ಶ್ರೀರಾಮುಲು ದೊಣ್ಣೆನಾಯಕನಲ್ಲ, ಮಂಗಾಟ ಆಡಿದರೆ ಮನೆ ಮುಂದೆ ಧರಣಿ: ಬಿಜೆಪಿ ಶಾಸಕ ಹಾಲಪ್ಪ ಆಕ್ರೋಶ

ಮಲೆನಾಡಿನ ಜನರನ್ನು ಬಹು ವರ್ಷಗಳಿಂದ ಬಾಧಿಸುತ್ತಿರುವ ಕ್ಯಾಸನೂರು ಫಾರೆಸ್ಟ್ ಡಿಸೀಸ್(ಕೆಎಫ್‌ಡಿ-ಮಂಗನಕಾಯಿಲೆ) ವೈರಾಣು ಪತ್ತೆಗೆ ಉದ್ದೇಶಿಸಲಾಗಿದ್ದ ಪ್ರಯೋಗಾಲಯ ಸ್ಥಾಪನೆಗೂ ಮುನ್ನವೇ ಸ್ಥಳಾಂತರಗೊಂಡಿದೆ. 
ಹಾಲಪ್ಪ
ಹಾಲಪ್ಪ

ಬೆಂಗಳೂರು: ಮಲೆನಾಡಿನ ಜನರನ್ನು ಬಹು ವರ್ಷಗಳಿಂದ ಬಾಧಿಸುತ್ತಿರುವ ಕ್ಯಾಸನೂರು ಫಾರೆಸ್ಟ್ ಡಿಸೀಸ್(ಕೆಎಫ್‌ಡಿ-ಮಂಗನಕಾಯಿಲೆ) ವೈರಾಣು ಪತ್ತೆಗೆ ಉದ್ದೇಶಿಸಲಾಗಿದ್ದ ಪ್ರಯೋಗಾಲಯ ಸ್ಥಾಪನೆಗೂ ಮುನ್ನವೇ ಸ್ಥಳಾಂತರಗೊಂಡಿದೆ. 

ಸಾಗರಿಂದ ಶಿವಮೊಗ್ಗಕ್ಕೆ ಸ್ಥಳಾಂತರಗೊಂಡಿರುವ ಬಗ್ಗೆ ಸರ್ಕಾರ ಸ್ಪಷ್ಟಪಡಿಸಿದೆ‌. ಆರೋಗ್ಯ ಸಚಿವ ಶ್ರೀರಾಮುಲು ಮೇಲೆ ಒತ್ತಡ ಹೇರುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಸಂಶೋಧನಾ ಪ್ರಯೋಗಾಲಯ ಕೇಂದ್ರವನ್ನು ತನ್ನ ಮತಕ್ಷೇತ್ರಕ್ಕೆ ಸ್ಥಳಾಂತರಗೊಳಿಸುವಲ್ಲಿ ಯಶಸ್ವಿಯಾಗಿದ್ದು, ಈ ಮೂಲಕ ಹಾಲಪ್ಪ ವರ್ಚಸ್ಸು ಕಡಿಮೆ ಮಾಡುವಲ್ಲಿ ಸಫಲರಾಗಿದ್ದಾರೆ. ಸಾಗರ ಶಾಸಕ ಹಾಲಪ್ಪಗೆ ತಿಳಿಸದೇ ಆರೋಗ್ಯ ಇಲಾಖೆ ಪ್ರಯೋಗಾಲಯವನ್ನು ಶಿವಮೊಗ್ಗಕ್ಕೆ ಸ್ಥಳಾಂತರಿಸಿದ್ದು, ಡಿಪಿಆರ್ ಸಿದ್ಧತೆಯಲ್ಲಿದೆ.

ಮಲೆನಾಡು ಭಾಗದಲ್ಲಿ ಕೆಎಫ್‌ಡಿ ಬರೀ ರೋಗವಾಗಿ ಪರಿಣಮಿಸದೇ ಸಾಮಾಜಿಕ ಸವಾಲಾಗಿದೆ. ಕಳೆದ ವರ್ಷ ಮಂಗನಕಾಯಿಲೆ ಶಿವಮೊಗ್ಗದಲ್ಲಿ ಅದರಲ್ಲಿಯೂ ಸಾಗರ ತಾಲೂಕಿನಲ್ಲಿ ಹೆಚ್ಚಾಗಿ ವ್ಯಾಕ್ಸಿನೇಷನ್ ಜಾಗೃತಿಯ ನಡುವೆಯೇ ರೋಗ ಹತೋಟಿಯಾಗದೇ ಇದ್ದಾಗ ಸಾಗರ ಶಾಸಕ ಹಾಲಪ್ಪ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ.ಕುಮಾರಸ್ವಾಮಿ ನಿವಾಸದ ಮುಂದೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದ್ದರು. ಸರ್ಕಾರವನ್ನು ಆಗಾಗ ಕಾಯಿಲೆ ವಿರುದ್ಧ ಎಚ್ಚರಿಸುತ್ತಲೇ ಇದ್ದರು. ಪರಿಣಾಮ ಕುಮಾರಸ್ವಾಮಿ ಬಜೆಟ್‌ನಲ್ಲಿ ಮಂಗನಕಾಯಿಲೆ ಹತೋಟಿಗೆ 5 ಕೋಟಿ ಅನುದಾನ, ಸಾಗರದಲ್ಲಿ ಕೆಎಫ್‌ಡಿ ಪ್ರಯೋಗಾಲಯ ಸ್ಥಾಪನೆ ಘೋಷಿಸಿದ್ದರು.

