ಮೂರು ವರ್ಷಗಳಲ್ಲಿ ಮಾದರಿ ರಾಜ್ಯವಾಗಿ ಕರ್ನಾಟಕ ಅಭಿವೃದ್ಧಿ- ಬಿಎಸ್ ಯಡಿಯೂರಪ್ಪ

ರೈತರ ಪರ, ಬಡವರ ಪರ ಮತ್ತು ಅಭಿವೃದ್ಧಿಯ ಯೋಜನೆಗಳನ್ನು ಹೊಂದಿರುವ ಉತ್ತಮ ಬಜೆಟ್ ಮಂಡಿಸಲು ಸಂಬಂಧಿತ ಎಲ್ಲ ಭಾಗೀದಾರರೊಂದಿಗೆ ಸಮಾಲೋಚಿಸಲಾಗುವುದು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ

Published: 16th January 2020 08:13 PM  |   Last Updated: 16th January 2020 08:16 PM   |  A+A-


CMBSY1

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತಿತರರು

Posted By : Nagaraja AB
Source : UNI

ಬೆಂಗಳೂರು: ರೈತರ ಪರ, ಬಡವರ ಪರ ಮತ್ತು ಅಭಿವೃದ್ಧಿಯ ಯೋಜನೆಗಳನ್ನು ಹೊಂದಿರುವ ಉತ್ತಮ ಬಜೆಟ್ ಮಂಡಿಸಲು ಸಂಬಂಧಿತ ಎಲ್ಲ ಭಾಗೀದಾರರೊಂದಿಗೆ ಸಮಾಲೋಚಿಸಲಾಗುವುದು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ

ರಾಜ್ಯ ಬಿಜೆಪಿ ಪೂರ್ಣಾವಧಿ ಅಧ್ಯಕ್ಷರಾಗಿ ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಯಾಗಿರುವ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಅವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು,  ಮುಂದಿನ ಮೂರು ವರ್ಷಗಳ ಬಿಜೆಪಿ ಆಡಳಿತಾವಧಿಯಲ್ಲಿ ಇಡೀ ದೇಶದಲ್ಲೇ ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ರೂಪಿಸುವ ಗುರಿ ಹೊಂದಲಾಗಿದೆ ಎಂದರು. 

ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡಿ ನೆಮ್ಮದಿಯ ಬದುಕು ಕಲ್ಪಿಸಿಕೊಡುವ ಜವಾಬ್ದಾರಿ ಸರ್ಕಾರದ ಮೇಲಿದೆ. ಮಾರ್ಚ್ 5ರಂದು ಮಂಡಿಸಲಾಗುವ ಬಜೆಟ್‍ನಲ್ಲಿ ಅನೇಕ ರೈತರ ಪರ, ಬಡವರ ಪರ, ಅಭಿವೃದ್ಧಿ ಯೋಜನೆಗಳನ್ನು ಪ್ರಕಟಿಸಲಾಗುವುದು. ಒಳ್ಳೆಯ ಬಜೆಟ್ ನೀಡಲು ಎಲ್ಲರ ಜೊತೆ ಸಮಾಲೋಚನೆ ನಡೆಸಲಾಗುವುದು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕನಿಷ್ಠ 150 ಸ್ಥಾನಗಳನ್ನು ಗೆಲ್ಲುವ ಗುರಿಯೊಂದಿಗೆ ಹೆಜ್ಜೆ ಇಡಬೇಕಾಗಿದೆ ಆಡಳಿತ ಪಕ್ಷಕ್ಕೆ ಅಭಿವೃದ್ಧಿ ಮತ್ತು ಪಕ್ಷ ಬಲಪಡಿಸುವ ಎರಡೂ ಜವಾಬ್ದಾರಿಯಿದೆ  ಎಂದು ಹೇಳಿದರು.

ಸರ್ವಾನುಮತದಿಂದ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ  ನಳಿನ್ ಕುಮಾರ್ ಅವರು ಮೂರು ವರ್ಷಗಳ ಅವಧಿಯಲ್ಲಿ ಪಕ್ಷವನ್ನು ಬಲಪಡಿಸುವ ದೊಡ್ಡ ಜವಾಬ್ದಾರಿ ಹೊತ್ತಿದ್ದಾರೆ. ಈಗಾಗಲೇ ಅವರು ರಾಜ್ಯಾಧ್ಯಕ್ಷರಾಗಿ ಜಿಲ್ಲೆಗಳಲ್ಲಿ ಎರಡು ಬಾರಿ ಪ್ರವಾಸ ಮಾಡಿ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿ, ಪಕ್ಷ ಬಲವರ್ಧನೆಗೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮುಂದಿನ ಮೂರು ವರ್ಷ ಪಕ್ಷವನ್ನು ಬಲಪಡಿಸುವ ಅವರ ಕೆಲಸಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದರು. 

ಮುಂದಿನ ದಿನಗಳಲ್ಲಿ ಹಿಂದುಳಿದ ವರ್ಗಗಳ ಮೋರ್ಚಾ, ಪರಿಶಿಷ್ಟ ಜಾತಿ-ಪಂಗಡ ಮೋರ್ಚಾ ಸೇರಿದಂತೆ ಎಲ್ಲ ಮೋರ್ಚಾಗಳನ್ನು ಬಲಪಡಿಸಬೇಕಾಗಿದೆ. ಬಿಜೆಪಿನಲ್ಲಿ ಮಾತ್ರ ಕಾರ್ಯಕರ್ತರ ಅಭಿಪ್ರಾಯ ಪಡೆದು ಎಲ್ಲಾ ಮಟ್ಟದಲ್ಲೂ ಅಧ್ಯಕ್ಷರನ್ನು ಆಯ್ಕೆ ಮಾಡುವ ವ್ಯವಸ್ಥೆ ಇದೆ. ಬೇರೆ ಯಾವ ಪಕ್ಷದಲ್ಲೂ ಇಂತಹ ಆಂತರಿಕ ಪ್ರಜಾಪ್ರಭುತ್ವವಿಲ್ಲ. ಬಿಜೆಪಿ ಸೇರುವುದಕ್ಕೆ ವಿವಿಧ ಸಮುದಾಯಗಳ ಅನೇಕ ಪ್ರಭಾವಿ ಮುಖಂಡರು ಇಚ್ಛೆ ವ್ಯಕ್ತಪಡಿಸಿದ್ದು, ಅವರಿಗೆ ಸ್ವಾಗತವಿದೆ ಎಂದು ಯಡಿಯೂರಪ್ಪ ಹೇಳಿದರು.

Stay up to date on all the latest ರಾಜಕೀಯ news with The Kannadaprabha App. Download now
facebook twitter whatsapp