ಅಮಿತ್ ಶಾ ಭೇಟಿ: ಗರಿಗೆದರಿದ ಸಂಪುಟ ವಿಸ್ತರಣೆ ಚಟುವಟಿಕೆ, ಮನವೊಲಿಸಲು ಯಡಿಯೂರಪ್ಪ ಕಸರತ್ತು

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರಾಜ್ಯ ಭೇಟಿ ಹಿನ್ನೆಲೆಯಲ್ಲಿ ಮಂತ್ರಿಮಂಡಲ ವಿಸ್ತರಣೆ ಚಟುವಟಿಕೆ ಚುರುಕು ಪಡೆದಿದ್ದು,
ಅಮಿತ್ ಶಾ - ಬಿಎಸ್ ವೈ(ಸಂಗ್ರಹ ಚಿತ್ರ))
ಅಮಿತ್ ಶಾ - ಬಿಎಸ್ ವೈ(ಸಂಗ್ರಹ ಚಿತ್ರ))

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರಾಜ್ಯ ಭೇಟಿ ಹಿನ್ನೆಲೆಯಲ್ಲಿ ಮಂತ್ರಿಮಂಡಲ ವಿಸ್ತರಣೆ ಚಟುವಟಿಕೆ ಚುರುಕು ಪಡೆದಿದ್ದು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣರಾದ ವಲಸಿಗರಿಗೆ ಇದೀಗ ಮಂತ್ರಿಯಾಗುವ ಯೋಗ ಕೂಡಿ ಬರುತ್ತಿದೆ.

ಅಮಿತ್ ಶಾ ಭೇಟಿ ಎದುರುನೋಡುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶನಿವಾರದ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ. ಹೇಗಾದರೂ ಮಾಡಿ ಅಮಿತ್ ಶಾ ಅವರೊಂದಿಗೆ ಸಮಾಲೋಚನೆ ನಡೆಸಿ ಸಂಪುಟ ವಿಸ್ತರಣೆಗೆ ಅನುಮತಿ ಪಡದೇ ತೀರಬೇಕೆಂಬ ಹಠಕ್ಕೆ ಬಿದ್ದಿದ್ದಾರೆ. ಇದಕ್ಕಾಗಿ ಮನವೊಸಲಿಸಲು ಭಾರೀ ಕಸರತ್ತು ನಡೆಸಲಿದ್ದಾರೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಎಲ್ಲರಿಗೂ ಮಂತ್ರಿ ಸ್ಥಾನ ದೊರಕಿಸಿಕೊಡಲು ಯಡಿಯೂರಪ್ಪ ಉದ್ದೇಶಿಸಿದ್ದಾರೆ. ಆದರೆ ಪಕ್ಷಕ್ಕಾಗಿ ದುಡಿಯುತ್ತಿರುವ ಕೆಲವು ನಿಷ್ಠಾವಂತರಿಗೂ ಸಹ ಮಂತ್ರಿ ಸ್ಥಾನ ನೀಡಬೇಕು ಎನ್ನುವುದು ಅಮಿತ್ ಶಾ ಅವರ ನಿಲುವಾಗಿದೆ. ಹೀಗಾಗಿ ಒಮ್ಮತಕ್ಕೆ ಬರಲು ಸಾಧ್ಯವೇ ಎನ್ನುವ ಸಂದೇಹ ತಲೆದೋರಿದೆ.

