ಕೆಪಿಸಿಸಿ ಅಧ್ಯಕ್ಷ ಸ್ಥಾನ ತಪ್ಪುವ ಭೀತಿಯಲ್ಲಿ ಡಿಕೆಶಿ: ಈ ಮಧ್ಯೆ ಕುತೂಹಲ ಕೆರಳಿಸಿದ ಎಸ್ಎಂ ಕೃಷ್ಣ ಭೇಟಿ!

ಮಹತ್ವದ ರಾಜಕೀಯ ಬೆಳವಣಿಯಲ್ಲಿ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ತಮ್ಮ ರಾಜಕೀಯ ಗುರು, ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ಎಸ್.ಎ.ಕೃಷ್ಣ ಅವರನ್ನು ಭೇಟಿ ಮಾಡಿ ಕಾಂಗ್ರೆಸ್ ನಲ್ಲಿ ತಮ್ಮ ಮುಂದಿನ ನಡೆ ಕುರಿತು ಮಹತ್ವದ ಚರ್ಚೆ ನಡೆಸಿದ್ದಾರೆ.
ಎಸ್ಎಂ ಕೃಷ್ಣ-ಡಿಕೆ ಶಿವಕುಮಾರ್
ಎಸ್ಎಂ ಕೃಷ್ಣ-ಡಿಕೆ ಶಿವಕುಮಾರ್

ಬೆಂಗಳೂರು: ಮಹತ್ವದ ರಾಜಕೀಯ ಬೆಳವಣಿಯಲ್ಲಿ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ತಮ್ಮ ರಾಜಕೀಯ ಗುರು, ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ಎಸ್.ಎ.ಕೃಷ್ಣ ಅವರನ್ನು ಭೇಟಿ ಮಾಡಿ ಕಾಂಗ್ರೆಸ್ ನಲ್ಲಿ ತಮ್ಮ ಮುಂದಿನ ನಡೆ ಕುರಿತು ಮಹತ್ವದ ಚರ್ಚೆ ನಡೆಸಿದ್ದಾರೆ.

ಸಂಕ್ರಾಂತಿ ಹಬ್ಬಕ್ಕೆ ಶುಭಕೋರುವ ನೆಪದಲ್ಲಿ ಸದಾಶಿವನಗರದ ಕೃಷ್ಣ ಅವರ ನಿವಾಸದಲ್ಲಿ ಭೇಟಿಯಾಗಿ ಸುಮಾರು ಎರಡೂ ತಾಸಿಗೂ ಹೆಚ್ಚುಕಾಲ ಕಾಂಗ್ರೆಸ್ ನಲ್ಲಿನ ಬೆಳವಣಿಗೆಗಳು, ಪ್ರಸಕ್ತ ರಾಜಕೀಯ ಪರಿಸ್ಥಿತಿ ಕುರಿತು ಚರ್ಚಿಸಿದರು. ಕಾಂಗ್ರೆಸ್ ನಲ್ಲಿ ಕೆಪಿಸಿಸಿ ಅಧ್ಯಕ್ಷರು ಶಾಸಕಾಂಗ ಪಕ್ಷದ ನಾಯಕರ ಆಯ್ಕೆ ಕುರಿತು ನಡೆಯುತ್ತಿರುವ ಬೆಳವಣಿಗೆಗಳ ನಡುವೆ ಶಿವಕುಮಾರ್ ಕೃಷ್ಣ ಅವರನ್ನು ಭೇಟಿ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ. 

ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಕೃಷ್ಣ ಅವರಿಗೆ ಶುಭಾಶಯ ಕೋರಿದ್ದೇನೆ. ಇದು ವೈಯಕ್ತಿಕ ಭೇಟಿಯೇ ಹೊರತು ರಾಜಕೀಯ ಭೇಟಿಯಲ್ಲ. ತಮ್ಮ ಹಾಗೂ ಕೃಷ್ಣ ಅವರ ನಡುವಿನ ಸಂಬಂಧ ಎಲ್ಲರಿಗೂ ತಿಳಿದ ವಿಚಾರ. ರಾಜಕೀಯ ಮಾಡುವವರು ಮಾಡಲಿ. ಅದಕ್ಕೆಲ್ಲ ತಾವು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಮಾರ್ಮಿಕವಾಗಿ ನುಡಿದರು.

