ಬಾಗಲಕೋಟೆಗೆ ಇನ್ನೊಂದು ಮಂತ್ರಿಸ್ಥಾನ ಗಗನಕುಸುಮ, ಅವಸರ ಮಾಡಿ ಆಪತ್ತು ತಂದುಕೊಂಡ್ರಾ ನಿರಾಣಿ?

ಅವಸರ ಆಪತ್ತಿಗೆ ಎರವಾಗುತ್ತಾ? ಇಂತಹ ಪ್ರಶ್ನೆಯೊಂದು ಜಿಲ್ಲೆಯಲ್ಲಿ ವ್ಯಾಪಕವಾಗಿ ಚರ್ಚೆಗೆ ಗ್ರಾಸವಾಗಿದೆ. 
ಮುರುಗೇಶ್ ನಿರಾಣಿ
ಮುರುಗೇಶ್ ನಿರಾಣಿ

ಬಾಗಲಕೋಟೆ: ಅವಸರ ಆಪತ್ತಿಗೆ ಎರವಾಗುತ್ತಾ ? ಇಂತಹ ಪ್ರಶ್ನೆಯೊಂದು ಜಿಲ್ಲೆಯಲ್ಲಿ ವ್ಯಾಪಕವಾಗಿ ಚರ್ಚೆಗೆ ಗ್ರಾಸವಾಗಿದೆ.

ಬೀಳಗಿ ಶಾಸಕ ಮುರಗೇಶ ನಿರಾಣಿ ಅವರು ಸಚಿವ ಸ್ಥಾನದ ಆಕಾಂಕ್ಷಿ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಯಾರೇ ಆಗಲಿ ಮಂತ್ರಿ ಸ್ಥಾನಕ್ಕಾಗಿ ಲಾಬಿ ಮಾಡುವುದು ಸಹಜ. ಅಂತಹ ಲಾಬಿ ವಿಷಯದಲ್ಲಿ ಶಾಸಕ ನಿರಾಣಿ ಬಹಳಷ್ಟು ಅವಸರ ಮಾಡಿದರಾ ? ಯಾರಿಂದ ಯಾರಿಗೆ ಎಲ್ಲಿ ಹೇಳಿಸಬೇಕು ಎನ್ನುವ ವಿಷಯದಲ್ಲಿ ಎಡವಿದರಾ ? ಎನ್ನುವ ಮಿಲಿಯನ್ ಡಾಲರ್ ಪ್ರಶ್ನೆ ಹುಟ್ಟಿಕೊಂಡಿದೆ.

ಮುಖ್ಯಮAತ್ರಿ ಬಿ.ಎಸ್. ಯಡಿಯೂರಪ್ಪ ಸಚಿವ ಸಂಪುಟ ಸೇರ್ಪಡೆಗಾಗಿ ನಿರಾಣಿ ಅವರು ಹರಿಹರದಲ್ಲಿ ನಡೆದ ಹರ ಜಾತೆ ವೇಳೆ ಹರಿಹರ ಪೀಠದ ಶ್ರೀಗಳಿಂದ ನಿರಾಣಿ ಅವರನ್ನು ಮಂತ್ರಿ ಮಾಡಲೇ ಬೇಕು ಎನ್ನುವ ಇಡೀ ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿರುವುದು ಸರ್ವವಿಧಿತ. ತುಂಬಿದ ಸಮಾರಂಭದಲ್ಲಿ  ನಿರಾಣಿ ಅವರನ್ನು ಮಂತ್ರಿ ಮಾಡಲೇ ಬೇಕು ಎಂದು ಶ್ರೀಗಳು ಹೇಳಿದ ರೀತಿ ಬಹುಶಃ ಮುಖ್ಯಮಂತ್ರಿ ಅವರಲ್ಲಿ ಬೇಸರವನ್ನುಂಟು ಮಾಡಿದೆ. 

