ಸಿಎಎ ವಿರುದ್ಧ ಕೆಪಿಸಿಸಿಯಿಂದ ಕಾರ್ಯಾಗಾರ, ನೇರವಾಗಿ ಹೋರಾಟಕ್ಕಿಳಿಯಲು ಸಿದ್ದರಾಮಯ್ಯ ಕರೆ

ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಜನರಲ್ಲಿ ಅರಿವು ಮೂಡಿಸಲು ಕಾಂಗ್ರೆಸ್ ಪಕ್ಷ ಕೊನೆಗೂ ರಂಗಕ್ಕಿಳಿದಿದ್ದು, ಕಾಯ್ದೆಯ ಕುರಿತು ಕಾರ್ಯಾಗಾರ ನಡೆಸಲು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ನಿರ್ಧರಿಸಿದೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಜನರಲ್ಲಿ ಅರಿವು ಮೂಡಿಸಲು ಕಾಂಗ್ರೆಸ್ ಪಕ್ಷ ಕೊನೆಗೂ ರಂಗಕ್ಕಿಳಿದಿದ್ದು, ಕಾಯ್ದೆಯ ಕುರಿತು ಕಾರ್ಯಾಗಾರ ನಡೆಸಲು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ನಿರ್ಧರಿಸಿದೆ.

ಕಾಯ್ದೆಯ ಬಗ್ಗೆ ಪಕ್ಷದ ಕೆಲವು ಕಾರ್ಯಕರ್ತರದಲ್ಲಿ ಗೊಂದಲ ಇದ್ದುದರಿಂದ ಈ ಬಗ್ಗೆ ಕಾಯ್ದೆಯ ದುಷ್ಪರಿಣಾಮಗಳನ್ನು ಅವರಿಗೆ ತಿಳಿಸಿ ಕೊಟ್ಟು ಬಳಿಕ ಅವರ ಮೂಲಕ ಹಳ್ಳಿ ಹಳ್ಳಿಗಳಲ್ಲಿ ಜಾಗೃತಿ ಮೂಡಿಸಲು ಕಾಂಗ್ರೆಸ್ ಮುಂದಾಗಿದೆ.

ಪೌರತ್ವ ಕಾಯಿದೆ ಹಾಗೂ ರಾಷ್ಟ್ರೀಯ ನಾಗರಿಕ ನೋಂದಣಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಇಡೀ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಈ ಹೋರಾಟವನ್ನು ಬೆಂಬಲಿಸಿ ಕಾಯಿದೆಗಳ ನಕಾರಾತ್ಮಕ ಅಂಶಗಳ ಬಗ್ಗೆ ಜಿಲ್ಲೆ ಹಾಗೂ ತಾಲೂಕು  ಮಟ್ಟದಲ್ಲಿ ಜನಜಾಗೃತಿಗೊಳಿಸಲು ತಾಲೂಕು , ಜಿಲ್ಲಾ ಮಟ್ಟದ ಪಕ್ಷದ ಕಾರ್ಯಕರ್ತರಿಗೆ  ತಿಳುವಳಿಕೆ ಮೂಡಿಸಲು ಕೆಪಿಸಿಸಿ ಮೇಲ್ಮನೆ ಸದಸ್ಯರು, ಕೆಪಿಸಿಸಿಯ ಮಾಜಿ  ಪದಾಧಿಕಾರಿಗಳು, ವಕ್ತಾರರು ಹಾಗೂ ಇತರೆ ಆಯ್ದ ಮುಖಂಡರಿಗೆ ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಒಂದು ದಿನದ ಕಾರ್ಯಾಗಾರ ನಡೆಸಲಾಯಿತು.