ಹರಿಹರ ಜಾತ್ರೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಪಂಚಮಸಾಲಿ ಸ್ವಾಮೀಜಿ ನಡುವಿನ ವಾಗ್ವಾದ ವಿಚಾರ ಕುರಿತ  ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ಹರಿಹರಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸುತ್ತೇನೆ. ಯಡಿಯೂರಪ್ಪ ಯಾರು ಯಾರಿಗೆ ಏನು ಮಾತು ಕೊಟ್ಟಿದ್ದಾರೋ ಎಂಬುದು ತಮಗೆ ಗೊತ್ತಿಲ್ಲ. ಒಳ ಮಾತುಗಳು ಏನೇನೋ ಇವೆ ಎಂಬುದೂ ಸಹ ತಿಳಿದಿಲ್ಲ ಎಂದರು. ಮತ ಹಾಕಿಸಿಕೊಳ್ಳುವಾಗ ಯಾವ ರೀತಿ ವಚನ ನೀಡಿರುತ್ತಾರೆಯೋ, ಮಧ್ಯರಾತ್ರಿ ಏನು ಮಾತುಕತೆಯಾಗುತ್ತದೆಯೋ ಸಂಜೆ ಯಾವ ವಚನ ನೀಡುತ್ತಾರೆಯೋ ಯಾರಿಗೆ ಗೊತ್ತು. ಬಿಜೆಪಿ ಮತ್ತು ಯಡಿಯೂರಪ್ಪ ನಡುವೆ ತಾವು ಮಧ್ಯಪ್ರವೇಶಿಸುವುದು ಸಮಂಜಸವಲ್ಲ ಎಂದು ಶಿವಕುಮಾರ್ ಸ್ಪಷ್ಟಪಡಿಸಿದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಗದ್ದುಗೆಯ ಗುದ್ದಾಟದಲ್ಲಿ ಡಿ.ಕೆ.ಶಿವಕುಮಾರ್ ಹೆಸರು ಕೇಳಿ ಬಂದಿದೆ. ಆದರೆ ತಮ್ಮ ಆಪ್ತ ಎಂ.ಬಿ.ಪಾಟೀಲ್ ಹೆಸರಿಗೆ ಸಿದ್ದರಾಮಯ್ಯ ಹೈಕಮಾಂಡ್ ಬಳಿ ಮುದ್ರೆ ಒತ್ತಿದ್ದಾರೆ. ಇದರಿಂದ ಶಿವಕುಮಾರ್ ಗೆ ಸಹಜವಾಗಿಯೇ ಬೇಸರವಾಗಿದೆ. ಇದೇ ಸಂದರ್ಭದಲ್ಲಿ ಮೈತ್ರಿ ಸರ್ಕಾರದ ಶಾಸಕರು ಆಪರೇಷನ್ ಕಮಲದೊಳಗೆ ಸಿಲುಕುವಲ್ಲಿ ಮುಖ್ಯ ಪಾತ್ರವಹಿಸಿದ್ದ ಎಸ್.ಎಂ.ಕೃಷ್ಣ ಅವರನ್ನು ಭೇಟಿಯಾಗುವ ಮೂಲಕ ಡಿ.ಕೆ.ಶಿ ಪಕ್ಷದ ನಾಯಕರು ಮತ್ತು ತಮ್ಮ ವಿರೋಧಿ ಬಣಕ್ಕೆ ಪರೋಕ್ಷ ಸಂದೇಶ ರವಾನಿಸುವುದು ಈ ಭೇಟಿ ಉದ್ದೇಶ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com