ಸಿಎಎ, ಎನ್ ಆರ್ ಸಿ ಮೂಲಕ ದೇಶ ಒಡೆಯುವ ಕೆಲಸಕ್ಕೆ ವಿರಾಮ ನೀಡಿ: ಅಮಿತ್ ಶಾಗೆ ಸಿದ್ದರಾಮಯ್ಯ ಸಲಹೆ

ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಿರುವುದು ಸುಳ್ಳು ಹೇಳುವುದಕ್ಕೆ ಹೊರತು ರಾಜ್ಯದ ಜನರ ಸಮಸ್ಯೆ ಬಗೆಹರಿಸಲು ಅಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಿರುವುದು ಸುಳ್ಳು ಹೇಳುವುದಕ್ಕೆ ಹೊರತು ರಾಜ್ಯದ ಜನರ ಸಮಸ್ಯೆ ಬಗೆಹರಿಸಲು ಅಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ಅಮಿತ್ ಶಾ ಮಹಾದಾಯಿ ನದಿ ನೀರು ವಿಚಾರದ ಬಗ್ಗೆ ಸ್ಪಷ್ಟಪಡಿಸಬೇಕು. ಪ್ರವಾಹ ಪ್ರದೇಶಗಳಿಗೆ ಪರಿಹಾರ ಕೈಗೊಳ್ಳಲು ಕಡಿಮೆ ಅನುದಾನ ನೀಡಿರುವ ಬಗ್ಗೆ ಮಾತನಾಡಬೇಕು ಎಂದು ಒತ್ತಾಯಿಸಿದರು. 

ಬಿಜೆಪಿಯ ಸಂಸದ ತೇಜಸ್ವಿ ಸೂರ್ಯ, ಚಕ್ರವರ್ತಿ ಸೂಲಿಬೆಲೆ ಅವರ ಮೇಲೆ ಎಸ್‌ಡಿಪಿಐ ದಾಳಿ ಸಂಚು ವಿಚಾರವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಯಾರ ಮೇಲೇ ದಾಳಿ ನಡೆದರೂ ಕೂಡ ಅದು ತಪ್ಪು. ಇದರಲ್ಲಿ ಪಕ್ಷಬೇಧ ಮಾಡಬಾರದು. ದಾಳಿ ಯಾರ ಮೇಲೂ ನಡೆಯಬಾರದು. ಅದು ಕಾಂಗ್ರೆಸ್ ಇರಲಿ, ಬಿಜೆಪಿ ಇರಲಿ. ಯಾರ ಮೇಲೆ ದಾಳಿ ನಡೆದರೂ ಕೂಡ ತಪ್ಪು. ಹೀಗೆ ನಡೆಯಬಾರದು ಎಂದರು. 

ಎಸ್ ಡಿಪಿಐ ನಿಷೇಧದ ಬಗ್ಗೆ ತಮಗೆ ಗೊತ್ತಿಲ್ಲ. ಇದೇ ರೀತಿ ಆರ್ ಎಸ್ ಎಸ್ ಕೂಡ ಸಮಾಜ ವಿರೋಧಿ ಚಟುವಟಿಕೆ ನಡೆಸುತ್ತಿದೆ. ಹಾಗೆಂದು ಆರ್‌ಎಸ್‌ಎಸ್ ನಿಷೇಧಿಸಬೇಕು ಎಂದು ತಾವು ಹೇಳುವುದಿಲ್ಲ ಎಂದು ಸೂಚ್ಯವಾಗಿ ತಿಳಿಸಿದರು.