ಕಾರ್ಯಾಗಾರದಲ್ಲಿ ವಿಪಕ್ಷ ನಾಯಕ  ಸಿದ್ದರಾಮಯ್ಯ, ಮೇಲ್ಮನೆ ವಿಪಕ್ಷ ನಾಯಕ ಎಸ್‌.ಆರ್.ಪಾಟೀಲ್,‌ ಕೆಪಿಸಿಸಿ ಅಧ್ಯಕ್ಷ  ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹಾಗೂ ಶಾಸಕರೂ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

ಕಾರ್ಯಾಗಾರದಲ್ಲಿ ಸಿಎಎ, ಎನ್ ಆರ್ ಸಿ ಹಾಗೂ ಎನ್ ಪಿ ಆರ್ ಹಿಂಪಡೆಯಲು ಒತ್ತಾಯಿಸುವುದು, ಸಂವಿಧಾನ  ತಜ್ಞರು, ವಿದ್ಯಾರ್ಥಿಗಳು, ಪ್ರಗತಿಪರರ ಸಭೆಗಳನ್ನು ನಡೆಸಿ ಚರ್ಚಿಸುವುದು. ಎಲ್ಲರೂ  ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡುವುದು. ಸುಪ್ರೀಂ ಕೋರ್ಟ್ ಮುಂದಿರುವ ಪ್ರಕರಣ ಆದಷ್ಟು ಬೇಗ ಇತ್ಯರ್ಥ ಪಡಿಸುವಂತೆ ಆಗ್ರಹ ಮಾಡುವುದು ಸೇರಿದಂತೆ‌ ಹಲವು ಮಹತ್ವದ  ನಿರ್ಣಯ ಕೈಗೊಳ್ಳಲಾಯಿತು.

ಕಾರ್ಯಾಗಾರ ಬಳಿಕ ಸಿದ್ದರಾಮಯ್ಯ ಮಾತನಾಡಿ, ಜಾತ್ಯತೀತ ಭಾರತ ದೇಶವನ್ನು ಹಿಂದೂ ರಾಷ್ಟ್ರ ಮಾಡುವುದು ಆರ್ ಎಸ್ ಎಸ್ ನವರ ಮೂಲ ಉದ್ದೇಶವಾಗಿದೆ. ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧಿ, ರವೀಂದ್ರನಾಥ ಠ್ಯಾಗೋರ್ ಇಂತಹ ಕಾಯ್ದೆಯನ್ನು ವಿರೋಧಿಸಿದ್ದರು. ದೇಶದಲ್ಲಿ ಆರ್ಥಿಕ ಸಮಸ್ಯೆ, ಬಡತನ, ಉದ್ಯೋಗ ಸೇರಿದಂತೆ ಹಲವಾರು ಕಿತ್ತು ತಿನ್ನುವ ಸಮಸ್ಯೆಗಳಿವೆ. ಸಮಸ್ಯೆಗಳನ್ನು ಬಗೆಹರಿಸಿ ಜನರಿಗೆ ಬದುಕು ನೀಡಬೇಕು. ಆದರೆ ಈ ಬಗ್ಗೆ ಬಿಜೆಪಿಯ ಯಾವುದೇ ನಾಯಕರು ಮಾತನಾಡುವುದಿಲ್ಲ. ಜ್ವಲಂತ ಸಮಸ್ಯೆಗಳನ್ನು  ಪರಿಹರಿಸುವುದನ್ನು ಬಿಟ್ಟು ಚುನಾವಣಾ ಪ್ರಣಾಳಿಕೆಯ ಈಡೇರಿಕೆಗೆ ಕಾಯಿದೆ ಜಾರಿಗೆ ತರುತ್ತಿರುವುದಾಗಿ ಹೇಳುತ್ತಿದ್ದಾರೆ. ಬರಿ ಪೌರತ್ವ ತಿದ್ದುಪಡಿ ಅಷ್ಟೇ ಅಲ್ಲ. ಬೇರೆ ಬೇರೆ ವಿಷಯಗಳನ್ನು ಪ್ರಣಾಳಿಕೆಯಲ್ಲಿ ಹೇಳಲಾಗಿತ್ತು. ಅದನ್ನೇಕೆ ಜಾರಿಗೆ ತರುತ್ತಿಲ್ಲ? ಎಂದು  ಪ್ರಶ್ನಿಸಿದರು.