ವಿರೋಧ ಪಕ್ಷದಲ್ಲಿದ್ದುಕೊಂಡು ಸಾಗರಕ್ಕೆ ಪ್ರಯೋಗಾಲಯ ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದ ಹಾಲಪ್ಪ, ಇದೀಗ ತಮ್ಮದೇ ಸರ್ಕಾರದಲ್ಲಿ ತಮ್ಮ ಮಹತ್ವಕಾಂಕ್ಷಿ ಪ್ರಯೋಗಾಲಯವನ್ನು ಕಳೆದುಕೊಳ್ಳುವಂತಹ ಸ್ಥಿತಿ ಉದ್ಭವಿಸಿದೆ. ಅಂದ ಹಾಗೆ ಇದಕ್ಕೆಲ್ಲ ಜಿಲ್ಲಾ ಉಸ್ತುವಾರಿಗಳೂ ಆಗಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರೇ ಕಾರಣ ಎನ್ನಲಾಗಿದೆ. 
ಜಿಲ್ಲೆಯಲ್ಲಿ ಸಚಿವ ಸ್ಥಾನ ವಿಚಾರವಾಗಿ ಸಂಪುಟ ರಚನೆಯ ಆರಂಭದಲ್ಲಿ ಈಶ್ವರಪ್ಪ ಹಾಗೂ ಹಾಲಪ್ಪ ಹೆಸರುಗಳು ಕೇಳಿಬಂದಿದ್ದವು. ಹಾಲಪ್ಪ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಪ್ತರು. ಹಾಲಪ್ಪ ಆಯ್ಕೆಗೆ ಈಶ್ವರಪ್ಪ ವಿರೋಧ ವ್ಯಕ್ತಪಡಿಸಿದ್ದರು‌. ಕೆಎಫ್‌ಡಿ ಶಿವಮೊಗ್ಗ ಜಿಲ್ಲೆಯಾದ್ಯಂತ ಬಾಧಿಸುತ್ತಿರುವ ಕಾಯಿಲೆಯಾದರೂ ಹಾಲಪ್ಪರಷ್ಟೂ ಸೊರಬದ ಕುಮಾರ ಬಂಗಾರಪ್ಪ ಆಗಲೀ ಜಿಲ್ಲಾ ಉಸ್ತುವಾರಿ ಸಚಿವರಾಗಲೀ ಹೋರಾಟವನ್ನೂ ಮಾಡಲಿಲ್ಲ‌. ಹಾಲಪ್ಪ ಕೆಎಫ್‌ಡಿ ಬಗ್ಗೆ ಜನಜಾಗೃತಿ ಮೂಡಿಸಿ ಪ್ರಯೋಗಾಲಯವನ್ನು ಸಾಗರಕ್ಕೆ ಮಂಜೂರು ಮಾಡಿಕೊಂಡಿರುವುದು ಜಿಲ್ಲೆಯಲ್ಲಿ ಅವರ ವರ್ಚಸು ವೃದ್ಧಿಸುವಂತೆ ಮಾಡಿತ್ತು. ಆದರೀಗ ಈಶ್ವರಪ್ಪ ಹಾಲಪ್ಪರ ವರ್ಚಸನ್ನು ಕುಂದಿಸಲೇ ಪ್ರಯೋಗಾಲಯವನ್ನು ಆರೋಗ್ಯ ಸಚಿವ ಶ್ರೀರಾಮುಲು ಮೇಲೆ ಒತ್ತಡ ಹೇರಿ ಜನನಿಬಿಡ ಶಿವಮೊಗ್ಗಕ್ಕೆ ಸ್ಥಳಾಂತರಿಸಿಕೊಂಡಿದ್ದಾರೆ.