ಈ ಅವಕಾಶ ಬಿಟ್ಟರೆ ಮತ್ತೆ ಪಕ್ಷದ ವರಿಷ್ಠರನ್ನು ಭೇಟಿಮಾಡಲು ಸಧ್ಯಕ್ಕೆ ಸಾಧ್ಯವಿಲ್ಲ. ಬಳಿಕ ಅಮಿತ್ ಶಾ ದೆಹಲಿ ವಿಧಾನಸಭಾ ಚುನಾವಣೆಯತ್ತ ಗಮನಹರಿಸುತ್ತಾರೆ. ಮತ್ತೊಂದೆಡೆ ಯಡಿಯೂರಪ್ಪ ದಾವೋಸ್ ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಸಮಾವೇಶದಲ್ಲಿ ಪಾಲ್ಗೊಳ್ಳಲು ವಿದೇಶ ಪ್ರವಾಸ ಕೈಗೊಳ್ಳಲಿದ್ದಾರೆ. ಹಾಗೊಂದು ವೇಳೆ ಅನುಮತಿ ನೀಡದಿದ್ದರೆ ಮಂತ್ರಿ ಸ್ಥಾನಕ್ಕಾಗಿ ಹಾತೊರೆಯುತ್ತಿರುವವರ ಆಹಾಕಾರ ತೀವ್ರಗೊಳ್ಳಲಿದೆ ಎನ್ನುವ ಆತಂಕ ಯಡಿಯೂರಪ್ಪ ಅವರನ್ನು ಬಾಧಿಸುತ್ತಿದೆ.

ಮತ್ತೊಂದೆಡೆ ಯಡಿಯೂರಪ್ಪ ಅವರು, ಅಮಿತ್ ಶಾ ರವರ ಜತೆ ಚರ್ಚಿಸುವ ಸಾಧ್ಯತೆಗಳಿರುವುದರಿಂದ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವವರು ಸಹ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಿದ್ದಾರೆ.

ಸಚಿವ ಸ್ಥಾನದ ಆಕಾಂಕ್ಷಿಗಳಾದ ಉಮೇಶ್ ಕತ್ತಿ, ಗೋಪಾಲಯ್ಯ, ಮಾಜಿ ಸಚಿವ ಎಂ.ಟಿ.ಬಿ. ನಾಗರಾಜು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಅವರ ಡಾಲರ್ಸ್ ಕಾಲೋನಿಯಲ್ಲಿ ಶುಕ್ರವಾರ ಭೇಟಿ ಮಾಡಿ, ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿದರು. ಅಮಿತ್ ಶಾ ಭೇಟಿ ಹಿನ್ನೆಲೆಯಲ್ಲಿ ಯಡಿಯೂರಪ್ಪ ಇಂದು ತಮ್ಮ ಬೆಳಗ್ಗಿನ ಎಲ್ಲಾ ಕಾರ್ಯಕ್ರಮಗಳನ್ನು ರದ್ದು ಮಾಡಿ ಆಪ್ತರೊಂದಿಗೆ ಸಮಾಲೋಚನೆ ನಡೆಸಿದರು.

ಯಡಿಯೂರಪ್ಪ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಯಾರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕು, ಯಾರಿಗೆ ಯಾವ ಖಾತೆ ನೀಡಬೇಕು ಎಂಬ ಬಗ್ಗೆ ತಮ್ಮದೇ ಆದ ಪಟ್ಟಿಯನ್ನು ತಯಾರಿಸಿದ್ದು, ಅದನ್ನು ರಾಷ್ಟ್ರೀಯ ಅಧ್ಯಕ್ಷರಿಗೆ ನೀಡಿ ಆ ಪಟ್ಟಿಗೆ ಒಪ್ಪಿಗೆ ಪಡೆಯುವ ಸಾಧ್ಯತೆಗಳಿವೆ.

ಉಪ ಚುನಾವಣೆಯಲ್ಲಿ ಗೆದ್ದಿರುವ ಎಲ್ಲರಿಗೂ ಸಚಿವ ಸ್ಥಾನ ನೀಡಲು ಮುಖ್ಯಮಂತ್ರಿ ಯಡಿಯೂರಪ್ಪ ಈಗಾಗಲೇ ತೀರ್ಮಾನಿಸಿದ್ದು, ಇವರ ಜತೆಗೆ ಸೋತವರಿಗೂ ಸಚಿವ ಸ್ಥಾನ ನೀಡುವ ಸಂಬಂಧ ಅಮಿತ್ ಶಾರವರ ಜತೆ ಚರ್ಚಿಸಲಿದ್ದಾರೆ.