ಸಿಎಎ ಸಂವಿಧಾನ ವಿರೋಧಿ ಹಾಗೂ ಮಾನವೀಯತೆಯ ವಿರೋಧಿಯೂ ಹೌದು. ದೇಶದಲ್ಲಿ ಕೇವಲ ಮುಸಲ್ಮಾನರಿಗೆ ಅಷ್ಟೆಯಲ್ಲ ದಲಿತರು, ಆದಿವಾಸಿಗಳು. ಅಲೆಮಾರಿಗಳು ಸಹ ಇದ್ದಾರೆ. ನನಗೆ ನನ್ನ ಜನ್ಮ ದಿನಾಂಕವೇ ಗೊತ್ತಿಲ್ಲ. ಶಾಲೆಯಲ್ಲಿ ಶಿಕ್ಷಕರು ದಾಖಲೆಯಲ್ಲಿ ನಮೂದಿಸಿದ್ದೇ  ಜನ್ಮ ದಿನಾಂಕವಾಗಿದೆ. ಇನ್ನು ನನ್ನ ತಂದೆ, ಜನ್ಮ ದಿನಾಂಕ ಗೊತ್ತಿಲ್ಲ. ಅದರ ದಾಖಲೆ ಎಲ್ಲಿಂದ ತರುವುದು ಎಂದು ಲೇವಡಿ ಮಾಡಿದರು.

ಪ್ರಜಾಪ್ರಭುತ್ವ ದೇಶವನ್ನು ಕಾಂಗ್ರೆಸ್ ಹಿಂದೂ ರಾಷ್ಟ್ರ ಮಾಡಲು ಬಿಡುವುದಿಲ್ಲ. ಧರ್ಮಾಧಾರಿತ ದೇಶ ನಿರ್ಮಾಣ ಮಾಡಲು ಬಿಡುವುದಿಲ್ಲ. ಪಾಕಿಸ್ತಾನ ಧರ್ಮಾಧಾರಿತ ರಾಷ್ಟ್ರ ಮಾಡಿಕೊಂಡಿದ್ದಾರೆಂದ‌ ಮಾತ್ರಕ್ಕೆ ನಾವೇಕೆ ಮಾಡಿಕೊಳ್ಳಬೇಕು. 

ಪಾಕಿಸ್ತಾನದಲ್ಲಿ ಹಿಂದೂಗಳಷ್ಟೇ ಅಲ್ಲ ಮುಸಲ್ಮಾನರೂ ಶೋಷಿತರಾಗಿದ್ದಾರೆ. ವಿ.ಆರ್. ಸಾವರ್ಕರ್ ಹಿಂದೂ ಮಹಾಸಭಾ ಹುಟ್ಟು ಹಾಕಿದ್ದರು. ಸಿಎಎ ವಿರುದ್ಧ ಕಾಂಗ್ರೆಸ್ ನೇರವಾಗಿಯೇ ಹೋರಾಟಕ್ಕೆ ಇಳಿಯಬೇಕು. ಬೇರೆಯವರ ಹೋರಾಟದಲ್ಲಿ  ಹಿಂದೆ ನಿಲ್ಲುವ ಬದಲು ಕಾಂಗ್ರೆಸ್ ನೇರವಾಗಿಯೇ ಪ್ರತಿಭಟನೆಗೆ ಇಳಿಯಬೇಕು ಎಂದು  ಸಿದ್ದರಾಮಯ್ಯ ಕರೆ ನೀಡಿದರು.

