುತ್ತೇನೆ. ಅಮಿತ್ ಶಾ ಸಿಗುತ್ತಾರೆ ಎಂದರೆ  ದೆಹಲಿಗೆ ಹೋಗುತ್ತೇನೆ. ಸಂಪುಟ ವಿಸ್ತರಣೆಗೆ ದಿನಾಂಕ ನಿಗದಿಪಡಿಸಿಕೊಂಡು ಬರುವುದಾಗಿ ಹೇಳಿದರು.

ಶಾಸಕರಿಗೆ ಮಾತು ಕೊಟ್ಟಂತೆ  ಅವರನ್ನು ಸಚಿವರನ್ನಾಗಿ ಮಾಡುತ್ತೇವೆ. ಸ್ವಿಟ್ಜರ್ಲೆಂಡ್‌‌ ನ ದಾವೋಸ್ ಗೆ ಹೋಗುತ್ತಿದ್ದು ದಾವೋಸ್ ಗೆ ಹೋಗುವ ಮುನ್ನ ಸಂಪುಟ ವಿಸ್ತರಣೆ ಮಾಡುತ್ತೇವೆ. ಒಂದು ವೇಳೆ ನಾಳೆ ಅಮಿತ್ ಶಾ ಅವರ ಭೇಟಿ ಸಾಧ್ಯವಾಗದೇ ಇದ್ದಲ್ಲಿ ಇದೇ ತಿಂಗಳ 17 ಮತ್ತು 18 ಕ್ಕೆ ಅಮಿತ್ ಶಾ ರಾಜ್ಯಕ್ಕೆ ಬರಲಿದ್ದು, ಈ ವೇಳೆ ಮಾತುಕತೆ ನಡೆಸುವುದಾಗಿ ಮುಖ್ಯಮಂತ್ರಿಗಳು ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಬಳಿಕ‌ ಅವರು ರಾಯಚೂರಿನಲ್ಲಿ ಆಯೋಜನೆಗೊಂಡಿರುವ ಹಾಲುಮತದ ಸಮಾವೇಶಕ್ಕೆ ಪಾಲ್ಗೊಳ್ಳಲು ವಿಶೇಷ ವಿಮಾನದಲ್ಲಿ ಪ್ರಯಾಣ ಬೆಳೆಸಿದರು.

ರಾಜ್ಯ ಸರ್ಕಾರದ ರಚನೆಗೆ ಕಾರಣವಾಗಿರುವ ಉಪ ಚುನಾವಣೆಯಲ್ಲಿ ಗೆದ್ದ ಶಾಸಕರು ಮತ್ತು ಸೋತವರಿಗೂ ಸಚಿವ ಸಂಪುಟದಲ್ಲಿ ಅವಕಾಶ ಕಲ್ಪಿಸುವಂತೆ ಒತ್ತಡ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಈ ಸ್ಪಷ್ಟನೆ ನೀಡಿದ್ದಾರೆ
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com