ಬಹುಶಃ ಈ ಬೇಸರವೇ ನಿರಾಣಿ ಅವರ ಪಾಲಿಗೆ ಮಗ್ಗಲು ಮುಳ್ಳಾಗಲಿದೆ ಎನ್ನುವ ನಿಟ್ಟಿನಲ್ಲಿ ಸಾರ್ವಜನಿಕ ವಲಯದಲ್ಲಿ ಚರ್ಚೆಗಳು ವ್ಯಾಪಕವಾಗಿ ನಡೆಯುತ್ತಿವೆ. ವಚನಾನಂದ ಶ್ರೀಗಳಿಗಿಂತ ಮೊದಲೇ ವಾಲ್ಮೀಕಿ ಸಮಾಜದ ಶ್ರೀಗಳು, ಉಪ್ಪಾರ ಸಮಾಜದ ಶ್ರೀಗಳು ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದು ತಮ್ಮ ಸಮುದಾಯಕ್ಕೆ ಆದ್ಯತೆ ನೀಡಬೇಕು ಪಟ್ಟು ಹಿಡಿದಿದ್ದರು. ಆದರೆ ಅವರ ಬೇಡಿಕೆ ಇಷ್ಟೊಂದು ಸದ್ದು ಮಾಡಿರಲಿಲ್ಲ. 

ವೀರಶೈವ- ಲಿಂಗಾಯತ ಸಮುದಾಯಕ್ಕೆ ಸೇರಿದ ಯಡಿಯೂರಪ್ಪನವರೇ ಮುಖ್ಯಮಂತ್ರಿ ಆಗಿರುವುದರಿಂದ “ನಿರಾಣಿ”ಗೆ ಮಂತ್ರಿಗಿರಿ ಇಷ್ಟೊಂದು ಚರ್ಚೆಗೆ ವಸ್ತುವಾಗಿದೆ. ಬಹುಶಃ ನಿರಾಣಿ ಅವರು ಮಂತ್ರಿಗಿರಿಗಾಗಿ ಸಾಕಷ್ಟು ಪ್ರಯತ್ನ ಮಾಡುತ್ತಲೇ ಇದ್ದಾರೆ. ಶ್ರೀಗಳ ಮೂಲಕ ಸಿಎಂ ನೇರವಾಗಿ ಹೇಳಿಸುವ ಜತೆಗೆ ಸಮುದಾಯ ನಿಮ್ಮ ಕೈ ಬಿಡಲಿದೆ ಎನ್ನುವ ಮಾತು ಅವರಿಗೆ ತಿರುಗು ಬಾಣವಾಗಲಿದೆ ಎನ್ನುವ ಅಂಶ ಹೆಚ್ಚು ಪ್ರಚಲಿತವಾಗಿದೆ.

ಮೂಲಗಳ ಪ್ರಕಾರ ಸಂಪುಟ ವಿಸ್ತರಣೆ ಇಲ್ಲವೆ ಪುನಾರಚನೆ ವೇಳೆ ನಿರಾಣಿ ಅವರಿಗೆ ಮಂತ್ರಿಸ್ಥಾನ ಸಿಗಲಿದೆ ಎನ್ನುವ ವಿಶ್ವಾಸ ಅವರ ಬೆಂಬಲಿಗರಲ್ಲಿ ಇತ್ತು. ಜಿಲ್ಲೆಗೆ ಇನ್ನೊಂದು ಮಂತ್ರಿ ಸ್ಥಾನ ಸಿಗಲಿದೆ ಎನ್ನುವ ಭರವಸೆ ಕೂಡ ಜನರಲ್ಲೂ ಮೂಡಿತ್ತು. ಆದರೆ ಇಂದು ಆ ವಿಶ್ವಾಸ, ಭರವಸೆ ಬಹಳಷ್ಟು ಕಡಿಮೆ ಆಗುತ್ತಿದೆ. 