ದಿನೇಶ್ ಗುಂಡೂರಾವ್ ಮಾತನಾಡಿ, ಎನ್ ಆರ್ ಸಿ  ಜಾರಿಯಿಂದ ಆಸ್ಸಾಂನಲ್ಲಿ ಹದಿನೆಂಟು ಲಕ್ಷ ಜನರು ಭಾರತೀಯರು ಪೌರತ್ವ ಕಳೆದುಕೊಂಡಿದ್ದಾರೆ. ಅಫ್ಘಾನಿಸ್ತಾನ ಎಂದಿಗೂ ಭಾರತದ ವ್ಯಾಪ್ತಿಗೆ ಸೇರಿರಲಿಲ್ಲ. ಆದರೂ ಆ  ದೇಶದ ನಿರಾಶ್ರಿತರಿಗೆ ಅವಕಾಶ ಕಲ್ಪಿಸಿ ಕೊಡಲಾಗುತ್ತಿದೆ. ಮಯನ್ಮಾರ್ ನಿಂದ ರೋಹಿಂಗ್ಯಾ ಮುಸ್ಲಿಮರು ನಿರಾಶ್ರಿತರಾಗಿ ಬಂದಿದ್ದಾರೆ, ಅವರಿಗೆ ಏಕೆ ಪೌರತ್ವ ಕೊಡುವುದಿಲ್ಲ. ಕ್ರಿಶ್ಚಿಯನ್ನರಿಗೆ ಕೊಡುವುದಾದರೆ ಮುಸ್ಲೀಮರಿಗೇಕೆ ಪೌರತ್ವ ಕೊಡುವುದಿಲ್ಲ? ಧರ್ಮದ ಆಧಾರದಲ್ಲಿ ನೀಡುವ ಪೌರತ್ವವನ್ನು ಒಪ್ಪಲು ಸಾಧ್ಯವಿಲ್ಲ ಎಂದರು.

ಬಿಜೆಪಿಯದ್ದು ಹಿಂದೂ ರಾಷ್ಟ್ರ ಮಾಡುವ ಉದ್ದೇಶವಾಗಿದೆ. ಕಾಯ್ದೆ ವಿರೋಧಿಸಿದವರಿಗೆ ಹಿಂದೂ ವಿರೋಧಿಗಳು  ಎಂದು ಬಿಂಬಿಸಲಾಗುತ್ತಿದೆ. ಮೋದಿಯನ್ನು ವಿರೋಧಿಸಿದರೆ ದೇಶ ವಿರೋಧಿಗಳು ಎನ್ನುತ್ತಾರೆ. ಪ್ರತಿಭಟನೆ ಮಾಡುವವರ ವಿರುದ್ಧ ದೌರ್ಜನ್ಯವೆಸಗಿ ಗೋಲಿಬಾರ್ ಮಾಡುತ್ತಾರೆ. ದೇಶದಲ್ಲಿ ಸರ್ವಾಧಿಕಾರಿ ಧೋರಣೆ ಜಾರಿಗೆ ತರಲು ಬಯಸುತ್ತಿದ್ದಾರೆ.  ಬಿಜೆಪಿಯವರ ಈ ಹುನ್ನಾರ ದೇಶದ ಯುವ ಜನತೆಗೆ ಅರ್ಥವಾಗುತ್ತಿದೆ. ಹೀಗಾಗಿಯೇ ಅವರೆಲ್ಲ ಕೇಂದ್ರದ ವಿರುದ್ಧ ಬೀದಿಗೆ ಇಳಿಯುತ್ತಿದ್ದಾರೆ ಎಂದರು‌.