ಶಾಸಕಾಂಗ ಮತ್ತು ವಿಪಕ್ಷ ನಾಯಕ ಸ್ಥಾನಗಳನ್ನು. ಪ್ರತ್ಯೇಕಿಸುವುದು ಬೇಡ‌. ಈಗಾಗಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಾಗಿದೆ, ನಿರ್ಧಾರ ತೆಗೆದುಕೊಳ್ಳುವುದು ಹೈಕಮಾಂಡ್ ಗೆ ಬಿಟ್ಟಿದ್ದು. ಮಹಾರಾಷ್ಟ್ರದ ರಾಜಕೀಯ ಸ್ಥಿತಿಯೇ ಬೇರೆ, ಕರ್ನಾಟಕದ ಸ್ಥಿತಿಯೇ ಬೇರೆ. ಕರ್ನಾಟಕವನ್ನು ಮಹಾರಾಷ್ಟ್ರಕ್ಕೆ ಹೋಲಿಸಬಾರದು ಎನ್ನುವುದು ತಮ್ಮ ವೈಯಕ್ತಿಕ ಅಭಿಪ್ರಾಯ ಎನ್ನುವ ಮೂಲಕ ಎರಡೂ ಸ್ಥಾನದಲ್ಲಿ ಮುಂದುವರೆಯುತ್ತೇನೆ. ಇಲ್ಲವೇ ಎರಡಕ್ಕೂ ರಾಜೀ‌ನಾಮೆ ಕೊಡುತ್ತೇನೆ ಎಂದು ಪರೋಕ್ಷವಾಗಿ ಹೇಳೀದರು. 

ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಚಿವ ಸಂಪುಟ ವಿಸ್ತರಣೆ ವಿಳಂಬವಾಗಿರಲಿಲ್ಲ. ನಮಗೆ ಪಕ್ಷದ ವರಿಷ್ಠರು ಎಲ್ಲಾ ರೀತಿಯಲ್ಲೂ ಸಹಕಾರ ನೀಡಿದರು. ಆದರೆ ಸಂಪುಟ ವಿಸ್ತರಣೆ ಸಂಬಂಧ ಚರ್ಚಿಸಲು ಮುಖ್ಯಮಂತ್ರಿ‌ ಯಡಿಯೂರಪ್ಪ ಅವರಿಗೆ ಸಮಯವನ್ನೇ ನೀಡಿಲ್ಲ. ಇದು ಬಿಜೆಪಿಯ ಸಂಸ್ಕೃತಿ ಎಂದರು.

ಇದಕ್ಕು ಮುನ್ನ ಟ್ವಿಟರ್ ನಲ್ಲಿ ಅಮಿತ್ ಶಾ ಅವರಿಗೆ ಸಲಹೆ ಜತೆಗೆ ಕೆಲವು ಪ್ರಶ್ನೆಗಳನ್ನು ಕೇಳಿರುವ ಸಿದ್ದರಾಮಯ್ಯ, ‘ಗೃಹ ಸಚಿವ ಅಮಿತ್ ಶಾ ಅವರೇ, ಸಿಎಎ,ಎನ್‌ಆರ್‌ಸಿ ಮೂಲಕ ದೇಶ ಒಡೆಯುವ ಕೆಲಸಕ್ಕೆ ಸ್ವಲ್ಪ ವಿರಾಮ ನೀಡಿ, ನೆರೆಹಾವಳಿಯಿಂದ ಬದುಕು ಕಳೆದುಕೊಂಡು ಬೀದಿಗೆ ಬಿದ್ದಿರುವ ಸಂತ್ರಸ್ತರ ಕಡೆ‌ ಗಮನ‌ ಕೊಡಿ. ನೆರೆ ಹಾವಳಿ ನಷ್ಟಕ್ಕೆ ಪರಿಹಾರ ಕೇಳಿರುವುದು 25 ಸಾವಿರ ಸಾವಿರ ಕೋಟಿ ರೂಪಾಯಿ, ಕೇಂದ್ರ ಸರ್ಕಾರ ನೀಡಿರುವುದು 1800 ಕೋಟಿ ರೂಪಾಯಿ.‌‌ ಮೊದಲು ಬಾಕಿ ನೆರೆ‌ಪರಿಹಾರ ಪಾವತಿ ನಂತರ ಸಿಎಎ, ಎನ್ಆರ್ ಸಿ’ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com