ನಿರಾಣಿ ಅವರು ಮಂತ್ರಿ ಪದವಿಗಾಗಿ ಇಷ್ಟೊಂದು ಅವಸರ ಮಾಡದೇ ನಿಧಾನ ಮಾಡಬೇಕಿತ್ತು. ಬಿಎಸ್‌ಗೆ ಆಪ್ತರಾಗಿರುವುದರಿಂದ ಸಮಯಾವಕಾಶ ನೋಡಿಕೊಂಡು ಅವರನ್ನು ಮಂತ್ರಿ ಮಾಡುತ್ತಿದ್ದರು ಎನ್ನುವ ಅಭಿಪ್ರಾಯಗಳು ಇದ್ದವು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಆರಂಭಿಕ ಹಂತದಲ್ಲಿ ಶಾಸಕ ಮುರಗೇಶ ನಿರಾಣಿ ಮಂತ್ರಿಸ್ಥಾನದ ಆಕಾಂಕ್ಷಿ ಅಲ್ಲ, ಪಕ್ಷದ ನಿಷ್ಠಾನವಂತ ಕಾರ್ಯಕರ್ತನಾಗಿ ಕೆಲಸ ಮಾಡುವೆ ಎನ್ನುವ ಮಾತನ್ನು ಬಹಿರಂಗವಾಗಿ ಹೇಳಿಕೊಂಡಿದ್ದರು. ಅದೇ ಮಾತಿಗೆ ಅಂಟಿಕೊAಡು ಮಂತ್ರಿಸ್ಥಾನಕ್ಕೆ ಪ್ರಯತ್ನ ಮುಂದುವರಿಸಿದಲ್ಲಿ ಅವಕಾಶ ತಾನಾಗಿಯೇ ಬರುತ್ತಿತ್ತು. ಈಗ ಶ್ರೀಗಳ ಮೂಲಕ ಸಿಎಂಗೆ ಜನತೆಯ ಮುಂದೆ ನೇರವಾಗಿ ಹೇಳಿಸಿ, ರಾಜ್ಯದಾದ್ಯಂತ ವಿವಾದದ ಕೇಂದ್ರಬಿಂದುವಾಗಿ ಪರಿಣಮಿಸಿದ್ದಾರೆ.

ಏತನ್ಮಧ್ಯೆ ಶಾಸಕ ಮುರುಗೇಶ ನಿರಾಣಿ ಸಹೋದರ ಉದ್ಯಮಿ ಸಂಗಮೇಶ ನಿರಾಣಿ ಅವರು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ತೊಡೆ ತಟ್ಟಿದ್ದಾರೆ. ಯತ್ನಾಳ ಈ ಹಿಂದೆ ಬಿಎಸ್‌ವೈ, ಶೋಭಾ ಕರಂದ್ಲಾಜೆ, ಜಗದೀಶ್ ಶೆಟ್ಟರ್, ಪ್ರಹ್ಲಾದ ಜೋಶಿ ಸೇರಿದಂತೆ ಬಿಜೆಪಿ ನಾಯಕರಿಗೆ ಏನೆಲ್ಲ ಮಾತನಾಡಿದ್ದಾರೆ. ತಮ್ಮಿಂದ ಏನೇಲ್ಲ ಉಪಕಾರ ಪಡೆದಿದ್ದಾರೆ ಎಂದು ಹೇಳುವ ಮಾತಿನ ಭರದಲ್ಲಿ “ಗೂಂಡಾಗಿರಿಗೂ ಸೈ” ಎನ್ನುವ ಹೇಳಿಕೆ ನೀಡಿರುವುದು ವಿವಾದಕ್ಕೆ ಮತ್ತಷ್ಟು ಕಿಚ್ಚು ಹಚ್ಚಿದಂತಾಗಿದೆ.

ರಾಜ್ಯ ಬಿಜೆಪಿ ವಲಯದಲ್ಲಿ ಸದ್ಯ ಶಾಸಕ ಮುರುಗೇಶ ನಿರಾಣಿ ಸುತ್ತ ಹುಟ್ಟಿಕೊಂಡಿರುವ ವಿವಾದ ಅವರನ್ನು ಪಕ್ಷದಲ್ಲಿ ಯಾವ ಹಂತಕ್ಕೆ ತಂದು ನಿಲ್ಲಿಸಲಿದೆ ಎನ್ನುವ ಯಕ್ಷಪ್ರಶ್ನೆಯನ್ನಂತೂ ಹುಟ್ಟು ಹಾಕಿದೆ.

ವಿಠ್ಠಲ ಆರ್. ಬಲಕುಂದಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com