ಸುಪ್ರೀಂ  ಕೋರ್ಟ್ ಈ ಕಾಯ್ದೆಯನ್ನು ರದ್ದುಗೊಳಿಸದಿದ್ದರೆ ಸಂವಿಧಾನಕ್ಕೆ ಧಕ್ಕೆಯಾಗುತ್ತದೆ ಎಂದಿದೆ. ಆದರೆ ಬಿಜೆಪಿಯವರು ದಿನಕ್ಕೊಂದು ಸುಳ್ಳು ಹೇಳುತ್ತಿದ್ದಾರೆ. ಮೋದಿ ಈಗ ಎನ್ ಆರ್  ಸಿ ಜಾರಿಗೊಳಿಸುತ್ತಿಲ್ಲ ಎಂದು ಹೇಳುತ್ತಿದ್ದಾರೆ.  ಮತ್ತೊಂದೆಡೆ ಅಮಿತ್ ಶಾ ಎನ್‌ಆರ್‌ಸಿ ಜಾರಿ ಮಾಡುತ್ತೇವೆ ಎಂದು ಹೇಳಿದ್ದಾರೆ. ಇವರಲ್ಲಿ ಯಾರ ಮಾತನ್ನು ನಂಬಬೇಕು ? ಎಂದು ಪ್ರಶ್ನಿಸಿದ ದಿನೇಶ್ ಗುಂಡೂರಾವ್,  ಇದರ ವಿರುದ್ಧ ಕಾಂಗ್ರೆಸ್  ಬೀದಿಗಿಳಿದು ಹೋರಾಟ ಮಾಡಲೇಬೇಕು. ಸುಪ್ರೀಂ ಕೋರ್ಟ್ ಇದನ್ನು ರದ್ದುಗೊಳಿಸದಿದ್ದರೆ ವಿರೋಧಿ ರಾಜ್ಯಗಳ ಆಡಳಿತ ತೆಗೆದು ಹಾಕಿ ರಾಷ್ಟ್ರಪತಿ ಆಡಳಿತ ಹೇರಿ ಕಾಯ್ದೆಯನ್ನು ಜಾರಿಗೆ ತರಲು ಬಿಜೆಪಿಯವರು ಹಿಂಜರಿಯುವುದಿಲ್ಲ. ಸ್ವಾತಂತ್ರ್ಯ ಸಂಗ್ರಾಮಕ್ಕೆ ಹೋರಾಟ ಮಾಡಿದಂತೆ ಈ ಹೋರಾಟ ನಡೆಸಬೇಕಾಗುತ್ತದೆ ಎಂದು  ದಿನೇಶ್ ಗುಂಡೂರಾವ್ ಎಚ್ಚರಿಕೆ ನೀಡಿದರು.

ಈಶ್ಚರ್ ಖಂಡ್ರೆ ಮಾತನಾಡಿ,‌ ಕೇಂದ್ರ ಸರ್ಕಾರ ತದ್ವಿರುದ್ಧ ನೀತಿಗಳನ್ನು ಜಾರಿಗೆ ತರುತ್ತಿದೆ. ಪ್ರಧಾನಿ  ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಒಂದೊಂದು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಎನ್‌ಆರ್‌ಸಿ ಜಾರಿಗೊಳಿಸುವುದಿಲ್ಲ ಎಂದು ಹೇಳಿ ಅಸ್ಸಾಂನಲ್ಲಿ ಈಗಾಗಲೇ  ಜಾರಿಗೆ ತಂದಿದ್ದಾರೆ. ಅಲ್ಲಿ ಸುಮಾರು 18 ಲಕ್ಷಕ್ಕೂ ಹೆಚ್ಚಿನ ಜನ ಬೀದಿಗೆ ಬೀಳುವ  ಆತಂಕದಲ್ಲಿದ್ದಾರೆ. ಧರ್ಮದ ಆಧಾರದಲ್ಲಿ ದೇಶದ ಜನರಿಗೆ ಬಿಜೆಪಿ ನಾಯಕರು ಕಿರುಕುಳ ನೀಡಲು ಹೊರಟಿದ್ದಾರೆ. ಸಂವಿಧಾನ ವಿರುದ್ಧವಾಗಿ ಕಾಯ್ದೆ ತರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಷ್ಟೇ  ಅಲ್ಲ ವಿಶ್ವವಿದ್ಯಾಲಯ ಸಂಘ ಸಂಸ್ಥೆಗಳಲ್ಲಿಯೂ ಬಿಜೆಪಿಗರು ರಾಜಕಾರಣ  ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ಮೇಲೆ ಹಲ್ಲೆಗೆ ಪ್ರಚೋದಿಸುತ್ತಿದ್ದಾರೆ. ಇವೆಲ್ಲವನ್ನು ನಾವು ಹತ್ತಿಕ್ಕಬೇಕಾಗಿದೆ. ಜನರಿಗೆ ವಾಸ್ತವ ಅರಿವನ್ನು ಮೂಡಿಸಬೇಕಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com