ಉಪಚುನಾವಣೆಯಲ್ಲಿ ಗೆದ್ದಿರುವ ಶಾಸಕರಿಗೆ ಸಚಿವ ಸ್ಥಾನ ನೀಡಿದ ನಂತರ ಉಳಿಯುವ ೨-೩ ಸ್ಥಾನಗಳಿಗೆ ಯಾರನ್ನು ತರಬೇಕು ಎನ್ನುವ ಕುರಿತಂತೆಯೂ ವರಿಷ್ಠರ ಅಭಿಪ್ರಾಯ ಪಡೆಯಲಿದ್ದಾರೆ.

ಅಮಿತ್ ಶಾ ನಾಳೆ ಬೆಳಿಗ್ಗೆ ವಿಶೇಷ ವಿಮಾನದಲ್ಲಿ ಯಲಹಂಕ ವಾಯುನೆಲೆಗೆ ಆಗಮಿಸಲಿದ್ದು, ಮಧ್ಯಾಹ್ನ 1 ಗಂಟೆಗೆ ನಗರದ ಅರಮನೆ ಮೈದಾನದಲ್ಲಿ ವೇದಾಂತ ಭಾರತಿ ಸಂಸ್ಥೆ ಆಯೋಜಿಸಿರುವ ‘ವಿವೇಕ ದೀಪಿಣಿ’ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಸಂಜೆ 4 ಗಂಟೆಗೆ ಹುಬ್ಬಳ್ಳಿಯಲ್ಲಿ ರಾಜ್ಯ ಬಿಜೆಪಿ ಆಯೋಜಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆಯ ಜಾಗೃತಿ ಸಮಾಜವೇಶದಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ಹುಬ್ಬಳ್ಳಿಯಲ್ಲೇ ವಾಸ್ತವ್ಯ ಹೂಡಿ ಭಾನುವಾರ ಬೆಳಿಗ್ಗೆ ಹುಬ್ಬಳ್ಳಿಯಿಂದಲೇ ದೆಹಲಿಗೆ ವಾಪಸ್ ಆಗಲಿದ್ದಾರೆ.

ಉಪ ಚುನಾವಣೆಯಲ್ಲಿ ಪರಾಭಗೊಂಡಿರುವ ಎಂ.ಟಿ.ಬಿ. ನಾಗರಾಜು, ಎಚ್. ವಿಶ್ವನಾಥ್ ಸಹ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿ ಹೊರ ಹೊಮ್ಮಿದ್ದಾರೆ.

ಈ ಕುರಿತು ನಾಗರಾಜ್ ಮಾತನಾಡಿ, ನಮ್ಮೆಲ್ಲರ ತ್ಯಾಗದಿಂದ ಬಿಜೆಪಿ ಸರ್ಕಾರ ಅಧಿಕಾರಕ್ಕೇರಿದ್ದು, ಸಮಯ ಸಂದರ್ಭ ಕೂಡಿ ಬಂದಾಗ ಸಚಿವರಾಗುತ್ತೇವೆ. ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಪಕ್ಷದ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ ಎಂದರು.

ಯಡಿಯೂರಪ್ಪ ಮತ್ತು ಹೈಕಮಾಂಡ್ ಒಪ್ಪಿ ಯಾವ ಸ್ಥಾನ ನೀಡಿದರೂ ಸ್ವೀಕರಿಸುತ್ತೇನೆ. ಎಲ್ಲರಿಗೂ ಸಚಿವರಾಗುವ ಸಹಜ ಆಸೆ ಇರುತ್ತದೆ. ಕೊಡುವುದು, ಬಿಡುವುದು ಹೈಕಮಾಂಡ್ ನಿರ್ಧಾರ. ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧ ಎಂದು ಅವರು ಸ್ಪಷ್ಟಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com