ಶಿವಮೊಗ್ಗಕ್ಕೆ ಪ್ರಯೋಗಾಲಯ ಸ್ಥಳಾಂತರಗೊಂಡಿರುವ ಬಗ್ಗೆ ಆರೋಗ್ಯ ಸಚಿವ ಶ್ರೀರಾಮುಲು ಅವರೇ ಖುದ್ದು ಸ್ಪಷ್ಟಪಡಿಸಿ,‌ ಡಿಪಿಆರ್ ಸಿದ್ಧವಾಗುತ್ತಿದ್ದು ಬಜೆಟ್‌ವೇಳೆ ಅಂತಿಮವಾಗಲಿದೆ ಎಂದಿದ್ದಾರೆ. ಇನ್ನು ಸಾಗರಕ್ಕೆ ಮಂಜೂರಾಗಿದ್ದ ಟರ್ಮಿನಲ್ ಸಹ ಶಿವಮೊಗ್ಗಕ್ಕೆ ಮಂಜೂರಾಗಿದೆ.

ದೇಶದಲ್ಲಿ ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆ ಇದೆ. ಅದು ಬಿಟ್ಟರೆ ಈಗ ಶಿವಮೊಗ್ಗದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಸಂಶೋಧನಾ ಪ್ರಯೋಗಾಲಯ ಸಂಸ್ಥೆಯೇ ಎರಡನೆಯದ್ದು. ಹೀಗಾಗಿ ಪ್ರಯೋಗಾಲಯ ನಿರ್ಮಾಣದಿಂದ ಆ ಕ್ಷೇತ್ರಕ್ಕೆ ಹೆಸರು ಖ್ಯಾತಿ ಬರಲಿದೆ.

ಆರೋಗ್ಯ ಸಚಿವರ ಕ್ರಮಕ್ಕೆ ಸಾಗರ ಶಾಸಕ ಹೆಚ್.ಹಾಲಪ್ಪ ಕೆಂಡಾಮಂಡಲವಾಗಿದ್ದಾರೆ. ಯಎನ್‌ಐ ಕನ್ನಡ ಸುದ್ದಿ ಸಂಸ್ಥೆ ಜೊತೆ ಮಾತನಾಡಿ, ಪ್ರಯೋಗಾಲಯ ಸಾಗರದಲ್ಲಿಯೇ ನಿರ್ಮಾಣವಾಗಲಿದೆ ಎಂದರು. ಈ ಕುರಿತು ಆರೋಗ್ಯ ಸಚಿವರ ಸ್ಪಷ್ಟನೆ ಬಗ್ಗೆ ಅವರನ್ನು ಕೇಳಿದಾಗ ತಮಗೆ ಪ್ರಯೋಗಾಲಯ ಶಿವಮೊಗ್ಗಕ್ಕೆ ಸ್ಥಳಾಂತರ ಆಗಿರುವುದು ತಿಳಿದಿಲ್ಲ. ಅದು ಸಾಗರದಲ್ಲಿಯೇ ಆಗಬೇಕು. ಯಾವುದೇ ಕಾರಣಕ್ಕೂ ಇದರಿಂದ ಹಿಂದೆ ಸರಿಯುವುದಿಲ್ಲ. ಜನನಿಬಿಡ ಶಿವಮೊಗ್ಗದಲ್ಲಿ ಪ್ರಯೋಗಾಲಯ ಸರಿಯಲ್ಲ. "ಶ್ರೀರಾಮುಲು ಮಂಗ. ದೊಣ್ಣೆನಾಯಕನೇನಲ್ಲ. ಅವನಿಗೆ ಏನೂ ತಿಳಿದಿಲ್ಲ‌. ಒಂದು ವೇಳೆ ನಿರ್ಧಾರದಿಂದ ಹಿಂದೆ ಸರಿಯದೇ ಹೋದರೆ ಶ್ರೀರಾಮುಲು ಮನೆ ಮುಂದೆಯೇ ಧರಣಿ ಮಾಡುತ್ತೇನೆ" ಎಂದು ಎಚ್ಚರಿಸಿದ್ದಾರೆ.

ಈ ಸಂಬಂಧ ಯುಎನ್‌ಐ ಕನ್ನಡ ಸುದ್ದಿ ಸಂಸ್ಥೆ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಪ್ರತಿಕ್ರಿಯಿಸದೇ ಜಾರಿಕೊಂಡರು.

ಶ್ರೀರಾಮುಲು ನಡೆಯಿಂದ ಸಿಟ್ಟಿಗೆದ್ದಿರುವ ಹಾಲಪ್ಪ ತಮ್ಮ ಗುರು ಯಡಿಯೂರಪ್ಪ ಅವರೊಂದಿಗೆ ಈ ಬಗ್ಗೆ ಚರ್ಚೆ ನಡೆಸಲಿದ್ದು, ಪ್ರಯೋಗಾಲಯದ ಚೆಂಡು ಯಡಿಯೂರಪ್ಪ ಕಚೇರಿ ತಲುಪಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com